ರಕ್ತ ಹೆಪ್ಪುಗಟ್ಟುವಿಕೆಯ ಕುರಿತು ನಿಮಗೆಷ್ಟು ಗೊತ್ತು....?

Update: 2018-07-08 12:06 GMT

ನಮ್ಮ ಶರೀರದಲ್ಲಿ ರಕ್ತ ಹೆಪ್ಪುಗಟ್ಟಲು ಯಾರದೇ ಅಪ್ಪಣೆ ಬೇಕಿಲ್ಲ. ಅದು ತನ್ನಿಂತಾನೇ ಸಂಭವಿಸುತ್ತದೆ. ಹೀಗಾದಾಗ ಆಮ್ಲಜನಕದ ಪೂರೈಕೆಗೆ ತಡೆಯುಂಟಾಗುತ್ತದೆ ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯುವಿನಂತಹ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಕ್ತ ಹೆಪ್ಪುಗಟ್ಟುವಿಕೆಯ ಕುರಿತು ಕೆಲವು ಆಸಕ್ತಿಕರ ಮಾಹಿತಿಗಳು ಇಲ್ಲಿವೆ.......

ಒಂದು ರೀತಿಯಲ್ಲಿ ರಕ್ತ ಹೆಪ್ಪುಗಟ್ಟುವುದು ಒಳ್ಳೆಯದೇ. ನಮಗೆ ಗಾಯವುಂಟಾದಾಗ ರಕ್ತ ಸುರಿದರೂ ಬಳಿಕ ಅದು ಹೆಪ್ಪುಗಟ್ಟುತ್ತದೆ ಮತ್ತು ಇನ್ನಷ್ಟು ರಕ್ತಸ್ರಾವವಾಗುವುದು ನಿಲ್ಲುತ್ತದೆ. ಆದರೆ ಅಗತ್ಯವಿಲ್ಲದಿದ್ದಾಗಲೂ ರಕ್ತ ಹೆಪ್ಪುಗಟ್ಟುತ್ತದೆ ಮತ್ತು ಇದು ಗಂಭೀರ ಸಮಸ್ಯೆಗಳನ್ನುಂಟು ಮಾಡುತ್ತದೆ.

ರಕ್ತ ಹೆಪ್ಪುಗಟ್ಟುವುದು ಎರಡು ವಿಧಗಳಲ್ಲಿ ನಡೆಯುತ್ತದೆ. ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಿದಾಗ ಶರೀರದ ಪ್ರಮುಖ ಅಂಗಾಂಗಗಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಲ್ಲಿ ತಡೆಯುಂಟಾಗುತ್ತದೆ ಮತ್ತು ಇದರಿಂದ ಅಂಗಾಂಶಗಳಿಗೆ ಗಂಭೀರ ಹಾನಿಯುಂಟಾಗುತ್ತದೆ. ಈ ವಿಧದ ರಕ್ತ ಹೆಪ್ಪುಗಟ್ಟುವಿಕೆ ಹೃದಯ ಅಥವಾ ಮಿದುಳಿನಲ್ಲಿಯೂ ಉಂಟಾಗಬಹುದು ಮತ್ತು ಹೃದಯಾಘಾತ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ.

ಇನ್ನೊಂದು ವಿಧದ ರಕ್ತ ಹೆಪ್ಪುಗಟ್ಟುವಿಕೆ ಕಾಲಿನ ಅಭಿಧಮನಿಗಳಲ್ಲಿ ಉಂಟಾಗುತ್ತದೆ. ಇದನ್ನು ಡೀಪ್ ವೇನ್ ಥ್ರೊಂಬೊಸಿಸ್(ಡಿವಿಟಿ) ಅಥವಾ ಆಳವಾದ ರಕ್ತನಾಳ ಹೆಪ್ಪುಗಟ್ಟುವಿಕೆ ಎನ್ನಲಾಗುತ್ತದೆ. ಇದು ನಿಧಾನವಾಗಿ ಸಂಭವಿಸುತ್ತದೆ,ಹೀಗಾಗಿ ಲಕ್ಷಣಗಳು ಸ್ಪಷ್ಟವಾಗಿರುವುದಿಲ್ಲ. ಕಾಲಿನ ಆಳದಲ್ಲಿ ರಕ್ತ ಹೆಪ್ಪುಗಟ್ಟಿದಾಗ ನೋವು,ಬಿಸಿಯ ಅನುಭವ,ಚರ್ಮ ಕೆಂಪಾಗುವಿಕೆ ಮತ್ತು ಕಾಲಿನ ಕೆಳಭಾಗದಲ್ಲಿ ಊತದಂತಹ ಲಕ್ಷಣಗಳು ಕಂಡು ಬರುತ್ತವೆ.

