ತೆರೆದ ಪುಸ್ತಕ ಪರೀಕ್ಷೆ: ಶಿಕ್ಷಣದ ಮುಚ್ಚಿದ ಕಕ್ಷೆ

Update: 2018-07-10 18:35 GMT

 ತೆರೆದ ಪುಸ್ತಕ ಪರೀಕ್ಷೆ ನಾವು ನಿರೀಕ್ಷಿಸುವ ಫಲಿತಾಂಶಗಳಲ್ಲಿ ಕೆಲವನ್ನು ನೀಡಬೇಕಾದರೂ, ವಿದ್ಯಾರ್ಥಿಗಳಲ್ಲಿ ಬೌದ್ಧಿಕ ನೆಗೆತ ಸಾಧ್ಯವಾಗುವಂತೆ ಮಾಡುವ, ಅವರಿಗೆ ನೀಡಲಾದ ಮಾಹಿತಿಯನ್ನು, ಫ್ಯಾಕ್ಟ್‌ಗಳನ್ನು ಓದಿ, ತಮ್ಮದೇ ಆದ ತೀರ್ಮಾನಗಳಿಗೆ (ಇನ್‌ಫರೆನ್ಸ್‌ಗಳಿಗೆ) ಬರುವ, ಒಳನೋಟಗಳನ್ನು ಪಡೆಯುವುದನ್ನು ಅನಿವಾರ್ಯವಾಗಿರುವ ಪ್ರಶ್ನೆಪತ್ರಿಕೆಗಳು ಸಿದ್ಧವಾಗಬೇಕು. ಮೊದಲಾಗಿ ಅಂತಹ ಶಿಕ್ಷಕರನ್ನು ತಯಾರು ಮಾಡಬೇಕು.  

ಇತ್ತೀಚೆಗೆ ಎಸೆಸೆಲ್ಸಿ ಹಾಗೂ ಪಿಯುಸಿ ಫಲಿತಾಂಶಗಳು ಪ್ರಕಟವಾದಾಗ 500 ಅಥವಾ 600 ಅಂಕಗಳಲ್ಲಿ 500/600 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ನಾವು ಬೆರಗುಗಣ್ಣಿನಿಂದ ನೋಡಿದ್ದೇವೆ. ಭಾಷಾ ವಿಷಯಗಳಲ್ಲಿ (ಕನ್ನಡ, ಇಂಗ್ಲಿಷ್) ಕೂಡ ನೂರಕ್ಕೆ ನೂರು ಅಥವಾ 125ರಲ್ಲಿ 125 ಅಂಕಗಳನ್ನು ಪಡೆದು ನಾಡಿನ ಜನರನ್ನು, ನನ್ನಂತಹ ಇಂಗ್ಲಿಷ್ ಭಾಷಾತಜ್ಞರನ್ನು ಬೆಚ್ಚಿಬೀಳಿಸಿದ ವಿದ್ಯಾರ್ಥಿಗಳ ಬುದ್ಧಿಮತ್ತೆ(ಇಂಟಲಿಜನ್ಸ್) ಯನ್ನು ಕಂಡು ಭೇಷ್! ಭೇಷ್! ಎಂದಿದ್ದೇವೆ. ಅದೇ ವೇಳೆ, ಪ್ರತಿಶತದ ಆಧಾರದಲ್ಲಿ ರಾಜ್ಯದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಎಷ್ಟು ‘ಪ್ರಗತಿ’ ಸಾಧಿಸಿದ್ದಾರೆ ಎಂದೂ ಅಳೆದು ತೂಗಿ ಸಮಾಧಾನಪಟ್ಟುಕೊಂಡಿದ್ದೇವೆ. ಪರೀಕ್ಷೆಗಳಲ್ಲಿ ನಿರೀಕ್ಷಿತ ಅಂಕಗಳು ಲಭಿಸಲಿಲ್ಲ ಅಥವಾ ತೇರ್ಗಡೆಯಾಗದೆ ‘ಫೇಲ್’ ಆದೆ ಎಂಬ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪರಮಾತ್ಮನಲ್ಲಿ ಪ್ರಾರ್ಥನೆ ಸಲ್ಲಿಸಿ ನಮ್ಮ ನಮ್ಮ ಎಂದಿನ ಕೆಲಸ ಕಾರ್ಯಗಳಲ್ಲಿ ಮುಂದುವರಿದಿದ್ದೇವೆ.

