ಸ್ಕಾರ್ಫ್‌ನಿಂದ ಆಗುವ ತೊಂದರೆ ಏನು?

Update: 2018-07-01 18:41 GMT

ಮಾನ್ಯರೇ,

ಮಂಗಳೂರಿನಲ್ಲಿ ಸ್ಕಾರ್ಫ್ ವಿಷಯದ ಕುರಿತಂತೆ ನಡೆಯುತ್ತಿರುವ ಚರ್ಚೆಯ ಬಗ್ಗೆ ನನ್ನ ಅನಿಸಿಕೆ ಇಲ್ಲಿದೆ. ಒಂದು ವೇಳೆ ನೀವು ಸೈನ್ಯಕ್ಕೆ ಸೇರಬೇಕಾದರೆ ನಿಮ್ಮ ಧಾರ್ಮಿಕ ಉಡುಪಾಗಿರುವ ಟರ್ಬನ್ ತೆಗೆದೇ ಬರಬೇಕು ಎಂದು ನಿಯಮ ವಿಧಿಸಿದರೆ, ಈ ದೇಶ ಅದೆಷ್ಟು ಪಂಜಾಬಿ ಯೋಧರನ್ನು ಕಳೆದುಕೊಳ್ಳುತ್ತಿತ್ತು. ತಲೆಗೆ ಟರ್ಬನ್ ಇಟ್ಟುಕೊಂಡು ಒಬ್ಬ ಪುರುಷ ಈ ದೇಶವನ್ನು ಆಳಿದಾಗ ಇಲ್ಲದ ಧರ್ಮ ಬಾಲಕಿಯರು ಸ್ಕಾರ್ಫ್ ಹಾಕಿದಾಗ ಮಾತ್ರ ಕಾಣಿಸುವುದು ಹೇಗೆ? ಬಾಲಕಿಯರನ್ನು ಆಧುನಿಕ ಶಿಕ್ಷಣಕ್ಕೆ ತೆರೆದು ಕೊಳ್ಳಲು ಪ್ರೋತ್ಸಾಹಿಸುವ ಬದಲು ಈ ರೀತಿ ನಿಯಮ ಹೇರಿ ಅವರನ್ನು ಮೂಲೆಗುಂಪು ಮಾಡುವುದು ಸರಿಯೇ? ಇಷ್ಟಕ್ಕೂ ತಲೆವಸ್ತ್ರ ಬರಿಯ ಧಾರ್ಮಿಕ ನಂಬಿಕೆ ಅಲ್ಲ. ಹಿಂದೂಗಳಲ್ಲೂ ಸಾರ್ವಜನಿಕವಾಗಿ ಕಾಣುವಾಗ ಸೆರಗನ್ನು ತಲೆಗೆ ಹಾಕಿಕೊಳ್ಳುತ್ತಾರೆ. ನನ್ನ ತಾಯಿ ಸೀರೆಯ ಸೆರಗನ್ನು ಯಾವಾಗಲೂ ತಲೆಗೆ ಹಾಕಿ ಕೊಳ್ಳುತ್ತಿದ್ದರು. ಸಂಸ್ಕೃತಿಯ ಭಾಗ ಅದು. ಸ್ಕಾರ್ಫ್ ಈ ದೇಶದ ವೈವಿಧ್ಯದ ಸಂಕೇತ. ಟರ್ಬನ್ ಇದ್ದ ಹಾಗೆ. ಎಲ್ಲಕ್ಕಿಂತ ಮುಖ್ಯವಾಗಿ ಆ್ಯಗ್ನೆಸ್ ಕಾಲೇಜಿನ ನನ್ ಗಳು ತರಗತಿಗೆ ಪ್ರವೇಶಿಸುವಾಗ ತಮ್ಮ ತಲೆ ವಸ್ತ್ರ ತೆಗೆಯಲು ಸಿದ್ಧರಿದ್ದಾರೆಯೇ? ಇಷ್ಟು ವಿದ್ಯಾವಂತರಾಗಿರುವ ಅವರು ತಮ್ಮ ನಂಬಿಕೆಯನ್ನು ಬಿಡಲು ಸಿದ್ಧರಿಲ್ಲ ಎನ್ನುವಾಗ ಎಳೆ ವಿದ್ಯಾರ್ಥಿನಿಯರಲ್ಲಿ ಅದನ್ನು ನಿರೀಕ್ಷಿಸುವುದು ಸರಿಯೇ? ಸ್ಕಾರ್ಫ್ ಬೇಕೋ ? ಶಿಕ್ಷಣ ಬೇಕೋ? ಎಂದು ಪೋಷಕರ ತೀರ್ಮಾನಕ್ಕೆ ಬಿಡುವುದು ಎಷ್ಟು ಸರಿ ? ಒಂದು ವೇಳೆ ಪೋಷಕರು ಸ್ಕಾರ್ಫ್ ಬೇಕು ಎಂದರೆ ಆ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ದೂರ ಮಾಡುವಲ್ಲಿ ಈ ಪ್ರಗತಿಪರರು ಕೂಡ ಕಾರಣ ಆದಂತೆ ಅಲ್ಲವೇ?. ಮಹಿಳೆ ಸ್ಕಾರ್ಫ್‌ನ್ನು ಹಾಕುವುದು, ತಲೆವಸ್ತ್ರ ಧರಿಸುವುದು ತನ್ನ ಮಾನದ ಒಂದು ಭಾಗ ಎಂದು ತಿಳಿದರೆ, ಅದನ್ನು ಅಲ್ಲ ಗಳೆಯುವ ಹಕ್ಕು ನಮಗಿಲ್ಲ. ಸೇನೆಯಲ್ಲಿ ಸೇರುವ ಪುರುಷರೇ ತಮ್ಮ ಟರ್ಬನ್ ತೆಗೆಯಲು ಸಿದ್ಧರಿಲ್ಲ. ಮುಸ್ಲಿಮರೇನಾದರೂ ಟೋಪಿ ಧರಿಸಿಯೇ ಸೇನೆ ಸೇರುತ್ತೇವೆ ಎಂದಿದ್ದರೆ ಏನಾಗುತ್ತಿತ್ತು. ಸ್ಕಾರ್ಫ್ ನ ಚರ್ಚೆ ದುರುದ್ದೇಶದಿಂದ ಕೂಡಿದೆ. ಈ ಚರ್ಚೆಯ ಬಲಿ ಪಶು ಅಂತಿಮವಾಗಿ ಮಹಿಳೆಯೇ ಆಗಿದ್ದಾಳೆ.

Writer - ಶಿವು ದಳವಾಯಿ, ಶಿವಮೊಗ್ಗ

contributor

Editor - ಶಿವು ದಳವಾಯಿ, ಶಿವಮೊಗ್ಗ

contributor

Similar News