ಬಲಿಯ ಬಲಾಢ್ಯ ಸುರಾಜ್ಯವನ್ನು ಮೋಸದಿಂದ ಯಾಕೆ ತೆಗೆದುಕೊಂಡದ್ದು?

Update: 2018-07-05 18:41 GMT

ಬಲಿರಾಜ ಮತ್ತು ವಾಮನ ಅವರ ವಿಷಯವಾಗಿ ಜ್ಞಾನಕೋಶದಲ್ಲಿ ಈ ಕೆಳಗೆ ಕಂಡಂತೆ ಮಾಹಿತಿ ಕೊಟ್ಟಿದೆ:

‘‘ವಾಮನ: ನಡೆಯುತ್ತಿರುವ ಮನ್ವಂತರದಲ್ಲಿ ಏಳನೆಯ ಪರ್ಯಾಯದವರೆಗೂ ತ್ರೇತಾಯುಗದ ಕಶ್ಯಪರಿಂದ ಹಿಡಿದು ಅದಿತಿಯವರೆಗೆ ಗೊತ್ತಿದ್ದಂತೆ ವಿಷ್ಣುವಿನ ಅವತಾರವಾಗಿದೆ.’’

‘‘ಬಲಿ: ಪ್ರಹ್ಲಾದ ಪುತ್ರ ವಿರೋಚನನ ಮಗ. ಇವನು ಇಂದ್ರ ಪದವಿಯ ಸಲುವಾಗಿ ನೂರಾರು ಯಜ್ಞಗಳನ್ನು ಮಾಡುತ್ತಿದ್ದಾಗ ವಿಷ್ಣು ವಾಮನನ ರೂಪ ತೆಗೆದುಕೊಂಡು ಅವನ ಹತ್ತಿರ ಮೂರು ಪಾದ ಭೂಮಿಯ ದಾನವನ್ನು ಪಾತಾಳಕ್ಕೆ ತಳ್ಳಿದನು. ಸಪ್ತಚಿರಂಜೀವಿಯಲ್ಲಿ ಇವನೊಬ್ಬನು.’’

ಮೇಲಿನ ವಾಮನನ ತಥಾಕಥಿತ ಕೃತಿಯಿಂದ ಸದ್ವಿವೇಕ ಬುದ್ಧಿಯಿಂದ ವಿವೇಚಿಸಿ ನೋಡಿ ಮಹಾತ್ಮ ಫುಲೆ ಸ್ವಂತಕ್ಕೇ ಪ್ರಶ್ನೆ ಹಾಕಿಕೊಂಡು ಅದರ ಉತ್ತರವನ್ನು ಈ ಕೆಳಗೆ ಕಂಡಂತೆ ಕೊಟ್ಟಿದ್ದಾರೆ:

ಧೋ: ಆಗ ನಂತರ ಆದಿ ನಾರಾಯಣನು ಬಲಿಯನ್ನು ಪಾತಾಳಕ್ಕೆ ಹಾಕುತ್ತಿರುವಾಗ ವಾಮನನ ಅವತಾರವನ್ನು ಎತ್ತಿದ. ಆ ವಾಮನನು ಭಿಕಾರಿಯ ವೇಷ ಹಾಕಿಕೊಂಡು, ಬಲಿರಾಜನನ್ನು ಮೋಸಗೊಳಿಸಿ, ಅವನಿಂದ ಮೂರು ಹೆಜ್ಜೆ ಪೃಥ್ವಿಯನ್ನು ಬೇಡಿ ತೆಗೆದುಕೊಂಡನು. ನಂತರ ಅವನು ಭಿಕಾರಿಯ ವೇಷ ತೆಗೆದು ಎಷ್ಟು ದೊಡ್ಡ ಪ್ರಚಂಡ ರೂಪವನ್ನು ತೆಗೆದುಕೊಂಡನೆಂದರೆ, ಅವನು ಒಂದೇ ಏಟಿಗೆ ಭೂಮಿ, ಆಕಾಶ ಎಲ್ಲವನ್ನೂ ಎರಡೇ ಹೆಜ್ಜೆಯಲ್ಲಿ ಆಕ್ರಮಿಸಿ ಬಲಿರಾಜನನ್ನು ಕೇಳಿದ್ದೇನೆಂದರೆ ನನ್ನ ಮೂರನೇ ಹೆಜ್ಜೆಯನ್ನು ಎಲ್ಲಿಡಬೇಕು? ನಂತರ ಬಲಿರಾಜನು ನಿರಾಧಾರನಾಗಿ ಆ ಪ್ರಚಂಡ ವ್ಯಕ್ತಿತ್ವಕ್ಕೆ ಹೀಗೆ ಉತ್ತರ ಕೊಟ್ಟ. ನೀನು ಈಗ ನಿನ್ನ ಮೂರನೆಯ ಹೆಜ್ಜೆಯನ್ನು ನನ್ನ ತಲೆಯ ಮೇಲಿಡು. ಹೀಗೆ ಹೇಳುತ್ತಲೇ ಆ ಪ್ರಚಂಡ ಬಲಿರಾಜನ ತಲೆಯ ಮೇಲೆ ತನ್ನ ಮೂರನೆಯ ಪಾದವನ್ನು ಇಟ್ಟು ಬಲಿಯನ್ನು ಪಾತಾಳಕ್ಕೆ ತಳ್ಳಿ ತನ್ನ ಕರಾರನ್ನು ಪೂರ್ಣಗೊಳಿಸಿಕೊಂಡ. ಹೀಗೆ ಅವರ ಉಪಾಧ್ಯಾಯರು ಭಾಗವತ ಮುಂತಾದುವನ್ನು ಇತಿಹಾಸದಲ್ಲಿ ಬರೆದಿಟ್ಟಿದ್ದಾರೆ. ಅದೆಲ್ಲ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ನಮಗೆ ತಿಳಿಸಿಕೊಡಿ.