ಇವೆಲ್ಲದರ ಮಧ್ಯೆ ‘ತೆರೆದ ಪುಸ್ತಕ ಪರೀಕ್ಷೆ’ಯ ಬಗ್ಗೆ ಒಂದಷ್ಟು ಜಿಜ್ಞಾಸೆ ನಡೆದು ಬಳಿಕ ತೆರೆದ ಪುಸ್ತಕವನ್ನು ಮುಚ್ಚಲಾಯಿತು. ಇನ್ನಷ್ಟು ಚರ್ಚೆ ವಾದ ವಿವಾದ ಸಂವಾದ ನಡೆದೀತೋ ಎಂದು ಕಾಯುತ್ತಿದ್ದ ನಾನು ಇದೀಗ ಇನ್ನು ಈ ವಿಷಯದ ಜೀವಿತಾವಧಿ ಮುಗಿದುಹೋಗುವ ಮೊದಲು, ಕಳೆದ ನಲ್ವತ್ತೇಳು ವರ್ಷಗಳ ಅವಧಿಯಲ್ಲಿ ‘ಮುಚ್ಚಿದ ಪುಸ್ತಕ ಪರೀಕ್ಷೆ’ಯ ಏಳುಬೀಳುಗಳನ್ನು ಕಂಡವನಾಗಿ, ಒಬ್ಬ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಗಮನಿಸಿದ ಹಲವಾರು ಅಂಶಗಳ ಹಿನ್ನೆಲೆಯಲ್ಲಿ ಮುಂದಿನ ಮಾತುಗಳನ್ನು ಬರೆಯುತ್ತಿದ್ದೇನೆ.

ಬ್ರಿಟಿಷರು ಈ ದೇಶದಲ್ಲಿ ಇಂಗ್ಲಿಷ್ ಶಿಕ್ಷಣ/ಆಧುನಿಕ ಶಿಕ್ಷಣ ನೀಡಲಾರಂಭಿಸಿದಂದಿನಿಂದ, ಸುಮಾರು ಎರಡು ಶತಮಾನಗಳ ಕಾಲ ನಾವು ಮುಚ್ಚಿದ ಪುಸ್ತಕ ಪರೀಕ್ಷೆಗೆ ಹೊಂದಿಕೊಂಡಿದ್ದೇವೆ. ಈ ಪರೀಕ್ಷಾ ಪದ್ಧತಿಯ ಮೂಲಕ ಹಾದು ಬಂದವರೇ, ನಮ್ಮ ದೇಶದ ಖ್ಯಾತ ವಿಜ್ಞಾನಿಗಳು, ಆರ್ಥಿಕ ತಜ್ಞರು, ಸಾಹಿತಿಗಳು ಎಂದು ಜನಮನ್ನಣೆ ಪಡೆದಿದ್ದಾರೆ.

 ಆದರೆ, ಕಳೆದ ಕೆಲವು ದಶಕಗಳಲ್ಲಿ, ಮುಖ್ಯವಾಗಿ ಇಂಜಿನಿಯರಿಂಗ್/ತಂತ್ರಜ್ಞಾನ ಮತ್ತು ವೈದ್ಯಕೀಯ ರಂಗಗಳನ್ನು ಬಿಟ್ಟರೆ ತಮ್ಮ ಮಕ್ಕಳಿಗೆ ಬೇರೆ ದಾರಿಯೇ ಇಲ್ಲ ಎಂದು ಪೋಷಕರಿಗೆ ಅನ್ನಿಸಲಾರಂಭಿಸಿ ಈ ರಂಗಗಳ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ನೂಕುನುಗ್ಗಲು ಆರಂಭವಾದಾಗ, ಒಂದು-ಕೇವಲ ಒಂದು-ಅಂಕದ ವ್ಯತ್ಯಾಸದಲ್ಲಿ ಇಂಜಿನಿಯರಿಂಗ್/ವೈದ್ಯಕೀಯ ಸೀಟು ತಪ್ಪಿಹೋಗುವ ಅತ್ಯಂತ ಆತಂಕಕಾರಿ ಅಪಾಯಕಾರಿ ಪರಿಸ್ಥಿತಿ ತಲೆದೋರಿದಾಗ ಮುಚ್ಚಿದ ಪುಸ್ತಕ ಪರೀಕ್ಷೆಯಲ್ಲೂ ಒಂದು ಹೊಸ ಅಧ್ಯಾಯ ತೆರೆಯಲಾಯಿತು. ಅದೇ ಈ ಕೆಳಗಿನ ಮೂರು/ನಾಲ್ಕು ಉತ್ತರಗಳಲ್ಲಿ ಸರಿಯಾದ ಉತ್ತರವನ್ನು ‘ಟಿಕ್’ ಮಾಡಿ ಎನ್ನುವ ಟಿಕ್ ಅಧ್ಯಾಯ. ಹೀಗೆ ಟಿಕ್ ಮಾಡುವ ಒಂದು ಟಿಕ್ ಯುಗದ ಆರಂಭದೊಂದಿಗೆ ವಿದ್ಯಾರ್ಥಿಗಳಲ್ಲಿ ‘ಕತ್ತು ಸೀಳುವ’ ಸ್ಪರ್ಧಾಯುಗಕ್ಕೆ ನಾವು ನಾಂದಿ ಹಾಡಿದೆವು.

