ಮೊದಲ ಇನಿಂಗ್ಸ್ ನಲ್ಲಿ ಬಾಂಗ್ಲಾ 43ಕ್ಕೆ ಆಲೌಟ್

Update: 2018-07-05 18:31 GMT

ಆ್ಯಂಟಿಗುವಾ, ಜು.5: ಬಾಂಗ್ಲಾದೇಶವನ್ನು ಮೊದಲ ಇನಿಂಗ್ಸ್‌ನಲ್ಲಿ ಕೇವಲ 43 ರನ್‌ಗೆ ಆಲೌಟ್ ಮಾಡಿದ ವೆಸ್ಟ್‌ಇಂಡೀಸ್ ತಂಡ ಮೊದಲ ಟೆಸ್ಟ್‌ನಲ್ಲಿ ಸಂಪೂರ್ಣ ಹಿಡಿತ ಸಾಧಿಸಿದೆ. ಬಾಂಗ್ಲಾದೇಶ ಟೆಸ್ಟ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟಾಯಿತು. ಈ ಮೊದಲು 2007ರಲ್ಲಿ ಶ್ರೀಲಂಕಾ ವಿರುದ್ಧ 62 ರನ್‌ಗೆ ಸರ್ವಪತನವಾಗಿತ್ತು. ವಿಂಡೀಸ್ ವೇಗದ ಬೌಲರ್ ಕೆಮರ್ ರೋಚ್ 12 ಎಸೆತಗಳಲ್ಲಿ ಕೇವಲ 8 ರನ್ ನೀಡಿ 5 ವಿಕೆಟ್‌ಗಳನ್ನು ಉಡಾಯಿಸಿ ಬಾಂಗ್ಲಾಕ್ಕೆ ಸವಾಲಾದರು. ಮೊದಲ ದಿನದಾಟದಂತ್ಯಕ್ಕೆ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದೆ. ಕ್ರೆಗ್ ಬ್ರಾತ್‌ವೇಟ್ ಔಟಾಗದೆ 88 ರನ್ ಗಳಿಸಿದರು. ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಕನಿಷ್ಠ ಮೊತ್ತ ಗಳಿಸಿದ ಪ್ರವಾಸಿ ತಂಡ ಎನಿಸಿಕೊಂಡಿತು. ಭಾರತ 1974ರಲ್ಲಿ 42 ರನ್‌ಗೆ ಆಲೌಟಾಗಿತ್ತು. ಬಾಂಗ್ಲಾ ಮೊದಲ ಇನಿಂಗ್ಸ್‌ನಲ್ಲಿ 18.4 ಓವರ್‌ಗಳಲ್ಲಿ ಆಲೌಟಾಗಿದ್ದು ಇದು ಟೆಸ್ಟ್‌ನ ಎರಡನೇ ಶಾರ್ಟ್ ಇನಿಂಗ್ಸ್ ಆಗಿದೆ. 2015ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 111 ಎಸೆತಗಳಲ್ಲಿ ಆಲೌಟಾಗಿದ್ದು ಇದು ಕಡಿಮೆ ಅವಧಿಯ ಇನಿಂಗ್ಸ್ ಆಗಿದೆ.

ರೋಚ್ 2 ಓವರ್‌ನಲ್ಲಿ 5 ವಿಕೆಟ್ ಪಡೆದ ವಿಶ್ವದ 3ನೇ ಕ್ರಿಕೆಟಿಗ ಎನಿಸಿಕೊಂಡರು. ಆಸ್ಟ್ರೇಲಿಯದ ಮೊಂಟಿ ನೊಬಲ್ ಹಾಗೂ ದಕ್ಷಿಣ ಆಫ್ರಿಕದ ಜಾಕ್ ಕಾಲಿಸ್ ಈ ಸಾಧನೆ ಮಾಡಿದ್ದಾರೆ.

ಬಾಂಗ್ಲಾ ಇನಿಂಗ್ಸ್‌ನಲ್ಲಿ ಆರಂಭಿಕ ಆಟಗಾರ ಲಿಟನ್ ದಾಸ್(25)ಅಗ್ರ ಸ್ಕೋರರ್ ಎನಿಸಿಕೊಂಡರು. ಎರಡಂಕೆ ಸ್ಕೋರ್ ದಾಖಲಿಸಿದ ಏಕೈಕ ದಾಂಡಿಗನಾಗಿದ್ದಾರೆ. ರೋಚ್ 5 ವಿಕೆಟ್ ಪಡೆದರೆ, ಕಮ್ಮಿನ್ಸ್(3-11) ಹಾಗೂ ಜೇಸನ್ ಹೋಲ್ಡರ್(2-10) ಐದು ವಿಕೆಟ್ ಹಂಚಿಕೊಂಡರು.

ನ್ಯೂಝಿಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಕನಿಷ್ಠ ಸ್ಕೋರ್ ಗಳಿಸಿದೆ. 1955ರಲ್ಲಿ ಆಕ್ಲೆಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ 26ಕ್ಕೆ ಆಲೌಟಾಗಿತ್ತು.

ದಾಖಲೆ ನಿರ್ಮಿಸಿದ ರೋಚ್

ಟೆಸ್ಟ್ ಕ್ರಿಕೆಟ್‌ನಲ್ಲಿ ಕೇವಲ 12 ಎಸೆತಗಳಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿದ ವಿಶ್ವದ 3ನೇ ಕ್ರಿಕೆಟಿಗ ಎನಿಸಿಕೊಂಡ ವಿಂಡೀಸ್‌ನ ಕೇಮರ್ ರೋಚ್ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾರೆ.

ಮೊಂಟಿ ನೊಬಲ್ ಹಾಗೂ ಜಾಕ್ ಕಾಲಿಸ್ ಈ ಸಾಧನೆ ಮಾಡಿದ್ದು, ಕಾಲಿಸ್ 2002ರಲ್ಲಿ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧವೇ ಈ ಸಾಧನೆ ಮಾಡಿದ್ದಾರೆ. ಮೊಂಟಿ 1902ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಮೈಲುಗಲ್ಲು ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News