ಗುಹೆಯಿಂದ ಬಾಲಕರನ್ನು ಹೊರತರಲು ತಿಂಗಳುಗಳೇ ಬೇಕು!

Update: 2018-07-03 17:47 GMT

ಮೈ ಸಾಯಿ (ಥಾಯ್ಲೆಂಡ್), ಜು. 3: ಥಾಯ್ಲೆಂಡ್‌ನ ಗುಹೆಯಲ್ಲಿ ನಾಪತ್ತೆಯಾಗಿದ್ದ 12 ಬಾಲಕರು ಮತ್ತು ಅವರ ಫುಟ್ಬಾಲ್ ಕೋಚ್ ಸೋಮವಾರ ಜೀವಂತ ಪತ್ತೆಯಾಗಿದ್ದರೂ, ಅವರನ್ನು ಗುಹೆಯಿಂದ ಹೊರತರಲು ಇನ್ನೂ ಹಲವು ದಿನಗಳು ಬೇಕು ಎಂದು ಥಾಯ್ಲೆಂಡ್ ಸೇನೆ ತಿಳಿಸಿದೆ.

ತಕ್ಷಣದ ಪರಿಹಾರವಾಗಿ ಅವರಿಗೆ ನಾಲ್ಕು ತಿಂಗಳಿಗೆ ಸಾಕಾಗುವಷ್ಟು ಆಹಾರವನ್ನು ಪೂರೈಸಲಾಗುವುದು ಹಾಗೂ ಮುಳುಗು ತರಬೇತಿ ನೀಡಲಾಗುವುದು.

ಅವರನ್ನು ಸಂಕೀರ್ಣ ಭೂಗತ ವ್ಯವಸ್ಥೆಯಿಂದ ಹೊರತರುವ ಸವಾಲಿನ ಕೆಲಸದತ್ತ ಈಗ ಗಮನ ಹರಿಸಲಾಗಿದೆ.

11 ಮತ್ತು 16 ವರ್ಷ ನಡುವಿನ ಪ್ರಾಯದ 12 ಮಕ್ಕಳು ಮತ್ತು ಅವರ 25 ವರ್ಷದ ಫುಟ್ಬಾಲ್ ಕೋಚ್ ಸೋಮವಾರ ರಾತ್ರಿ ಪತ್ತೆಯಾಗಿದ್ದರು. ಅವರು ತೀರಾ ನಿತ್ರಾಣರಾಗಿದ್ದರೂ ಜೀವಂತವಾಗಿದ್ದರು. ಪ್ರವಾಹಪೀಡಿತ ಗುಹೆಯ ತೀರಾ ಒಳಭಾಗದ ದಿಬ್ಬವೊಂದರಲ್ಲಿ ಅವರು ಜೊತೆಯಾಗಿದ್ದರು.

ಒಂಬತ್ತು ದಿನಗಳ ಹಿಂದೆ ಅವರು ಮೋಜಿಗಾಗಿ ಗುಹೆಯ ಒಳಗೆ ಪ್ರವೇಶಿಸಿದ್ದರು. ಆದರೆ, ಅಂದು ಭಾರೀ ಮಳೆ ಸುರಿದಿದ್ದು ಸುರಂಗದೊಳಗೆ ನೀರು ಹರಿದು ಪ್ರವಾಹಕ್ಕೀಡಾಗಿತ್ತು. ಅಂದು ಸುರಿದ ಮಳೆ ಇನ್ನೂ ನಿಂತಿಲ್ಲ. ಹಾಗಾಗಿ, ಗುಹೆಯ ಪ್ರವಾಹ ಮಟ್ಟ ಕಡಿಮೆಯಾಗಿಲ್ಲ.

ಅವರಿಗೆ ಅಗತ್ಯವಾಗಿ ಬೇಕಾಗಿರುವ ಅಧಿಕ ಕ್ಯಾಲರಿ ಜೆಲ್‌ಗಳು ಮತ್ತು ಪಾರಾಸಿಟಮಾಲ್‌ಗಳನ್ನು ಮಂಗಳವಾರ ತಲುಪಿಸಲಾಗಿದೆ.

ಪ್ರವಾಹಪೀಡಿತ ಗುಹೆಗೆ ನುಗ್ಗಿದ ಬ್ರಿಟಿಶ್ ಮುಳುಗುಗಾರರು ಸೋಮವಾರ ರಾತ್ರಿ ಅವರನ್ನು ಪತ್ತೆಹಚ್ಚಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News