ಆದರೆ, ಈ ‘ಟಿಕ್’ ವ್ಯವಸ್ಥೆಯಲ್ಲಿ ನಾವು, ಶಿಕ್ಷಣತಜ್ಞರೆನ್ನಿಸಿಕೊಂಡವರು ಕೆಲವು ಮುಖ್ಯ ವಿಷಯಗಳನ್ನು ಮರೆತೆವು. ವಿದ್ಯಾರ್ಥಿಯೊಬ್ಬ, ತನಗೆ ನೀಡಲಾದ ನಾಲ್ಕು ಉತ್ತರಗಳಲ್ಲಿ ಒಂದನ್ನು(ಸರಿಯಾದುದನ್ನು) ಟಿಕ್ ಮಾಡುವಾಗ, ಅಲ್ಲಿ ನೀಡಲಾದ ನಾಲ್ಕು ಉತ್ತರಗಳನ್ನು ಮತ್ತೆ ಮತ್ತೆ ಓದಿ, ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ನಿರ್ಧಾರ ತೆಗೆದುಕೊಳ್ಳುತ್ತಾನೆ. ಇದು ತುರ್ತುಸ್ಥಿತಿಯಲ್ಲಿ ಒಂದು ಗಂಡಾಂತರದಿಂದ ಪಾರಾಗಲು ಬಹುಮಹಡಿ ಕಟ್ಟಡದ ನಾಲ್ಕನೇ ಮಹಡಿಯಿಂದಲೋ ಅಥವಾ ಒಂದನೇ ಮಹಡಿಯಿಂದಲೋ ಕೆಳಕ್ಕೆ ಹಾರಬೇಕಾದಾಗ ‘ಯಾವ ಮಹಡಿಯಿಂದ?’ ಎಂದು ನಿರ್ಧರಿಸಿದಂತೆಯೇ. ಆದರೆ, ಇಲ್ಲೊಂದು ವ್ಯತ್ಯಾಸ ಇದೆ. ಯಾವ ಮಹಡಿಯಿಂದ ಹಾರಿದರೂ ಆತ ಒಂದೋ ಸಾಯುತ್ತಾನೆ ಅಥವಾ ಕೈಕಾಲು ಮುರಿದು ಸಾಯುವ ಸ್ಥಿತಿಯಲ್ಲಿರುತ್ತಾನೆ.

ಪರೀಕ್ಷೆಯಲ್ಲಿ ಟಿಕ್ ಮಾಡಿದಾಗ ಆತ ಯಾವ ನಾಲ್ಕು ಉತ್ತರಗಳಲ್ಲಿ(ಯಾವ ಮಹಡಿಯಿಂದ ಹಾರಿದರೂ), ಯಾವ ಉತ್ತರವನ್ನು ಟಿಕ್ ಮಾಡಿದರೂ, ಉತ್ತರ ಗೊತ್ತೇ ಇಲ್ಲದಾಗಲೂ, ಆತ ಏನೂ ಆಗದೆ ಬದುಕಿ ಉಳಿಯುವ(ಒಂದು ಅಂಕಗಳಿಸುವ) ಸಾಧ್ಯತೆ ಇದ್ದೇ ಇರುತ್ತದೆ!

ಯಾಕೆಂದರೆ ಇಂತಹ ‘ಮಲ್ಟಿಪಲ್ ಆನ್ಸರ್’ಗಳಲ್ಲಿ ಟಿಕ್ ಮಾಡುವ ವಿದ್ಯಾರ್ಥಿಗಳ ಅಧ್ಯಯನ ನಡೆಸಿದಾಗ ಎಬಿಸಿಡಿಯಲ್ಲಿ, ಉತ್ತರಗೊತ್ತೇ ಇಲ್ಲದೆ, ಯಾವುದೇ ಒಂದನ್ನು ಟಿಕ್ ಮಾಡಿದರೂ ಒಟ್ಟು ಅಂಕಗಳಲ್ಲಿ 20ರಿಂದ 25 ಅಂಕಗಳನ್ನು ಪಡೆಯಬಹುದು ಎಂಬುದು ದೃಢಪಟ್ಟಿದೆ. ಅಂದರೆ ವಿದ್ಯಾರ್ಥಿಯೊಬ್ಬ ಒಂದು ವಿಷಯದಲ್ಲಿ ಏನೂ ಗೊತ್ತಿಲ್ಲದೆ 20-25 ಅಂಕಗಳನ್ನು ಪಡೆಯುವ ನಿಚ್ಚಳ ಸಾಧ್ಯತೆ ಇದೆ. ಇದನ್ನು ತಪ್ಪಿಸುವುದಕ್ಕಾಗಿ ಅಂದರೆ ಉತ್ತರ ಗೊತ್ತೇ ಇಲ್ಲದವನಿಗೂ ಒಂದು ಅಂಕ ನೀಡಿದಾಗ ಆಗುವ ಶೈಕ್ಷಣಿಕ ಅನ್ಯಾಯವನ್ನು, ಶೈಕ್ಷಣಿಕ ಅನೀತಿಯನ್ನು ಸರಿಪಡಿಸುವುದಕ್ಕಾಗಿ ಟಿಕ್ ವ್ಯವಸ್ಥೆಯಲ್ಲಿ ನೇತ್ಯಾತ್ಮಕ ಅಂಕ ನೀಡಿಕೆ(ನೆಗೆಟಿವ್ ಮಾರ್ಕಿಂಗ್) ಯನ್ನು ತರಬೇಕಾಯಿತು. ಅಂದರೆ ತಪ್ಪು ಉತ್ತರವನ್ನು ಟಿಕ್ ಮಾಡಿದಲ್ಲಿ, ದೊರೆತ ಒಂದು ಅಂಕವನ್ನು ಒಟ್ಟು ಅಂಕಗಳಲ್ಲಿ ಅಥವಾ ಅರ್ಧ ಅಂಕವನ್ನು ಕಳೆಯಲಾಗುತ್ತದೆ. ನೂರು ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಯೊಬ್ಬ ನೂರು ಟಿಕ್‌ಗಳನ್ನು ಮಾಡಿದಾಗ, ಟಿಕ್ ಮಾಡಿದ 22 ಉತ್ತರಗಳು ತಪ್ಪಾದಲ್ಲಿ, ಆತನಿಗೆ 78 ಅಂಕಗಳು ದೊರಕದೆ, ಕೇವಲ 56 ಅಂಕಗಳು ಅಥವಾ 67 ಅಂಕಗಳು ದೊರಕುತ್ತವೆ. ಹೀಗೆ ಮಾಡಿದಾಗ ಮಾತ್ರ ಟಿಕ್ ಪದ್ಧತಿ ‘ಫೂಲ್ ಪ್ರೂಫ್’ ಆಗುತ್ತದೆ.

ಆದರೆ, ನಮ್ಮ ಇಂದಿನ ಪರೀಕ್ಷಾ ಪದ್ಧತಿಯಲ್ಲಿ ‘ನೆಗೆಟಿವ್ ಮಾರ್ಕಿಂಗ್’ ಇಲ್ಲ. ಇದ್ದರೂ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಲ್ಲೊಂದು ಇಲ್ಲೊಂದು ಸಂಸ್ಥೆಯಲ್ಲಿ ಇರಬಹುದು. ‘ನೆಗೆಟಿವ್ ಮಾರ್ಕಿಂಗ್’ ಇಲ್ಲದ ಒಂದು ಪರೀಕ್ಷಾ ಪದ್ಧತಿಯಲ್ಲಿ ವಿದ್ಯಾರ್ಥಿಯ ನಿಜವಾದ ಬುದ್ಧಿಮತ್ತೆಯನ್ನು ಹೇಗೆ ಅಳೆಯುವುದು?

