"ಕಥುವಾ ಘಟನೆಗೆ ಪ್ರತೀಕಾರವಾಗಿ ಮಂದಸೌರ್ ಅತ್ಯಾಚಾರ"

Update: 2018-07-02 10:52 GMT

ಹೊಸದಿಲ್ಲಿ, ಜು.2: "ಕಥುವಾ ಅತ್ಯಾಚಾರ ಪ್ರಕರಣಕ್ಕೆ ಪ್ರತೀಕಾರವಾಗಿ ಮಂದಸೌರ್ ಅತ್ಯಾಚಾರ ನಡೆಸಲಾಗಿದೆ" ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ 'ರಜಿಯಾ ಬಾನೋ' ಎನ್ನುವ ಹೆಸರಿನ ಖಾತೆಯೊಂದು ತೀವ್ರ ಟೀಕೆಗೆ ಗುರಿಯಾಗಿತ್ತು.

ಮಂದಸೌರ್ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿ ಹಿಂದೂ ಆಗಿದ್ದರಿಂದ ಹಾಗೂ ಆರೋಪಿ ಮುಸ್ಲಿಮನಾಗಿದ್ದರಿಂದ ಹಾಗೂ ಕಥುವಾ ಪ್ರಕರಣದಲ್ಲಿ ಆರೋಪಿಗಳು ಹಿಂದುಗಳಾಗಿದ್ದರಿಂದ ಸೇಡು ತೀರಿಸಲಾಗಿದೆ ಎಂಬ ರೀತಿಯ ಪೋಸ್ಟ್ ಇದಾಗಿತ್ತು. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಸೃಷ್ಟಿಸಿತ್ತಲ್ಲದೆ ಮಂದಸೌರ್ ಘಟನೆಗೆ ಇದು ಮುಸ್ಲಿಮರ ಪ್ರತೀಕಾರ ಎಂಬರ್ಥದ  ಮಾತುಗಳೂ ಕೇಳಿ ಬಂದವು. ಅಷ್ಟಕ್ಕೂ ಮತೀಯವಾಗಿ ಜನರನ್ನು ವಿಭಜಿಸುವ ದೃಷ್ಟಿಯಿಂದ ಈ ಪೋಸ್ಟ್ ಮಾಡಿದ 'ರಜಿಯಾ ಬಾನೊ' ಎಂಬಾಕೆ ನಿಜವಾಗಿಯೂ ಇದ್ದಾಳೆಯೇ ಅಥವಾ ಇದೊಂದು ನಕಲಿ ಖಾತೆಯೇ ಎಂಬ ಸಂಶಯಗಳು ಸಹಜ.

►ರಜಿಯಾ ಬಾನೋ ಫೇಸ್ ಬುಕ್ ಪ್ರೊಫೈಲ್ ನಲ್ಲಿ ಆಕೆ ಪಾಕಿಸ್ತಾನದ ಕರಾಚಿಯವಳು, ಅವರ್ ಲೇಡಿ ಆಫ್ ಫಾತಿಮಾ ವಿವಿಯ ಸಿಬ್ಬಂದಿ, ಅದೇ ಸಂಸ್ಥೆಯಲ್ಲಿ ಫ್ಯಾಶನ್ ಆರ್ಟ್ ಕಲಿತಿದ್ದಾಗಿ ಹೇಳಲಾಗಿದೆ.

►ಆದರೆ ಸಾಮಾನ್ಯವಾಗಿ ಮುಸ್ಲಿಮರಲ್ಲಿ ರಜಿಯಾ ಎಂದು ಹೆಸರಿಡುವುದಿಲ್ಲ. ಬದಲಾಗಿ ರಝಿಯಾ ಅನ್ನುತ್ತಾರೆ.

►ಎರಡನೆಯದಾಗಿ ಈ ಫೇಸ್ ಬುಕ್ ಪುಟದ ಪ್ರೊಫೈಲ್ ಫೋಟೋ ಗಮನಿಸಿದಾಗ ಅಂತರ್ಜಾಲದಲ್ಲಿ ಹಲವು ಕಡೆಗಳಲ್ಲಿ ಇದೇ ಫೋಟೋ ಬೇರೆ ಬೇರೆ ಉದ್ದೇಶಗಳಿಗೆ ಬಳಸಿರುವುದು ಕಾಣಿಸುತ್ತದೆ.

