ನೋಟ್ ಬ್ಯಾನ್ ಬಳಿಕ ಹೊಸ ನೋಟುಗಳ ಸಾಗಣೆಗೆ 29 ಕೋ.ರೂ. ವೆಚ್ಚ: ಆರ್‌ಟಿಐ ಮಾಹಿತಿ

Update: 2018-07-08 18:26 GMT

ಹೊಸದಿಲ್ಲಿ, ಜು.8: ನೋಟು ಅಮಾನ್ಯಗೊಳಿಸಿದ ಬಳಿಕ ಹೊಸದಾಗಿ ಮುದ್ರಿಸಿದ ಕರೆನ್ಸಿ ನೋಟುಗಳನ್ನು ಸಾಗಿಸಲು ವಾಯುಪಡೆಯ ಅತ್ಯಾಧುನಿಕ ಸಾರಿಗೆ ವಿಮಾನ ಸಿ-17 ಮತ್ತು ಸಿ-130 ಜೆ ಸೂಪರ್ ಹರ್ಕ್ಯುಲಿಸ್‌ಗಳನ್ನು ಬಳಸಲಾಗಿದ್ದು ಇದಕ್ಕೆ 29.41 ಕೋಟಿ ರೂ.ವೆಚ್ಚವಾಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಉತ್ತರದಲ್ಲಿ ತಿಳಿಸಲಾಗಿದೆ.

500 ಮತ್ತು 1,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಗೊಳಿಸಿರುವುದಾಗಿ 2016ರ ನವೆಂಬರ್ 8ರಂದು ಪ್ರಧಾನಿ ಮೋದಿ ಘೋಷಿಸಿದ್ದರು. ಇದರಿಂದ ಚಲಾವಣೆಯಲ್ಲಿದ್ದ ಶೇ.86ರಷ್ಟು ಕರೆನ್ಸಿಗಳು ಅಮಾನ್ಯಗೊಂಡಿತ್ತು. ತಕ್ಷಣ 2,000 ರೂ. ಮತ್ತು ಹೊಸ 500 ರೂ.ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಬೇಕಿದ್ದು ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪೈ.ಲಿ. ಸಂಸ್ಥೆಯಲ್ಲಿ ಹೊಸದಾಗಿ ಮುದ್ರಿಸಲಾಗುವ ಕರೆನ್ಸಿ ನೋಟುಗಳನ್ನು ಬ್ಯಾಂಕ್‌ಗಳಿಗೆ ರವಾನಿಸಲು ವಾಯುಪಡೆಯ ವಿಮಾನವನ್ನು ಬಳಸಲಾಗಿತ್ತು.

ಪ್ರಿಂಟಿಂಗ್ ಪ್ರೆಸ್‌ಗಳಿಂದ ದೇಶದ ವಿವಿಧೆಡೆ ನೋಟುಗಳ ಬಂಡಲ್‌ಗಳನ್ನು ತಲುಪಿಸಲು ವಿಮಾನ 91 ಬಾರಿ ಹಾರಾಟ ನಡೆಸಿದೆ. ಇದಕ್ಕೆ ಒಟ್ಟು 29.41 ಕೋಟಿ ರೂ. ವೆಚ್ಚವಾಗಿದ್ದು, ಇದರ ಬಿಲ್ ಅನ್ನು ಸರಕಾರದ ಅಧೀನದಲ್ಲಿರುವ ಸೆಕ್ಯುರಿಟಿ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪೈ.ಲಿ. ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಐಎಎಫ್ ತಿಳಿಸಿದೆ.

 ನೌಕಾಸೇನೆಯ ನಿವೃತ್ತ ಅಧಿಕಾರಿ ಕ ಲೋಕೇಶ್ ಭಾತ್ರಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ವಾಯುಪಡೆ ನೀಡಿದ ಉತ್ತರದಲ್ಲಿ ಈ ಮಾಹಿತಿಯಿದೆ. ರಕ್ಷಣಾ ಪಡೆಯ ವಿಮಾನಗಳನ್ನು ಬಳಸುವ ಬದಲು ನಾಗರಿಕ ಸಾರಿಗೆ ವಿಮಾನಗಳನ್ನು ಬಳಸಿದ್ದರೆ ವೆಚ್ಚ ಕಡಿಮೆಯಾಗುತ್ತಿತ್ತು ಎಂದು ಭಾತ್ರಾ ತಿಳಿಸಿದ್ದಾರೆ. ನೋಟು ರದ್ದತಿಯ ಘೋಷಣೆ ಮಾಡುವ ಮೊದಲು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರೆ ನೋಟು ಅಭಾವದ ಪರಿಸ್ಥಿತಿ ಹಾಗೂ ದುಬಾರಿ ವೆಚ್ಚದಲ್ಲಿ ನೋಟುಗಳನ್ನು ಸಾಗಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News