ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಬಾರದು ಎನ್ನುವುದು ನಿಮಗೆ ಗೊತ್ತೇ...?

Update: 2018-07-06 11:26 GMT

ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಚಹಾ ಕುಡಿಯುವುದು ರೂಢಿ. ಆದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅಚ್ಚರಿಯಾಗುತ್ತಿದೆಯೇ? ಚಹಾದಲ್ಲಿ ಜಠರದಲ್ಲಿನ ಆಮ್ಲಮಟ್ಟವನ್ನು ಹೆಚ್ಚಿಸುವ ಸಂಯುಕ್ತಗಳು ಸಮೃದ್ಧವಾಗಿವೆ ಮತ್ತು ಅವು ಜಠರದ ಒಳಪದರವನ್ನು ಕೆರಳಿಸುತ್ತವೆ. ದೀರ್ಘಾವಧಿಯಲ್ಲಿ ಇದು ಎದೆಯುರಿ ಮತ್ತು ವಾಂತಿಗೆ ಕಾರಣವಾಗುತ್ತದೆ. ಹೀಗಾಗಿ ಖಾಲಿಹೊಟ್ಟೆಯಲ್ಲಿ ಚಹಾ ಸೇವಿಸಬಾರದು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಆದರೆ ಬೆಳಿಗ್ಗೆ ಎದ್ದ ತಕ್ಷಣ ಸೇವಿಸಬಾರದು ಎನ್ನುವುದು ಚಹಾಕ್ಕೆ ಮಾತ್ರ ಸೀಮಿತವಲ್ಲ. ಕಾಫಿ ಇತ್ಯಾದಿಗಳೂ ಈ ಪಟ್ಟಿಯಲ್ಲಿವೆ.

► ಕಾಫಿ

ಚಹಾದಂತೆ ಕಾಫಿಯನ್ನು ಕೂಡ ಬೆಳಿಗ್ಗೆದ್ದ ತಕ್ಷಣ ಸೇವಿಸಕೂಡದು. ನೀವು ಕಾಫಿಪ್ರಿಯರಾಗಿದ್ದರೆ ಮತ್ತು ಅದಿಲ್ಲದೆ ನಿಮ್ಮ ದಿನವು ಮುಂದೆ ಸಾಗದು ಎಂದಿದ್ದರೆ ಬ್ರೇಕ್‌ಫಾಸ್ಟ್ ಮಾಡಿದ ಬಳಿಕವೇ ಅದನ್ನು ಸೇವಿಸಿ. ಏಕೆಂದರೆ ಖಾಲಿಹೊಟ್ಟೆಯಲ್ಲಿ ಕಾಫಿಯನ್ನು ಸೇವಿಸಿದರೆ ಅದು ಜಠರಾಮ್ಲದ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ಜಠರದ ಒಳಪದರಕ್ಕೆ ಹಾನಿಯನ್ನುಂಟು ಮಾಡುವ ಜೊತೆಗೆ ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.

►ಸಿಹಿ ತಿಂಡಿಗಳು

ಖಾಲಿಹೊಟ್ಟೆಯಲ್ಲಿ ಸಿಹಿಖಾದ್ಯಗಳನ್ನು ತಿನ್ನುವುದರಿಂದ ದಿನವನ್ನು ಆರಂಭಿಸಲು ಹೆಚ್ಚಿನ ಶಕ್ತಿಯು ದೊರೆಯುತ್ತದೆ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಇದು ತಪ್ಪಲ್ಲವಾದರೂ ಅದು ರಕ್ತದಲ್ಲಿ ಗ್ಲುಕೋಸ್ ಮಟ್ಟ ದಿಢೀರ್ ಆಗಿ ಹೆಚ್ಚಲು ಮತ್ತು ಏಕಾಏಕಿ ಕುಸಿಯಲು ಕಾರಣವಾಗುತ್ತದೆ, ಇದು ಉದ್ವೇಗ ಮತ್ತು ಬಳಲಿಕೆಯನ್ನುಂಟು ಮಾಡುತ್ತದೆ. ಇದರಿಂದ ಆರೋಗ್ಯಕರ ಪೋಷಕಾಂಶಗಳ ಕೊರತೆಯಾಗಿ ಮತ್ತು ದಿನವಡೀ ಶಕ್ತಿಯನ್ನು ಕಾಪಾಡಿಕೊಳ್ಳಲಾಗದೆ ನಿಮಗೆ ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರಬಹುದು. ಅಲ್ಲದೆ ಬೆಳಿಗ್ಗೆ ಸಿಹಿತಿಂಡಿಗಳನ್ನು ಸೇವಿಸುವುದರಿಂದ ದಂತಕುಳಿಗಳುಂಟಾಗುವ ಅಪಾಯವು ಹೆಚ್ಚುವ ಮೂಲಕ ಹಲ್ಲುಗಳ ಅರೋಗ್ಯಕ್ಕೂ ಹಾನಿಯನ್ನುಂಟು ಮಾಡಬಹುದು.

