ವಿಶ್ವಕಪ್ ಫುಟ್‌ಬಾಲ್.. ಇದೀಗ ಕ್ಲೈಮ್ಯಾಕ್ಸ್ ಹಂತ

Update: 2018-07-06 05:47 GMT

ರಶ್ಯಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಇನ್ನೊಂದು ಹಂತ ಮುಗಿದಿದೆ. ಭಾಗಿಯಾಗಿದ್ದ ಮೂವತ್ತೆರಡು ತಂಡಗಳಲ್ಲಿ ಇಪ್ಪತ್ತನಾಲ್ಕು ತಂಡಗಳು ಈಗ ಸ್ಟೇಡಿಯಂನಿಂದ ಹೊರ ಹಾಕಲ್ಪಟ್ಟಿವೆ. ಇಂದಿನಿಂದ ಆರಂಭವಾಗಲಿರುವ ಎರಡು ದಿನಗಳ ಕ್ವಾರ್ಟರ್ ಫೈನಲ್‌ನಲ್ಲಿ ಉಳಿದ ಎಂಟು ತಂಡಗಳ ಸೆಣೆಸಾಟ. ಇವರಲ್ಲಿ ಗೆಲ್ಲುವ ನಾಲ್ಕು ತಂಡ ಸೆಮಿಫೈನಲ್‌ಗೆ. ಅಲ್ಲಿಂದ ಇಬ್ಬರು ವಿಜೇತರು ಜುಲೈ ಹದಿನೈದರ ರವಿವಾರದಂದು ಫುಟ್‌ಬಾಲ್‌ನ ವಿಶ್ವಚಾಂಪಿಯನ್ ಪಟ್ಟಕ್ಕಾಗಿ ಸೆಣೆಸಾಡಲಿದ್ದಾರೆ.

ಫುಟ್‌ಬಾಲ್ ಆಟವನ್ನು ಮತ್ತದರ ಜನಪ್ರಿಯತೆಯನ್ನು ಬಣ್ಣಿಸಲು ಬಳಸದ ಹೋಲಿಕೆಗಳ್ಯಾವುವು ಬಾಕಿ ಉಳಿದಿಲ್ಲ. ಅದು ಜಗತ್ತಿಗೆ ತಾಕಿದ ಜ್ವರ, ಜಗತ್ತಿನ ಗಾಂಜಾ ಎಂಬಲ್ಲಿಂದ ಹಿಡಿದು ಇಡೀ ಭೂಗ್ರಹದ ಅತಿ ಜನಪ್ರಿಯ ಕ್ರೀಡೆ ಎನ್ನುವ ತನಕ ಫುಟ್‌ಬಾಲ್ ಅನ್ನು ಬಣ್ಣಿಸಲಾಗುತ್ತದೆ.