ವಿಶ್ವಾದ್ಯಂತ ಸಂಭವಿಸುವ ಸಾವುಗಳಲ್ಲಿ ಶೇ.25ರಷ್ಟು ಸಾವುಗಳಿಗೆ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯು ಕಾರಣವಾಗಿದೆ. ಹೃದಯ ವೈಫಲ್ಯದಂತಹ ಅಪಾಯವನ್ನು ಹೊಂದಿರುವ ವ್ಯಕ್ತಿಗಳಲ್ಲಿ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟುವುದು ಇನ್ನಷ್ಟು ಅಪಾಯಕ್ಕೆ ಕಾರಣವಾಗುತ್ತದೆ. ಅಂಗವೈಕಲ್ಯ ಮತ್ತು ರೋಗ ಹರಡುವಿಕೆಗೂ ಇದು ಕಾರಣವಾಗಬಲ್ಲದು.

ಶ್ವಾಸಕೋಶಗಳಲ್ಲಿ ಅಥವಾ ರಕ್ತನಾಳಗಳಲ್ಲಿ ರಕ್ತವು ಹೆಪ್ಪುಗಟ್ಟಿದಾಗ ಆರಂಭದಲ್ಲಿ ಅದರ ಲಕ್ಷಣಗಳು ಗಮನಕ್ಕೆ ಬರುವುದಿಲ್ಲ. ಕಾಲಿನಲ್ಲಿ ಅಥವಾ ತೋಳಿನಲ್ಲಿ ಊತ,ಊದಿಕೊಂಡ ಭಾಗವು ಬಿಸಿಯಾದಂತೆ ಅನ್ನಿಸುವುದು,ನಡೆಯುವಾಗ ಅಥವಾ ನಿಂತುಕೊಂಡಾಗ ಕಾಲಿನಲ್ಲಿ ನೋವು,ಚರ್ಮವು ಕೆಂಪಾಗುವುದು, ತೋಳುಗಳು ಮತ್ತು ಕಾಲುಗಳಲ್ಲಿಯ ನರಗಳು ಉಬ್ಬಿಕೊಂಡಿರುವುದು ಇವೆಲ್ಲ ಡಿವಿಟಿಯ ಲಕ್ಷಣಗಳಾಗಿವೆ.

ಕ್ಯಾನ್ಸರ್‌ಗೆ,ವಿಶೇಷವಾಗಿ ಹೊಟ್ಟೆಯ ಕ್ಯಾನ್ಸರ್‌ಗೆ ನಡೆಸುವ ಶಸ್ತ್ರಚಿಕಿತ್ಸೆಗಳು ರಕ್ತ ಹೆಪ್ಪುಗಟ್ಟುವುದಕ್ಕೆ ಕಾರಣವಾಗುತ್ತವೆ. ಸುದೀರ್ಘ ಕಾಲ ಚಲನವಲನ ವಿಲ್ಲದಿರುವುದು,ಮಂಡಿ,ಪೃಷ್ಠ ಅಥವಾ ಕ್ಯಾನ್ಸರ್ ಶಸ್ತ್ರಚಿಕಿತ್ಸೆ,ರಕ್ತ ಹೆಪ್ಪುಗಟ್ಟುವಿಕೆಯ ಕುಟುಂಬದ ಇತಿಹಾಸವಿದ್ದರೆ,ಎಸ್ಟ್ರೋಜೆನ್ ಆಧರಿತ ಜನನ ನಿಯಂತ್ರಣ ಮಾತ್ರೆಗಳ ಬಳಕೆ,ಬೊಜ್ಜು,ಧೂಮ್ರಪಾನ,ಮದ್ಯಪಾನ,ಗರ್ಭಾವಸ್ಥೆ ಅಥವಾ ಇತ್ತೀಚಿಗೆ ಹೆರಿಗೆಯಾಗಿದ್ದರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವು ಹೆಚ್ಚಾಗಿರುತ್ತದೆ.

ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ಪಲ್ಮನರಿ ಎಂಬಾಲಿಸಂ ಎಂದು ಕರೆಯಲಾಗುತ್ತದೆ. ಇದು ವಿಶ್ವಾದ್ಯಂತ ಆಸ್ಪತ್ರೆಗಳಲ್ಲಿ ಸಂಭವಿಸುವ ಸಾವುಗಳಿಗೆ ಅತ್ಯಂತ ಸಾಮಾನ್ಯ ಕಾರಣವಾಗಿದೆ. ಕಾಲು ಅಥವಾ ಶ್ವಾಸಕೋಶಗಳಲ್ಲಿ ರಕ್ತವನ್ನು ಹೆಪ್ಪುಗಟ್ಟಿಸುವ ವೇನಸ್ ಥ್ರೊಂಬೊಎಂಬಾಲಿಸಂ ಜನರನ್ನು ಸಾವಿನ ಮಡಲಿಗೆ ತಳ್ಳುತ್ತದೆ.

ಶೇ.85ರಷ್ಟು ಪಾರ್ಶ್ವವಾಯು ಪ್ರಕರಣಗಳಿಗೆ ರಕ್ತ ಹೆಪ್ಪುಗಟ್ಟುವಿಕೆಯು ಕಾರಣವಾಗಿದೆ. ರಕ್ತ ಹೆಪ್ಪುಗಟ್ಟುವಿಕೆಯಿಂದ ಮಿದುಳಿಗೆ ರಕ್ತ ಅಥವಾ ಆಮ್ಲಜನಕದ ಪೂರೈಕೆಗೆ ಅಡ್ಡಿಯುಂಟಾದರೆ ಪಾರ್ಶ್ವವಾಯು ಉಂಟಾಗುತ್ತದೆ. ಶರೀರದ ಇನ್ನೊಂದು ಭಾಗದಲ್ಲಿ ರಕ್ತವು ಹೆಪ್ಪುಗಟ್ಟಿ ಅದು ಮಿದುಳಿನತ್ತ ಸಾಗಿದರೂ ಪಾರ್ಶ್ವವಾಯು ಸಂಭವಿಸಬಹುದು. ಬೊಜ್ಜು,ಹೆಚ್ಚಿನ ರಕ್ತದೊತ್ತಡ,ಅನಿಯಮಿತ ಎದೆಬಡಿತ ಇತ್ಯಾದಿಗಳು ಇದಕ್ಕೆ ಕಾರಣವಾಗುತ್ತವೆ.

ಹೃದಯದ ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟಿದರೆ ಸ್ನಾಯುಗಳು ಆಮ್ಲಜನಕ ಮತ್ತು ಪೌಷ್ಟಿಕಾಂಶಗಳಿಂದ ವಂಚಿತಗೊಳ್ಳುತ್ತವೆ ಹಾಗೂ ಹೃದಯಾಘಾತ ಉಂಟಾಗುತ್ತದೆ.

ಉಸಿರಾಟದಲ್ಲಿ ತೊಂದರೆ,ಎದೆನೋವು,ಹೃದಯ ಬಡಿತ ತೀವ್ರಗೊಳ್ಳುವುದು ಮತ್ತು ಬಳಲಿಕೆ ಇವು ಶ್ವಾಸಕೋಶಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಲಕ್ಷಣಗಳಾಗಿವೆ ಮತ್ತು ಸಕಾಲದಲ್ಲಿ ಗುರುತಿಸದಿದ್ದರೆ ಸಾವು ಸಂಭವಿಸಬಹುದು.

ಅಂದ ಹಾಗೆ,ನಾವು ಚಟುವಟಿಕೆಯಿಂದಿದ್ದರೆ ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಬಹುದು. ಆದರೆ ಹೆಚ್ಚಿನವರಿಗೆ ಈ ಬಗ್ಗೆ ಅರಿವು ಇಲ್ಲ ಎನ್ನುವುದು ನಿಜಕ್ಕೂ ದುರಂತವೇ ಸರಿ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News