►ಮೂರನೆಯದಾಗಿ ಪಾಕಿಸ್ತಾನದ ಈ ರಜಿಯಾ ಬಾನೋ ಪ್ರೊಫೈಲ್ ನೋಡಿದಾಗ 'ಇನ್ಸಾ ಅಲ್ಲಾಹ್' ಎಂದು ಒಂದೆಡೆ ಬರೆದಿದೆ. ಆದರೆ ಮುಸ್ಲಿಮರು ಇನ್ಶಾ ಅಲ್ಲಾಹ್ ಎನ್ನುತ್ತಾರೆಯೇ ವಿನಃ ಇನ್ಸಾ ಅಲ್ಲಾಹ್ ಎನ್ನುವುದಿಲ್ಲ.

►ಆಕೆಯ ಪ್ರೊಫೈಲ್ ಪೇಜ್ ನಲ್ಲಿ ಬರೆಯಲಾದ ಅವರ್ ಲೇಡಿ ಆಫ್ ಫಾತಿಮಾ ವಿವಿ ಪಾಕಿಸ್ತಾನದಲ್ಲಿಲ್ಲ. ಆದರೆ ಫಿಲಿಪ್ಪೈನ್ಸ್ ನಲ್ಲಿರುವ ಇದೇ ಹೆಸರಿನ ವಿಶ್ವವಿದ್ಯಾಲಯ ವೈದ್ಯಕೀಯ, ನರ್ಸಿಂಗ್ ಮತ್ತು ದಂತ ವೈದ್ಯಕೀಯ ಶಿಕ್ಷಣ ಒದಗಿಸುತ್ತದೆ.

ಹಲೋ ಶರ್ಮಾಜಿ ಬಹಿರಂಗಪಡಿಸಿದ ಸತ್ಯ!                  

ಮೇ 20ರಂದು ರಜಿಯಾ ಬಾನೋ `ಕ್ಯಾ ಹಾಲ್ ಹೇ ದೋಸ್ತೋನ್' ಎಂಬ ಪೋಸ್ಟ್ ಮಾಡಿದ್ದಕ್ಕೆ ಪ್ರತಿಯಾಗಿ ಕಮೆಂಟ್ ಮಾಡಿದವರೊಬ್ಬರು ಆಕೆಯನ್ನು `ಶರ್ಮಾ ಜಿ' ಎಂದು ಸಂಬೋಧಿಸಿದ್ದರೆ, ಇನ್ನೊಬ್ಬಾತ ಆಕೆಯನ್ನು `ಪವನ್' ಎಂದು ಕರೆದಿದ್ದಾನೆ. 'ಪವನ್ ಭಾಯ್, ಈಗ ನೀವು ಮುಲ್ಲಾ ಆಗಿದ್ದೀರಾ?" ಎಂದು ಒಬ್ಬಾತ ಪ್ರಶ್ನಿಸಿದ್ದಾರೆ, ಮತ್ತೊಬ್ಬಾತ, "ಶರ್ಮಾಜಿ ನೀವೇಕೆ ಹೆಸರು ಬದಲಿಸಿದ್ದೀರಿ" ಎಂದು ಪ್ರಶ್ನಿಸಿದ್ದ. ಇದು ರಜಿಯಾ ಬಾನೊ ಖಾತೆಯಲ್ಲಿ ಹಾಗೆಯೇ ಉಳಿದಿತ್ತು.

ರಜಿಯಾ ಬಾನೋ ಖಾತೆಯಿಂದ ಅದಕ್ಕೆ `ಜಸ್ಟ್ ವೈಟ್ ಆ್ಯಂಡ್ ವಾಚ್ ಡಿಯರ್' ಎಂದು ಪ್ರತಿಕ್ರಿಯೆ ಬಂದಿದೆ. ಹಾಗಾದರೆ ರಜಿಯಾ ಬಾನೋ ಯಾರು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ. ಹಿಂದೂ ಮುಸ್ಲಿಮರ ನಡುವೆ ಬಿರುಕು ಮೂಡಿಸಲು, ಕೋಮುದ್ವೇಷ ಹರಡಲು ಶರ್ಮಾಜಿ ಅಥವಾ ಪವನ್ ಎಂಬ ಕಿಡಿಗೇಡಿಯೊಬ್ಬ ರಜಿಯಾ ಬಾನೋ ಎನ್ನುವ ಹೆಸರಿನ ನಕಲಿ ಖಾತೆ ತಯಾರಿಸಿದ್ದಾನೆ ಎನ್ನುವುದು ಇದರಿಂದ ಸ್ಪಷ್ಟಗೊಂಡಿದೆ. ಇದೀಗ ರಜಿಯಾ ಬಾನೋ ಫೇಸ್ ಬುಕ್ ಖಾತೆ ಡಿಲೀಟ್ ಆಗಿದೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News