ನಿಮ್ಮ ಮೊಬೈಲ್ ಫೋನ್‌ಗೆ ಬೆಂಕಿ ಹತ್ತದಂತೆ ನೋಡಿಕೊಳ್ಳುವುದು ಹೇಗೆ...?

Update: 2018-07-02 11:17 GMT

ಮಲೇಷ್ಯಾದ ಕ್ರಾಡಲ್ ಫಂಡ್ ಕಂಪನಿಯ ಸಿಇಒ ನಝ್ರಿನ್ ಹಸನ್ ಅವರು ತನ್ನ ಸ್ಮಾರ್ಟ್‌ಫೋನ್ ಸ್ಫೋಟಗೊಂಡು ಸಾವನ್ನಪ್ಪಿದ್ದು ಇತ್ತೀಚಿಗಷ್ಟೇ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಇಂತಹ ಏಕೈಕ ಪ್ರಕರಣವಲ್ಲ. ಸ್ಮಾರ್ಟ್‌ಫೋನ್‌ಗಳು ಸ್ಫೋಟಗೊಳ್ಳುವ ಮತ್ತು ಅವುಗಳಿಗೆ ಬೆಂಕಿ ಹತ್ತುವ ಘಟನೆಗಳು ಭಾರತ ಸೇರಿದಂತೆ ವಿಶ್ವಾದ್ಯಂತ ಆಗಾಗ್ಗೆ ವರದಿಯಾಗುತ್ತಲೇ ಇವೆ.

ಚಾರ್ಜ್ ಮಾಡುತ್ತಿರುವಾಗ ಬಿಸಿಯಾಗುವ ಲೀಥಿಯಂ ಆಯನ್ ಬ್ಯಾಟರಿ ಸ್ಮಾರ್ಟ್‌ಫೋನ್ ಸ್ಫೋಟಗೊಳ್ಳಲು ಮುಖ್ಯ ಕಾರಣಗಳಲ್ಲೊಂದಾಗಿದೆ. ಆದರೆ ಚಿಂತಿಸಬೇಕಿಲ್ಲ,ನಿಮ್ಮ ಸ್ಮಾರ್ಟ್‌ಫೋನ್ ಸ್ಫೋಟಿಸುವುದನ್ನು ತಡೆಯಲು ಸುಲಭ ಟಿಪ್‌ಗಳಿಲ್ಲಿವೆ.

►ಸರಿಯಾದ ಚಾರ್ಜರ್ ಬಳಸಿ

ಬಳಕೆದಾರರು ಒರಿಜಿನಲ್ ಚಾರ್ಜರ್‌ಗಳನ್ನೇ ಬಳಸಬೇಕು ಎಂದು ಸ್ಮಾರ್ಟ್‌ಫೋನ್‌ಗಳ ತಯಾರಕರು ಒತ್ತಿ ಹೇಳುತ್ತಾರೆ. ಇದರ ಹಿಂದೆ ಹೆಚ್ಚಿನ ಪೂರಕ ಸಾಧನಗಳ ಮಾರಾಟದ ಉದ್ದೇಶವೇನಿಲ್ಲ. ಆದರೆ ಇತರ ಚಾರ್ಜರ್‌ಗಳ ಗುಣಮಟ್ಟ ಮತ್ತು ಕಾರ್ಯದ ಬಗ್ಗೆ ಅವರು ಖಾತರಿ ಹೊಂದಿರುವುದಿಲ್ಲ. ಹೀಗಾಗಿ ನಿಮ್ಮ ಚಾರ್ಜರ್ ಹಾಳಾದರೆ ಅಥವಾ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅಸಲಿ ಚಾರ್ಜರ್‌ನ್ನೇ ಖರೀದಿಸಿ.