ಇನ್ನೊಂದು ಮುಖ್ಯ ವಿಷಯವೆಂದರೆ ಟಿಕ್ ವ್ಯವಸ್ಥೆಯಲ್ಲಿ ಅಳೆಯುವುದು, ಮುಖ್ಯವಾಗಿ, ವಿದ್ಯಾರ್ಥಿಗೆ ಇರುವ ಮಾಹಿತಿ ಅಥವಾ ಇನ್‌ಫಾರ್ಮೇಶನ್ ಕುರಿತಾದ ಜ್ಞಾನವನ್ನು. ಆದರೆ, ವಿದ್ಯಾರ್ಥಿಯ ತಾರ್ಕಿಕ ಶಕ್ತಿಯನ್ನು, ಸ್ವಂತ ಚಿಂತನೆ ಆಲೋಚನೆಗಳನ್ನು, ಸೃಜನಾತ್ಮಕ ಪ್ರತಿಭೆಯನ್ನು, ಒಂದು ಮಾಹಿತಿಯನ್ನು ಆಧರಿಸಿ ಪಡೆಯಬಹುದಾದ ತೀರ್ಮಾನಗಳನ್ನು, ಒಳನೋಟಗಳನ್ನು ತಿಳಿಯಬೇಕಾದರೆ ಆತನ ಬುದ್ಧಿಶಕ್ತಿಗೆ ಸವಾಲೊಡ್ಡುವ, ದೀರ್ಘವಾದ, ಒಳನೋಟಪೂರಿತ ಉತ್ತರಗಳನ್ನು ಬರೆಯಬೇಕಾಗುವ ಪ್ರಶ್ನೆಗಳನ್ನು ಆತನಿಗೆ ನೀಡಬೇಕು ಮತ್ತು ಇಂತಹ ಉತ್ತರಗಳನ್ನು ಆತ ಬರೆಯಬೇಕು.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಮಾಹಿತಿ ಆಧಾರಿತ ಉತ್ತರಗಳನ್ನು ಬೇಡುವ ಟಿಕ್ ವ್ಯವಸ್ಥೆಯಲ್ಲಿ ಇಂತಹ ಪ್ರಶ್ನೆ ಮತ್ತು ಉತ್ತರಗಳೆರಡು ಕೂಡ ಅಸಾಧ್ಯ. ಅಲ್ಲದೆ ವಿದ್ಯಾರ್ಥಿಗಳ ಆಸಕ್ತಿ, ಕಲಿಕೆ ವಿವಿಧ ಜ್ಞಾನ ಶಾಖೆಗಳಲ್ಲಿ ಬೇರೆ ಬೇರೆ ರೀತಿ ಇರುತ್ತದೆ. ಉದಾಹರಣೆಗೆ, ಗಣಿತ, ಭೌತವಿಜ್ಞಾನ, ರಸಾಯನ ಶಾಸ್ತ್ರದಂತಹ ವಿಷಯಗಳಲ್ಲಿ ಒಬ್ಬ ವಿದ್ಯಾರ್ಥಿ ಕಡಿಮೆ ಅಂಕ ಗಳಿಸಬಹುದು; ಅನುತ್ತೀರ್ಣನೂ ಆಗಬಹುದು. ಅಂದಮಾತ್ರಕ್ಕೆ ಆತ/ಆಕೆ ದಡ್ಡ/ದಡ್ಡಿ ಎಂಬ ತೀರ್ಮಾನಕ್ಕೆ ಬರುವುದು. ನಮ್ಮ ಸಾವಿರಾರು ಪೋಷಕರ ಹಾಗೆ ಇನ್ನೇನು ಗತಿಯಪ್ಪಾ!’ ಎಂದು ಹೇಳಿ ಆಕಾಶದತ್ತ ನೋಡುವುದು ವಿದ್ಯಾರ್ಥಿಯ ಪಾಲಿಗೆ ಮಾರಣಾಂತಿಕವಾಗಬಹುದು. ಯಾಕೆಂದರೆ ಪಿಯುಸಿಯಲ್ಲಿ (ಹಿಂದಿನ ಕಾಲದ ಇಂಟರ್‌ಮೀಡಿಯಟ್‌ನಲ್ಲಿ) ವಿಜ್ಞಾನ ವಿಷಯ ಆಯ್ದುಕೊಂಡು ‘ಫೇಲ್’ ಆದ ವಿದ್ಯಾರ್ಥಿಯೊಬ್ಬ ಮುಂದೆ ಪದವಿಹಂತದಲ್ಲಿ ಮಾನವಿಕ ವಿಷಯಗಳನ್ನು (ಆರ್ಟ್ಸ್) ಆಯ್ದುಕೊಂಡು ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿ, ಸ್ನಾತಕೋತ್ತರ(ಎಂಎ) ಹಂತದಲ್ಲಿ ಪುನಃ ಇಂಗ್ಲಿಷ್ ಸಾಹಿತ್ಯವನ್ನೇ ಆಯ್ಕೆ ಮಾಡಿ ವಿಶ್ವವಿದ್ಯಾನಿಲಯಕ್ಕೇ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದ ಉದಾಹರಣೆ ನಮ್ಮ ಕರ್ನಾಟಕದಲ್ಲೇ ಇದೆ. ಆ ವಿದ್ಯಾರ್ಥಿ ಬೇರೆ ಯಾರೂ ಅಲ್ಲ; ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ, ನನ್ನ ವಿದ್ಯಾಗುರುಗಳಾದ ಡಾ. ಯು.ಆರ್. ಅನಂತಮೂರ್ತಿ. ಅವರ ಅಚ್ಚುಮೆಚ್ಚಿನ ವಿಷಯವಾಗಿದ್ದ ‘ಕಾಮನ್‌ಸ್ಕೂಲ್’ ಬಗ್ಗೆ ನನ್ನ ಅಂಕಣವೊಂದರಲ್ಲಿ ಬರೆದಿದ್ದೆ. (ನನ್ನ ಲೇಖನವನ್ನು ಮೆಚ್ಚಿ ಅವರು ಬರೆದ ಅಂಚೆಕಾರ್ಡ್ ಇನ್ನೂ ನನ್ನ ಬಳಿ ಇದೆ.) ಮುಂದೆ ಅವರನ್ನು ಭೇಟಿಯಾಗಿ ಈ ವಿಷಯ ಮಾತನಾಡುವಾಗ ಅವರು ಹೇಳಿದ್ದು ನೆನಪಾಗುತ್ತದೆ: ‘‘ನನ್ನ ಅಪ್ಪನಿಗೆ ನಾನು ಇಂಜಿನಿಯರ್ ಆಗಬೇಕೆಂದು ಇತ್ತು. ಆದರೆ ನಾನು ಇಂಟರ್‌ಮೀಡಿಯಟ್‌ನಲ್ಲಿ ಸಾಯನ್ಸ್‌ನಲ್ಲಿ ಫೇಲ್ ಆದೆ. ಹಾಗಾಗಿ ಆರ್ಟ್ಸ್ ತಗೊಂಡೆ’’. ಅನಂತಮೂರ್ತಿಯವರ ಕಾಲದಲ್ಲಿ ‘ಟಿಕ್’ ವ್ಯವಸ್ಥೆ ಇರುತ್ತಿದ್ದಲ್ಲಿ ಏನಾಗುತಿತ್ತೋ!

