ಜಪಾನ್: ಭಾರೀ ಮಳೆಗೆ 76 ಮಂದಿ ಬಲಿ

Update: 2018-07-08 17:11 GMT

ಟೋಕಿಯೊ, ಜು.8: ಜಪಾನ್‌ನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ನದಿಗಳು ಉಕ್ಕೇರಿ ಹರಿದು ಉಂಟಾಗಿರುವ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ ರವಿವಾರ 76ಕ್ಕೆ ತಲುಪಿದೆ ಎಮದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಒಂದೆರಡು ದಿನ ಮಳೆಯ ಅಬ್ಬರ ಹೀಗೆಯೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಜಪಾನ್‌ನಲ್ಲಿ ವಾರ್ಷಿಕವಾಗಿ ಜುಲೈ ತಿಂಗಳಲ್ಲಿ ಸುರಿಯುವ ಮಳೆಯ ಪ್ರಮಾಣಕ್ಕಿಂತ ಈ ಬಾರಿ ಮೂರು ಪಟ್ಟು ಅಧಿಕ ಮಳೆ ಸುರಿದಿದ್ದು ಇದರಿಂದ ಭೂಕುಸಿತಗಳು, ಪ್ರವಾಹಗಳು ಸಂಭವಿಸಿ ಜನಜೀವನ ಅಸ್ತವ್ಯಸ್ತಗೊಳಿಸಿದೆ. ಸಾವಿರಾರು ಜನರು ತಮ್ಮ ಮನೆಯಿಂದ ಹೊರಬರಲಾಗದೆ ಚಡಪಡಿಸುತ್ತಿದ್ದರೆ, ನೆರೆಪೀಡಿತ ಪ್ರದೇಶಗಳಲ್ಲಿ ಸಾವಿರಾರು ಜನರು ತಮ್ಮ ಮನೆಗಳ ತಾರಸಿ ಮೇಲೆ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸೈನಿಕರು ಕುರಶಿಕಿ ಮತ್ತು ಹಿರೊಶಿಮಗಳಲ್ಲಿ ಜನರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಮಧ್ಯೆ ಒಂಬತ್ತು ವರ್ಷದ ಬಾಲಕನೊಬ್ಬ ನಾಪತ್ತೆಯಾಗಿದ್ದು ಆತನ ಶೋಧಕಾರ್ಯ ಮುಂದುವರಿದಿದೆ. ಬಾಲಕನ ಮನೆಯ ಸಮೀಪ ಭೂಕುಸಿತ ಸಂಭವಿಸಿ ಮೂರು ಮಂದಿ ಸಾವನ್ನಪ್ಪಿದ್ದರು. ಈ ಘಟನೆಯ ನಂತರ ಬಾಲಕ ನಾಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.

ಜಪಾನ್ ಸರಕಾರವು ಪ್ರಧಾನ ಮಂತ್ರಿ ಕಚೇರಿಯಲ್ಲಿ ತುರ್ತು ನಿರ್ವಹಣಾ ಕೇಂದ್ರವನ್ನು ರಚಿಸಿದೆ ಮತ್ತು ಸೇನೆ, ಪೊಲೀಸ್ ಹಾಗೂ ಅಗ್ನಿಶಾಮಕ ದಳದಿಂದ ಸುಮಾರು 54,000 ಮಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News