ತ್ರಿವಳಿ ತಲಾಕ್ ವಿರುದ್ಧ ಜಾಗೃತಿಗೆ ದೇಶಾದ್ಯಂತ ಪರ್ಸನಲ್ ಲಾ ಬೋರ್ಡ್ ನಿಂದ ಮಧ್ಯಸ್ಥಿಕೆ ಕೇಂದ್ರಗಳ ಸ್ಥಾಪನೆ

Update: 2018-07-09 05:59 GMT

ಹೊಸದಿಲ್ಲಿ, ಜು.9: ಮುಸ್ಲಿಮರಲ್ಲಿ ಶರಿಯಾ ಕಾನೂನು ಪರವಾಗಿ ಅಭಿಯಾನ ನಡೆಸುತ್ತಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ), ದೇಶಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ದಾರುಲ್ ಖಝ ಹೆಸರಿನ ಮಧ್ಯಸ್ಥಿಕೆ ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಿದೆ ಎಂದು ಮಂಡಳಿಯ ಹಿರಿಯ ಸದಸ್ಯ ಝಫರ್ಯಾಬ್ ಜಿಲಾನಿ ಪ್ರಕಟಿಸಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನು (ಶರೀಅತ್) ಅನ್ವಯಿಕೆ ಕಾಯ್ದೆ- 1937ಕ್ಕೆ ಅನುಗುಣವಾದ ಅಂಶಗಳನ್ನು ದಾರುಲ್ ಖಝ ಕೇಂದ್ರಗಳು ನಿರ್ವಹಿಸಲಿವೆ. ಜನಸಾಮಾನ್ಯರು ವೈವಾಹಿಕ ಹಾಗೂ ಆಸ್ತಿ ವಿವಾದಗಳನ್ನು ಅಂಥ ಕೇಂದ್ರಗಳಿಗೆ ತರಬಹುದಾಗಿದೆ.

"ಈ ಕೇಂದ್ರಗಳು ದಂಪತಿಗಳಿಗೆ ತ್ರಿವಳಿ ತಲಾಕ್ ವಿರುದ್ಧ ಸಲಹೆ ನೀಡಲಿದೆ. ಇದು ಇಸ್ಲಾಂ ಕಾನೂನಿನ ಅನ್ವಯವೂ ಕೆಟ್ಟದು ಹಾಗೂ ದೇಶದ ಕಾನೂನು ಕೂಡಾ ಇದನ್ನು ನಿಷೇಧಿಸಿದೆ ಎಂಬ ಅಂಶವನ್ನು ಮನದಟ್ಟು ಮಾಡಲಿದೆ" ಎಂದು ಜಿಲಾನಿ ವಿವರಿಸಿದ್ದಾರೆ.

ಲಕ್ನೋ, ಗುವಾಹತಿ, ಪಾಟ್ನಾ ಮತ್ತು ಹೈದರಾಬಾದ್‌ನಂಥ ನಗರಗಳಲ್ಲಿ ಈಗಾಗಲೇ ಇಂಥ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಮುಖ್ಯ ಕಾರ್ಯವೆಂದರೆ ಶರಿಯಾ ಕಾನೂನು ಜಾರಿಯ ಬಗ್ಗೆ ಸಲಹೆ ನೀಡುವುದು ಮತ್ತು ಕೌನ್ಸಿಲಿಂಗ್ ನಿರ್ವಹಿಸುವುದು.

ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಈ ಕೇಂದ್ರಗಳನ್ನು ನಡೆಸಲು ಕಾನೂನಿನಲ್ಲಿ ಅವಕಾಶವಿದ್ದು, ಸಂವಿಧಾನಾತ್ಮಕವಾಗಿ ಇದು ಪರ್ಯಾಯ ಕಾನೂನು ವ್ಯವಸ್ಥೆ ಎನಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2010ರಲ್ಲಿ ವಿಶ್ವಮದನ್‌ ಲೋಚನ್ ಎಂಬುವವರು ಈ ಕೇಂದ್ರಗಳನ್ನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಇದು ಪರ್ಯಾಯ ಕಾನೂನು ವ್ಯವಸ್ಥೆ ಅಲ್ಲ ಎನ್ನುವುದನ್ನು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದು ಜಿಲಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News