ಸುಷ್ಮಾ ಸ್ವರಾಜ್ ವಿರುದ್ಧದ ದ್ವೇಷಕಾರುವ ಟ್ವೀಟ್ ಗಳಿಗೆ 40 ಶೇ. ಮಂದಿಯ ಬೆಂಬಲ !

Update: 2018-07-01 17:44 GMT

ಹೊಸದಿಲ್ಲಿ,ಜು.1: ಅಂತರ್‌ಧರ್ಮೀಯ ದಂಪತಿಗೆ ಪಾಸ್‌ಪೋರ್ಟ್ ದೊರಕಲು ನೆರವಾದುದಕ್ಕಾಗಿ ಸಾಮಾಜಿಕ ತಾಲತಾಣಗಳಲ್ಲಿ ಕೋಮುವಾದಿಗಳಿಂದ ದೂಷಣೆಗೊಳಗಾದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಈ ಬಗ್ಗೆ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಟ್ವಿಟರ್ ಬಳಕೆದಾರರು ಅವರನ್ನು ಬೆಂಬಲಿಸಿದ್ದಾರೆ.

 ಬೇರೆ ಬೇರೆ ಧರ್ಮದವರೆಂಬ ಕಾರಣಕ್ಕಾಗಿ ಪಾಸ್‌ಪೋರ್ಟ್ ನೀಡಲು ನಿರಾ ಕರಿಸಲ್ಪಟ್ಟ ದಂಪತಿಗೆ ನೆರವಾದುದಕ್ಕಾಗಿ ಸುಷ್ಮಾ ಸ್ವರಾಜ್ ಹಲವಾರು ದಿನಗಳಿಂದ ಟ್ರೋಲ್‌ಗೊಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ತನ್ನ ನಿಲುವಿನ ಬಗ್ಗೆ ಜನಾಭಿಪ್ರಾಯ ಕೋರಿ ಟ್ವಿಟರ್‌ನಲ್ಲಿ ಶನಿವಾರ ಸಮೀಕ್ಷೆಯನ್ನು ನಡೆಸಿದ್ದರು.

‘‘ಸ್ನೇಹಿತರೇ ನಾನು ಕೆಲವು ಟ್ವೀಟ್‌ಗಳನ್ನು ಮೆಚ್ಚಿದ್ದೇವೆ. ಕಳೆದ ಕೆಲವು ದಿನಗಳಿಂದ ಇದು ನಡೆಯುತ್ತಾ ಬಂದಿದೆ. ಇಂತಹ ಟ್ವೀಟ್‌ಗಳನ್ನು ನೀವು ಮೆಚ್ಚುವಿರಾ?. ದಯವಿಟ್ಟು ಮರುಟ್ವೀಟ್ ಮಾಡಿ’’ ಎಂದು ಸುಷ್ಮಾ ಶನಿವಾರ ಟ್ವಿಟೀಸಿದ್ದ್ದರು.

 ಆನ್‌ಲೈನ್ ಸಮೀಕ್ಷೆಯಲ್ಲಿ ಶನಿವಾರ ಸಂಜೆಯವರೆಗೆ 94 ಸಾವಿರ ಮಂದಿ ಭಾಗವಹಿಸಿದ್ದು, ಅವರಲ್ಲಿ ಶೇ. 58ರಷ್ಟು ಮಂದಿ ಸಚಿವೆಯ ವಿರುದ್ಧ ಮಾಡಲಾದ ನಿಂದನಾತ್ಮಕ ಟ್ವೀಟ್‌ಗಳಿಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಆದರೆ ಶೇ.40ರಷ್ಟು ಮಂದಿ, ಸುಷ್ಮಾ ಕೇಳಿದ ಪ್ರಶ್ನೆಗೆ ಹೌದು ಎಂಬುದಾಗಿ ಉತ್ತರಿಸುವ ಮೂಲಕ ನಿಂದನಾತ್ಮಕ ಟ್ರೋಲ್‌ಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆ ಕೊನೆಗೊಳ್ಳಲು ಏಳು ತಾಸುಗಳು ಉಳಿದಿರುವಾಗಲೇ ಸುಮಾರು 1.01 ಲಕ್ಷ ಮತಗಳು ಟ್ವಿಟರ್‌ನಲ್ಲಿ ನೋಂದಾವಣೆಗೊಂಡಿದ್ದವು.

