ನಿಮ್ಮ ಕೈಗಳು ಮತ್ತು ಪಾದಗಳು ಈ ಆರೋಗ್ಯ ಸಮಸ್ಯೆಗಳ ಬಗ್ಗೆ ಭವಿಷ್ಯ ನುಡಿಯುತ್ತವೆ

Update: 2018-07-10 11:38 GMT

ನಮ್ಮ ಶರೀರದ ಒಟ್ಟಾರೆ ಆರೋಗ್ಯದ ವಿಷಯ ಬಂದಾಗ ಪಾದಗಳು ಅತ್ಯಂತ ಕಡೆಗಣಿಸಲ್ಪಡುವ ಭಾಗಗಳಾಗಿವೆ. ಶಿಲೀಂಧ್ರ ಸೋಂಕು,ನಂಜು ಅಥವಾ ತುರಿಕೆಯಂತಹ ಸಮಸ್ಯೆಗಳು ಎದುರಾದಾಗ ಮಾತ್ರ ಜನರು ತಮ್ಮ ಪಾದಗಳ ಬಗ್ಗೆ ಎಚ್ಚೆತ್ತುಕೊಳ್ಳುತ್ತಾರೆ.

ಪಾದಗಳಿಗೆ ಹೋಲಿಸಿದರೆ ಕೈಗಳು ಹೆಚ್ಚು ಅದೃಷ್ಟಶಾಲಿ ಎನ್ನಬಹುದು,ಏಕೆಂದರೆ ವ್ಯಕ್ತಿ ತನ್ನ ಕೈಗಳ ಕುರಿತು ಕೊಂಚವಾದರೂ ಗಮನವನ್ನು ಹರಿಸುತ್ತಿರುತ್ತಾನೆ. ಆದರೆ ನಮ್ಮ ಶರೀರದಲ್ಲಿ ಎಲ್ಲೋ ತಾಳ ತಪ್ಪಿದಾಗ ಹೆಚ್ಚಿನ ಪ್ರಕರಣಗಳಲ್ಲಿ ಒಣಚರ್ಮದ ಲಕ್ಷಣ ಕಂಡು ಬರುತ್ತದೆ, ಆದರೆ ಜನರು ಅದಕ್ಕೆ ಹೆಚ್ಚಿನ ಗಮನವನ್ನು ನೀಡದೇ ಟನ್‌ಗಟ್ಟಲೆ ಲೋಷನ್ ಬಳಿದುಕೊಳ್ಳುವುದೇ ಪರಿಹಾರ ಎಂದು ಗಟ್ಟಿಯಾಗಿ ನಂಬಿಕೊಂಡಿರುತ್ತಾರೆ.

ಆದರೆ ನಮ್ಮ ಕೈಗಳು ಮತ್ತು ಪಾದಗಳು ನಮ್ಮ ಶರೀರದಲ್ಲಿನ ಅನಾರೋಗ್ಯಗಳ ಕುರಿತು ಬಹಳಷ್ಟನ್ನು ಹೇಳುತ್ತವೆ. ಪೋಷಕಾಂಶಗಳ ಕೊರತೆ ಮತ್ತು ನಿರ್ಜಲೀಕರಣದಂತಹ ಹೆಚ್ಚು ಸಮಸ್ಯಾತ್ಮಕವಲ್ಲದ ದೇಹಸ್ಥಿತಿಯಿಂದ ಹಿಡಿದು ಮಧುಮೇಹದಂತಹ ಗಂಭೀರ ರೋಗಗಳವರೆಗೂ ಭವಿಷ್ಯವನ್ನು ಈ ಎರಡು ಅಂಗಗಳು ನುಡಿಯುತ್ತವೆ. ಇಲ್ಲಿವೆ ಆ ಕುರಿತು ಮಾಹಿತಿಗಳು....

►ಕಡಿಮೆ ರಕ್ತ ಪರಿಚಲನೆ

ಕೈಗಳ ಚರ್ಮ ಒಣಗುವುದು ಹೊರಮೈಯಲ್ಲಿನ ರಕ್ತನಾಳಗಳ ಕಾಯಿಲೆಯಿಂದಾಗಿ ಕಡಿಮೆ ರಕ್ತ ಪರಿಚಲನೆಯನ್ನು ಸೂಚಿಸಬಹುದು. ರಕ್ತನಾಳಗಳಲ್ಲಿ ಪಾಚಿ ಸಂಗ್ರಹಗೊಂಡು ಅವು ಪೆಡಸಾಗುವುದು ರಕ್ತ ಪರಿಚಲನೆಯನ್ನು ತಗ್ಗಿಸುತ್ತದೆ.