ಹಾಗಾದರೆ ಮುಂದೇನು? ತೆರೆದ ಪುಸ್ತಕ ಪರೀಕ್ಷೆಯೇ? ಇಲ್ಲಿ ಗಮನಿಸಬೇಕಾದ ಇನ್ನೊಂದು ಮುಖ್ಯ ವಿಷಯವೆಂದರೆ ಯಾವ ರೀತಿಯ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಲಾಗುತ್ತದೆ? ಎನ್ನುವುದು. ಮಾಹಿತಿಯ ತುಣುಕುಗಳನ್ನೇ ಟಿಕ್ ಮಾಡಿ ವಿದ್ಯಾರ್ಥಿ ಪಾಸಾಗುವಂತೆ ಮಾಡುವುದು ನಮ್ಮ ಗುರಿಯಾದಲ್ಲಿ, ತೆರೆದ ಪುಸ್ತಕ ಪರೀಕ್ಷೆಯಲ್ಲಿ ವಿದ್ಯಾರ್ಥಿ ಪುಸ್ತಕದ ಸಂಬಂಧಿತ ಪುಟಕ್ಕೆ ಹೋಗಿ ಉತ್ತರ ಹುಡುಕಿ ಬರೆದು ಪಾಸಾಗಬಹುದು. ಸುಲಭವಾಗಿ ಆಗ ಫೇಲಾದ ಕಾರಣಕ್ಕಾಗಿ ನಡೆಯುವ ಆತ್ಮಹತ್ಯೆಗಳನ್ನು ತಡೆಯಬಹುದು. ಒಟ್ಟಿನಲ್ಲಿ, ತೆರೆದ ಪುಸ್ತಕದ ರಚನೆ ಹೇಗಿರುತ್ತದೆ ಎಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ? ಕೇವಲ ಮಾಹಿತಿಯನ್ನು ಬೇಡುವ ಪ್ರಶ್ನೆಗಳನ್ನೋ ಅಥವಾ ವಿದ್ಯಾರ್ಥಿಯ ಸ್ವಂತಿಕೆ, ಸೃಜನಶೀಲತೆ, ತಾರ್ಕಿಕ ಚಿಂತನೆ, ಅಭಿವ್ಯಕ್ತಿ ಸಾಮರ್ಥ್ಯವನ್ನು ಅಳೆಯುವ ಪ್ರಶ್ನೆಗಳನ್ನೋ?