ಜೊ: ಈಗ ಇದರ ಮೇಲೇ ನೀನೇ ವಿಚಾರ ಮಾಡಿ ನೋಡಿದರೆ, ಯಾವಾಗ ಆ ಪ್ರಚಂಡನು ತನ್ನ ಎರಡೂ ಹೆಜ್ಜೆಯಿಂದ ಒಂದೇ ಸಾರಿಗೆ ಭೂಮಿ ಮತ್ತು ಆಕಾಶ ಎರಡನ್ನೂ ಆಕ್ರಮಿಸಿದನೋ, ಆಗ ಆ ಪ್ರಚಂಡನ ಮೊದಲ ಹೆಜ್ಜೆಯ ಕೆಳಗೆ ಎಷ್ಟೊಂದು ಹಳ್ಳಿಗಳು ಕಾಲಿಗೆ ಸಿಕ್ಕಿ ಲಯವಾಗಿ ಹೋಗಿರಬೇಕು ಅಲ್ಲವೇ?

 ಇನ್ನೊಂದು ವಿಷಯ ಏನೆಂದರೆ ಯಾವಾಗ ಆ ಪ್ರಚಂಡನು ತನ್ನ ಎರಡನೆಯ ಕಾಲನ್ನು ಆಕಾಶದಲ್ಲಿ ಇಡುವ ವೇಳೆಗೆ ಅತಿಶಯ ಗದ್ದಲವಾಗಿ ಎಷ್ಟೊಂದು ತಾರೆಗಳು ಒಂದರ ಮೇಲೆ ಒಂದು ಬಿದ್ದು ಅಪ್ಪಳಿಸಿ ನಾಶವಾಗಿರಬಹುದೋ ಇಲ್ಲವೋ! ಮೂರನೆಯದಾಗಿ ಆ ಪ್ರಚಂಡನು ತನ್ನ ಎರಡನೆಯ ಹೆಜ್ಜೆಯಿಂದ ಒಂದು ವೇಳೆ ಪೂರ್ತಿ ಆಕಾಶವನ್ನು ಆಕ್ರಮಿಸಿದರೆ, ಅವನ ಸೊಂಟದ ಮೇಲಿನ ಶರೀರ ಎಲ್ಲಿರುತ್ತಿತ್ತು? ಕಾರಣ ಮನುಷ್ಯರ ಪ್ರಕಾರ ಎರಡನೆಯ ಹೆಜ್ಜೆ ದೂರ ತೆಗೆದುಕೊಂಡು ಹೋದರೆ ಅವನ ನಾಭಿಯವರೆಗಿನ ಎತ್ತರ ಆಕಾಶಕ್ಕೆ ತಲುಪುವುದು. ಇದರ ಮೇಲೆ ಆ ಪ್ರಚಂಡನ ಸೊಂಟದ ಮೇಲೆ ಅವನ ತಲೆಯವರೆಗೆ ಆಕಾಶ ಉಳಿದಿರಬಹುದು. ಅದರಲ್ಲಿ ಅಥವಾ ಆ ಪ್ರಚಂಡನು ತನ್ನ ತಲೆಯ ಮೇಲೆ ತನ್ನ ಮೂರನೆಯ ಹೆಜ್ಜೆಯನ್ನು ಇಟ್ಟು ತನ್ನ ಕರಾರನ್ನು ಪೂರ್ಣಗೊಳಿಸುವುದರ ಬದಲು ಅದನ್ನು ಬದಿಗಿಟ್ಟು, ಅವನು ಕೇವಲ ಮೋಸ ಮಾಡಿ, ತನ್ನ ಮೂರನೆಯ ಹೆಜ್ಜೆಯನ್ನು ಬಲಿರಾಜನ ತಲೆಯ ಮೇಲೆ ಇಟ್ಟು ಅವನನ್ನು ಪಾತಾಳಕ್ಕೆ ತಳ್ಳಿದ. ಇದು ಹೇಗೆ?