ಇದನ್ನು ನಿರಾಕರಿಸುವ ಧೈರ್ಯ ಯಾರಿಗೂ ಇಲ್ಲ. ಈಗಿನ 2018ರ ಟೂರ್ನಿಗಾಗಿ ಮಾಡಿರುವ ಒಟ್ಟು ಖರ್ಚಿನ ಮೊತ್ತವೇ ಒಂದು ಲಕ್ಷ ಕೋಟಿ ರೂಪಾಯಿಗಳೆನ್ನಲಾಗಿದೆ. ಇದನ್ನಾಧರಿಸಿ ನಡೆಯುವ ಟಿಕೆಟ್ ಮಾರಾಟ, ಹೊಟೇಲ್ ಉದ್ಯಮ, ಟೂರಿಸಂ, ವಿಮಾನಯಾನ, ಆಟಿಕೆ, ಬಟ್ಟೆ ಮಾರಾಟ, ಟಿವಿ, ಫೋನ್ ಮಾರಾಟ, ಬೆಟ್ಟಿಂಗ್, ಪಬ್-ಬಾರ್ ವ್ಯವಹಾರ, ಮೀಡಿಯಾ ಜಾಹೀರಾತು ಮುಂತಾದ ಕ್ಷೇತ್ರಗಳಲ್ಲಿ ನಡೆಯಬಹುದಾದ ಒಟ್ಟಾರೆ ವಹಿವಾಟು ಐದು ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಇದಿಷ್ಟರಿಂದಲೂ ಫುಟ್‌ಬಾಲ್‌ನ ಮಹಿಮೆಯನ್ನು ಪೂರ್ಣ ಹೇಳಿದಂತಾಗುವುದಿಲ್ಲ. ಈ ಮ್ಯಾಚ್‌ಗಳನ್ನು ಜಗತ್ತಿನಾದ್ಯಂತ ನೂರು ಕೋಟಿಗೂ ಹೆಚ್ಚು ಜನ ನೋಡುತ್ತಿದ್ದಾರೆ. ದಕ್ಷಿಣ ಅಮೆರಿಕದ ಬ್ರೆಝಿಲ್‌ನಲ್ಲಿ ಕಚೇರಿ ಕಾರ್ಖಾನೆಗಳ ಕೆಲಸದ ವೇಳೆಯನ್ನು ಫುಟ್‌ಬಾಲ್ ಮ್ಯಾಚ್‌ಗಳ ವೀಕ್ಷಣೆಗೆ ಅನುಕೂಲವಾಗುವಂತೆ ಬದಲಿಸಲಾಗಿದೆ. ಹಾಗೆ ಮಾಡದಿದ್ದರೆ ಅಲ್ಲಿ ಜನ ಕೆಲಸಕ್ಕೆ ಬರುವುದಿಲ್ಲ. ಯುರೋಪ್‌ನ ಹಲವೆಡೆ ಚರ್ಚ್‌ಗಳಲ್ಲಿ ಜನರು ಪ್ರಾರ್ಥನೆ ಮಾಡುವಾಗ ಮೊಬೈಲ್‌ಗಳಲ್ಲಿ ಫುಟ್‌ಬಾಲ್ ನೋಡದಂತೆ ಸೂಚಿಸಿವೆ. ಮದುವೆ ಮುಂತಾದ ಕಾರ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆಯೂ ವಿಶೇಷ ಸೂಚನೆಗಳನ್ನು ಪ್ರಕಟಿಸಿವೆ. ಯುರೋಪ್‌ನ ಹಲವು ಬ್ಯಾಂಕ್‌ಗಳೂ ಸಹ ಈ ಬಾರಿಯ ವಿಶ್ವ ಚಾಂಪಿಯನ್ ಯಾರಾಗಬಹುದೆಂದು ಅಂದಾಜಿಸಿ ಘೋಷಿಸುತ್ತಿವೆ. ಹಾಗೆ ಮಾಡುವ ಮೂಲಕ ತಮ್ಮ ವಹಿವಾಟು ಬೆಳೆಸಲು ಪ್ರಯತ್ನಿಸುತ್ತಿವೆ. ರಶ್ಯಾ-ಇಂಗ್ಲೆಂಡ್ ನಡುವಿದ್ದ ರಾಜಕೀಯ ಮುನಿಸನ್ನು ಎರಡೂ ದೇಶದ ಜನ ಮರೆತೇ ಬಿಟ್ಟಿದ್ದಾರೆ. ಇಂಗ್ಲೆಂಡ್‌ನ ದಿನಪತ್ರಿಕೆಯೊಂದು ‘ಗೋ ಕೇನ್’ ಎಂದು ಮ್ಯಾಚ್‌ನ ದಿನ ತಲೆಬರಹ ನೀಡಿದ್ದಕ್ಕಾಗಿ ಕೊಲಂಬಿಯಾವು ಇಂಗ್ಲೆಂಡ್ ವಿರುದ್ಧ ಬಹಿರಂಗ ಜಗಳ ಮಾಡಿದೆ. ಆ ತಲೆಬರಹವು ಕೊಲಂಬಿಯಾವು ಡ್ರಗ್ಸ್ ವ್ಯಾಪಾರಕ್ಕೆ ಕುಖ್ಯಾತಿ ಪಡೆದಿರುವುದನ್ನು ಬಿಂಬಿಸಿತೆಂಬುದು ಕೊಲಂಬಿಯಾ ರಾಜತಾಂತ್ರಿಕರ ಸಿಟ್ಟಿಗೆ ಕಾರಣವಾಗಿತ್ತು. ಫುಟ್‌ಬಾಲ್ ಸುತ್ತ ಇಂತವು ನೂರಾರು ನಡೆಯುತ್ತಿರುತ್ತವೆ.

ಈಗಿನ ಫುಟ್‌ಬಾಲ್ ಟೂರ್ನಿಯಿಂದಾಗಿ ಈಗಾಗಲೇ ಹದಿನೈದು ಕೋಟಿ ಮಾನವ ಉತ್ಪಾದಕ ದಿನಗಳು ವ್ಯರ್ಥವಾಗಿವೆಯೆಂದು ಅರ್ಥಶಾಸ್ತ್ರಜ್ಞರು ಅಲವತ್ತುಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಜನ ಫುಟ್‌ಬಾಲ್ ನೋಡಿ ಉಲ್ಲಸಿತರಾಗುತ್ತಾರಾದ್ದರಿಂದ ನಂತರದ ಕೆಲಸವನ್ನು ಶ್ರದ್ಧೆಯಿಂದ ತುಸು ಹೆಚ್ಚಾಗಿ ಮಾಡುತ್ತಾರೆಂದು ಸಮಾಜ ವಿಜ್ಞಾನಿಗಳು ಪ್ರತಿತರ್ಕ ಹೂಡುತ್ತಿದ್ದಾರೆ.

