ಸರಕಾರಿ ಶಾಲೆಗಳ ಮಾರಣಹೋಮ

Update: 2018-07-10 06:15 GMT

ಮತ್ತೆ ಸರಕಾರಿ ಶಾಲೆಗಳು ಸುದ್ದಿಯಲ್ಲಿವೆ. ಸರಕಾರಿ ಶಾಲೆಗಳು ಸುದ್ದಿಯಲ್ಲಿರುವುದು ಮುಚ್ಚುಗಡೆಯಾಗುವ ಸಂದರ್ಭದಲ್ಲಿ ಮಾತ್ರ. ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದ್ದು, ಇನ್ನಷ್ಟು ಸರಕಾರಿ ಶಾಲೆಗಳು ಮುಚ್ಚುಗಡೆಯಾಗುವ ಹಂತದಲ್ಲಿವೆೆ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್. ಮಹೇಶ್ ‘‘ಯಾವ ಕಾರಣಕ್ಕೂ ಸರಕಾರಿ ಶಾಲೆಗಳನ್ನು ಮುಚ್ಚುವುದಿಲ್ಲ’’ ಎಂದು ಭರವಸೆ ನೀಡಿದ್ದಾರೆ. ಈ ಹಿಂದಿನ ಸರಕಾರಗಳೂ ಇಂತಹದೇ ಹೇಳಿಕೆಗಳನ್ನು ನೀಡಿವೆಯಾದರೂ, ಸರಕಾರಿ ಶಾಲೆಗಳನ್ನು ಉಳಿಸುವುದಕ್ಕೆ ಅವಕ್ಕೆ ಸಾಧ್ಯವಾಗಲಿಲ್ಲ. ಸರಕಾರಗಳು ‘ನಾವು ಮುಚ್ಚುವುದಿಲ್ಲ’’ ಎಂದು ಹೇಳುತ್ತವೆ. ಅಂದರೆ ‘‘ಅದಾಗಿ ಮುಚ್ಚಿದರೆ ನಾವು ಹೊಣೆಯಲ್ಲ’’ ಎಂಬ ಧ್ವನಿಯನ್ನು ನೀಡುವ ಹೇಳಿಕೆಗಳು ಇವು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯೇ ಕಡಿಮೆಯಾಗ ತೊಡಗಿದರೆ, ಅವುಗಳನ್ನು ಯಾರೂ ಮುಚ್ಚಬೇಕಾಗಿಲ್ಲ. ಅವು ತನ್ನಷ್ಟಕ್ಕೇ ಮುಚ್ಚುತ್ತವೆ. ಇವು ನಮ್ಮ ರಾಜಕಾರಣಿಗಳಿಗೆ ಚೆನ್ನಾಗಿ ಗೊತ್ತಿದೆ. ಈ ನಾಡಿನಲ್ಲಿ ಯಾವುದೇ ಸರಕಾರಿ ಶಾಲೆ ತನ್ನಷ್ಟಕ್ಕೆ ಮುಚ್ಚಿದ್ದಿಲ್ಲ. ಅದು ಮುಚ್ಚುಗಡೆಯಾಗುವುದರ ಹಿಂದೆ ವ್ಯವಸ್ಥಿತ ಸಂಚಿದೆ. ಒಬ್ಬ ವ್ಯಕ್ತಿಗೆ ಅನ್ನಾಹಾರವನ್ನು ಸಿಗದಂತೆ ಮಾಡಿ, ಹಂತ ಹಂತವಾಗಿ ಅವನನ್ನು ಸಾಯಿಸುವುದು ಕೊಲೆಯೇ ಅಲ್ಲವೇ? ಸರಕಾರಿ ಶಾಲೆಗಳ ಸ್ಥಿತಿಯೂ ಇದೇ ಆಗಿದೆ.