► ಕಲ್ಲಂಗಡಿ

ಬೆಳಿಗ್ಗೆದ್ದು ಓಟ,ಜಾಗಿಂಗ್ ಮತ್ತು ವ್ಯಾಯಾಮದಲ್ಲಿ ತೊಡಗಿಕೊಳ್ಳುವವರು ಸಾಮಾನ್ಯವಾಗಿ ತಕ್ಷಣ ಶಕ್ತಿಯನ್ನು ನೀಡುವ ತಾಜಾ ಹಣ್ಣುಗಳು ಮತ್ತು ಹಣ್ಣಿ ನ ರಸದ ಸೇವನೆಯೊಂದಿಗೆ ದಿನವನ್ನು ಆರಂಭಿಸುತ್ತಾರೆ. ಆದರೆ ಕಲ್ಲಂಗಡಿ ಮತ್ತು ಕರಬೂಜದಂತಹ ಮೆಲಾನ್ ಜಾತಿಗೆ ಸೇರಿದ ಹಣ್ಣುಗಳನ್ನು,ವಿಶೇಷವಾಗಿ ಬೆಳಗಿನ ಹೊತ್ತು ತಿನ್ನಲೇಬಾರದು. ಈ ಹಣ್ಣುಗಳಲ್ಲಿರುವ ಅಧಿಕ ನಾರು ಜೀರ್ಣಕ್ರಿಯೆಯನ್ನು ವ್ಯತ್ಯಯಗೊಳಿಸಬಹುದು ಮತ್ತು ದಿನವಿಡೀ ವಾಯು ಹಾಗೂ ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು.

► ಶೀತಲೀಕೃತ ಪಾನೀಯಗಳು

ದಿನದ ಆರಂಭವನ್ನು ಒಂದು ಗ್ಲಾಸ್ ನೀರಿನ ಸೇವನೆಯೊಂದಿಗೆ ಆರಂಭಿಸುವುದು ಒಳ್ಳೆಯದು. ಆದರೆ ಶೀತಲೀಕೃತ ನೀರು ಅಥವಾ ಪಾನೀಯಗಳ ಸೇವನೆ ಒಳ್ಳೆಯದಲ್ಲ. ಇಂತಹ ಪಾನೀಯಗಳು ಜೀರ್ಣಾಂಗ ವ್ಯವಸ್ಥೆಯನ್ನು ಜಡಗೊಳಿಸುವ ಜೊತೆಗೆ ಲೋಳೆಯ ಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ. ಬದಲಿಗೆ ಖಾಲಿಹೊಟ್ಟೆಯಲ್ಲಿ ಬೆಚ್ಚಗಿನ ನೀರು ಅಥವಾ ಹಣ್ಣುಗಳ(ಮೆಲಾನ್ ಹೊರತುಪಡಿಸಿ)ರಸವನ್ನು ಮತ್ತು ಊಟದ ಬಳಿಕ ತಂಪು ಪಾನೀಯಗಳನ್ನು ಸೇವಿಸಿ.

