ಸದನದಲ್ಲಿ ಸಚಿವರ ಕಡ್ಡಾಯ ಹಾಜರಾತಿಗೆ ಡಿಸಿಎಂ ಸೂಚನೆ

Update: 2018-07-07 15:00 GMT

ಬೆಂಗಳೂರು, ಜು.7: ಉಭಯ ಸದನಗಳ ಕಾರ್ಯಕಲಾಪಗಳಿಗೆ ನಿಯೋಜನೆಗೊಂಡ ಸಚಿವರು ಸದನಗಳಲ್ಲಿ ನಿಗದಿತ ಕಾರ್ಯಕಲಾಪಗಳಲ್ಲಿ, ಚರ್ಚೆಗಳಲ್ಲಿ ಸಕ್ರಿಯವಾಗಿ ಹಾಗೂ ಕಡ್ಡಾಯವಾಗಿ ಹಾಜರಿರುವಂತೆ ಕಾಂಗ್ರೆಸ್ ಪಕ್ಷದ ಸಚಿವರಿಗೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.

ಈ ಸಂಬಂಧ ಶನಿವಾರ ಎಲ್ಲ ಸಚಿವರಿಗೆ ಪತ್ರ ಬರೆದಿರುವ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ಸರಕಾರದ ಆಯವ್ಯಯ ಅಧಿವೇಶನ ಪ್ರಸಕ್ತ ನಡೆಯುತ್ತಿದ್ದು, ಇಲಾಖಾವಾರು ಬೇಡಿಕೆಗೆ ಅನುಗುಣವಾಗಿ ಮಹತ್ವದ ಚರ್ಚೆಗಳು ನಡೆಯುತ್ತಿವೆ. ಸದನದಲ್ಲಿ ಕೆಲವು ಸಚಿವರು ಗೈರು ಹಾಜರಾಗಿರುವ ಬಗ್ಗೆ ಉಭಯ ಸದನಗಳ ಸಭಾಪತಿ ಹಾಗೂ ಸಭಾಧ್ಯಕ್ಷರು ಈಗಾಗಲೆ ಹಲವು ಬಾರಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದ್ದಾರೆ.

ಸದನದಲ್ಲಿ ನಮ್ಮ ಸಚಿವರುಗಳಿಂದ ಸಮರ್ಪಕ ಕಾರ್ಯಚಟುವಟಿಕೆ ಮತ್ತು ಕ್ರಿಯಾಶೀಲತೆಯನ್ನು ಎಐಸಿಸಿ ವರಿಷ್ಠರು ಬಯಸಿರುವುದನ್ನು ತಮ್ಮ ಗಮನಕ್ಕೆ ತರುತ್ತಾ, ಈ ಹಿನ್ನೆಲೆಯಲ್ಲಿ ಸದನದಲ್ಲಿ ಸದಸ್ಯರು ಪ್ರಸ್ತಾಪಿಸಿದ ವಿಷಯಗಳು, ಮಂಡಿಸಬೇಕಾದ ಕಾಗದ ಪತ್ರಗಳು, ಸದಸ್ಯರ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳನ್ನು ಒದಗಿಸುವುದರ ಜೊತೆಗೆ ಉಭಯ ಸದನಗಳ ಕಾರ್ಯಕಲಾಪಗಳಿಗೆ ನಿಯೋಜನೆಗೊಂಡ ಸಚಿವರು ಸದನದಲ್ಲಿ ನಿಗದಿತ ಕಾರ್ಯಕಲಾಪಗಳಲ್ಲಿ, ಚರ್ಚೆಗಳಲ್ಲಿ ಸಕ್ರಿಯವಾಗಿ ಹಾಗೂ ಕಡ್ಡಾಯವಾಗಿ ಹಾಜರಿರಬೇಕೆಂದು ಪರಮೇಶ್ವರ್ ಪತ್ರದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News