►ಥೈರಾಯ್ಡ ತೊಂದರೆ

ನಿಮ್ಮ ಪಾದಗಳು ಸದಾ ಕಾಲ ತಣ್ಣಗಿದ್ದರೆ ನಿಮ್ಮ ಥೈರಾಯ್ಡ ಸೂಕ್ತವಾಗಿ ಕಾರ್ಯ ನಿರ್ವಹಿಸದಿರಬಹುದು. ಅದು ನಿಮ್ಮ ಚಯಾಪಚಯವನ್ನು ಕ್ರಮಬದ್ಧಗೊಳಿಸಲು ಸಾಕಷ್ಟು ಹಾರ್ಮೋನ್‌ಗಳನ್ನು ಉತ್ಪತ್ತಿ ಮಾಡದಿರಬಹುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪೊಥೈರಾಯ್ಡಿಸಂ ಎನ್ನುತ್ತಾರೆ. ಇದರಿಂದ ಉಷ್ಣತೆಯನ್ನು ಉತ್ಪತ್ತಿ ಮಾಡುವ ಶರೀರದ ಸಾಮರ್ಥ್ಯಕ್ಕೆ ವ್ಯತ್ಯಯವುಂಟಾಗುತ್ತದೆ ಮತ್ತು ಇದೇ ಕಾರಣದಿಂದ ಕೈಗಳು ಮತ್ತು ಪಾದಗಳು ಸದಾ ತಣ್ಣಗಿರುತ್ತವೆ.

►ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್(ಆರ್‌ಎಲ್‌ಎಸ್)

ಕೆಲವೊಮ್ಮೆ ನಾವು ಅಯಾಚಿತವಾಗಿ ಕಾಲುಗಳನ್ನು ಅಲುಗಾಡಿಸುತ್ತಿರುತ್ತೇವೆ. ಎಷ್ಟೇ ಪ್ರಯತ್ನಿಸಿದರೂ ಈ ತುಡಿತವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಈ ಸ್ಥಿತಿಯನ್ನು ಆರ್‌ಎಲ್‌ಎಸ್ ಎಂದು ಕರೆಯಲಾಗುತ್ತದೆ. ಈ ಲಕ್ಷಣವನ್ನು ಪ್ರದರ್ಶಿಸುವ ಸುಮಾರು ಶೇ.15ರಷ್ಟು ಜನರು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿರುತ್ತಾರೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಈ ಲಕ್ಷಣವು ಸಾಮಾನ್ಯವಾಗಿ ರಾತ್ರಿ ಕಾಣಿಸಿಕೊಳ್ಳುತ್ತದೆ ಮತ್ತು ಇದರಿಂದ ರೋಗಿಗಳಿಗೆ ಸಾಕಷ್ಟು ನಿದ್ರೆ ಸಿಗುವುದಿಲ್ಲ.

►ಕಬ್ಬಿಣಾಂಶದ ಕೊರತೆ

ಅನಿರೀಕ್ಷಿತವಾಗಿ ಕೈಗಳು ಮತ್ತು ಪಾದಗಳು ತಣ್ಣಗಾಗುವುದು ಶರೀರದಲ್ಲಿ ಕಬ್ಬಿಣಾಂಶ ಕೊರತೆಯ ಸಾಮಾನ್ಯ ಲಕ್ಷಣವಾಗಿದೆ. ಕಬ್ಬಿಣಾಂಶ ಸೇವನೆಯು ಮಹಿಳೆಯರಲ್ಲಿ 18 ಎಂಜಿ ಮತ್ತು ಪುರುಷರಲ್ಲಿ 8 ಎಂಜಿಗಿಂತ ಕಡಿಮೆಯಾದರೆ ಮಯೊಗ್ಲೋಬಿನ್ ಮತ್ತು ಹಿಮೊಗ್ಲೋಬಿನ್ ಉತ್ಪಾದನೆಗೆ ತಡೆಯಾಗುತ್ತದೆ. ಸಾಕಷ್ಟು ಆಮ್ಲಜನಕ ಪೂರೈಕೆಯಾಗದೆ ರಕ್ತಕಣಗಳು ರಕ್ತನಾಳಗಳಲ್ಲಿ ಸಿಲುಕಿಕೊಂಡು ರಕ್ತ ಪರಿಚಲನೆಯನ್ನು ನಿಧಾನಗೊಳಿಸುತ್ತವೆ. ಪರಿಣಾಮವಾಗಿ ಕೈಗಳು ಮತ್ತು ಪಾದಗಳು ತಣ್ಣಗಾಗುತ್ತವೆ.