ಸರಕಾರಿ ಶಾಲೆಗಳ ಮೂಲಭೂತ ವ್ಯವಸ್ಥೆಗಳನ್ನು ಹಂತಹಂತವಾಗಿ ನಾಶ ಮಾಡಿ, ಆಧುನಿಕ ದಿನಗಳಿಗೆ ಪೂರಕವಾಗಿ ಅದನ್ನು ಮೇಲೆತ್ತಲು ಯಾವ ಯೋಜನೆಗಳನ್ನೂ ಹಾಕಿಕೊಳ್ಳದೆ ದುರ್ಬಲಗೊಳಿಸುವ ಮೂಲಕ, ಸರಕಾರವೇ ಸಾಯಿಸುತ್ತಿದೆ. ತಮ್ಮ ಮಕ್ಕಳನ್ನು ಪೋಷಕರು ಶಾಲೆಗಳಿಗೆ ಕಳುಹಿಸುವುದು ಅವರ ಭವಿಷ್ಯ ಅತ್ಯುತ್ತಮವಾಗಬೇಕು, ಆಧುನಿಕ ದಿನಗಳ ಸವಾಲುಗಳನ್ನು ಎದುರಿಸಲು ಅವರು ಸಮರ್ಥರಾಗಬೇಕು ಎನ್ನುವ ಬಯಕೆಯಿಂದ. ಎಲ್ಲರಿಗೂ ತಮ್ಮ ತಮ್ಮ ಮಕ್ಕಳ ಭವಿಷ್ಯ ಅತಿ ಮುಖ್ಯ. ‘ಯಾವ ಶಾಲೆಗಳು ಅತ್ಯುತ್ತಮವಾದ ಶಿಕ್ಷಣವನ್ನು ನೀಡಲು ಸಮರ್ಥ’ ಎಂದು ಪೋಷಕರು ಭಾವಿಸುತ್ತಾರೆಯೋ ಅದೇ ಶಾಲೆಗಳಿಗೆ ಕಳುಹಿಸುತ್ತಾರೆ. ಒಂದು ವೇಳೆ ಸರಕಾರಿ ಶಾಲೆಗಳು ಆಧುನಿಕ ದಿನಗಳಿಗೆ ಪೂರಕವಾಗಿ ಶಿಕ್ಷಣವನ್ನು ನೀಡಲು ವಿಫಲವಾಗುತ್ತಿವೆ ಎಂಬ ಅನುಮಾನ ಬಂದರೆ ಅಲ್ಲಿಂದ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸಹಜವಾಗಿಯೇ ವರ್ಗಾಯಿಸುತ್ತಾರೆ. ಸರಕಾರಿ ಶಾಲೆಗಳ ಗುಣಮಟ್ಟವನ್ನು ಹಂತಹಂತವಾಗಿ ದುರ್ಬಲಗೊಳಿಸುವ ಮೂಲಕ, ಖಾಸಗಿ ಶಾಲೆಗಳನ್ನು ಪೋಷಕರಿಗೆ ಅನಿವಾರ್ಯವಾಗಿಸಿರುವುದರಲ್ಲಿ ಸರಕಾರದ ಪಾತ್ರ ಬಹುದೊಡ್ಡದು. ‘ಕಡಿಮೆ ಶುಲ್ಕ, ಬಿಸಿಯೂಟ, ಪುಕ್ಕಟೆ ಯೂನಿಫಾರ್ಮ್, ಪುಸ್ತಕ’ ಇತ್ಯಾದಿಗಳನ್ನು ಒದಗಿಸಿದರೂ ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸಲು ಸಿದ್ಧವಿಲ್ಲ ಎಂದರೆ ಅದರ ಹಿಂದೆ ಗಂಭೀರವಾದ ಕಾರಣ ಇರಲೇ ಬೇಕು. ಮತ್ತು ಆ ‘ಕಾರಣ’ದ ಹಿಂದಿರುವುದು ಸರಕಾರವೇ ಆಗಿದೆ. ಇಂದು ರಾಜ್ಯಾದ್ಯಂತ ಇರುವ ಖಾಸಗಿ ಶಾಲೆಗಳಿಗೆ ರಾಜಕಾರಣಿಗಳು, ಉದ್ಯಮಿಗಳು ಹಣ ಹೂಡಿಕೆ ಮಾಡಿದ್ದಾರೆ.