ಫುಟ್‌ಬಾಲ್ ವಿಶ್ವ ಕ್ರೀಡೆಗಳ ತ್ರಿಭುವನ ಮಲ್ಲ ಎನ್ನಲು ಇವು ಸಾಕ್ಷಿಯಾಗಿವೆ.

ಬೇರೆಲ್ಲಾ ಕ್ರೀಡೆಗಳಂತೆ ಫುಟ್‌ಬಾಲ್ ಸಹ ಅನಿರೀಕ್ಷಿತಗಳ ಈವೆಂಟ್ ಆಗಿದೆ. ಹಾಟ್ ಫೇವರೇಟ್‌ಗಳೆನಿಸಿದ್ದ ಜರ್ಮನಿ, ಅರ್ಜೆಂಟೀನಾ, ಸ್ಪೈನ್ ತಂಡಗಳು ಈಗಾಗಲೇ ಪತನಗೊಂಡಿವೆ. ಸೂಪರ್ ಸ್ಟಾರ್‌ಗಳೆನಿಸಿಕೊಂಡಿದ್ದ ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ, ಪೋರ್ಚುಗಲ್‌ನ ಕ್ರಿಶ್ಚಿಯನ್ ರೊನಾಲ್ಡೋ, ತಮ್ಮ ತಂಡದ ಸೋಲಿನೊಂದಿಗೆ ಬದಿಗೆ ಸರಿಸಲ್ಪಟ್ಟಿದ್ದಾರೆ. ಇಂಗ್ಲೆಂಡ್‌ನ ಹ್ಯಾರಿ ಕೇನ್, ಫ್ರಾನ್ಸ್ ನ ಹತ್ತೊಂಬತ್ತು ವರ್ಷದ ಕ್ಲಿಯಾನ್ ಮಾಬ್ಯಾಪ್ಪೆ, ರಶ್ಯಾದ ಚೆರ್ಷೆವ್, ಬ್ರೆಝಿಲ್‌ನ ನೇಮಾರ್ ಈಗ ಜನರ ಕಣ್ಮಣಿಗಳಾಗಿದ್ದಾರೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಆಟದ ವೇಗ ಹೆಚ್ಚಾಗಿರುವುದು ಕಾಣುತ್ತಿದೆ. ಜೊತೆಗೆ ಒರಟಾಟದ ಪ್ರಮಾಣವೂ ಹೆಚ್ಚಾಗಿದೆ. ಕ್ವಾರ್ಟರ್ ಫೈನಲ್ ಹಂತದವರೆಗಿನ ಮ್ಯಾಚ್‌ಗಳಲ್ಲಿ ಒಟ್ಟು 189 ಹಳದಿ ಕಾರ್ಡ್‌ಗಳನ್ನು ರೆಫರಿಗಳು ಆಟಗಾರರಿಗೆ ತೋರಿದ್ದಾರೆಂಬುದು ಅಲಕ್ಷಿಸಲಾಗದ ಸಂಗತಿಯಾಗಿದೆ. ಹಲವು ಖ್ಯಾತ ಆಟಗಾರರನ್ನು ಕಟ್ಟಿಹಾಕುವ ಇರಾದೆಯಲ್ಲಿ ಎದುರಾಳಿ ತಂಡದವರು ಹೆಚ್ಚು ಒರಟಾಗಿ ಆಡಿದ್ದನ್ನು ಫಿಫಾ ಗಮನಿಸಿದೆ.