►ಅಥ್ಲೀಟ್ಸ್ ಫೂಟ್

ಚರ್ಮವು ತುಂಬ ಒಣಗಿದ್ದರೆ ಅದು ಅಥ್ಲೀಟ್ಸ್ ಫೂಟ್‌ನಂತಹ ಇತರ ಸಮಸ್ಯೆಗಳ ಲಕ್ಷಣವೂ ಆಗಿರುತ್ತದೆ. ಸಾಮಾನ್ಯವಾಗಿ ಕಾಲಿನ ಬೆರಳುಗಳ ನಡುವಿನಿಂದ ಆರಂಭಗೊಳ್ಳುವ ಶಿಲೀಂಧ್ರ ಸೋಕನ್ನು ಅಥ್ಲೀಟ್ಸ್ ಫೂಟ್ ಎಂದು ಕರೆಯಲಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕೆಂಪುಬಣ್ಣದ ಸಣ್ಣ ಬೊಕ್ಕೆಗಳು ಅಥವಾ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಆಡುಭಾಷೆಯಲ್ಲಿ ಇದನ್ನು ನಂಜು ಎನ್ನಲಾಗುತ್ತದೆ.

►ಪೌಷ್ಟಿಕಾಂಶಗಳ ಕೊರತೆ

ನಿಮ್ಮ ಉಗುರುಗಳು ಪೆಡಸಾಗಿವೆಯೇ? ಉಗುರುಗಳು ಅಂಚುಗಳು ಎದ್ದಂತಿದ್ದು ತೆಳ್ಳಗಾಗಿ ಒಳಗಡೆ ಬಾಗಿವೆಯೇ? ಇಂತಹ ಸ್ಥಿತಿಯು ಕಬ್ಬಿಣಾಂಶ ಕೊರತೆ ರಕ್ತಹೀನತೆಯೊಂದಿಗೆ ಗುರುತಿಸಿಕೊಂಡಿದೆ. ಉಗುರುಗಳು ಪ್ರೋಟಿನ್‌ನ ದಪ್ಪ ಪದರಗಳನ್ನು ಹೊಂದಿದ್ದು,ಇವು ಮೃದು ಅಂಗಾಂಶಗಳನ್ನು ರಕ್ಷಿಸುತ್ತವೆ. ಶರೀರವು ಸಾಕಷ್ಟು ಹಿಮೊಗ್ಲೋಬಿನ್‌ನ್ನು ಉತ್ಪಾದಿಸದಿದ್ದಾಗ ಆಮ್ಲಜನಕದ ಕೊರತೆಯು ಉಗುರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಅವು ಬಿರುಕು ಬಿಡುತ್ತವೆ. ತೆಳ್ಳಗಿನ,ಪೆಡಸಾದ ಉಗುರುಗಳು ಹೈಪೋಥೈರಾಯ್ಡಿಸಂ ಅನ್ನೂ ಸೂಚಿಸುತ್ತವೆ.

►ಸ್ವನಿಯಂತ್ರಿತ ನರರೋಗ

ವ್ಯಕ್ತಿಯು ಮಧುಮೇಹವನ್ನು ಹೊಂದಿದ್ದರೆ ಮತ್ತು ಪಾದಗಳು ತುಂಬ ಒಣಗಿದ್ದರೆ ಆತ ಆಟೊನಾಮಿಕ್ ನ್ಯೂರೊಪತಿ ಅಥವಾ ಸ್ವನಿಯಂತ್ರಿತ ನರರೋಗವನ್ನು ಹೊಂದಿರಬಹುದು. ಈ ಸ್ಥಿತಿಯಲ್ಲಿ ಮಿದುಳಿನಿಂದ ಹೃದಯಕ್ಕೆ ಸಾಗುವ ನರಗಳು ಹಾನಿಗೊಂಡಿರುತ್ತವೆ. ಸ್ವನಿಯಂತ್ರಿತ ನರರೋಗವು ಲಕ್ಷಣಗಳ ಒಂದು ಗುಂಪಾಗಿದೆಯೇ ಹೊರತು ಅದೇ ಒಂದು ನಿರ್ದಿಷ್ಟ ರೋಗವಲ್ಲ.