►ಒರಿಜಿನಲ್ ಬ್ಯಾಟರಿಗಳಿರಲಿ

ಚಾರ್ಜರ್‌ನಂತೆ ನಿರ್ದಿಷ್ಟ ಮಾದರಿಯ ನಿಮ್ಮ ಸ್ಮಾರ್ಟ್‌ಫೋನ್‌ಗೆ ತಯಾರಕರು ಅನುಮೋದಿಸಿರುವ ಬ್ಯಾಟರಿಯನ್ನೇ ಬಳಸುವುದು ಅಗತ್ಯ. ಅಲ್ಲದೆ ಬ್ಯಾಟರಿ ಸೋರಿಕೆ ಮತ್ತು ಸ್ಫೋಟ ಸಾಧ್ಯತೆಗೆ ಕಾರಣವಾಗುವ ಯಾವುದೇ ವಿರೂಪ ಅಥವಾ ಹಾನಿಯುಂಟಾಗಿದೆಯೇ ಎನ್ನುವುದನ್ನು ಪರಿಶೀಲಿಸುತ್ತಿರಿ. ಸ್ಮಾರ್ಟ್‌ಫೋನ್‌ನ ಬ್ಯಾಟರಿಯನ್ನು ಸಕಾಲದಲ್ಲಿ ಬದಲಿಸುವುದೂ ಮುಖ್ಯವಾಗಿದೆ.

►ತುಂಬ ಹೊತ್ತು ಚಾರ್ಜ್ ಮಾಡಬೇಡಿ

ನಿಮ್ಮ ಮೊಬೈಲ್‌ನ್ನು ತುಂಬ ಹೊತ್ತು ಚಾರ್ಜಿಗಿಡುವುದರಿಂದ ಬ್ಯಾಟರಿಯ ಕಾರ್ಯಕ್ಷಮತೆ ಕಡಿಮೆಯಾಗಬಹುದು. ಬ್ಯಾಟರಿಯು ಶೇ.90ರಷ್ಟು ಚಾರ್ಜ್ ಆಗಿದ್ದರೆ ಅದನ್ನು ಇನ್ನಷ್ಟು ಚಾರ್ಜಿಗಿಡಬೇಡಿ. ರಾತ್ರಿಯಿಡೀ ಮೊಬೈಲ್‌ನ್ನು ಚಾರ್ಜಿಗಿಡಬೇಡಿ ಮತ್ತು ಅದು ಒಮ್ಮೆ ಚಾರ್ಜ್ ಆದ ಬಳಿಕ ಪ್ಲಗ್‌ನ್ನು ತೆಗೆಯಲು ಮರೆಯಬೇಡಿ.

►ನೀವು ಎಲ್ಲಿ ಚಾರ್ಜ್ ಮಾಡುತ್ತಿದ್ದೀರಿ ಎಂಬ ಬಗ್ಗೆ ಎಚ್ಚರಿಕೆಯಿರಲಿ

ನೀರು ಅಥವಾ ಹಾಸಿಗೆಯ ಸಮೀಪ ಎಂದೂ ಮೊಬೈಲ್‌ನ್ನು ಚಾರ್ಜ್‌ಗಿಡಬೇಡಿ. ಚಾರ್ಜ್ ಆಗುತ್ತಿರುವಾಗ ಮೊಬೈಲ್‌ನ್ನು ತಲೆದಿಂಬಿನ ಕೆಳಗಿರಿಸಿದರೆ ಅದು ಇನ್ನಷ್ಟು ಬಿಸಿಯಾಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿರಲಿ. ನೇರ ಬಿಸಿಲಿಗೆ ಮೊಬೈಲ್‌ನ್ನು ಒಡ್ಡಬಾರದು ಮತ್ತು ಕಾರಿನ ಡ್ಯಾಷ್‌ಬೋರ್ಡ್ ಅಥವಾ ರೇಡಿಯೇಟರ್‌ನಂತಹ ಬಿಸಿಯಾದ ಸ್ಥಳಗಳಲ್ಲಿ ಇರಿಸಬಾರದು.