ಧೋ: ಆ ದಾಂಡಿಗ ನಾರಾಯಣನ ಅವತಾರವಲ್ಲವೇ? ಮತ್ತು ಅವನು ಇಂಥ ಸ್ವಚ್ಛಂದದಿಂದ ವಂಚನೆ ಹೇಗೆ ಮಾಡಿದ? ಇಂಥ ಮೋಸಗಾರ ಆದಿ ನಾರಾಯಣನ ಅವತಾರೆವೆನ್ನುವುದಕ್ಕೆ ಇತಿಹಾಸಕಾರನಿಗೆ ಧಿಕ್ಕಾರವಿರಲಿ. ಕಾರಣವೇನೆಂದರೆ ಅವನ ಲೇಖನದೊಳಗೇ ಯಾರು ತನ್ನ ಭಕ್ತನನ್ನೇ ಕಪಟದಿಂದ ಪಾತಾಳಕ್ಕೆ ತಳ್ಳಿದನೋ, ಅಂಥ ವಾಮನ ಕಪಟಿ, ಘಾತಕಿ ಮತ್ತು ಕೃತಘ್ನ ಆಗಿದ್ದನೆಂದು ಸಿದ್ಧವಾಗುತ್ತದೆ.

ಜೋ: ನಾಲ್ಕನೆಯದಾಗಿ ಆ ದಾಂಡಿಗನ ತಲೆ ಯಾವಾಗ ಆಕಾಶದ ಮೇಲೆ, ಸ್ವರ್ಗಕ್ಕಿಂತ ಮೇಲೆ ಹೋಗಿದ್ದಾಗ, ಅಲ್ಲಿಂದಲೇ ಬಲಿಯನ್ನು ತುಂಬಾ ಜೋರಾಗಿ ಕಿರುಚಿ ವಿಚಾರಿಸಿರಬೇಕು, ಆಗ ನನ್ನ ಹೆಜ್ಜೆಯಲ್ಲಿ ಒಂದೇ ಏಟಿಗೆ ಭೂಮಿ ಮತ್ತು ಆಕಾಶ ಹಿಡಿದರೆ, ವಾಸ್ತವವಾಗಿ ಈಗ ನಾನು ಮೂರನೆಯ ಹೆಜ್ಜೆ ಎಲ್ಲಿ ಇಟ್ಟು, ಒಪ್ಪಿಗೆ ಕೊಡಲಿ? ಕಾರಣವೇನೆಂದರೆ ಆಕಾಶದಲ್ಲಿ ಆ ದಾಂಡಿಗನ ಮುಖ ಮತ್ತು ಭೂಮಿಯ ಮೇಲೆ ಬಲಿರಾಜ ಇವರ ನಡುವೆ ಅನಂತ ದೂರವಿರುವಾಗ ಮತ್ತು ಆ ಪೈಕಿ ರಶ್ಯನ್, ಫ್ರೆಂಚ್, ಇಂಗ್ಲಿಷ್ ಮತ್ತು ಅಮೆರಿಕನ್ ಮುಂತಾದವರ ಪೈಕಿ ಒಬ್ಬನೇ ಒಬ್ಬ ಸಹ ಅವರ ಭಾಷಣದಲ್ಲಿ ಇದರ ಬಗ್ಗೆ ಒಂದು ಶಬ್ದವನ್ನೂ ಸಹ ಕೇಳದೆ ಇರುವುದು ಹೇಗೆ ಸಾಧ್ಯ? ಮತ್ತು ಆ ಪ್ರಮಾಣದಲ್ಲಿ ಭೂಮಿ ಮೇಲಿನ ಮಾನವ ಬಲಿರಾಜ ಆ ದಾಂಡಿಗನಿಗೆ ಉತ್ತರ ಕೊಟ್ಟಿದ್ದರೆ, ನೀನು ನಿನ್ನ ಮೂರನೆಯ ಹೆಜ್ಜೆಯನ್ನು ನನ್ನ ತಲೆಯ ಮೇಲಿಡು ಎಂದು, ಇದೂ ಸಹ ಆ ದಾಂಡಿಗನಿಗೆ ಹೇಗೆ ಕೇಳಲು ಸಾಧ್ಯವಾಯಿತು? ಕಾರಣವೇನೆಂದರೆ ಬಲಿ ಅವನಂತೆ ವಿಚಿತ್ರ ಪ್ರಾಣಿಯಾಗಿರಲಿಲ್ಲ. ಐದನೆಯದು ಏನೆಂದರೆ ಆ ದಾಂಡಿಗನ ಭಾರದಿಂದ ಈ ಭೂಮಿ ರಸಾತಳಕ್ಕೆ ಇಳಿಯಲಿಲ್ಲವೆನ್ನುವುದೇ ಒಂದು ದೊಡ್ಡ ಆಶ್ಚರ್ಯ.

ಧೋ: ಇಲ್ಲದಿದ್ದರೆ ನಾವು ಹೇಗೆ ಈ ದಿನಗಳನ್ನು ಕಾಣಬೇಕಾಗಿತ್ತು ಹೇಳಿ. ಆ ದಾಂಡಿಗ ಏನೇನು ತಿಂದು ನಮ್ಮ ಜೀವ ಉಳಿಸಬೇಕಾಗಿತ್ತು. ಸಾರಾಂಶವೆಂದರೆ ಭಾಗವತ ಮುಂತಾದ ಎಲ್ಲ ಗ್ರಂಥದ ಮೇಲಿಂದ ಒಂದು ವೇಳೆ ಬರೆದಿರಬಹುದೆಂಬ ಶಂಕೆಯ ನಿವಾರಣೆಯಾಗುವುದಿಲ್ಲ. ಆಗ ಉಪಾಧ್ಯಾಯರು ಹಿಂದೆ ಅವಕಾಶ ಮಾಡಿಕೊಂಡು ಒಂದು ಸಲ ಎಲ್ಲ ಮಕ್ಕಳ ದಂತಕಥೆಗಾಗಿ ಈ ಗ್ರಂಥಗಳನ್ನು ಮಾಡಿರಬಹುದು ಎನ್ನುವುದು ಸಿದ್ಧವಾಗುತ್ತದೆ.

ಜೊ: ಅಪ್ಪಾ! ಆ ಭಾಗವತನನ್ನು ಒಂದು ಸಲ ಓದಿ ನೋಡು, ಅಂದರೆ ನಿನಗೆ ಈಸೋಪನ ನೀತಿ ಸರಿ ಎನ್ನಿಸುತ್ತದೆ.

