'ಐಸಿಸಿ ಹಾಲ್ ಆಫ್ ಫೇಮ್‌'ಗೆ ಸೇರ್ಪಡೆಯಾದ ಭಾರತದ ಖ್ಯಾತ ಕ್ರಿಕೆಟಿಗ

Update: 2018-07-02 05:27 GMT

ಡಬ್ಲಿನ್ (ಐರ್ಲೆಂಡ್), ಜು.2: ಭಾರತದ ಖ್ಯಾತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಅವರು ವಿಶ್ವದ ಪ್ರತಿಷ್ಠಿತ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರವಾದ ಐದನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಪ್ರಸ್ತುತ 19ರ ವಯೋಮಿತಿಯ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿರುವ ಅವರಿಗೆ ರವಿವಾರ ಈ ಗೌರವ ಸಂದಿದೆ. ಸುನೀಲ್ ಗಾವಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್‌ ದೇವ್ ಮತ್ತು ಅನಿಲ್ ಕುಂಬ್ಳೆ ಈ ಸಾಲಿಗೆ ಮೊದಲೇ ಸೇರ್ಪಡೆಯಾಗಿದ್ದರು.

"ಈ ಗೌರವಕ್ಕಾಗಿ ನಾನು ಐಸಿಸಿಗೆ ಕೃತಜ್ಞತೆ ಹೇಳುತ್ತಿದ್ದೇನೆ. ನಾನು ಕ್ರಿಕೆಟ್ ಪಯಣದಲ್ಲಿ ಆದರ್ಶ ಎಂದು ಪರಿಗಣಿಸಿದ್ದ ವ್ಯಕ್ತಿಗಳ ಸಾಲಿಗೆ ಸೇರುವುದು ಹೆಮ್ಮೆಯ ಸಂಗತಿ. ನನ್ನ ಈ ಯಶಸ್ಸಿನ ಹಾದಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ" ಎಂದು ಐಸಿಸಿ ಗೌರವ ಸ್ವೀಕರಿಸಿ ಪ್ರತಿಕ್ರಿಯಿಸಿದ್ದಾರೆ.

ಭಾರತ ಎ ತಂಡಕ್ಕೆ ತರಬೇತಿ ನೀಡುವ ಪೂರ್ವನಿರ್ಧರಿತ ಕಾರ್ಯದ ಹಿನ್ನೆಲೆಯಲ್ಲಿ ವೈಯಕ್ತಿಕವಾಗಿ ಈ ಗೌರವ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದು ನನ್ನ ಹೃದಯಕ್ಕೆ ಅತ್ಯಂತ ಅಪ್ಯಾಯಮಾನವಾದ ಗೌರವ ಎಂದು ಬಣ್ಣಿಸಿದ್ದಾರೆ. ಐಸಿಸಿ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಈ ಗೌರವದ ಸಂಕೇತವನ್ನು ಷೇರ್ ಮಾಡಿದೆ.

"ದಿ ವಾಲ್ ಈಸ್ ಇನ್ ದ ಹಾಲ್! ಹಿಯರ್ ಈಸ್ ಹಿಸ್ ಐಸಿಸಿ ಹಾಲ್ ಆಫ್ ಫೇಮ್ ಕ್ಯಾಪ್??" ಎಂದು ಐಸಿಸಿ ಟ್ವೀಟ್ ಮಾಡಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ದ್ರಾವಿಡ್ 13,288 ರನ್ ಗಳಿಸಿದ್ದಾರೆ. ಭಾರತದ ಗೋಡೆ ಎಂಬ ಖ್ಯಾತಿಯ ಇವರು ಏಕದಿನ ಕ್ರಿಕೆಟ್‌ನಲ್ಲಿ 12 ಶತಕ ಸಹಿತ 10,899 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News