 ಭಾರತದಲ್ಲಿ ದೊಡ್ಡ ಸಂಖ್ಯೆಯ ಫುಟ್‌ಬಾಲ್ ಅಭಿಮಾನಿಗಳಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಅರ್ಜೆಂಟೀನಾ ಸೋತರೆ, ತಮ್ಮ ಜೀವವನ್ನೇ ತೆರುವಷ್ಟರ ಮಟ್ಟಿಗೆ. ಭಾರತದಲ್ಲೂ ಫುಟ್‌ಬಾಲ್ ಆಟ ಜನಪ್ರಿಯ. ಫುಟ್‌ಬಾಲ್ ವಿಶ್ವಕಪ್ ನಡೆಯುವಷ್ಟು ದಿನವೂ ಕೇರಳದಂತಹ ರಾಜ್ಯಗಳಲ್ಲಿ ಹಬ್ಬದ ಸಂಭ್ರಮ. ಕ್ರಿಕೆಟ್‌ನ ಕುರಿತಂತೆ ಕೇರಳ ಇಷ್ಟು ಆಸಕ್ತಿ ತೋರಿಸುವುದಿಲ್ಲ. ಕ್ರಿಕೆಟ್‌ಗೆ ಹೋಲಿಸಿದರೆ ಫುಟ್‌ಬಾಲ್ ಜೀವಂತ ಆಟ. ಭಾರತದಂತಹ ದೇಶಕ್ಕೆ ಒಪ್ಪುವ ಆಟವೂ ಕೂಡ. ಆದರೆ ವಿಶ್ವ ಮಟ್ಟದ್ದಿರಲಿ ಏಶ್ಯಾ ಮಟ್ಟದ ಒಂದು ಉತ್ತಮ ತಂಡ ಕಟ್ಟುವ ಗಂಭೀರ ಪ್ರಯತ್ನಗಳೂ ನಮ್ಮಲ್ಲಿ ನಡೆದಿಲ್ಲ. ಕ್ರಿಕೆಟ್‌ನ ಹೆಸರಲ್ಲಿ ದಂಧೆ ನಡೆಸುವಂತೆ ಫುಟ್‌ಬಾಲ್ ಮೂಲಕ ನಡೆಸಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿಯೋ ಏನೋ, ನಮ್ಮ ನಾಯಕರು ಈ ಆಟವನ್ನು ಪ್ರೋತ್ಸಾಹಿಸಲು ಉತ್ಸಾಹ ತೋರಿಸುತ್ತಿಲ್ಲ. ಇಂದು ನಾವು ಅರ್ಜೆಂಟೀನಾದಂತಹ ಪ್ರತಿಭಾವಂತ ಆಟಗಾರರ ಸೋಲು-ಗೆಲುವುಗಳನ್ನೇ ನೋಡಿ ಸಂಭ್ರಮಿಸುವಂತಹ ಅನಿವಾರ್ಯ ಸ್ಥಿತಿಯಲ್ಲಿದ್ದೇವೆ. ಒಂದು ವೇಳೆ ವಿಶ್ವಕಪ್‌ನಲ್ಲಿ ಭಾರತದ ತಂಡವೂ ಇದ್ದಿದ್ದರೆ ಅದು ನಮ್ಮ ಯುವಕರ ಹೃದಯದಲ್ಲಿ ಬಿತ್ತಬಹುದಾದ ಕ್ರೀಡಾ ಸ್ಫೂರ್ತಿಯನ್ನು ಬಣಿಸುವುದಕ್ಕೆ ಅಸಾಧ್ಯ. ವಿಶ್ವ ಫುಟ್‌ಬಾಲ್ ನಕ್ಷೆಯಲ್ಲಿ ಭಾರತಕ್ಕೂ ಒಂದು ಸ್ಥಾನ ಸಿಗುವ ದಿನ ಬರಲಿ. ಕ್ರಿಕೆಟ್‌ನ ಭ್ರಮೆಗಳಿಂದ ಕಳಚಿಕೊಂಡು ಅಪ್ಪಟ ನೆಲದ, ಬೆವರಿನ ಆಟವಾಗಿರುವ ಫುಟ್‌ಬಾಲ್‌ಕಡೆಗೆ ದೇಶ ಮುಖಮಾಡಬೇಕಾಗಿದೆ. ಈಗಿನ ಟೂರ್ನಿಯ ಕ್ಲೈಮ್ಯಾಕ್ಸ್‌ನ ಮ್ಯಾಚ್‌ಗಳನ್ನು ನೋಡಿ ಸಂಭ್ರಮಿಸಲು ನೂರಾರು ಕೋಟಿ ಜನ ವಿಶ್ವಾದ್ಯಂತ ಕಾದಿದ್ದಾರೆ. ಕೆಲವೊಮ್ಮೆ ಆಟಗಾರರಿಂದ ನಿರಾಶೆಯಾಗಬಹುದು. ತಂಡಗಳಿಂದ ನಿರೀಕ್ಷಿತ ಫಲಿತಾಂಶ ಬರದಿರಲೂಬಹುದು. ಆದರೆ ಒಂದು ಕ್ರೀಡೆಯಾಗಿ ಫುಟ್‌ಬಾ್ ಯಾರಿಗೂ ಎಂದೂ ನಿರಾಶೆ ಮಾಡದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News