ಕಾಂಗ್ರೆಸ್ ಪ್ರಜಾಪ್ರಭುತ್ವವನ್ನು ರಕ್ಷಿಸಿದ್ದರಿಂದ ಚಾಯ್ ವಾಲಾ ಪ್ರಧಾನಿಯಾದರು: ಖರ್ಗೆ

Update: 2018-07-09 08:58 GMT

ಮುಂಬೈ, ಜು.9: ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವವನ್ನು ರಕ್ಷಿಸಿರುವ ಕಾರಣವೇ 'ಚಾಯ್ ವಾಲಾ'ನೊಬ್ಬ ದೇಶದ ಪ್ರಧಾನಿಯಾಗುವಂತಾಯಿತು ಎಂದು ಹೇಳುವ ಮೂಲಕ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಯನ್ನು ವ್ಯಂಗ್ಯವಾಡಿದ್ದಾರೆ.

‘‘ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ದೇಶಕ್ಕೇನು ಮಾಡಿದೆ ಎಂದು ಪ್ರಧಾನಿ ಮೋದಿ ಪ್ರತಿಯೊಂದು ಸಮಾರಂಭದಲ್ಲೂ ಪ್ರಶ್ನಿಸುತ್ತಾರೆ. ನಾವು ಪ್ರಜಾಪ್ರಭುತ್ವವನ್ನು ಸಂರಕ್ಷಿಸಿದ್ದರಿಂದಲೇ ಅವರಂತಹ ಚಾಯ್ ವಾಲಾ ಪ್ರಧಾನಿಯಾಗಿದ್ದಾರೆ’’ಎಂದರು ಖರ್ಗೆ.

‘‘ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಚಾರಿತ್ರ್ಯ ಹನನ ಸತತವಾಗಿ ನಡೆಯುತ್ತಿದೆ. ಇದು ಬಿಜೆಪಿಯ ಉದ್ದೇಶಪೂರ್ವಕ ದಾಳಿ. ಕಾಂಗ್ರೆಸ್ ಒಂದು ಕುಟುಂಬದಂತೆ, ನಾವೆಲ್ಲರೂ ಅದರ ಸದಸ್ಯರು’’ ಎಂದು ಖರ್ಗೆ ಹೇಳಿದರು.

‘‘43 ವರ್ಷಗಳ ಹಿಂದಿನ ವಿಷಯವಾದ ತುರ್ತು ಪರಿಸ್ಥಿತಿಯ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಕಳೆದ ನಾಲ್ಕು ವರ್ಷಗಳ ಅಘೋಷಿತ ತುರ್ತು ಪರಿಸ್ಥಿತಿಯ ಬಗ್ಗೆ ಅವರೇನು ಹೇಳುತ್ತಾರೆ? ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಕೃಷಿ ಯೋಜನೆಗಳು ವಿಫಲವಾಗುತ್ತಿವೆ, ರೈತರಿಗೆ ಸಾಲ ಸಿಗುತ್ತಿಲ್ಲ ಹಾಗೂ ಉದ್ಯಮ ರಂಗ ಹಿನ್ನಡೆ ಸಾಧಿಸಿದೆ’’ಎಂದು ಅವರು ಆರೋಪಿಸಿದರು.

‘‘ಮೋದಿ ಸರಕಾರ ಜಾಹೀರಾತುಗಳಿಗೆ ಮಾಡುತ್ತಿರುವ ಖರ್ಚು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಸರಕಾರ ಕೆಳಗಿಳಿಸಲ್ಪಟ್ಟ ನಂತರವಷ್ಟೇ ಜನರ ಜೀವನದಲ್ಲಿ ಅಚ್ಛೇ ದಿನ್ ಬರುತ್ತದೆ’’ ಎಂದರು ಖರ್ಗೆ.

‘‘ಜತೆಯಾಗಿ ಬನ್ನಿ, ಜತೆಯಾಗಿ ಹೋರಾಡಿ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಗೆದ್ದರೆ ಅದು ಸಂಸತ್ ಚುನಾವಣೆಯಲ್ಲೂ ಜಯ ಗಳಿಸುವುದು. ಕೇಂದ್ರದಲ್ಲಿನ ಜಯ ಮಹಾರಾಷ್ಟ್ರವನ್ನು ಅವಲಂಬಿಸಿದೆ’’ ಎಂದು ಖರ್ಗೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News