ಐಪಿಎಲ್‌ನಲ್ಲಿ ಇನ್ನಷ್ಟು ವರ್ಷ ಆಡಲು ಡಿವಿಲಿಯರ್ಸ್ ಇಂಗಿತ

Update: 2018-07-10 18:34 GMT

ಕೇಪ್‌ಟೌನ್, ಜು.10: ದಕ್ಷಿಣ ಆಫ್ರಿಕದ ಮಾಜಿ ಕ್ರಿಕೆಟಿಗ ಎಬಿಡಿ ವಿಲಿಯರ್ಸ್ ಇನ್ನು ಕೆಲವು ವರ್ಷಗಳ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್) ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಡಿವಿಲಿಯರ್ಸ್ ಈ ವರ್ಷಾರಂಭದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.

    ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಡಿವಿಲಿಯರ್ಸ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ಎಲ್ಲರಿಗೆ ಶಾಕ್ ನೀಡಿದ್ದರು. 2007ರಿಂದ 2018ರ ತನಕ ಮೂರು ವಿಶ್ವಕಪ್ ಟೂರ್ನಮೆಂಟ್‌ಗಳನ್ನು ಆಡಿದ್ದ ಡಿವಿಲಿಯರ್ಸ್ ಅವರು ಪ್ರತಿಷ್ಠಿತ ವಿಶ್ವಕಪ್ ಜಯಿಸುವ ಕನಸು ಈಡೇರಿಸಿಕೊಳ್ಳಲಿಲ್ಲ. ‘‘ನಾನು ಇನ್ನು ಕೆಲವು ವರ್ಷಗಳ ಕಾಲ ಐಪಿಎಲ್‌ನಲ್ಲಿ ಆಡಲು ಬಯಸಿದ್ದೇನೆ. ದಕ್ಷಿಣ ಆಫ್ರಿಕದ ಟೈಟಾನ್ಸ್ ತಂಡದಲ್ಲಿ ಆಡುವ ಮೂಲಕ ಯುವ ಆಟಗಾರರಿಗೆ ನೆರವಾಗುವ ಬಯಕೆಯಿದೆ. ಆದರೆ, ಆ ಕುರಿತು ಇನ್ನೂ ಯೋಜನೆ ರೂಪಿಸಿಲ್ಲ. ಬೆಂಗಳೂರು ಒಂದು ವಿಶೇಷ ಸ್ಥಳ. ನನಗದು ಎರಡನೇ ಮನೆಯಿದ್ದಂತೆ. ಅಲ್ಲಿ ನಾನು ನನ್ನ 100ನೇ ಟೆಸ್ಟ್ ಪಂದ್ಯ ಆಡಿದ್ದೆ. ಆರ್‌ಸಿಬಿ ನನ್ನ ಜೀವನದ ಬಹುಮುಖ್ಯ ಭಾಗವಾಗಿದೆ. ಭಾರತ ದೇಶದ ಜನರು ನನ್ನನ್ನು ತುಂಬಾ ಇಷ್ಟಪಡುತ್ತಾರೆ. ಅದನ್ನು ವರ್ಣಿಸಲು ನನ್ನಿಂದ ಸಾಧ್ಯವಿಲ್ಲ’’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News