► ಮಸಾಲೆಭರಿತ ಆಹಾರ

ನೀವು ಮಸಾಲೆಭರಿತ ಆಹಾರಪ್ರಿಯರೇ? ಹಾಗಿದ್ದರೆ ಬ್ರೇಕ್‌ಫಾಸ್ಟ್‌ನಲ್ಲಿ ಅಂತಹ ಆಹಾರವಿರದಂತೆ ನೋಡಿಕೊಳ್ಳಿ. ಮಸಾಲೆಭರಿತ ಆಹಾರಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸುವುದು ಜಠರದ ಒಳಪದರದ ಕೆರಳುವಿಕೆಗೆ ಮತ್ತು ಹೊಟ್ಟೆಯ ತೊಂದರೆಗಳಿಗೆ ಕಾರಣವಾಗುತ್ತದೆ.

► ಹಸಿರು ತರಕಾರಿಗಳು

ಕ್ಯಾಲರಿಗಳ ಬಗ್ಗೆ ಹೆಚ್ಚಿನ ಕಾಳಜಿಯಿರುವ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಬಯಸುವ ವ್ಯಕ್ತಿಗಳು ಹಸಿರು ತರಕಾರಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಹಸಿರು ತರಕಾರಿಗಳಿಂದ ತುಂಬಿರುವ ಸಲಾಡ್‌ನ್ನು ದಿನಕ್ಕೆ ಕನಿಷ್ಠ ಒಂದು ಬಾರಿ ಸೇವಿಸುವುದು ದಿನವಿಡೀ ಶರೀರಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತದೆ. ಆದರೆ ಬೆಳಿಗ್ಗೆ ಬ್ರೇಕ್‌ಫಾಸ್ಟ್‌ನಲ್ಲಿ ಕಾರ್ಬೊಹೈಡ್ರೇಟ್‌ಗಳ ಜೊತೆಯಿಲ್ಲದೆ ಇಂತಹ ಅಧಿಕ ನಾರು ಇರುವ ಹಸಿರು ತರಕಾರಿಗಳ ಸೇವನೆಯು ಹೊಟ್ಟೆಯ ತೊಂದರೆಗೆ ಹಾಗು ವಾಯುವಿನ ಕಿರಿಕಿರಿಗೆ ಕಾರಣವಾಗಬಲ್ಲದು.

► ಔಷಧಿಗಳು

ಆ್ಯಂಟಿ ಬಯಾಟಿಕ್‌ಗಳು ಮತ್ತು ನೋವು ನಿವಾರಕಗಳಂತಹ ಕೆಲವು ಔಷಧಿಗಳನ್ನೆಂದಿಗೂ ಖಾಲಿಹೊಟ್ಟೆಯಲ್ಲಿ ಸೇವಿಸಬಾರದು. ಈ ಔಷಧಿಗಳು ಜಠರದ ಒಳಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ ಮತ್ತು ಅಲ್ಸರ್‌ಗಳಿಗೆ ಕಾರಣವಾಗುತ್ತವೆ. ಅಲ್ಲದೆ ಅವುಗಳಲ್ಲಿರುವ ರಾಸಾಯನಿಕಗಳು ನಿರೀಕ್ಷಿತ ಪರಿಣಾಮಗಳನ್ನು ನೀಡುವುದಿಲ್ಲ. ಆದರೆ ಎಲ್ಲ ಔಷಧಿಗಳನ್ನು ಖಾಲಿಹೊಟ್ಟೆೆಯಲ್ಲಿ ಸೇವಿಸಬಾರದು ಎಂದೇನಿಲ್ಲ. ಅಂಟಾಸಿಡ್‌ಗಳು ಮತ್ತು ಆ್ಯಂಟಿಎಮೆಟಿಕ್‌ಗಳಂತಹ ಔಷಧಿಗಳನ್ನು ವೈದ್ಯರು ಸೂಚಿಸಿದ್ದರೆ ಖಾಲಿಹೊಟ್ಟೆಯಲ್ಲಿ ಸೇವಿಸಬಹುದು. ಹೀಗಾಗಿ ಔಷಧಿಗಳನ್ನು ಸೇವಿಸುವ ಮುನ್ನ ಅದಕ್ಕೆ ಸೂಕ್ತಸಮಯವನ್ನು ವೈದ್ಯರಿಂದ ತಿಳಿದುಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News