ಸರಕಾರಿ ಶಾಲೆಗಳು ಮುಚ್ಚಿದಷ್ಟೂ ಅದರ ಲಾಭ ಖಾಸಗಿ ಶಾಲೆಗಳಿಗೆ. ಸರಕಾರಿ ಶಾಲೆಗಳನ್ನು ಮೇಲೆತ್ತದಂತೆ ಸರಕಾರಕ್ಕೆ ಒಳ ಒತ್ತಡಗಳಿವೆ. ಆದುದರಿಂದಲೇ ಅದು, ಸರಕಾರಿ ಶಾಲೆಗಳನ್ನು ಮೇಲೆತ್ತಿದಂತೆ ನಟಿಸುತ್ತದೆಯೇ ಹೊರತು, ಮೇಲೆತ್ತಲು ಗಂಭೀರ ಕಾರ್ಯಕ್ರಮಗಳನ್ನು ಹಾಕಿಕೊಂಡಿಲ್ಲ. ಜೊತೆಗೆ, ಸರಕಾರಿ ಶಾಲೆಗಳು ಹೊಂದಿರುವ ಜಮೀನಿನ ಮೇಲೆ ಖಾಸಗಿ ಜನರ ಕಣ್ಣು ಬಿದ್ದಿವೆ. ಪರಿಣಾಮವಾಗಿ, ಹಲವು ಸರಕಾರಿ ಶಾಲೆಗಳು ಹಂತ ಹಂತವಾಗಿ ಮುಚ್ಚಲ್ಪಟ್ಟರೆ, ಕೆಲವು ಶಾಲೆಗಳನ್ನು ದತ್ತು ತೆಗೆದುಕೊಳ್ಳುವ ನಾಟಕ ನಡೆಯುತ್ತಿದೆ. ಕೆಲವು ಸಂಘ ಸಂಸ್ಥೆಗಳು, ಸಾಮಾಜಿಕ ಕಾರ್ಯಕರ್ತರು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಉತ್ತಮವಾಗಿ ಅದನ್ನು ನಡೆಸುತ್ತಿದ್ದಾರೆ ನಿಜ. ಇದೇ ಸಂದರ್ಭದಲ್ಲಿ ಕೆಲವು ಹಿತಾಸಕ್ತಿಗಳು ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ತಮ್ಮ ತಮ್ಮ ದುರುದ್ದೇಶಗಳನ್ನು ಸಾಧಿಸಲು ಕಾರ್ಯತಂತ್ರ ಹಮ್ಮಿಕೊಂಡಿದ್ದಾರೆ.

ಸಂಘಪರಿವಾರವೂ ತನ್ನ ಚಿಂತನೆಗಳನ್ನು ಸರಕಾರಿ ಶಾಲೆಯೊಳಗೆ ತೂರಿಸಲು ಈ ‘ದತ್ತು ಯೋಜನೆ’ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದೆ. ಒಂದು ರೀತಿಯಲ್ಲಿ ತಂದೆ, ತಾಯಿಯಿದ್ದು ಸರಕಾರಿ ಶಾಲೆಗಳು ಯಾರಿಗೂ ಬೇಡದ ಅನಾಥ ಮಕ್ಕಳಂತಾಗಿವೆ. ಇಂದು ಎಲ್‌ಕೆಜಿ, ಒಂದನೇ ತರಗತಿಗಳ ಕಲಿಕೆಯೇ ಪೋಷಕರಿಗೆ ತೀರಾ ದುಬಾರಿಯಾಗುತ್ತಿದೆ. ಒಂದು ವೇಳೆ ಸರಕಾರಿ ಶಾಲೆಗಳು ಮುಚ್ಚಿದ್ದೇ ಆದರೆ, ಬಿಪಿಎಲ್ ಅಡಿಯಲ್ಲಿ ಬರುವ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ಸಂಪೂರ್ಣ ವಂಚಿತರಾಗಬೇಕಾಗುತ್ತದೆ. ಅಷ್ಟೇ ಅಲ್ಲ, ಮಧ್ಯಮವರ್ಗದ ಜನರೂ ಪರೋಕ್ಷವಾಗಿ ದುಬಾರಿ ಶಿಕ್ಷಣದ ಬಲಿಪಶುಗಳಾಗಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈಗ ಅಳಿದಿರುವ ಕನ್ನಡ, ಮುಂದಿನ ತಲೆಮಾರಿಗೆ ಶಾಶ್ವತವಾಗಿ ಅಳಿಸಿಹೋಗಲಿದೆ. ಸಾಮಾಜಿಕ ನ್ಯಾಯ ತನ್ನ ಗುರಿಯನ್ನು ಸಾಧಿಸಬೇಕಾದರೆ ಸರಕಾರಿ ಶಾಲೆಗಳು ಉಳಿಯಲೇಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಳ್ಳವರಿಗೊಂದು ಶಾಲೆ, ಇಲ್ಲದವರಿಗೊಂದು ಶಾಲೆ ಎನ್ನುವ ಸ್ಪಷ್ಟ ವಿಭಜನೆ ನಡೆಯಲಿದೆ. ಈ ವಿಭಜನೆ ಸಮಾಜದಲ್ಲಿ ಉಳ್ಳವರು ಮತ್ತು ಇಲ್ಲದವರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಲಿದೆ. ತಳಸ್ತರದ ಜನರ ಬದುಕಿನ ಮೇಲೆ ಒಂದಿಷ್ಟು ಕಾಳಜಿಯಿದ್ದರೂ ಸರಕಾರ, ಸರಕಾರಿ ಶಾಲೆಗಳನ್ನು ಮುಚ್ಚಲು ಅವಕಾಶವನ್ನು ನೀಡಲೇಬಾರದು.