►ಕೈ-ಕಾಲು ಮತ್ತು ಬಾಯಿ ಕಾಯಿಲೆ

ಹೆಸರೇ ಈ ರೋಗವೇನು ಎನ್ನುವುದನ್ನು ಹೇಳುತ್ತದೆ. ಇದು ಸೌಮ್ಯ ಆದರೆ ಸಾಂಕ್ರಾಮಿಕ ವೈರಲ್ ಸೋಂಕು ಆಗಿದ್ದು,ಎಳೆಯ ಮಕ್ಕಳಲ್ಲಿ ಅತ್ಯಂತ ಸಾಮಾನ್ಯವಾಗಿದೆ. ಕಾಕ್ಸ್‌ಸಾಕೀ ವೈರಸ್‌ನಿಂದ ಈ ಸೋಂಕು ಉಂಟಾಗುತ್ತದೆ. ಬಾಯಿಯಲ್ಲಿ ಹುಣ್ಣುಗಳು ಹಾಗೂ ಕೈಗಳು ಮತ್ತು ಪಾದಗಳಲ್ಲಿ ದದ್ದುಗಳು ಕಾಣಿಸಿಕೊಳ್ಳುವುದು ಈ ಸೋಂಕಿನ ಲಕ್ಷಣಗಳಾಗಿವೆ.

►ಮಧುಮೇಹ

ಹುಣ್ಣುಗಳು ಮತ್ತು ಗಾಯಗಳು ಬೇಗನೇ ಮಾಯದಿದ್ದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ಮಾಯದ ಹುಣ್ಣುಗಳು ಕಡಿಮೆ ರಕ್ತ ಪರಿಚಲನೆಯ ಸೂಚನೆಯಾಗಿದ್ದು,ರೋಗದ ಲಕ್ಷಣಗಳಲ್ಲೊಂದಾಗಿದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದರೆ ನರಕ್ಕೆ ಹಾನಿಯುಂಟಾಗುತ್ತದೆ ಮತ್ತು ಇದರಿಂದ ಪಾದಕ್ಕೆ ಸಾಕಷ್ಟು ರಕ್ತ ಪೂರೈಕೆಯಾಗುವುದಿಲ್ಲ. ಇದೇ ಕಾರಣದಿಂದ ಗಾಯಗಳು ಗುಣವಾಗುವುದಿಲ್ಲ.

►ಕೀಲೂತ

ನಿಮ್ಮ ಕಾಲ್ಬೆರಳು ಅಸಾಮಾನ್ಯವೆನ್ನುವಷ್ಟು ದೊಡ್ಡದಾಗಿದ್ದರೆ ಅದು ಅತ್ಯಂತ ನೋವನ್ನುಂಟು ಮಾಡುವ ಸಂಧಿವಾತದ ರೂಪವಾಗಿರುವ ಕೀಲೂತವಾಗಿರುವ ಸಾಧ್ಯತೆಯಿದೆ. ಪ್ಯುರಿನ್ ಅಧಿಕವಾಗಿರುವ ಕೆಲವು ಆಹಾರಗಳು ಇದಕ್ಕೆ ಕಾರಣವಾಗುತ್ತವೆ. ಕೆಂಪುಮಾಂಸ,ಮೀನು ಮತ್ತು ಕೆಲವು ಬಯ ಮದ್ಯಗಳಲ್ಲಿ ಈ ಪ್ಯುರಿನ್ ಇರುತ್ತದೆ. ಅ ದು ಯೂರಿಕ್ ಆ್ಯಸಿಡ್ ಮಟ್ಟವನ್ನು ಹೆಚ್ಚಿಸುವುದರಿಂದ ಕೀಲುಗಳಲ್ಲಿ ಹರಳುಗಳು ಸಂಗ್ರಹಗೊಳ್ಳುತ್ತವೆ.