ಮೊಹಮ್ಮದ್ ಅನಸ್ ಸಿದ್ದೀಕಿ ಎಂಬವರನ್ನು ವಿವಾಹವಾಗಿದ್ದ ತನ್ವಿಸೇಠ್ ಎಂಬ ಯುವತಿಗೆ ಲಕ್ನೋದ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು ಪಾಸ್‌ಪೋರ್ಟ್ ನವೀಕರಿಸಲು ನಿರಾಕರಿಸಿದ್ದರು. ಪಾಸ್‌ಪೋರ್ಟ್ ನವೀಕರಿಸಬೇಕಾದರೆ ಹಿಂದೂಧರ್ಮಕ್ಕೆ ಮತಾಂತರಗೊಳ್ಳುವಂತೆಯೂ ಪಾಸ್‌ಪೋರ್ಟ್ ಅಧಿಕಾರಿ ವಿಕಾಸ್ ಶರ್ಮಾ ಅವರನ್ನು ಒತ್ತಾಯಿಸಿದ್ದರೆಂದು ಆರೋಪಿಸಲಾಗಿದೆ.

 ಈ ಘಟನೆಯ ಬಗ್ಗೆ ದಂಪತಿ, ಸುಷ್ಮಾ ಸ್ವರಾಜ್ ಅವರ ಗಮನಸೆಳೆದಿದ್ದರು. ತರುವಾಯ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ಸಂಬಂಧಪಟ್ಟ ಅಧಿಕಾರಿಯನ್ನು ವರ್ಗಾವಣೆಗೊಳಿಸಿತಲ್ಲದೆ, ದಂಪತಿಗೆ ಪಾಸ್‌ಪೋರ್ಟ್ ನೀಡಿತ್ತು.

 ಸಚಿವೆಯ ಕ್ರಮದಿಂದ ಆಕ್ರೋಶಿತರಾದ ಕೆಲವರು, ಸುಷ್ಮಾ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆಂದು ಟ್ವಿಟರ್‌ನಲ್ಲಿ ನಿಂದಿಸಿದ್ದರು. ಈ ಮಧ್ಯೆ ಸ್ವರಾಜ್‌ರ ಪತಿ ಹಾಗೂ ದಿಲ್ಲಿಯ ಮಾಜಿ ಲೆಫ್ಟಿನೆಂಟ್‌ಗವರ್ನರ್ ಸ್ವರಾಜ್ ಕೌಶಲ್ ಅವರು ತನಗೂ ನಿಂದನಾತ್ಮಕ ಟ್ವೀಟ್ ಬಂದಿರುವುದಾಗಿ ತಿಳಿಸಿದ್ದಾರೆ. ತನ್ನ ಪತ್ನಿಗೆ ಥಳಿಸುವಂತೆಯೂ ಇನ್ನು ಮುಂದೆ ಮುಸ್ಲಿಂ ತುಷ್ಟೀಕರಣದಲ್ಲಿ ತೊಡಗದಂತೆ ಆಕೆಗೆ ಬುದ್ಧಿ ಹೇಳುವಂತೆ ಟ್ವೀಟ್ ಬಂದಿರುವುದಾಗಿ ತಿಳಿಸಿದ್ದಾರೆ.

ದೇಶಾದ್ಯಂತ ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲದ ಮಹಾಪೂರವೇ ಹರಿದುಬಂದಿದ್ದು, ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಸುಷ್ಮಾ ಸ್ವರಾಜ್ ಅವರು ಸಚಿವೆಯ ವಿರುದ್ಧ ಮಾಡಲಾದ ಟ್ರೋಲಿಂಗ್ ಅತ್ಯಂತ ಉದ್ಧಟತನದ್ದೆಂದು ಬಣ್ಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News