►ಆಗಾಗ್ಗೆ ಮೊಬೈಲ್‌ನ್ನು ಬೀಳಿಸಬೇಡಿ

ನಿಮ್ಮ ಮೊಬೈಲ್ ಫೋನ್ ನೆಲಕ್ಕೆ ಬಲವಾಗಿ ಅಪ್ಪಳಿಸದರೆ ಅದು ಹೇಗೆ ವರ್ತಿಸುತ್ತದೆ ಎಂದು ಹೇಳುವುದು ಕಷ್ಟ,ಅದಕ್ಕೆ ಆಗಿರುವ ಬಾಹ್ಯ ಮತ್ತು ಆಂತರಿಕ ಹಾನಿಯನ್ನು ಇದು ಅವಲಂಬಿಸಿರುತ್ತದೆ. ಫೋನ್ ಕೆಳಕ್ಕೆ ಬಿದ್ದರೆ ಕ್ಯಾಥೋಡ್ ಮತ್ತು ಆ್ಯನೋಡ್ ನಡುವಿನ ಇಂಟರ್ನಲ್ ಬ್ಯಾಟರಿ ಸೆಪರೇಟರ್ ಅಸ್ತವ್ಯಸ್ತಗೊಳ್ಳಬಹುದು ಮತ್ತು ಇದು ಚಾರ್ಜಿಗಿಟ್ಟಾಗ ಹೆಚ್ಚು ಬಿಸಿಗೆ ಮತ್ತು ಬೆಂಕಿಗೂ ಸಹ ಕಾರಣವಾಗಬಹುದು.

►ಎಚ್ಚರಿಕೆಯ ಸಂಕೇತಗಳನ್ನು ತಿಳಿದುಕೊಳ್ಳಿ

ಬ್ಯಾಟರಿ ಅತಿಯಾಗಿ ಬಿಸಿಯಾಗಿದ್ದರೆ ಅಥವಾ ಉಬ್ಬಿಕೊಂಡಿದ್ದರೆ ಅಥವಾ ಹಿಸ್ ಎಂಬ ಶಬ್ದವನ್ನುಂಟು ಮಾಡುತ್ತಿದ್ದರೆ ಮೊಬೈಲ್‌ನ್ನು ಬಂದ್ ಮಾಡಿ,ತಕ್ಷಣವೇ ವಿದ್ಯುತ್ ಸಂಪರ್ಕವನ್ನು ತಪ್ಪಿಸಿ. ಮೊಬೈಲ್‌ನ್ನು ಯಾವುದೇ ದಹನಶೀಲ ವಸ್ತುಗಳಿಂದ ದೂರ ಪ್ರತ್ಯೇಕ ಸ್ಥಳದಲ್ಲಿರಿಸಿ.

►ಅಧಿಕೃತ ಕೇಂದ್ರಗಳಲ್ಲೇ ಸರ್ವಿಸ್ ಮಾಡಿಸಿ

ಸ್ಮಾರ್ಟ್‌ಫೋನ್ ರಿಪೇರಿಯ ಹಲವಾರು ಅಂಗಡಿಗಳನ್ನು ನಾವು ನೊಡುತ್ತಿರುತ್ತೇವೆ,ಆದರೆ ಇವುಗಳ ಪೈಕಿ ಹೆಚ್ಚಿನವು ಅಧಿಕೃತವಾಗಿರುವುದಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಕೆಟ್ಟರೆ ಅದನ್ನು ಕಂಪನಿಯ ಅಧಿಕೃತ ಸರ್ವಿಸ್ ಸೆಂಟರ್ ಅಥವಾ ಕಂಪನಿಯಿಂದ ಅನುಮತಿ ಪಡೆದಿರುವ ಥರ್ಡ್ ಪಾರ್ಟಿ ಸರ್ವಿಸ್ ಸೆಂಟರ್‌ನಲ್ಲೇ ರಿಪೇರಿ ಮಾಡಿಸಿ. ಅಧಿಕೃತ ಸರ್ವಿಸ್ ಸೆಂಟರ್‌ಗಲ್ಲಿ ರಿಪೇರಿ ಮಾಡಿಸುವುದರಿಂದ ನಿಮ್ಮ ಮೊಬೈಲ್ ಮೂಲ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್‌ಗಳ ಮೇಲೆ ಕಾರ್ಯಾಚರಿಸುವ ಭರವಸೆಯನ್ನು ನೀವು ಹೊಂದಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News