ಪಾನ್ ಕಾರ್ಡ್ ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಕಡ್ಡಾಯವೇ?

Update: 2018-07-09 11:33 GMT

 ಆದಾಯ ತೆರಿಗೆ ಇಲಾಖೆಯ ಜಾಲತಾಣದಲ್ಲಿ ಲಭ್ಯವಿರುವ ಅಂಕಿಅಂಶಗಳಂತೆ 2018,ಮಾ.31ರವರೆಗೆ ಒಟ್ಟು 37.90 ಕೋಟಿ ಕಾಯಂ ಖಾತೆ ಸಂಖ್ಯೆ ಅಥವಾ ಪಾನ್ ವಿತರಿಸಲಾಗಿದೆ. ಈ ಪೈಕಿ ಶೇ.97.46ರಷ್ಟು ಪಾನ್ ಕಾರ್ಡ್‌ಗಳನ್ನು ವ್ಯಕ್ತಿಗಳಿಗೆ ನೀಡಲಾಗಿದೆ. ತಾವು ಆದಾಯ ತೆರಿಗೆ ರಿಟರ್ನ್(ಐಟಿಆರ್) ಸಲ್ಲಿಸಬೇಕಾಗುತ್ತದೆಯೇ ಎನ್ನುವುದು ಪಾನ್ ಹೊಂದಿರುವ ಹೆಚ್ಚಿನ ಜನರನ್ನು ಕಾಡುವ ಪ್ರಶ್ನೆಯಾಗಿದೆ. ಆದರೆ ನೀವು ಪಾನ್ ಹೊಂದಿದ್ದರೂ ನಿಮ್ಮ ವಾರ್ಷಿಕ ಆದಾಯವು ತೆರಿಗೆಗೆ ಅರ್ಹ ಆದಾಯ ಮಿತಿಯ ಒಳಗೇ ಇದ್ದರೆ ನೀವು ಐಟಿಆರ್ ಸಲ್ಲಿಸುವುದು ಕಡ್ಡಾಯವಲ್ಲ. ಆದರೆ ಐಟಿಆರ್ ಸಲ್ಲಿಸಲು ಪಾನ್ ಕಾರ್ಡ್ ಕಡ್ಡಾಯವಾಗಿದೆ. 2017-18ನೇ ಹಣಕಾಸು ವರ್ಷದಲ್ಲಿ ಸುಮಾರು 6.70 ಕೋಟಿ ಐಟಿಆರ್‌ಗಳು ಸಲ್ಲಿಕೆಯಾಗಿದ್ದು,ಇದು ಒಟ್ಟು ವಿತರಿಸಲಾಗಿರುವ ಪಾನ್ ಕಾರ್ಡ್‌ಗಳ ಸುಮಾರು ಶೇ.18ರಷ್ಟಾಗಿದೆ.

ನಿಮ್ಮ ಬಳಿ ಪಾನ್ ಇದ್ದರೆ ಐಟಿಆರ್ ಸಲ್ಲಿಕೆ ಯಾವಾಗ ಕಡ್ಡಾಯವಾಗುತ್ತದೆ?

 ಓರ್ವ ವ್ಯಕ್ತಿ,ಹಿಂದು ಅವಿಭಕ್ತ ಕುಟುಂಬ ಅಥವಾ ಯಾವುದೇ ಸಂಘ-ಸಂಸ್ಥೆಯಾಗಿರಲಿ,ವಾರ್ಷಿಕ ಒಟ್ಟು ಆದಾಯವು ತೆರಿಗೆ ಇಲಾಖೆಯು ನಿಗದಿಗೊಳಿಸರುವ ತೆರಿಗೆ ಮುಕ್ತ ಆದಾಯ ಮಿತಿಯನ್ನು ದಾಟಿದಾಗ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗುತ್ತದೆ. ಆದಾಯ ತೆರಿಗೆ ಕಾಯ್ದೆಯಡಿ ಯಾವುದೇ ವಿನಾಯಿತಿ ಮತ್ತು ಕಡಿತಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದ ಆದಾಯವು ವ್ಯಕ್ತಿಯ ಒಟ್ಟು ಆದಾಯವಾಗುತ್ತದೆ. 2018-19ನೇ ಸಾಲಿಗೆ 60 ವರ್ಷದೊಳಗಿನ ಪ್ರಾಯದ ವ್ಯಕ್ತಿಗಳಿಗೆ ಆದಾಯ ಮಿತಿಯು 2.50 ಲ.ರೂ.ಗಳಾಗಿದ್ದರೆ,61ರಿಂದ 80 ವರ್ಷ ಪ್ರಾಯದ ವ್ಯಕ್ತಿಗಳಿಗೆ ಮೂರು ಲ.ರೂ. ಮತ್ತು 80 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ವ್ಯಕ್ತಿಗಳಿಗೆ ಐದು ಲ.ರೂ. ಆಗಿದೆ. ಉದಾಹರಣೆಗೆ 60 ವರ್ಷದೊಳಗಿನ ವ್ಯಕ್ತಿಯು 2017-18ನೇ ಸಾಲಿಗೆ ವಾರ್ಷಿಕ 3.5 ಲ.ರೂ.ಗಳ ಆದಾಯವನ್ನು ಗಳಿಸಿದ್ದಾನೆ ಎಂದಿಟ್ಟುಕೊಳ್ಳೋಣ. ಈ ಪೈಕಿ 1.5 ಲ.ರೂ.ಗಳನ್ನು ಆತ ಭವಿಷ್ಯನಿಧಿ,ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆ,ಎಲ್‌ಐಸಿ ಪ್ರೀಮಿಯಂ ಇತ್ಯಾದಿ ಆದಾಯ ತೆರಿಗೆ ಕಾಯ್ದೆಯಡಿ ಕಡಿತಕ್ಕೆ ಅರ್ಹ ಯೋಜನೆಗಳಲ್ಲಿ ತೊಡಗಿಸಿದ್ದಾನೆ ಎಂದು ಭಾವಿಸೋಣ. ಕಡಿತಗಳ ಬಳಿಕ ಆತನ ಆದಾಯ 2.5ಲ.ರೂ.ಗಿಂತ ಕಡಿಮೆಯಾದರೂ ಆತ ಐಟಿಆರ್ ಸಲ್ಲಿಸುವುದು ಕಡ್ಡಾಯವಾಗುತ್ತದೆ. ಆದರೆ ಕಂಪನಿ ಅಥವಾ ಸಂಸ್ಥೆ ಆದಾಯವಿರಲಿ,ಇಲ್ಲದಿರಲಿ...ಐಟಿಆರ್ ಸಲ್ಲಿಸುವುದು ಕಡ್ಡಾಯವಾಗಿದೆ. ಕೆಲವು ಪ್ರಕರಣಗಳಲ್ಲಿ ಆತ/ಆಕೆ ವಿದೇಶಗಳಲ್ಲಿ ಬ್ಯಾಂಕ್ ಖಾತೆ ಅಥವಾ ಆಸ್ತಿ ಅಥವಾ ಹಣಕಾಸು ಹಿತಾಸಕ್ತಿ ಹೊಂದಿದ್ದಲ್ಲಿ ಆತ/ಆಕೆಯ ಆದಾಯ ನಿಗದಿತ ಮಿತಿಯೊಳಗೇ ಇದ್ದರೂ ಐಟಿಆರ್ ಸಲ್ಲಿಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News