ನಾವು ಕೇಳುವ ಪ್ರಶ್ನೆಗಳ ರೀತಿ ಬದಲಾಗದೆ ವಿದ್ಯಾರ್ಥಿಗಳು ಉತ್ತರಿಸುವ ರೀತಿ ಬದಲಾಗುವುದಿಲ್ಲ. ಇಲ್ಲಿ, ತೆರೆದ ಪುಸ್ತಕ ಪದ್ಧತಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ನಾನು ಮೂರು ದಶಕಗಳ ಹಿಂದೆ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಎದುರಿಸಿದ ಒಂದು ಪರೀಕ್ಷಾ ಪದ್ಧತಿಯನ್ನು ಉಲ್ಲೇಖಿಸಬಯಸುತ್ತೇನೆ. ಇಂಗ್ಲಿಷ್ ಬೋಧಿಸುವ ಶಿಕ್ಷಕರಿಗೆ ಕಮ್ಮಟವೊಂದನ್ನು ನಡೆಸುವುದಕ್ಕೆ ಸಂಬಂಧಿಸಿದ ಪ್ರಶ್ನೆ ಅದು. ಅಲ್ಲಿ ತೆರೆದ ಪುಸ್ತಕ ಪರೀಕ್ಷೆಯಲ್ಲ; ಮನೆಗೆ ಹೋಗಿ ಎಷ್ಟು ಪುಸ್ತಕಗಳನ್ನು ಬೇಕಾದರೂ ತೆರೆದು ಓದಿ ಉತ್ತರಬರೆಯುವ ಅವಕಾಶವಿತ್ತು: ಪ್ರಶ್ನೆಪತ್ರಿಕೆಯನ್ನೇ ಮನೆಗೆ ಕೊಂಡು ಹೋಗಿ ವಿದ್ಯಾರ್ಥಿಗಳು ಉತ್ತರ ಬರೆಯಬೇಕಾಗಿತ್ತು. ಪರೀಕ್ಷೆಯ ಅವಧಿ ಮೂರು ಗಂಟೆಯಲ್ಲ; 48 ಗಂಟೆಗಳು. ಆದರೆ, ಆ ಪ್ರಶ್ನೆ ಹೇಗಿತ್ತು? ಇಂಗ್ಲೆಂಡಿನ ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ‘ಸೆಂಟರ್ ಫಾರ್ ಲ್ಯಾಂಗ್ವೇಜ್ ಇನ್ ಎಜುಕೇಶನ್’ನ ನಿರ್ದೇಶಕನಾಗಿದ್ದ ಖ್ಯಾತ ಭಾಷಾ ವಿಜ್ಞಾನಿ ಕ್ರಿಸ್ಟೊಫರ್ ಬ್ರಮ್ ಫಿಟ್, ಸ್ಪೈನ್‌ನ ಇಂಗ್ಲಿಷ್ ಶಿಕ್ಷಕರಿಗಾಗಿ ನಡೆಸಿದ ಒಂದು ಇಂಗ್ಲಿಷ್ ಬೋಧನಾ ಕಮ್ಮಟದ ಮಾದರಿಯನ್ನು ನೀಡಿ ‘‘ಈ ಕಮ್ಮಟದ ಮಾದರಿಯಲ್ಲಿ ನಿಮ್ಮ ದೇಶದ ಒಂದು ನಿರ್ದಿಷ್ಟ ಪ್ರದೇಶದ ಇಂಗ್ಲಿಷ್ ಶಿಕ್ಷಕರಿಗಾಗಿ ನಡೆಸುವ ಒಂದು ಕಮ್ಮಟ ಹೇಗಿರಬೇಕು? ಎಂದು ಬರೆಯಿರಿ’’ ಎಂಬುದು ನಮಗೆ ನೀಡಿದ ಪ್ರಶ್ನೆಯಾಗಿತ್ತು. ಆ ಪ್ರಶ್ನೆಗೆ ಉತ್ತರ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದ ಲಕ್ಷಗಟ್ಟಲೆ ಪುಸ್ತಕಗಳಲ್ಲಿ ಯಾವ ಪುಸ್ತಕವನ್ನು ತೆರೆದರೂ ಸಿಗುವಂತಿರಲಿಲ್ಲ. ವಿದ್ಯಾರ್ಥಿಗಳು ತಮ್ಮ ತಮ್ಮ ನಿವಾಸಗಳಿಗೆ ಹೋಗಿ ಸೃಜನಾತ್ಮಕವಾಗಿ ಯೋಚಿಸಿ, ಯೋಜಿಸಿ ಉತ್ತರ ಸಿದ್ಧಪಡಿಸಬೇಕಾಗಿತ್ತು. ಪ್ರಶ್ನೆಪತ್ರಿಕೆ ಕೈಗೆ ದೊರಕಿದ ಮೂರನೆಯ ದಿನ ಬೆಳಗ್ಗೆ ನಮ್ಮ ಉತ್ತರಪತ್ರಿಕೆಯನ್ನು ಸಂಬಂಧಿತ ವಿಭಾಗಕ್ಕೆ ಸಲ್ಲಿಸುವಾಗ ಹಲವರ ಕಣ್ಣುಗಳಲ್ಲಿ ಅವರು ಹಿಂದಿನ ಎರಡು ರಾತ್ರಿ ನಿದ್ದೆಮಾಡಿರದ ಚಿಹ್ನೆಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು!

