ಗೋರಕ್ಷಣೆಯ ಹೆಸರಲ್ಲಿ ಹಿಂಸಾಚಾರ: ಸುಪ್ರೀಂಕೋರ್ಟ್ ಮೊಸಳೆ ಕಣ್ಣೀರು

Update: 2018-07-07 05:24 GMT

‘ಗೋ ರಕ್ಷಣೆಯ ಹೆಸರಲ್ಲಿ ಹಲ್ಲೆಗಳನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ’’ ಎಂದು ಸುಪ್ರೀಂಕೋರ್ಟ್ ಹೇಳಿದ್ದು, ‘‘ಈ ರೀತಿಯ ಘಟನೆಗಳನ್ನು ತಡೆಯುವುದು ರಾಜ್ಯ ಸರಕಾರಗಳ ಜವಾಬ್ದಾರಿಯಾಗಿದೆ’’ ಎಂದು ಎಚ್ಚರಿಸಿದೆ. ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆಯ ಕುರಿತಂತೆ ಕೇಂದ್ರ ಸರಕಾರವೂ ಹಲವು ಬಾರಿ ಇಂತಹ ಹೇಳಿಕೆಗಳನ್ನು ನೀಡಿದೆ. ಹಿಂಸೆಗಳನ್ನು ತಡೆಯುವುದು ರಾಜ್ಯ ಸರಕಾರಗಳ ಹೊಣೆ ಎಂಬ ಕೇಂದ್ರ ಸರಕಾರದ ಹೇಳಿಕೆಗಳನ್ನು, ಸುಪ್ರೀಂಕೋರ್ಟ್ ಪುನರುಚ್ಚರಿಸಿದೆ. ಗೋರಕ್ಷಣೆಯ ಹೆಸರಲ್ಲಿ ನಡೆಯುವ ಹಿಂಸಾಚಾರ ತಪ್ಪು ಎನ್ನುವುದನ್ನು ನ್ಯಾಯಾಲಯ ಮತ್ತು ಕೇಂದ್ರ ಸರಕಾರ ಪದೇ ಪದೇ ಒಪ್ಪಿಕೊಳ್ಳುತ್ತಿದೆ. ಆದರೆ ಈ ತಪ್ಪನ್ನು ಸರಿಪಡಿಸಲು ಸ್ವಷ್ಟ ನಿರ್ದೇಶ ನೀಡುವ ಸಂದರ್ಭದಲ್ಲಿ ಮಾತ್ರ ಅದು ವೌನವಾಗುತ್ತದೆ. ಅಂದರೆ, ಹಿಂಸಾಚಾರವನ್ನು ಖಂಡಿಸುವುದರ ಮೂಲಕ ತನ್ನ ಹೊಣೆಗಾರಿಕೆಗಳಿಂದ ನ್ಯಾಯಾಲಯ ಮತ್ತು ಕೇಂದ್ರ ಸರಕಾರ ನುಣುಚಿಕೊಳ್ಳುತ್ತಿದೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿ ಬಿಡುತ್ತದೆ.

 ‘ಗೋರಕ್ಷಣೆಯ ಹೆಸರಿನಲ್ಲಿ ಹಿಂಸೆಯನ್ನು ಒಪ್ಪಲಾಗದು’ ಎನ್ನುವುದಕ್ಕೆ ಸುಪ್ರೀಂಕೋರ್ಟ್ ನ ಅಗತ್ಯವೇನೂ ಇಲ್ಲ. ಯಾಕೆಂದರೆ ಗೋರಕ್ಷಣೆಯ ಹೆಸರಿನಲ್ಲಿ ಮಾತ್ರವಲ್ಲ, ಯಾವುದೇ ಸೊತ್ತುಗಳ ರಕ್ಷಣೆಯ ಹೆಸರಿನಲ್ಲಿ ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದು, ಹಿಂಸಾಚಾರ ನಡೆಸುವುದು ಕಾನೂನು ಪ್ರಕಾರ ಅಪರಾಧ ಎನ್ನುವುದು ಜನರಿಗೆ ಗೊತ್ತಿಲ್ಲದ ವಿಷಯವೇನೂ ಅಲ್ಲ. ಇಂದು ದೇಶ ಸುಪ್ರೀಂಕೋರ್ಟಿನಿಂದ ನಿರೀಕಿಸುತ್ತಿರುವುದು ಗೋರಕ್ಷಣೆಯ ಹೆಸರಿನಲ್ಲಿ ನಡೆಯುವ ಹಿಂಸಾಚಾರ ತಡೆಯುವುದಕ್ಕೆ ಕಠಿಣ ಕ್ರಮಗಳನ್ನು. ಗೋರಕ್ಷಣೆಯ ಹೆಸರಿನಲ್ಲಿ ಬೀದಿ ಗೂಂಡಾಗಳಿಂದ ರೈತರು, ವ್ಯಾಪಾರಿಗಳ ಹತ್ಯೆಗಳು ಪದೇ ಪದೇ ನಡೆಯುತ್ತಿದ್ದರೂ ಸುಪ್ರೀಂಕೋರ್ಟ್ ಹಿಂಸೆಯನ್ನು ತಡೆಯುವುದು ಯಾರ ಹೊಣೆ ಎನ್ನುವುದನ್ನು ತೀರ್ಮಾನಿಸುವುದಕ್ಕಷ್ಟೇ ತನ್ನನ್ನು ಸೀಮಿತಗೊಳಿಸುತ್ತಿದೆ. ಹಿಂಸೆಯನ್ನು ಈ ವರೆಗೆ ತಡೆಯಲು ಕೇಂದ್ರ ಮತ್ತು ರಾಜ್ಯ ಸರಕಾರ ಯಾಕೆ ವಿಫಲವಾಗಿದೆ ಎನ್ನುವುದನ್ನು ಪ್ರಶ್ನಿಸಿ ಅವರಿಗೆ ಛೀಮಾರಿ ಹಾಕುವುದಕ್ಕೆ ಸುಪ್ರೀಂಕೋರ್ಟ್ ಹಿಂದೇಟು ಹಾಕಿದೆ. ಬದಲಿಗೆ, ಧರ್ಮದ ಜೊತೆಗೆ ಸಂತ್ರಸ್ತರನ್ನು ತಳುಕು ಹಾಕಬಾರದು ಎಂದು ಹಲ್ಲೆಗೀಡಾದವರಿಗೆ ಬುದ್ಧಿವಾದ ಹೇಳಿದೆ. ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಕೊನೆ ಹಾಡಲು ನ್ಯಾಯಾಲಯಕ್ಕೆ ಅವಸರವಿಲ್ಲ ಎನ್ನುವುದನ್ನು ಅದರ ತೀರ್ಪಿನಿಂದಲೇ ಅರ್ಥ ಮಾಡಿಕೊಳ್ಳಬಹುದಾಗಿದೆ.

  ಗೋರಕ್ಷಣೆಯ ಹೆಸರಲ್ಲಿ ಹಿಂಸಾಚಾರವನ್ನು ಒಪ್ಪಲಾಗದು ಎಂದ ಮೇಲೆ, ನಕಲಿ ಗೋರಕ್ಷಣಾ ಪಡೆಗಳ ಮೇಲೆ ನಿಷೇಧ ಹೇರಲು ಯಾಕೆ ಸುಪ್ರೀಂಕೋರ್ಟ್ ಆದೇಶ ನೀಡಲು ಹಿಂಜರಿಯುತ್ತಿದೆ? ಈ ದೇಶದಲ್ಲಿ ಶತಶತಮಾನಗಳಿಂದ ಗೋರಕ್ಷಕರಾಗಿ ಗುರುತಿಸಿಕೊಂಡು ಬಂದವರು ರೈತರು. ಉಳಿದಂತೆ ಈ ದೇಶದಲ್ಲಿ ಎಲ್ಲ ಜಾನುವಾರುಗಳ ರಕ್ಷಣೆಗಾಗಿ ಕಾನೂನು ಸುವ್ಯವಸ್ಥೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಿರುವಾಗ, ಕೆಲವು ಸಂಘಟನೆಗಳು ಗುಂಪುಗಳನ್ನು ಕಟ್ಟಿಕೊಂಡು ಪರ್ಯಾಯ ಪೊಲೀಸರಂತೆ ಕಾರ್ಯನಿರ್ವಹಿಸುತ್ತಿರುವುದು ಅಕ್ರಮವೆನ್ನುವುದನ್ನು ಸ್ಪಷ್ಟವಾಗಿ ಘೋಷಿಸುವುದಕ್ಕೆ ನಮ್ಮ ನ್ಯಾಯವ್ಯವಸ್ಥೆ ಹಿಂಜರಿಯುತ್ತಿರುವುದು ಯಾಕೆ? ಇಷ್ಟಕ್ಕೂ ಗೋರಕ್ಷಣೆಯ ಹೆಸರಿನಲ್ಲಿ ಬೀದಿಗಿಳಿದವರು ಅಮಾಯಕ ಸಾರ್ವಜನಿಕರಲ್ಲ. ಒಂದು ಸಂಘಟಿತ ರಾಜಕೀಯ ಪಕ್ಷಗಳ ಮೇಲೆ ಒಲವಿರುವವರು. ಗೋರಕ್ಷಣೆಯ ಹಿಂದೆ ಒಂದು ರಾಜಕೀಯ ಅಜೆಂಡಾ ಇರುವುದು ತಿಳಿಯಲಾರದಷ್ಟು ಅಮಾಯಕವಾಗಿದೆಯೇ ನಮ್ಮ ಸುಪ್ರೀಂಕೋರ್ಟ್? ಇಂದು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರ ನಡೆಸುವವರ ಬೆನ್ನ ಹಿಂದಿರುವ ಪಕ್ಷ ಈ ದೇಶವನ್ನು ಆಳುತ್ತಿದೆ ಮತ್ತು ಈ ಗೋರಕ್ಷಣೆಯ ಹಿಂಸಾಚಾರದ ಲಾಭವನ್ನೂ ಅದೇ ಪಕ್ಷ ತನ್ನದಾಗಿಸಿಕೊಳ್ಳುತ್ತಿದೆ. ಗೋರಕ್ಷಣೆಯ ಹೆಸರಿನಲ್ಲಿ ಒಂದು ಪಕ್ಷದ ರಕ್ಷಣೆ ಈ ದೇಶದಲ್ಲಿ ನಡೆಯುತ್ತಿದೆ. ಸರಕಾರದ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಹಿಂಸಾಚಾರ ಇದಾಗಿರುವುದರಿಂದ ಸುಪ್ರೀಂಕೋರ್ಟ್ ನೇರವಾಗಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡುವುದು ಅಗತ್ಯ. ಯಾಕೆಂದರೆ ರಾಜಕೀಯ ಒತ್ತಡಗಳ ಹಿನ್ನೆಲೆಯಲ್ಲಿ ಪೊಲೀಸರು ನೇರವಾಗಿ ದುಷ್ಕರ್ಮಿಗಳ ಮೇಲೆ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿದ್ದಾರೆ. ಕೇಂದ್ರದ ಮೂಲಕ, ರಾಜ್ಯ ಸರಕಾರಗಳಿಗೆ ಮಾತ್ರವಲ್ಲ, ಪೊಲೀಸ್ ಇಲಾಖೆಗಳಿಗೆ ಸ್ಪಷ್ಟ ನಿರ್ದೇಶನ ಬರಬೇಕಾಗಿದೆ. ಎಲ್ಲೆಲ್ಲ ಗೋರಕ್ಷಣಾ ಪಡೆ ಅಧಿಕೃತವಾಗಿದೆಯೋ ಅಂತಹ ಪಡೆಗಳ ಮೇಲೆ ನೇರವಾಗಿ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ ನೀಡಬೇಕು. ಇದು ಸಾಧ್ಯವಾಗದೆ ಈ ಹಿಂಸಾಚಾರವನ್ನು ತಡೆಯಲು ಸಾಧ್ಯವಿಲ್ಲ.

 ಸಂತ್ರಸ್ತರನ್ನು ಒಂದು ನಿರ್ದಿಷ್ಟ ಧರ್ಮದ ಜೊತೆಗೆ ತಳುಕು ಹಾಕಬಾರದು ಎಂದು ಸುಪ್ರೀಂ ಕೋರ್ಟ್ ಹೇಳುತ್ತಿದೆ. ಇಲ್ಲಿ ದಾಳಿ ನಡೆಯುತ್ತಿರುವುದೇ, ಗೋಸಾಗಾಟಗಾರರು ಒಂದು ನಿರ್ದಿಷ್ಟ ಧರ್ಮಕ್ಕೆ ಸೇರಿದವರು ಎನ್ನುವ ಕಾರಣಕ್ಕಾಗಿ. ಒಂದು ನಿರ್ದಿಷ್ಟ ಧರ್ಮದ ಮೇಲೆ ಹಲ್ಲೆ ನಡೆಸುವುದಕ್ಕೆ ಸಂಘಪರಿವಾರ ವಿವಿಧ ನೆಪಗಳನ್ನು ಹುಡುಕುತ್ತಾ ಬಂದಿದೆ. ಲವ್‌ಜಿಹಾದ್‌ನಂತಹ ವದಂತಿಗಳನ್ನು ಹುಟ್ಟು ಹಾಕಿ ಅವರ ಮೇಲೆ ಹಲ್ಲೆ ನಡೆದಿವೆ. ಆ ಮೂಲಕ ಸಮಾಜದಲ್ಲಿ ಉದ್ವಿಗ್ನ ವಾತಾವರಣ ನೆಲೆಸುವಂತೆ ಮಾಡುವುದು, ಒಂದು ಸಮುದಾಯದ ಜನರ ಒಳಗೆ ಅಭದ್ರತೆಯನ್ನು ನಿರ್ಮಾಣ ಮಾಡುವುದು ಅವರ ಉದ್ದೇಶ. ಗೋರಕ್ಷಣೆಯ ಹೆಸರಿನಲ್ಲಿ ಹಲ್ಲೆ ನಡೆಸುವವರ ಅಂತಿಮ ಗುರಿಯೂ ಒಂದು ನಿರ್ದಿಷ್ಟ ಸಮುದಾಯದೊಳಗೆ ಆತಂಕ ಮೂಡಿಸುವುದಾಗಿದೆ. ಈವರೆಗೆ ನಡೆದಿರುವ ಎಲ್ಲ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಹೀಗಿರುವಾಗ, ಸಂತ್ರಸ್ತರನ್ನು ಧರ್ಮದ ಜೊತೆಗೆ ತಳುಕು ಹಾಕಬಾರದು ಎನ್ನುವುದು ಎಷ್ಟು ಸರಿ? ಅಂದರೆ, ಈ ಹಿಂಸಾಚಾರ ಒಂದು ಧರ್ಮದ ವಿರುದ್ಧ ಸಂಘಟನೆಗಳು ನಡೆಸುತ್ತಿರುವ ವ್ಯವಸ್ಥಿತ ಸಂಚು ಎಂದು ಒಪ್ಪಿಕೊಳ್ಳುವುದಕ್ಕೆ ಸುಪ್ರೀಂಕೋರ್ಟ್ ಸಿದ್ಧವಿಲ್ಲ ಎಂದಾಯಿತು. ಎಲ್ಲ ಹಿಂಸಾಚಾರಗಳ ಜೊತೆಗೆ ಈ ಹಿಂಸಾಚಾರವನ್ನು ಜೊತೆಗಿಟ್ಟು ನೋಡಲು ಅದು ಬಯುಸುತ್ತಿದೆ. ಎಲ್ಲಿಯವರೆಗೆ ಈ ಹಿಂಸಾಚಾರದ ಹಿಂದಿರುವ ರಾಜಕೀಯ ದುರುದ್ದೇಶಗಳನ್ನು ನ್ಯಾಯ ವ್ಯವಸ್ಥೆ ಒಪ್ಪಿಕೊಳ್ಳಲು ಸಿದ್ಧವಿಲ್ಲವೋ ಅಲ್ಲಿಯವರೆಗೆ, ಸಂತ್ರಸ್ತರಿಗೆ ನ್ಯಾಯ ಸಿಗಲು ಸಾಧ್ಯವಿಲ್ಲ.

ಇಂದು ಗೋರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುವ ಮೂಲಕ ಕಾನೂನು ಸುವ್ಯವಸ್ಥೆಯನ್ನು ರಕ್ಷಿಸುವ ಹೊಣೆಗಾರಿಕೆ ಮಾತ್ರವಲ್ಲ, ಗೋರಕ್ಷಣೆಯ ಹೊಣೆಗಾರಿಕೆಯೂ ನ್ಯಾಯವ್ಯವಸ್ಥೆಯ ಮೇಲಿದೆ. ನಕಲಿ ಗೋರಕ್ಷಕರ ಉಪಟಳದಿಂದಾಗಿ, ರೈತರು ತಾವು ಸಾಕಿದ ಗೋವುಗಳನ್ನು ಮಾರಾಟ ಮಾಡುವ, ಸಾಗಾಟ ಮಾಡುವ ಸ್ವಾತಂತ್ರವಿಲ್ಲದೆ ಸಮಸ್ಯೆಗೊಳಗಾಗಿದ್ದಾರೆ. ಗೋವು ಸಾಕುವುದೆಂದರೆ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದು ಎಂದು ಗ್ರಾಮೀಣ ಪ್ರದೇಶದ ರೈತರಿಗೆ ಅನಿಸಹತ್ತಿದೆ. ಈ ಕಾರಣದಿಂದಲೇ, ಗೋಸಾಕಣೆಯಿಂದ ಅವರು ಹಿಂದೆ ಸರಿಯುತ್ತಿದ್ದಾರೆ. ನಕಲಿ ಗೋರಕ್ಷಕರ ಅಟ್ಟಹಾಸ ಹೀಗೇ ಮುಂದುವರಿಯುತ್ತಾ ಇದ್ದರೆ ಮುಂದೊಂದು ದಿನ, ಗ್ರಾಮೀಣ ಪ್ರದೇಶದಲ್ಲಿ ಗೋಸಾಕಣೆ ಅಳಿಯಲಿದೆ. ಆದುದರಿಂದ ಗೋವುಗಳನ್ನು ಸಾಕುವ ರೈತರ ಹಿತಾಸಕ್ತಿಯನ್ನು ರಕ್ಷಿಸುವ ನೆಲೆಯಲ್ಲಾದರೂ ಕಪಟ ಗೋರಕ್ಷಕರಿಗೆ ಸುಪ್ರೀಂಕೋರ್ಟ್ ನಿಷೇಧ ಹೇರಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News