►ಪರಿಧಿ ನರರೋಗ

ಪಾದಗಳಲ್ಲಿ ಸ್ಪರ್ಶಜ್ಞಾನ ಕಡಿಮೆಯಾದರೆ ಅದು ಪರಿಧಿಯ ನರರೋಗವನ್ನು ಸೂಚಿಸಬಹುದು. ಪಾದದ ಚರ್ಮಕ್ಕೆ ಸಮೀಪದ ನರಕ್ಕೆ ಹಾನಿಯುಂಟಾದರೆ ಆ ಭಾಗದಲ್ಲಿ ಸಂವೇದನೆಯು ಕಡಿಮೆಯಾಗುತ್ತದೆ.

►ಸಂಧಿವಾತ

ಆರ್ಥ್ರಿಟಿಸ್ ಅಥವಾ ಸಂಧಿವಾತ ಹೆಚ್ಚಿನವರಲ್ಲಿ,ವಿಶೇಷವಾಗಿ ವಯಸ್ಸಾದವರಲ್ಲಿ ಸಾಮಾನ್ಯವಾಗಿದ್ದು,ಕೀಲುಗಳಿಗೆ ಅಂಟಿಕೊಂಡಿರುವ ಅಂಗಾಂಶಗಳ ಉರಿಯೂತವಾಗಿದೆ. ಉಂಗುರ ಬೆರಳಿಗಿಂತ ಕಿರಿದಾದ ತೋರುಬೆರಳನ್ನು ಹೊಂದಿರುವವರು ಆಸ್ಟಿಯೊಆರ್ಥ್ರಿಟಿಸ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ.

►ಹೃದಯ ರಕ್ತನಾಳ ಕಾಯಿಲೆ

ಕಾಲ್ಬೆರಳುಗಳ ಮೇಲಿನ ಕೂದಲು ನಷ್ಟಗೊಳ್ಳುವುದಕ್ಕೆ ಕಡಿಮೆ ರಕ್ತ ಪರಿಚಲನೆಯು ಕಾರಣವಾಗುತ್ತದೆ ಮತ್ತು ಅದು ಹೃದಯ ರಕ್ತನಾಳ ಕಾಯಿಲೆ,ಸಾಮಾನ್ಯವಾಗಿ ಆರ್ಟರಿಯಲ್ ಸ್ಲೆರೊಸಿಸ್‌ನ ಲಕ್ಷಣವಾಗಿದೆ. ಹೃದಯದಿಂದ ರಕ್ತವನ್ನು ಸಾಗಿಸುವ ಅಪಧಮನಿಗಳು ಪೆಡಸುಗೊಂಡಾಗ ಈ ಸ್ಥಿತಿಯುಂಟಾಗುತ್ತದೆ.

►ಶ್ವಾಸಕೋಶ ಕ್ಯಾನ್ಸರ್

  ಉಗುರುಗಳ ಬುಡದಲ್ಲಿ ಮೃದು ಅಂಗಾಂಶಗಳು ಹೆಚ್ಚಾಗಿ ಉಗುರು ವಿರೂಪಗೊಂಡರೆ ಅದನ್ನು ಕ್ಲಬಿಂಗ್ ಎನ್ನಲಾಗುತ್ತದೆ. ಅದು ಕ್ಯಾನ್ಸರ್‌ನಂತಹ ನಿರ್ದಿಷ್ಟ ಶ್ವಾಸಕೋಶ ರೋಗದ ಲಕ್ಷಣವಾಗಿರಬಹುದು. ಜನ್ಮಜಾತ ಹೃದಯ ಸಮಸ್ಯೆಯಿದ್ದರೂ ಹೀಗೆ ಮೃದು ಅಂಗಾಂಶಗಳು ಗಡ್ಡೆಗಟ್ಟುತ್ತವೆ.

►ಕರುಳಿನ ಅನಾರೋಗ್ಯ

ಕರುಳಿನ ಅನಾರೋಗ್ಯವೂ ಕ್ಲಬಿಂಗ್‌ಗೆ ಇನ್ನೊಂದು ಕಾರಣವಾಗಿದೆ. ಜಠರಗರುಳಿನ ರೋಗಗಳು ಕ್ಲಬಿಂಗ್‌ಗೆ ಕಾರಣವಾಗುತ್ತವೆ ಎಂದು ಸಂಶೋಧನೆಗಳು ತೋರಿಸಿವೆ.