ಮಹಾತ್ಮ ಫುಲೆ ಅವರು ಧರ್ಮಗ್ರಂಥದಲ್ಲಿ ಯಾವ ಬಲಿ ಮತ್ತು ವಾಮನರ ವಿಷಯವಾಗಿ ಅಂಧಶ್ರದ್ಧೆಯ ಕಥಾನಕ ಹೇಳಿದರು, ಅದರ ಮೇಲಿನ ಪ್ರಮಾಣದಿಂದ ವಿಷಯ ಮತ್ತು ವೈಜ್ಞಾನಿಕ ದೃಷ್ಟಿ ಖಂಡನೆ ಮಾಡುವಾಗ ವಾಮನನು ಬಲಿಯ ರಾಜ್ಯದಲ್ಲಿ ಯಾವ ಆಕಸ್ಮಿಕ ರೀತಿಯ ಆಕ್ರಮಣ ಮಾಡಿದ ಎನ್ನುವುದರ ವರ್ಣನೆಯನ್ನು ಮಾಡಿದ್ದಾರೆ. ಅವರು ಹೇಳುವ ಹಾಗೆ, ‘ಬಲಿಯ ರಾಜ್ಯದಲ್ಲಿ ಸಂಪೂರ್ಣ ಮಹಾರಾಷ್ಟ್ರ ಮತ್ತು ಅಯೋಧ್ಯಾ ಹತ್ತಿರವಿರುವ ಕಾಶೀ ಕ್ಷೇತ್ರದ ಅಕ್ಕಪಕ್ಕದ ಸ್ಥಳಗಳು ಸೇರಿಕೊಳ್ಳುತ್ತವೆ. ವಾಮನ ತನ್ನ ಎಲ್ಲ ಸೇನೆಯನ್ನೂ ಬೀಡುಬಿಟ್ಟವನು. ಬಲಿಗೆ ವಾಮನನು ಮಾಡಿದ ಅನಿರೀಕ್ಷಿತ ಆಕ್ರಮಣದ ಕಲ್ಪನೆ ಇರಲಿಲ್ಲವಾದ್ದರಿಂದ ಅವನು ಭಾದ್ರಪದ ವಧ್ಯ ಪ್ರತಿಪದೆಯಿಂದ ವಧ್ಯ ಅಮಾವಾಸ್ಯೆಯವರೆಗೆ ತಮ್ಮ ಅಲ್ಪ ಸ್ವಲ್ಪ ಸೈನ್ಯದೊಂದಿಗೆ ಹೋರಾಡಿದ.

ಅವನಿಗೆ ತಮ್ಮ ಖಂಡದಲ್ಲೆಲ್ಲಾ ಯುದ್ಧದ ಸಲುವಾಗಿ ಸೇನೆಯನ್ನು ಕರೆಸುವಷ್ಟು ಸಮಯವೂ ಸಿಗಲಿಲ್ಲ. ಪರಿಣಾಮವಾಗಿ ಆಶ್ವಯುಜ ಶುದ್ಧ ಅಷ್ಟಮಿ ರಾತ್ರಿ ಬಲಿರಾಜನ ಸೋಲಾಯಿತು. ಬಲಿ ರಣಾಂಗಣದಲ್ಲಿ ಬಿದ್ದಮೇಲೆ ಬಾಣಾಸುರ ವಾಮನನ ಜೊತೆ ಒಂದು ದಿವಸ ಪೂರ್ತಿ ಎದುರಾಗಿ ಹುರುಪಿನಿಂದ ದೊಡ್ಡ ಯುದ್ಧ ಮಾಡಿದ ನಂತರ ಅವನು ಅಶ್ವಿನ ಶುದ್ಧ ನವಮಿಯ ರಾತ್ರಿ ತಮ್ಮ ಉಳಿದ ಸೈನಿಕರನ್ನು ಕರೆದುಕೊಂಡು ಓಡಿಹೋದ.

