ಆಂಗ್ಲರಿಗೆ ‘ಶಾರ್ಪ್ ಶೂಟರ್’ಗಳ ಭಯ

Update: 2018-07-10 18:43 GMT

ಮಾಸ್ಕೊ, ಜು.10: ಇಪ್ಪತ್ತೊಂದನೇ ಆವೃತ್ತಿಯ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಬುಧವಾರ ಇಂಗ್ಲೆಂಡ್ ಮತ್ತು ಕ್ರೊಯೇಶಿಯಾ ಸೆಣಸಾಡಲಿವೆ.

 ಲುಝ್ನಿಕಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳಿಂದಲೂ ಜಿದ್ದಾಜಿದ್ದಿನ ಹೋರಾಟ ನಿರೀಕ್ಷಿಸಲಾಗಿದೆ. 28 ವರ್ಷಗಳ ಬಳಿಕ ಇಂಗ್ಲೆಂಡ್ ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿದೆ.

 ಇಂಗ್ಲೆಂಡ್ ಎರಡನೇ ಬಾರಿ ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಿದೆ. 1966ರಲ್ಲಿ ಇಂಗ್ಲೆಂಡ್ ತಂಡ ಚೊಚ್ಚಲ ಪ್ರಶಸ್ತಿ ಜಯಿಸಿತ್ತು. 1990ರಲ್ಲಿ ವೆಸ್ಟ್ ಜರ್ಮನಿ ತಂಡ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿ ಹೊರದಬ್ಬಿತ್ತು. ಬಳಿಕ ಮೂರನೇ ಸ್ಥಾನಕ್ಕಾಗಿ ಇಟಲಿಯ ವಿರುದ್ಧ ಹೋರಾಡಿದ್ದರೂ ಫಲಕಾರಿಯಾಗಲಿಲ್ಲ. ಇಂಗ್ಲೆಂಡ್ 4ನೇ ಸ್ಥಾನದೊಂದಿಗೆ ಕೂಟದಲ್ಲಿ ಅಭಿಯಾನ ಕೊನೆಗೊಳಿಸಿತ್ತು.

  ಈ ಬಾರಿ ವಿಶ್ವಕಪ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಸ್ವೀಡನ್ ವಿರುದ್ಧ 2-0 ಅಂತರದಲ್ಲಿ ಜಯ ಗಳಿಸಿದ್ದ ಇಂಗ್ಲೆಂಡ್ ಮತ್ತೆ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದೆ. ಕ್ರೊಯೇಶಿಯಾ ಕ್ವಾರ್ಟರ್ ಫೈನಲ್‌ನಲ್ಲಿ ಆತಿಥೇಯ ರಶ್ಯವನ್ನು ಪೆನಾಲ್ಟಿ ಶೂಟೌಟ್ ಮೂಲಕ ಬಗ್ಗು ಬಡಿದು 20 ವರ್ಷಗಳ ಬಳಿಕ ಮೊದಲ ಬಾರಿ ಸೆಮಿಫೈನಲ್ ತಲುಪಿತ್ತು. ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಡೆನ್ಮಾರ್ಕ್‌ಗೆ ಸೋಲುಣಿಸಿದ್ದ ಕ್ರೊಯೇಶಿಯಾ ಎಂಟರ ಘಟ್ಟ ತಲುಪಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಸತತ ಯಶಸ್ಸು ಗಳಿಸಿರುವ ಕ್ರೊಯೇಶಿಯಾ ತಂಡದ ಬಗ್ಗೆ ಇಂಗ್ಲೆಂಡ್‌ಗೆ ಭಯ ಆವರಿಸಿದೆ.

ಕ್ರೊಯೇಶಿಯಾ ಮತ್ತು ಇಂಗ್ಲೆಂಡ್ 1982ರ ಬಳಿಕ ಮೊದಲ ಬಾರಿ ವಿಶ್ವಕಪ್‌ನಲ್ಲಿ ಪರಸ್ಪರ ಎದುರಿಸುತ್ತಿವೆ

ಮುಖಾಮುಖಿ

ಕ್ರೊಯೇಶಿಯಾ ಮತ್ತು ಇಂಗ್ಲೆಂಡ್ ಈ ತನಕ 7 ಪ್ರಮುಖ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆೆ. ಇಂಗ್ಲೆಂಡ್ 4 ಮತ್ತು ಕ್ರೊಯೇಶಿಯಾ 2ರಲ್ಲಿ ಜಯ ಗಳಿಸಿದೆ. 1 ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.

1996ರಲ್ಲಿ ಮೊದಲ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯ ಗೋಲುರಹಿತ (0-0) ಡ್ರಾದಲ್ಲಿ ಕೊನೆಗೊಂಡಿತ್ತು. 2003ರಲ್ಲಿ ಪ್ರದರ್ಶನ ಪಂದ್ಯದಲ್ಲಿ ಇಂಗ್ಲೆಂಡ್ 3-1 ಅಂತರದಲ್ಲಿ ಜಯ ಗಳಿಸಿತ್ತು. 2008ರಲ್ಲಿ ಯುರೋ ಕಪ್ ಅರ್ಹತಾ ಪಂದ್ಯದಲ್ಲಿ ಕ್ರೊಯೇಶಿಯಾ 2-0 ಅಂತರದಲ್ಲಿ ಜಯ ಗಳಿಸಿತ್ತು. 2007ರಲ್ಲಿ ವಿಂಬ್ಲಿಯಲ್ಲಿ ನಡೆದ ಯುರೋ ಕಪ್ ಅರ್ಹತಾ ಪಂದ್ಯದಲ್ಲಿ 3-2 ಅಂತರದಲ್ಲಿ ಜಯ ಗಳಿಸಿದ್ದ ಕ್ರೊಯೇಶಿಯಾ ಯುರೋ ಕಪ್‌ನಲ್ಲಿ ಇಂಗ್ಲೆಂಡ್‌ನ ಹಾದಿಯನ್ನು ಬಂದ್ ಮಾಡಿತ್ತು. ಮುಂದೆ 2 ಪಂದ್ಯಗಳಲ್ಲಿ ಕ್ರೊಯೇಶಿಯಾಕ್ಕೆ ಇಂಗ್ಲೆಂಡ್ ಸೋಲುಣಿಸಿತ್ತು. 2008ರ ವಿಶ್ವಕಪ್‌ನ ಅರ್ಹತಾ ಪಂದ್ಯದಲ್ಲಿ ಕ್ರೊಯೇಶಿಯಾ ವಿರುದ್ಧ ಇಂಗ್ಲೆಂಡ್ ಜಯ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News