ಆದ್ದರಿಂದ ತೆರೆದ ಪುಸ್ತಕ ಪರೀಕ್ಷೆ ನಾವು ನಿರೀಕ್ಷಿಸುವ ಫಲಿತಾಂಶಗಳಲ್ಲಿ ಕೆಲವನ್ನು ನೀಡಬೇಕಾದರೂ, ವಿದ್ಯಾರ್ಥಿಗಳಲ್ಲಿ ಬೌದ್ಧಿಕ ನೆಗೆತ ಸಾಧ್ಯವಾಗುವಂತೆ ಮಾಡುವ, ಅವರಿಗೆ ನೀಡಲಾದ ಮಾಹಿತಿಯನ್ನು, ಫ್ಯಾಕ್ಟ್‌ಗಳನ್ನು ಓದಿ, ತಮ್ಮದೇ ಆದ ತೀರ್ಮಾನಗಳಿಗೆ (ಇನ್‌ಫರೆನ್ಸ್‌ಗಳಿಗೆ) ಬರುವ, ಒಳನೋಟಗಳನ್ನು ಪಡೆಯುವುದನ್ನು ಅನಿವಾರ್ಯವಾಗಿರುವ ಪ್ರಶ್ನೆಪತ್ರಿಕೆಗಳು ಸಿದ್ಧವಾಗಬೇಕು.

ಮೊದಲಾಗಿ ಅಂತಹ ಶಿಕ್ಷಕರನ್ನು ತಯಾರು ಮಾಡಬೇಕು. ಕರ್ನಾಟಕದ ಪಿಯುಸಿ ಇಂಗ್ಲಿಷ್ ಪಠ್ಯಪುಸ್ತಕ ರಚನಾ ಸಮಿತಿಯ ಒಬ್ಬ ಸದಸ್ಯನಾಗಿ ನಾನು ಪಡೆದ ಅನುಭವ ಅಂತಹ ಶಿಕ್ಷಕರನ್ನು ತಯಾರುಮಾಡುವುದು ನಾವು ಹೇಳುವಷ್ಟು ಸುಲಭವಲ್ಲ ಎಂದು ನನಗೆ ಮನವರಿಕೆ ಮಾಡಿಸಿದೆ.

ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಗಬೇಕಾದರೆ ಶಿಕ್ಷಣದ ವಿವಿಧ ಹಂತಗಳಲ್ಲಿ ಮುಚ್ಚಿದ ಕಕ್ಷೆಯ ಬಾಗಿಲು ತೆರೆಯಬೇಕು.

Writer - ಡಾ. ಬಿ. ಭಾಸ್ಕರ ರಾವ್

contributor

Editor - ಡಾ. ಬಿ. ಭಾಸ್ಕರ ರಾವ್

contributor

Similar News