ಬಾಣಾಸುರನ ಜನರು ಅಶ್ವಿನ ಶುದ್ಧ ದಶಮಿಯಂದು ರಾತ್ರಿ ತಮ್ಮ ಮನೆಗಳಿಗೆ ಹೋದರು. ಆಗ ಅವರ ಸ್ತ್ರೀಯರು ಮುಂದೆ ಬಂದು ಎರಡನೆಯ ಬಲಿಯ ಮೂಲಕ ದೇವರ ರಾಜ್ಯ ಸ್ಥಾಪಿಸಿದರು. ಈ ವಿಷಯದ ಭವಿಷ್ಯ ಗೊತ್ತಿದ್ದುದರಿಂದ, ನಿಂತಲ್ಲಿ ನಿಂತ ಹಾಗೇ ಅವನಿಗೆ ಅರತಿ ಎತ್ತಿ ಹೀಗೆ ಹೇಳಿದರು. ‘‘ಇಡಾಪಿಡಾ(ದ್ವಿಜರ ಅಧಿಕಾರ) ಹೋಗಬೇಕು ಬಲಿಯ ರಾಜ್ಯ ಬರಬೇಕು.’’ ಆ ದಿವಸದಿಂದ, ಈ ದಿವಸದವರೆಗೆ ನೂರಾರು ವರ್ಷ ಬಂದು ಹೋಗಿವೆ. ಆದರೆ ಬಲಿಯ ರಾಜ್ಯದಲ್ಲಿ ಎಷ್ಟೋ ಭಾಗದಲ್ಲಿ ಕ್ಷತ್ರಿಯ ವಂಶದ ಸ್ತ್ರೀಯರು, ಪ್ರತಿ ವರ್ಷ ಅಶ್ವಿನ ಶುದ್ಧ ದಶಮಿಯ ಸಂಜೆಯಲ್ಲಿ ತಮ್ಮ ಪತಿ ಮತ್ತು ಪುತ್ರರಿಗೆ ಆರತಿ ಮಾಡಿ ಮುಂದೆ ಬಲಿಯ ರಾಜ್ಯ ಬರಲಿ ಎನ್ನುವ ಇಚ್ಛೆ ವ್ಯಕ್ತಪಡಿಸುವುದನ್ನು ಇನ್ನೂ ಬಿಟ್ಟಿಲ್ಲ.

ಬಲಿರಾಜನು ಕರೆದಿದ್ದ ಸರದಾರರು ತಮ್ಮತಮ್ಮ ಸೇನೆಯನ್ನು ತೆಗೆದು ಕೊಂಡು ಅಶ್ವಿನ ಶುದ್ಧ ಚತುರ್ದಶಿ ದಿವಸ ಬಾಣಾಸುರನನ್ನು ಬಂದು ಭೇಟಿಯಾದಾಗ ಬಲಿಯ ರಾಜ್ಯದಲ್ಲಿ ಒಂದೇ ಸಲಕ್ಕೆ ಎಲ್ಲ ವಿಪ್ರರೂ ತಮ್ಮ ಜೀವ ಹಿಡಿದುಕೊಂಡು ವಾಮನನ ಕಡೆ ಓಡಿಹೋದರು. ಅವನು ಎಲ್ಲ ವಿಪ್ರ ರನ್ನು ಒಟ್ಟಿಗೆ ಸೇರಿಸಿ ಮುಂದೆ ಬಾಣಾಸುರನಿಂದ ತಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆಂದು ಕೇಳಲು ಅಶ್ವಿನ ಶುದ್ಧ ಪೂರ್ಣಿಮೆಯಲ್ಲಿ ಎಲ್ಲರೂ ರಾತ್ರಿ ಪೂರ್ತಿ ಜಾಗರಣೆ ಮಾಡಿ ಬಲೆಯೊಡ್ಡಿ ನೋಡಿದರು. ಆನಂತರ ಬಾಣಾಸುರನು ವಾಮನನ ಮೇಲೆ ಒಂದೇ ಏಟಿಗೆ ಹಲ್ಲೆ ಮಾಡಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಅವನ ಸರ್ವಸ್ವವೆಲ್ಲವನ್ನೂ ಲೂಟಿ ಮಾಡಿದ ನಂತರ ಅವನನ್ನು ತನ್ನ ಆ ಸ್ಥಾನದಿಂದ ಜರ್ಜರಿತಗೊಳಿಸಿ ಹಿಮಾಲಯ ಪರ್ವತಕ್ಕೆ ಓಡಿಸಿಬಿಟ್ಟನು.

ಇದರ ನಂತರ ಮುಂದೆ ಬಂದ ಎಲ್ಲಾ ಅಬಾಲ ವೃದ್ಧ ಸ್ತ್ರೀಯರಿಗೆ ಒಂದು ರೀತಿ ಆನಂದವಾಗಿ ಅವರು ಕಾರ್ತಿಕ ಶುದ್ಧ ದ್ವಿತೀಯದಂದು ತಮ್ಮ ಬಂಧು ಬಾಂಧವರನ್ನು ಕರೆದು ಯಥಾಶಕ್ತಿ ಭೋಜನ ಮಾಡಿಸಿ ತೃಪ್ತಿಪಡಿಸಿದ ನಂತರ ಅವರಿಗೆ ಆರತಿ ಎತ್ತಿ ‘‘ಇಡಾ ಪೀಡಾ ಹೋಗಲಿ ಮತ್ತು ಬಲಿಯ ರಾಜ್ಯ ಬರಲಿ’’ ಎಂದು ಬರುವ ಬಲಿಯ ನೆನಪನ್ನು ಕೊಡುತ್ತಾರೆ.

ಪದ್ಮ ಪುರಾಣದಲ್ಲಿ ಬಲಿಯ ವಿಷಯ ಈ ಕೆಳಗೆ ಉಲ್ಲೇಖವಿದೆ.

ಬಲಿನಾಮ ಮಹಾ ದೈತ್ಯ ದೇವಾರಿರಪರಾಜಿತಃ

ಧರ್ಮೇಣ ಯಶ ಸಾಚೈವ ಪ್ರಜಾ ಸಂರಕ್ಷಣೇ ಚ॥

ತಸ್ಮಿನ್ ಶಾಸತಿ ರಾಜ್ಯಂ ತು ತ್ರೈಲೋಕ್ಯ ಹತ ಕಷ್ಟಕಮ್

ನಾರಾಯೋ ವ್ಯಾಧಯೋವಾಡಪಿ ನಾಧಯೋಯಾ ಕಥಂ ಚ ನ॥

ಅನಾವೃಷ್ಟಿಧರ್ಮೋ ವಾ ನಾಸ್ತಿ ಶಬ್ದೋನ ದುರ್ಜನಃ

ಸ್ವಸ್ನೇ ಪಿ ನೈವ ದೃಶ್ಯತೇ ಬಲೌ ರಾಜ್ಯ ಪ್ರಶಾಸತಿ॥

ಅರ್ಥಾತ್, ಬಲಿ ಹೆಸರಿನ ಮಹಾ ದೈತ್ಯ ದೇವರ ಶತ್ರುವಾಗಿ ಅಪರಾಜೇಯನಾಗಿದ್ದ. ಧರ್ಮ, ಯಶ ಮತ್ತು ಪ್ರಜೆಗಳ ರಕ್ಷಣೆಯಲ್ಲಿ ಅವನು ಅತ್ಯಂತ ತರ್ಕಬದ್ಧನಾಗಿದ್ದ. ಬಲಿಯ ರಾಜ್ಯದಲ್ಲಿ ಯಾರಿಗೂ ದುಃಖವಿರಲಿಲ್ಲ. ಯಾರೂ ಯಾರಿಗೂ ಶತ್ರುವಾಗಿರಲಿಲ್ಲ. ಯಾರಿಗೂ ಯಾವ ಚಿಂತೆಯೂ ಇರಲಿಲ್ಲ. ಅವನ ಆಡಳಿತ ಕಾಲದಲ್ಲಿ ಜನರ ದುಃಖ ಕಷ್ಟ ದೂರವಾಗಿತ್ತು. ಅವನ ರಾಜ್ಯದಲ್ಲಿ ನೀರಿನ ಕೊರತೆ ಇರಲಿಲ್ಲ. ಗೂಂಡಾಗಿರಿ ಹಠಮಾರಿತನ ಇರಲಿಲ್ಲ ಮತ್ತು ಕನಸಿನಲ್ಲಿ ಸಹ ಅಂತಹವರು ಕಾಣಿಸುತ್ತಿರಲಿಲ್ಲ.

