ಇಡಿ, ಸಿಬಿಐನಂತಹ ಸಂಸ್ಥೆಗಳು ‘ಕೈಗೊಂಬೆ’ಗಳಾಗಬಾರದು: ಹೈಕೋರ್ಟ್

Update: 2018-07-07 18:18 GMT

ಮುಂಬೈ,ಜು.7: ರಕ್ಷಣಾ ಪಡೆಗಳು,ಪೊಲೀಸ್ ಮತ್ತು ನ್ಯಾಯಾಂಗದಂತೆ ಜಾರಿ ನಿರ್ದೇಶನಾಲಯ(ಇಡಿ),ಸಿಬಿಐ ಮತ್ತು ಆರ್‌ಬಿಐನಂತಹ ಸಂಸ್ಥೆಗಳೂ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸಕ್ಕೆ ದ್ರೋಹ ಬಗೆಯುವುದಿಲ್ಲ ಎನ್ನುವುದನ್ನು ಅಧಿಕಾರದಲ್ಲಿರುವ ಮತ್ತು ಪ್ರತಿಪಕ್ಷದಲ್ಲಿರುವ ರಾಜಕೀಯ ಪಕ್ಷಗಳು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಕಿವಿಮಾತು ಹೇಳಿದೆ.

ಇತ್ತೀಚಿಗೆ ಎನ್‌ಡಿಟಿವಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸಂದರ್ಭ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಎಸ್.ಸಿ. ಧರ್ಮಾಧಿಕಾರಿ ಮತ್ತು ಭಾರತಿ ಡಾಂಗ್ರೆ ಅವರ ಪೀಠವು,ಹೆಸರೇ ಸೂಚಿಸುವಂತೆ ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ(ಫೆಮಾ) ಮತ್ತು ಅಕ್ರಮ ಹಣ ವಹಿವಾಟು ತಡೆ ಕಾಯ್ದೆ(ಪಿಎಂಎಲ್‌ಎ)ಯಂತಹ ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತದೆ. ಇಂತಹ ಸಂಸ್ಥೆಗಳು ನಮ್ಮ ವಿದೇಶಿ ವಿನಿಮಯ ಸಂಪನ್ಮೂಲಗಳ ರಕ್ಷಕರಾಗಿವೆ. ಅವುಗಳನ್ನು ಪ್ರಜೆಗಳ ಹಕ್ಕುಗಳ ಪೋಷಕರನ್ನಾಗಿ ನೋಡಿದರೆ ಇಂತಹ ಪ್ರಮುಖ ಸಂಸ್ಥೆಗಳು ರಾಜಕಾರಣಿಗಳ ಕೈಗೊಂಬೆಗಳಾಗಿವೆ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವಂತಹ ರೀತಿಯಲ್ಲಿ ತಾವು ನಡೆದುಕೊಳ್ಳಬಾರದು ಎನ್ನುವುದನ್ನು ಅಧಿಕಾರದಲ್ಲಿರುವವರು ಮತ್ತು ಪ್ರತಿಪಕ್ಷದಲ್ಲಿರುವವರು ತಿಳಿದುಕೊಳ್ಳಬೇಕಿದೆ ಎಂದು ಹೇಳಿತು.

ರಾಜಕೀಯ ಧುರೀಣರು ಇಡಿ,ಸಿಬಿಐ ಮತ್ತು ಆರ್‌ಬಿಐನಂತಹ ಅತ್ಯುನ್ನತ ಸಂಸ್ಥೆಗಳ ಶಾಸನಾತ್ಮಕ ಸ್ಥಾನಮಾನವನ್ನು ಕಡೆಗಣಿಸುತ್ತಿದ್ದಾರೆ ಎಂದು ಎನ್‌ಡಿಟಿವಿ ಪರ ವಕೀಲ ಜನಕ್ ದ್ವಾರಕಾದಾಸ್ ಆರೋಪಿಸಿದ ಬಳಿಕ ತನ್ನ ನೋವು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ ಪೀಠವು,ಇದನ್ನು ಒಪ್ಪಿಕೊಳ್ಳಲು ಯಾವುದೇ ಸಾಕ್ಷಾಧಾರಗಳು ಇಲ್ಲವಾದರೂ ಅರ್ಜಿದಾರರಂತಹ ಪಕ್ಷಗಳು ಈ ಸಂಸ್ಥೆಗಳ ಸ್ವಾತಂತ್ರ್ಯ ಮತ್ತು ನಿಷ್ಪಕ್ಷತೆಯನ್ನು ಶಂಕಿಸಿರುವುದು ಅತ್ಯಂತ ಹತಾಶೆಯನ್ನುಂಟು ಮಾಡಿದೆ. ಇಡಿ,ಸಿಬಿಐ ಮತ್ತು ಆರ್‌ಬಿಐನಂತಹ ಉನ್ನತ ಸಂಸ್ಥೆಗಳೂ ನಮ್ಮ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಾಗಿವೆ. ಅವುಗಳ ಅರ್ಥಪೂರ್ಣ ಅಸ್ತಿತ್ವದಲ್ಲಿ ನಮ್ಮ ಸುರಕ್ಷತೆ ಮತ್ತು ನಮ್ಮ ಕಾನೂನು ಹಕ್ಕುಗಳು ಇವೆ ಎನ್ನುವುದನ್ನು ನಾವು ಎಷ್ಟು ಬೇಗ ತಿಳಿದುಕೊಳ್ಳುತ್ತೇವೆಯೋ ಅಷ್ಟು ಒಳ್ಳೆಯದು ಎಂದು ಹೇಳಿತು.

ಎನ್‌ಡಿಟಿವಿ ವಿರುದ್ಧ ಫೆಮಾ ಉಲ್ಲಂಘನೆಯ ಆರೋಪಗಳ ಇತ್ಯರ್ಥಕ್ಕಾಗಿ ಕಾನೂನು ಕ್ರಮಗಳನ್ನು ಸ್ಥಗಿತಗೊಳಿಸುವಂತೆ ಆರ್‌ಬಿಐಗೆ ಇಡಿ ಮಾಡಿಕೊಂಡಿದ್ದ ಮನವಿಯನ್ನು ತಳ್ಳಿಹಾಕಿದ ಸಂದರ್ಭ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News