ಹಿಂದುಯೇತರರು ಪುರಿ ಜಗನ್ನಾಥ ದೇವಾಲಯ ಪ್ರವೇಶಿಬಹುದೇ?: ಸಲಹೆ ಕೇಳಿದ ಸುಪ್ರೀಂ

Update: 2018-07-06 15:54 GMT

ಹೊಸದಿಲ್ಲಿ, ಜು.6: ಹಿಂದುಯೇತರ ಭಕ್ತರು ಒಡಿಶಾದ ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸಬಹುದೇ ಎಂದು ಸರ್ವೋಚ್ಚ ನ್ಯಾಯಾಲಯ ಗುರುವಾರ ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣ್ಯಮ್ ಅವರ ಸಲಹೆಯನ್ನು ಕೇಳಿದೆ. ನ್ಯಾಯಾಧೀಶರು ನಡೆಸಿದ ಚರ್ಚೆಯ ಸಮಯದಲ್ಲಿ ಹಿಂದುಯೇತರ ಭಕ್ತರು, ಪವಿತ್ರ ಸ್ಥಳದ ನಿಯಂತ್ರಣ ಮಾನದಂಡಗಳಿಗೆ ಬದ್ಧವಾಗಿರುತ್ತೇನೆ ಎಂದು ಪ್ರಮಾಣ ಪತ್ರ ನೀಡಿದ ನಂತರ ಪುರಿ ಜಗನ್ನಾಥ ದೇವಾಲಯವನ್ನು ಪ್ರವೇಶಿಸಬಹುದೇ ಎಂದು ಗೋಪಾಲ ಸುಬ್ರಮಣ್ಯಮ್ ಅವರ ಸಲಹೆಯನ್ನು ಕೇಳಲಾಯಿತು.

ದೇವಾಲಯಗಳಲ್ಲಿ ಪ್ರವಾಸಿಗರು ಎದುರಿಸುವ ಸಮಸ್ಯೆ, ಶೋಷಣೆ, ಪವಿತ್ರ ಸ್ಥಳದ ನಿರ್ವಹಣೆ ಮತ್ತು ಪೂಜೆ ಪುರಸ್ಕಾರಗಳ ಲಭ್ಯತೆ ಬಗ್ಗೆ ದೂರುಗಳು ಬಂದರೆ ಅಂಥ ಧಾರ್ಮಿಕ ಸ್ಥಳಗಳ ಪರಿಶೀಲನೆ ನಡೆಸುವಂತೆ ನ್ಯಾಯಾಧೀಶ ಎ.ಕೆ ಗೋಯಲ್ ಹಾಗೂ ಎಸ್.ಎ ನಝೀರ್ ಅವರನ್ನೊಳಗೊಂಡ ಪೀಠವು ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ಆದೇಶ ನೀಡಿದೆ.

ಪ್ರತಿ ಧಾರ್ಮಿಕ ಕ್ಷೇತ್ರಗಳಿಗೆ ಎಲ್ಲ ಧರ್ಮದ ಜನರು ಭೇಟಿ ನೀಡಿ ಪೂಜೆಯನ್ನು ಸಲ್ಲಿಸಲು ಸಾಧ್ಯವಾಗುವಂತೆ, ವಸ್ತ್ರ ಸಂಹಿತೆ, ಪ್ರಮಾಣ ಪತ್ರ ನೀಡುವಿಕೆ ಅಥವಾ ಇತರ ಅಗತ್ಯ ಕ್ರಮಗಳನ್ನು ದೇವಾಲಯ ಆಡಳಿತ ಮಂಡಳಿ ಜಾರಿಗೆ ತರಬಹುದೇ ಎಂಬ ಬಗ್ಗೆಯೂ ಚರ್ಚೆ ನಡೆಸಿರುವುದಾಗಿ ನ್ಯಾಯಾಲಯ ತಿಳಿಸಿದೆ. ದೇವಾಲಯದಲ್ಲಿ ನಡೆದ ಅವ್ಯವಹಾರದ ಕುರಿತ ಸಾರ್ವಜನಿಕ ಹಿತಾಸಕ್ತಿ ದಾವೆಯ ಆಲಿಕೆಯ ವೇಳೆ ಈ ಚರ್ಚೆ ನಡೆದಿದೆ. ಯಾತ್ರಾರ್ಥಿಗಳು ಯಾವುದೇ ಅಡೆತಡೆಯಿಲ್ಲದೆ ಮತ್ತು ಸ್ಥಳೀಯ ಮಧ್ಯವರ್ತಿಗಳಿಂದ ಲೂಟಿಗೊಳಗಾಗುವ ಅಪಾಯಕ್ಕೆ ಸಿಲುಕದೆ ಎಲ್ಲ ಧಾರ್ಮಿಕ ಕ್ಷೇತ್ರಗಳಿಗೆ ಪ್ರವೇಶ ಪಡೆಯಲು ದಾರಿಗಳನ್ನು ಸೂಚಿಸಲು ಮತ್ತು ಎಲ್ಲ ಪವಿತ್ರ ಸ್ಥಳಗಳ ನಿರ್ವಹಣೆಯನ್ನು ಪರಿಶೀಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಈ ಬಗ್ಗೆ ಕೇಂದ್ರ ಸರಕಾರ ಸಮಿತಿಯನ್ನು ರಚಿಸಿದ ನಂತರ ಆಗಸ್ಟ್ 31ರ ಒಳಗಾಗಿ ವರದಿಯನ್ನು ಸಲ್ಲಿಸಬೇಕಿದೆ. ಈ ಸಲಹೆಯು ದೇಶದಲ್ಲಿರುವ ಎಲ್ಲ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಅನ್ವಯವಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News