ನನ್ನ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಭಾರತೀಯ ಮಾಧ್ಯಮಗಳಿಗೆ ಧನ್ಯವಾದ: ಝಾಕಿರ್ ನಾಯ್ಕ್

Update: 2018-07-07 08:39 GMT

ಹೊಸದಿಲ್ಲಿ, ಜು.7: ಸದ್ಯ ಮಲೇಷ್ಯಾದಲ್ಲಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್, ತಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ್ದಕ್ಕಾಗಿ ಹಾಗೂ ಪ್ರಸಾರ ಮಾಡಿದ್ದಕ್ಕಾಗಿ ಭಾರತೀಯ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

ಸದ್ಯ ಮಲೇಷ್ಯಾದಲ್ಲಿ ಅಲ್ಲಿನ ಖಾಯಂ ನಾಗರಿಕರಾಗಿ ವಾಸಿಸುತ್ತಿರುವ ಝಾಕಿರ್ ನಾಯ್ಕ್ ಫೇಸ್ ಬುಕ್ ನಲ್ಲಿ ಶುಕ್ರವಾರ ವೀಡಿಯೋವೊಂದನ್ನು ಪೋಸ್ಟ್ ಮಾಡಿ "ನನ್ನ ಬಗ್ಗೆ ನಕಲಿ ಸುದ್ದಿ ಪ್ರಕಟಿಸಿದ ಟಿವಿ ಮಾಧ್ಯಮ ಹಾಗೂ ದಿನಪತ್ರಿಕೆಗಳಿಗೆ ಧನ್ಯವಾದ ತಿಳಿಸಬಯಸುತ್ತೇನೆ. ಎರಡು ದಿನಗಳ ಹಿಂದೆ, ಜುಲೈ 4ರಂದು  ಹೆಚ್ಚಿನ ದಿನ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳು ಡಾ. ಝಾಕಿರ್ ನಾಯ್ಕ್ ಮಲೇಷ್ಯಾದಲ್ಲಿ ಬಂಧನಕ್ಕೊಳಗಾಗಿದ್ದಾರೆ ಹಾಗೂ ಅದೇ ದಿನ ಗಡೀಪಾರಾಗಲಿದ್ದಾರೆ ಎಂಬ ಸುದ್ದಿ ಪ್ರಕಟಿಸಿದ್ದವು. ನಿಸ್ಸಂಶಯವಾಗಿ ಅದೊಂದು ನಕಲಿ ಸುದ್ದಿ ಎಂದು ಸಾಬೀತಾಯಿತು. ಭಾರತೀಯ ಮಾಧ್ಯಮ ಇದನ್ನೇ ನನ್ನ ವಿರುದ್ಧ ಕಳೆದೆರಡು ವರ್ಷಗಳಿಂದ ಮಾಡುತ್ತಿದೆ. ಅವರು ನನ್ನ ಬೆನ್ನ ಹಿಂದೆ ಬಿದ್ದು ಜುಲೈ 4ಕ್ಕೆ ಎರಡು ವರ್ಷಗಳಾಗಿವೆ'' ಎಂದು ಝಾಕಿರ್ ಬರೆದಿದ್ದಾರೆ.

ಜುಲೈ 1, 2016ರಲ್ಲಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನಡೆದ ಉಗ್ರ ದಾಳಿಗಳಲ್ಲಿ ಮೃತಪಟ್ಟ 20 ಮಂದಿಯಲ್ಲೊಬ್ಬನಾಗಿದ್ದ ಉಗ್ರನೊಬ್ಬ ಝಾಕಿರ್ ನಾಯ್ಕ್ ರಿಂದ ಪ್ರಭಾವಿತನಾಗಿದ್ದ ಎಂದು ಸುದ್ದಿ ಮಾಡಿದ್ದ ಸ್ಥಳೀಯ ದೈನಿಕವೊಂದು ನಂತರ ಈ  ಸುದ್ದಿಯನ್ನು ವಾಪಸ್ ಪಡೆದುಕೊಂಡಿದ್ದರೂ ಭಾರತೀಯ ಮಾಧ್ಯಮ ಇದೇ ವಿಚಾರವಾಗಿ ನನ್ನ ವಿರುದ್ಧ ಅಪಪ್ರಚಾರ ನಡೆಸಿತು ಎಂದು ನಾಯ್ಕ್  ಹೇಳಿಕೊಂಡಿದ್ದಾರೆ.

``ಭಾರತೀಯ ಮಾಧ್ಯಮ ನನ್ನ ವಿರುದ್ಧ ಏಕಿದೆ,? ಹಣಕ್ಕಾಗಿ, ಟಿಆರ್ ಪಿ ಅಥವಾ ಮತಗಳಿಗಾಗಿಯೇ ಎಂದು ತಿಳಿದಿಲ್ಲ. ಕಳೆದೆರಡು ವರ್ಷಗಳಿಂದ ನನ್ನ ವಿರುದ್ಧ ಪ್ರಕಟವಾದ ಎಲ್ಲ ಲೇಖನಗಳು ಸುಳ್ಳು ಹಾಗೂ ಆಧಾರರಹಿತ ಎಂದು ಸಾಬೀತಾಗುವುದು'' ಎಂದು ನಾಯ್ಕ್ ಬರೆದಿದ್ದಾರೆ.

ಝಾಕಿರ್ ಅವರು ಮಲೇಷ್ಯಾದಲ್ಲಿ ಯಾವುದೇ ಸಮಸ್ಯೆ ಸೃಷ್ಟಿಸಿಲ್ಲವಾದುದರಿಂದ ಅವರನ್ನು ಭಾರತಕ್ಕೆ ಗಡೀಪಾರು ಮಾಡಲಾಗುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹತಿರ್ ಮುಹಮ್ಮದ್ ಶುಕ್ರವಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News