ಸುಳ್ಳು ಸುದ್ದಿಗಳ ವಿರುದ್ಧ ಕಣ್ಣೂರು ಜಿಲ್ಲಾಧಿಕಾರಿಯ ‘ಸತ್ಯಮೇವ ಜಯತೇ’
ಕಣ್ಣೂರು, ಜು.4: ಸುಳ್ಳು ಸುದ್ದಿ ಎಂದರೇನು, ಇದರಿಂದ ಆಗುವ ಅಪಾಯಗಳು ಹಾಗೂ ಇವನ್ನು ನಿಗ್ರಹಿಸುವುದು ಹೇಗೆ ಇತ್ಯಾದಿ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ‘ಸತ್ಯಮೇವ ಜಯತೇ’ ಎಂಬ ಅಭಿಯಾನವನ್ನು ಕೇರಳ ಕಣ್ಣೂರಿನ ಜಿಲ್ಲಾಧಿಕಾರಿ ಮೀರ್ ಮುಹಮ್ಮದ್ ಅಲಿ ಆರಂಭಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಕೆಲವು ಗುಣವಿಶೇಷಗಳನ್ನು ಬೆಳೆಸಲು, ಅವರಲ್ಲಿ ಜೀವನಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂತರ್‌ಜಾಲದಲ್ಲಿ ಲಭ್ಯವಾಗುವ ಮಾಹಿತಿಗಳು ಹೇಗಿರುತ್ತವೆ ಮತ್ತು ಸುಳ್ಳು ಹಾಗೂ ಸತ್ಯದ ನಡುವಿನ ವ್ಯತ್ಯಾಸವನ್ನು ಗುರುತಿಸುವುದನ್ನು ವಿದ್ಯಾರ್ಥಿಗಳಿಗೆ ಕಳುಹಿಸಿಕೊಡುವ ಉದ್ದೇಶವಿದೆ ಎಂದು ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಕಣ್ಣೂರಿನಲ್ಲಿ ಸುಳ್ಳು ಸುದ್ದಿಗಳ ಬಗ್ಗೆ ಈಗ ಜಾಗೃತೆ ವಹಿಸಲಾಗುತ್ತಿದೆ. ನಿಪಾಹ್ ವೈರಸ್ ಕುರಿತು ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕೆಲ ದಿನಗಳ ಹಿಂದೆ ಕಣ್ಣೂರಿನಲ್ಲಿ ಬಂಧಿಸಲಾಗಿದೆ.
ಕಳೆದ ವರ್ಷ ರುಬೆಲ್ಲಾ ಚುಚ್ಚುಮದ್ದು ನೀಡುವ ಅಭಿಯಾನದ ಬಗ್ಗೆ ಅಪಪ್ರಚಾರ ನಡೆಸಿದ ಕಾರಣ ಹೆತ್ತವರು ತಮ್ಮ ಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಳ್ಳಲು ನಿರಾಕರಿಸಿರುವ ಘಟನೆಯನ್ನು ಅಲಿ ಉಲ್ಲೇಖಿಸಿದ್ದಾರೆ. ಹೆಣ್ಣುಮಕ್ಕಳಿಗೆ ಚುಚ್ಚುಮದ್ದು ಹಾಕಿಸಿಕೊಂಡರೆ ಮುಂದೆ ಅವರು ಗರ್ಭ ಧರಿಸಲು ಸಾಧ್ಯವಾಗದು ಎಂಬ ಸುಳ್ಳು ಸುದ್ದಿ ಆಗ ಹಬ್ಬಿತ್ತು. ಆದರೆ ವಾಸ್ತವವಾಗಿ, ಚುಚ್ಚುಮದ್ದು ಹಾಕಿಸಿಕೊಳ್ಳದಿದ್ದರೆ ಹುಟ್ಟುವಾಗಲೇ ಶಿಶುಗಳು ಸಾಯುವ ಸಾಧ್ಯತೆ ಹೆಚ್ಚಿರುತ್ತದೆ ಎಂದವರು ಹೇಳಿದ್ದಾರೆ.
8ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜೂನ್ 13ರಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯ 150 ಸರಕಾರಿ ಶಾಲೆಗಳ ಒಬ್ಬೊಬ್ಬ ಶಿಕ್ಷಕರಿಗೆ ತಿಂಗಳಾವಧಿಯ ತರಬೇತಿ ನೀಡಲಾಗುವುದು. ಬಳಿಕ ಅವರು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.
ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಅಭಿಯಾನ ಜಾರಿಯಾಗುತ್ತದೆ ಎಂದವರು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಆಗುವ ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಲಾಗುವುದು. ಎರಡನೇ ಹಂತದಲ್ಲಿ ‘ಕ್ಲಿಕ್‌ಬೈಟ್’ ಬಗ್ಗೆ ಮಾಹಿತಿ ನೀಡಲಾಗುವುದು(ಅತ್ಯಾಕರ್ಷಕ ರೀತಿಯ ಪ್ರಚಾರದಿಂದ ವೀಕ್ಷಕರನ್ನು ಆಕರ್ಷಿಸಿ, ವೆಬ್‌ಸೈಟ್‌ನ ಬಗ್ಗೆ ಕುತೂಹಲ ಮೂಡಿಸಿ ಅವನ್ನು ವೀಕ್ಷಿಸಲು ಪ್ರೇರೇಪಿಸುವ ವೆಬ್‌ಸೈಟ್‌ಗಳು) . ಅಲ್ಲದೆ ಕೆಲವು ಸುದ್ದಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ, ಅವು ಸುಳ್ಳು ಸುದ್ದಿಯೇ ಎಂದು ಪತ್ತೆಹಚ್ಚಲು ತಿಳಿಸಲಾಗುವುದು. ಮಾಹಿತಿಗಳ ಮೂಲವನ್ನು ಕಳುಹಿಸುವಂತೆ ಸುದ್ದಿ ಕಳುಹಿಸಿದ ವ್ಯಕ್ತಿಗೆ ತಿಳಿಸಲಾಗುವುದು. ಸುದ್ದಿಗಳ ಮೂಲ ಕಳುಹಿಸಲು ಆತ ವಿಫಲವಾದರೆ ಆಗ ವಿದ್ಯಾರ್ಥಿಗಳಿಗೆ ವಾಸ್ತವ ಮಾಹಿತಿಯನ್ನು ಕಲೆಹಾಕಿ ನೈಜ ಸುದ್ದಿ ಸಂಗ್ರಹಿಸಲು ತಿಳಿಸಲಾಗುತ್ತದೆ ಎಂದು ಅಲಿ ತಿಳಿಸಿದ್ದಾರೆ.
ಭವಿಷ್ಯದಲ್ಲಿ ಇನ್ನಷ್ಟು ಶಾಲೆಗಳಲ್ಲಿ ಈ ಕಾರ್ಯಕ್ರಮ ಮುಂದುವರಿಯಲಿದೆ. ಮಲಯಾಳಂ ಭಾಷೆಯಲ್ಲಿ ಕಾರ್ಯಕ್ರಮ ನಡೆಸುವ ಮೂಲಕ ಹೆಚ್ಚಿನ ಜನರಿಗೆ ತಲುಪಿಸಲಾಗುವುದು ಎಂದವರು ತಿಳಿಸಿದ್ದಾರೆ.