ಚಾಂಪಿಯನ್ಸ್ ಟ್ರೋಫಿ: ಫೈನಲ್‌ನಲ್ಲಿ ಭಾರತಕ್ಕೆ ಆಸ್ಟ್ರೇಲಿಯ ಎದುರಾಳಿ
ಬ್ರೆಡಾ(ಹಾಲೆಂಡ್), ಜೂ.30: ಭಾರತದ ಪುರುಷರ ಹಾಕಿ ತಂಡ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಶನಿವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಆತಿಥೇಯ ಹಾಲೆಂಡ್ ವಿರುದ್ಧ 1-1 ರಿಂದ ಡ್ರಾ ಸಾಧಿಸಿದೆ. ಈ ಮೂಲಕ ಸತತ ಎರಡನೇ ಬಾರಿ ಟೂರ್ನಿಯಲ್ಲಿ ಫೈನಲ್‌ಗೆ ಪ್ರವೇಶಿಸಿದೆ.
ರವಿವಾರ ರಾತ್ರಿ 7:30ಕ್ಕೆ ನಡೆಯುವ ಫೈನಲ್‌ನಲ್ಲಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನದಲ್ಲಿರುವ ಆಸ್ಟ್ರೇಲಿಯ ಹಾಗೂ ಭಾರತ ಮುಖಾಮುಖಿಯಾಗಲಿವೆ.
ಭಾರತದ ಪರ ಮನ್‌ದೀಪ್ ಸಿಂಗ್ 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿಕೊಟ್ಟರು. 55ನೇ ನಿಮಿಷದಲ್ಲಿ ಗೋಲು ಬಾರಿಸಿದ ಥಿಯರಿ ಬ್ರಿಂಕ್‌ಮನ್ ಪಂದ್ಯವನ್ನು 1-1 ರಿಂದ ಡ್ರಾಗೊಳಿಸಿದರು.
ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಒಲಿಂಪಿಕ್ಸ್ ಚಾಂಪಿಯನ್ ಅರ್ಜೆಂಟೀನ ವಿರುದ್ಧ 2-3 ಅಂತರದಿಂದ ಸೋಲುಂಡಿತು. ಆದಾಗ್ಯೂ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆಯಿತು. ಭಾರತಕ್ಕೆ 2ನೇ ಸ್ಥಾನ ಪಡೆಯಲು ಪಂದ್ಯವನ್ನು ಡ್ರಾಗೊಳಿಸಬೇಕಾಗಿತ್ತು. ಟೂರ್ನಿಯ ನಿಯಮದ ಪ್ರಕಾರ ಅಗ್ರ 2 ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ.