ಕನಿಷ್ಠ ಬೆಂಬಲ ಬೆಲೆ ಹೆಚ್ಚಳದಿಂದ ಕೇವಲ ಶೇ.7ರಷ್ಟು ರೈತರಿಗೆ ಮಾತ್ರ ಪ್ರಯೋಜನ

Update: 2018-07-05 13:44 GMT

ಹೊಸದಿಲ್ಲಿ, ಜು.5: ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಕ್ಕಿ ಸೇರಿದಂತೆ ಹಲವಾರು ಬೇಸಿಗೆ ಬೆಳೆಗಳಿಗೆ ಕನಿಷ್ಠ ಬೆಂಬಲ ದರ ಹೆಚ್ಚಿಸಿದ್ದರೂ ಅದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗದು ಎಂದು ಹೇಳಲಾಗುತ್ತಿದೆ. ರೈತರ ಬೆಳೆಗಳನ್ನು ಖರೀದಿಸಲು ಸಾಕಷ್ಟು ಹಣ ಹಾಗೂ ಅವುಗಳನ್ನು ದಾಸ್ತಾನಿರಿಸಲು ಗೋದಾಮುಗಳ ಕೊರತೆಯನ್ನು ಸರಕಾರ ಎದುರಿಸುತ್ತಿದೆ.

ಹೆಚ್ಚಿನ ಬೆಳೆಗಳಿಗೆ ಸರಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಏಜನ್ಸಿಗಳು ಆ ಬೆಲೆಯಲ್ಲಿ ಸೀಮಿತ ಪ್ರಮಾಣದ ಅಕ್ಕಿ, ಗೋಧಿ ಖರೀದಿಸುತ್ತವೆ. ಇದರಿಂದಾಗಿ ದೇಶದ 263 ಮಿಲಿಯನ್ ರೈತರ ಪೈಕಿ ಕೇವಲ ಶೇ.7ರಷ್ಟು ಮಂದಿಗೆ ಮಾತ್ರ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದಿಂದ ಪ್ರಯೋಜನವಾಗಲಿದೆ ಎಂದು ಹೇಳಲಾಗುತ್ತಿದೆ. ಸರಕಾರದ ಯೋಜನೆಯನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸುವುದೂ ಕಷ್ಟಕರವೆಂದು ತಜ್ಞರು ಹೇಳುತ್ತಿದ್ದಾರೆ.

2017-18ರಲ್ಲಿ ಬೆಳೆಯಲಾದ ಒಟ್ಟು 210 ಅಕ್ಕಿ ಮತ್ತು ಗೋಧಿಯ ಪೈಕಿ ರಾಜ್ಯ ಏಜನ್ಸಿಗಳು ಕೇವಲ 71 ಮಿಲಿಯನ್ ಟನ್ ಗಳಷ್ಟನ್ನು ಖರೀದಿಸಿದ್ದವು. ಅದೇ ವರ್ಷದಲ್ಲಿ ತೈಲಬೀಜಗಳು, ಈರುಳ್ಳಿ, ಬಟಾಟೆ ಮುಂತಾದವುಗಳು ಲಕ್ಷಗಟ್ಟಲೆ ಟನ್ ಗಳಷ್ಟು ಬೆಳೆಸಲ್ಪಟ್ಟಿದ್ದರೂ ಇವುಗಳನ್ನು ಸಾಮಾನ್ಯವಾಗಿ ಸರಕಾರಗಳು ಖರೀದಿಸುವುದಿಲ್ಲ.

ಒಟ್ಟು 60 ಮಿಲಿಯನ್ ಟನ್ ಅಕ್ಕಿ ಮತ್ತು ಗೋಧಿ ದಾಸ್ತಾನಿಗೆ ಬೇಡಿಕೆಯಿದ್ದರೂ, ಶೇ.17ರಷ್ಟು ಬೆಳೆಗಳನ್ನು ತೆರೆದ ಪ್ರದೇಶದಲ್ಲಿ ಪ್ಲಾಸ್ಟಿಕ್ ಮತ್ತಿತರ ಹೊದಿಕೆಗಳನ್ನು ಹಾಕಿ ದಾಸ್ತಾನಿಡಲಾಗುತ್ತದೆಯೆಂದು ಆಹಾರ ಸಚಿವಾಲಯ ಮಾರ್ಚ್ ತಿಂಗಳಲ್ಲಿ ಸಂಸತ್ತಿಗೆ ಮಾಹಿತಿ ನೀಡಿತ್ತು. 2020ರ ಹೊತ್ತಿಗೆ ಸರಕಾರ ತನ್ನ ದಾಸ್ತಾನು ಸಾಮರ್ಥ್ಯ ಹೆಚ್ಚಿಸಲಿದೆ ಎಂಬ ಮಾಹಿತಿಯೂ ಇದೆ.

ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿರುವುದು ಸ್ವಾಗತಾರ್ಹವಾದರೂ ಆ ಬೆಲೆಯಲ್ಲಿ ಸರಕಾರಿ ಏಜನ್ಸಿಗಳು ಕೊಂಡುಕೊಳ್ಳುವ ಪ್ರಮಾಣ ಸಾಕಾಗದು ಎಂದು ಖ್ಯಾತ ಕೃಷಿ ವಿಜ್ಞಾನಿ ಎಂ ಎಸ್ ಸ್ವಾಮಿನಾಥನ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News