►ಶಿಲೀಂಧ್ರ

ಕಾಲ್ಬೆರಳುಗಳ ಉಗುರುಗಳು ಹಳದಿಯಾಗಿವೆಯೇ? ಬಣ್ಣದಲ್ಲಿ ಬದಲಾವಣೆಯು ಸೌಮ್ಯ ಶಿಲೀಂಧ್ರ ಸೋಂಕನ್ನು ಸೂಚಿಸುತ್ತದೆ. ಈ ಸೋಕು ಆಳಕ್ಕಿಳಿದಂತೆ ಉಗುರು ಬಣ್ಣವನ್ನು ಕಳೆದುಕೊಂಡು ದಪ್ಪವಾಗುತ್ತದೆ ಮತ್ತು ಅಂಚುಗಳಲ್ಲಿ ವಿರೂಪಗೊಳ್ಳುತ್ತದೆ.

►ಉಸಿರಾಟದ ಸಮಸ್ಯೆಗಳು

ಕಾಲ್ಬೆರಳುಗಳ ಉಗುರುಗಳು ಹಳದಿಯಾಗಲು ಕೆಲವೊಮ್ಮೆ ಉಸಿರಾಟ ಸಮಸ್ಯೆಗಳು ಮತ್ತು ಲಿಂಫೆಡೆಮಾ ಅಥವಾ ಮೃದು ಅಂಗಾಂಶಗಳ ಊತ ಕಾರಣವಾಗುತ್ತವೆ.

►ಮೂತ್ರಪಿಂಡ ಕಾಯಿಲೆ

ಕಣಕಾಲುಗಳು ಅಥವಾ ಪಾದಗಳ ಕೀಲುಗಳು ಊದಿಕೊಂಡಾಗ ಹೆಚ್ಚಿನವರು ತುಂಬ ನಡೆದಿದ್ದರಿಂದ ಹಾಗಾಗಿರಬೇಕು ಎಂದು ಕಡೆಗಣಿಸುತ್ತಾರೆ. ಆದರೆ ಅದು ಮೂತ್ರಪಿಂಡ ಸಮಸ್ಯೆಯಂತಹ ಗಂಭೀರ ರೋಗಗಳನ್ನು ಸೂಚಿಸಬಹುದು. ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಿದ್ದಾಗ ದ್ರವಗಳು ಶರೀರದಲ್ಲಿ ಉಳಿದುಕೊಂಡು ,ಎಲ್ಲ ಕಡೆಗಳಲ್ಲಿ....ವಿಶೆಷವಾಗಿ ಕಣಕಾಲು ಮತ್ತು ಕಾಲುಗಳಲ್ಲಿ ಸಂಗ್ರಹಗೊಳ್ಳುತ್ತವೆ.

ಕಾಲ್ಬೆರಳುಗಳ ಕೆಳಗೆ ಕೆಂಪು ಗೆರೆಗಳು ಕಾಣಿಸಿಕೊಂಡಿವೆಯೇ? ಅವು ಹೃದಯ ಸೋಂಕನ್ನು ಸೂಚಿಸಬಹುದು. ಸಣ್ಣ ರಕ್ತದ ಗಡ್ಡೆಗಳು ಉಗುರುಗಳ ಕೆಳಗಿರುವ ಲೋಮನಾಳಗಳಿಗೆ ಹಾನಿಯುಂಟು ಮಾಡುವುದರಿಂದ ರಕ್ತನಾಳಗಳು ಒಡೆಯಯುತ್ತವೆ. ಇದು ಹೃದಯದ ಒಳಪದರಕ್ಕೆ ಸೋಂಕಿನ ಲಕ್ಷಣವಾಗಿದೆ. ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಹೃದಯಾಘಾತ ಸಂಭವಿಸಬಹುದು.

ಕೈಬೆರಳುಗಳು ಮತ್ತು ಕಾಲ್ಬೆರಳುಗಳ ಉಗುರುಗಳಲ್ಲಿ ರಂಧ್ರಗಳನ್ನು ಹೋಲುವ ಸಣ್ಣ ಸಣ್ಣ ಕಚ್ಚುಗಳು ಕಾಣಿಸಿಕೊಂಡರೆ ಅದು ಸೋರಿಯಾಸಿಸ್ ಚರ್ಮರೋಗವನ್ನು ಸೂಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News