ವೈದಿಕ ಧರ್ಮ ಖಂಡ (ಭಾಗ-1) ಈ ಪುಸ್ತಕದಲ್ಲಿ ಸಂಸ್ಕೃತದ ಬ್ರಾಹ್ಮಣ ವಿದ್ವಾನ್ ದಾ. ಸಾತವಳೇಕರ್ ಅವರು ಭಾಗವತ ಪುರಾಣದ ಆಧಾರದ ಮೇಲೆ ಬರೆದ ‘ವಾಮನಾವತಾರಚ ಸಂದೇಶ’ ಈ ಪ್ರಕರಣದ ಬಗ್ಗೆ, ಬಲಿಯ ಬಗ್ಗೆ ಹೀಗೆ ಹೇಳಿದ್ದಾರೆ:

ಬಲಿಯ ರಾಜ್ಯದಲ್ಲಿ ಯಾರಿಗೂ ಸುಮ್ಮನೆ ತೊಂದರೆ ಕೊಡುತ್ತಿರಲಿಲ್ಲ ಎಲ್ಲರಿಗೂ ಸರಿಯಾದ ನ್ಯಾಯ ಸಿಗುತ್ತಿತ್ತು. ಹಿಂದಿನಂತೆ ಯಾವ ಅಸುರರೂ, ಆರ್ಯರೂ ಹೊಡೆದಾಟ ಮಾಡುತ್ತಿರಲಿಲ್ಲ .

ಇಷ್ಟೆಲ್ಲ ಇದ್ದೂ ಬಲಿಯ ದ್ವೇಷವನ್ನು ಆರ್ಯರು ಇವತ್ತಿಗೂ ಯಾಕೆ ಮಾಡುತ್ತಾರೆ? ಕಾರಣವೇನೆಂದರೆ ಬಲಿಯು ಆರ್ಯ ವಂಶೀಯನಲ್ಲ. ಅವನು ಅಸುರನಾಗಿದ್ದನು. ಅವನ ರಾಜ್ಯದಲ್ಲಿ ಸಮಾನತೆ ಇತ್ತು. ಆರ್ಯ ಬ್ರಾಹ್ಮಣರಿಗೂ ತಿನ್ನಲು ಕುಡಿಯಲು ಏನೂ ಕಡಿಮೆ ಇರಲಿಲ್ಲ. ಹಾಗಿದ್ದರೂ ‘ಐಶ್ವರ್ಯ, ಯಶ ಮತ್ತು ಅವಕಾಶ ಎಲ್ಲ ದೇವರಿಗೂ ಮತ್ತು ಅರ್ಹರಿಗೂ ಸಿಗದೆ ಅದೆಲ್ಲ ದೈತ್ಯರಿಗೂ ಸಿಕ್ಕೇ ಸಿಗುತ್ತದೆ.’ ಭೌತಿಕ ಸುಖಾಪೇಕ್ಷೆಯೇ ಆಡಳಿತದ ಮಹತ್ವದ ಸ್ಥಾನವನ್ನು ಪಡೆಯುತ್ತದೆ. ಅದಿಲ್ಲದೆ ಸುಖ ನಿರುಪಯುಕ್ತ ಎಂದು ವಾಮನನು ಬಲಿಯ ಪರಾಜಯ ಮಾಡಿ ಸಂದೇಶ ಕೊಟ್ಟಿದ್ದಾನೆ.

ಬಲಿಯ ರಾಜ್ಯ ಸುರಾಜ್ಯವಾಗಿತ್ತು ಎನ್ನುವುದರಲ್ಲಿ ಸಂಶಯವಿಲ್ಲ. ಆದರೆ ಸ್ವರಾಜ್ಯದ ಬದಲಾಗಿ ಯಾರೋ ಸುರಾಜ್ಯ ಸ್ವೀಕರಿಸುವುದಿಲ್ಲ ಮತ್ತು ತಿಳಿವಳಿಕೆ ಇರುವ ಮನುಷ್ಯರು ಹಾಗೆ ತಿಳಿದುಕೊಳ್ಳುವುದಿಲ್ಲ ಈ ದೊಡ್ಡ ತತ್ತ್ವವನ್ನು ವಾಮನಾವತಾರ ಹೇಳಿದೆಯೆಂದು ಜಗತ್ತು ಇರುವವರೆಗೂ ಎಲ್ಲ ರಾಜನೀತಿಜ್ಞ ಪುರುಷರು ವಾಮನನ ಸ್ತುತಿ ಮಾಡುತಾ್ತರೆ ಎನ್ನುವುದರಲ್ಲಿ ಸಂದೇಹವಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News