ಇಂದು ಇಂಗ್ಲಿಷ್ ಕಾಲದ ಬೇಡಿಕೆ. ಆ ಬೇಡಿಕೆಯನ್ನು ಸರಕಾರಿ ಶಾಲೆಗಳು ಪರಿಣಾಮಕಾರಿಯಾಗಿ ತುಂಬಲು ಯಶಸ್ವಿಯಾದರೆ, ಖಂಡಿತವಾಗಿಯೂ ಸರಕಾರಿ ಶಾಲೆ ಉಳಿಯುತ್ತದೆ. ದೈನಂದಿನ ಬದುಕಿನಲ್ಲಿ ಇಂಗ್ಲಿಷ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿರುವ ಈ ದಿನಗಳಲ್ಲಿ ಕನ್ನಡದ ಜೊತೆಗೆ ಇಂಗ್ಲಿಷ್ ಎನ್ನುವ ತಂತ್ರವನ್ನು ಸರಕಾರಿ ಶಾಲೆಗಳು ಪರಿಣಾಮಕಾರಿಯಾಗಿ ಅಳವಡಿಸಬೇಕು. ಇದು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಮಕ್ಕಳು ಇಂಗ್ಲಿಷ್ ಕಲಿತಂತಾಗುತ್ತದೆ: ಜೊತೆಗೆ ಕನ್ನಡವೂ ಉಳಿದಂತಾಗುತ್ತದೆ. ಅಷ್ಟೇ ಅಲ್ಲ, ತಳಸ್ತರದ ಮಕ್ಕಳಿಗೂ ಇಂಗ್ಲಿಷ್ ವಿದ್ಯಾಭ್ಯಾಸ ದೊರೆತಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಮೊತ್ತ ಮೊದಲು, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್, ಕನ್ನಡದ ಮೇಲೆ ಪ್ರಾವೀಣ್ಯವಿರುವ ಗುಣಮಟ್ಟದ ಶಿಕ್ಷಕರನ್ನು ತುಂಬುವ ಕೆಲಸ ನಡೆಯಬೇಕು. ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನೀಡಲು ಸರಕಾರಿ ಶಾಲೆಗಳಿಗೆ ಸರ್ವ ಅವಕಾಶಗಳಿವೆ. ಸಾಧಾರಣವಾಗಿ ಬಹುತೇಕ ಸರಕಾರಿ ಶಾಲೆಗಳು ಸ್ಥಳಾವಕಾಶವನ್ನು ಹೊಂದಿವೆ. ಮೈದಾನಗಳನ್ನು ಹೊಂದಿವೆ. ಇವನ್ನು ಸಮರ್ಥವಾಗಿ ಬಳಸಲು ಸರಕಾರ ಯೋಜನೆಗಳನ್ನು ರೂಪಿಸಬೇಕು. ಅತ್ಯಾಧುನಿಕ ಶಿಕ್ಷಣವನ್ನು ಜನರಿಗೆ ಕೊಡಲು, ಯಾವುದೇ ಖಾಸಗಿ ಉದ್ಯಮಿಗಳಿಗಿಂತ ಅತಿ ಹೆಚ್ಚು ಸಂಪನ್ಮೂಲ ಸರಕಾರದ ಬಳಿ ಇದೆ ಎನ್ನುವುದನ್ನು ಮರೆಯಬಾರದು. ಮಠಗಳಿಗೆ, ವಿವಿಧ ಜಯಂತಿಗಳಿಗೆ, ಗೋಶಾಲೆಗಳಿಗೆ ವ್ಯಯ ಮಾಡುವ ಹಣವನ್ನು ಸರಕಾರಿ ಶಾಲೆಗಳಿಗೆ ಪರಿಣಾಮಕಾರಿಯಾಗಿ ಬಳಸಿದರೆ, ಮುಂದೊಂದು ದಿನ ಖಾಸಗಿ ಶಾಲೆಗಳು ಒಂದೊಂದಾಗಿ ಮುಚ್ಚುವಂತಹ ಸ್ಥಿತಿ ಬಂದರೆ ಅಚ್ಚರಿಯಿಲ್ಲ. ಈ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕ ಹೆಜ್ಜೆಯಿಡುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News