ಇದು ದಿಲ್ಲಿಯ ಜನರ ಅತೀದೊಡ್ಡ ಜಯ: ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕೇಜ್ರಿವಾಲ್

Update: 2018-07-04 08:08 GMT

ಹೊಸದಿಲ್ಲಿ, ಜು.4: ಲೆಫ್ಟಿನೆಂಟ್ ಗವರ್ನರ್ ಅವರ ಅಧಿಕಾರ ಸಂವಿಧಾನ ನಿಗದಿಪಡಿಸಿದ ಮಿತಿಯೊಳಗಿರಬೇಕು ಎಂದು ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದಾರೆ.

ಭೂಮಿ, ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹೊರತುಪಡಿಸಿ ಬೇರೆಲ್ಲಾ ವಿಚಾರಗಳಲ್ಲೂ ಚುನಾಯಿತ ಸರಕಾರಗಳ  ನಿರ್ಧಾರವೇ ಮಾನ್ಯವಾಗುತ್ತವೆ ಎಂದು ನ್ಯಾಯಾಲಯ ಹೇಳಿರುವುದು ಕೇಜ್ರಿವಾಲ್ ಸರಕಾರಕ್ಕೆ ದೊರೆತ ದೊಡ್ಡ ಜಯವೆಂದೇ ಬಣ್ಣಿಸಲಾಗಿದೆ. ಲೆಫ್ಟಿನೆಂಟ್ ಗವರ್ನರ್ ಜತೆ ಸುಮಾರು ಮೂರು ವರ್ಷಗಳ ಕಾದಾಟದ ನಂತರ ಕೇಜ್ರಿ ಸರಕಾರ ನ್ಯಾಯಾಲಯದ ಕದ ತಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಲೆಫ್ಟಿನೆಂಟ್ ಗವರ್ನರ್ ನಿವಾಸದಲ್ಲಿ ಇತ್ತೀಚೆಗೆ ಪ್ರತಿಭಟನೆ ಕೈಗೊಂಡಿದ್ದ ಮುಖ್ಯಮಂತ್ರಿ ಟ್ವೀಟ್ ಮಾಡಿ "ದಿಲ್ಲಿ ಜನರಿಗೆ ಸಂದ ದೊಡ್ಡ ವಿಜಯ, ಪ್ರಜಾಪ್ರಭುತ್ವದ ದೊಡ್ಡ ವಿಜಯ'' ಎಂದು ಬಣ್ಣಿಸಿದ್ದಾರೆ.

ಮೂರು ವರ್ಷಗಳ ಹಿಂದೆ ತಮ್ಮ ಸರಕಾರ ಅಸ್ತಿತ್ವಕ್ಕೆ ಬಂದಂದಿನಿಂದ ಕೇಜ್ರಿವಾಲ್ ಹಾಗೂ ಲೆಫ್ಟಿನೆಂಟ್ ಗವರ್ನರ್ ಮಧ್ಯೆ ತಿಕ್ಕಾಟ ಆರಂಭಗೊಂಡಿತ್ತು. ಆಡಳಿತಾತ್ಮಕ ವಿಚಾರಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಮಾತೇ ಅಂತಿಮ ಎಂದು ದಿಲ್ಲಿ ಹೈಕೋರ್ಟ್ ಆದೇಶ ನೀಡಿದ ನಂತರ ಸರಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

ಚುನಾಯಿತ ಸರಕಾರ ಮತ್ತು ಅದು ಹೊಂದಿರುವ ಅಧಿಕಾರವನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ``ಪ್ರಜಾಪ್ರಭುತ್ವದಲ್ಲಿ ನಿಜವಾದ ಅಧಿಕಾರ ಚುನಾಯಿತ ಸರಕಾರದಲ್ಲಿರಬೇಕು. ಜನರ  ಅಭಿಪ್ರಾಯ ತನ್ನ ಉದ್ದೇಶ ಕಳೆದುಕೊಳ್ಳುವಂತಾಗಬಾರದು'' ಎಂದು ಹೇಳಿದೆ.

ಸರಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಈ ವಿಚಾರವಾಗಿಯೇ ಸರಕಾರ ಮತ್ತು ಲೆಫ್ಟಿನೆಂಟ್ ಗವರ್ನರ ನಡುವೆ ಸಂಘರ್ಷ ನಡೆದಿತ್ತು.

ಮುಖ್ಯಮಂತ್ರಿ ಕೇಜ್ರಿವಾಲ್ ಜತೆ ಸಿಸೋಡಿಯಾ ಕೂಡ ಇತ್ತೀಚೆಗೆ ಲೆಫ್ಟಿನೆಂಟ್ ಗವರ್ನರ್  ನಿವಾಸದಲ್ಲಿ ಪ್ರತಿಭಟನೆ ಕುಳಿತಿದ್ದರು. ದಿಲ್ಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡಬೇಕೆಂದು ಬೇಡಿಕೆಯೊಂದಿಗೆ ಎಎಪಿ ಈಗಾಗಲೇ ಬೃಹತ್ ಸಹಿ ಅಭಿಯಾನವನ್ನೂ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News