ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿದ್ದ ಬಾಲಕರ ರಕ್ಷಣೆಗೆ ನೆರವಾದ ಭಾರತದ ತಜ್ಞರು

Update: 2018-07-11 06:21 GMT

ಪುಣೆ, ಜು.11: ಥಾಯ್ಲೆಂಡ್ ನ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ತಂಡದ ಬಾಲಕರ ರಕ್ಷಣೆಯಲ್ಲಿ ಪುಣೆಯ ಕಿರ್ಲೊಸ್ಕರ್ ಬ್ರದರ್ಸ್ ಲಿಮಿಟೆಡ್ ನ  (ಕೆಬಿಎಲ್) ತಜ್ಞರ ತಂಡ  ನೆರವು ನೀಡಿತ್ತು.

ಗುಹೆಯಿಂದ ನೀರನ್ನು  ಹೊರಹಾಕಲು ನಾಲ್ಕು ದೊಡ್ಡ ಪಂಪ್ ಗಳನ್ನು ಕೆಬಿಎಲ್ ಒದಗಿಸಿತ್ತು. ಜುಲೈ 5ರಿಂದ ಕೆಬಿಎಲ್ ನ ಪರಿಣತರ ತಂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿತ್ತು

ಭಾರತದ ರಾಯಭಾರಿ  ಕಚೇರಿ ಕಾರ್ಯಾಚರಣೆಗೆ ಕೆಬಿಎಲ್ ನೆರವು ಪಡೆಯಲು ಥಾಯ್ಲೆಂಡ್ ಸರಕಾರಕ್ಕೆ ಶಿಫಾರಸು ಮಾಡಿದ ಬಳಿಕ  ಭಾರತ, ಥಾಯ್ಲೆಂಡ್ ಮತ್ತು ಇಂಗ್ಲೆಂಡ್ ನಲ್ಲಿರುವ ತನ್ನ ಸಂಸ್ಥೆಯ ತಂಡವನ್ನು ಥಾಯ್ಲೆಂಡ್ ಗೆ ಕಳುಹಿಸಿತ್ತು. ಅಲ್ಲದೆ ನೀರನ್ನು ಹೊರಹಾಕುವ ಉದ್ದೇಶಕ್ಕಾಗಿ ಮಹಾರಾಷ್ಟ್ರದ ಕಿರ್ಲೋಸ್ಕರ್ವಾಡಿ ಸ್ಥಾವರದಿಂದ ನಾಲ್ಕು ದೊಡ್ಡ ಪಂಪ್ ಗಳನ್ನು ವಿಮಾನದ ಮೂಲಕ ಕಳಹಿಸಿತ್ತು ಎಂದು ಕೆಬಿಎಲ್ ಪ್ರಕಟಣೆ ತಿಳಿಸಿದೆ.

ಥಾಯ್ಲೆಂಡ್ ನ ಥೈಲ್ಯಾಂಡ್ ಥಮ್ ಲುವಾಂಗ್ ಗುಹೆಯಲ್ಲಿ ಸಿಲುಕಿದ್ದ ವೈಲ್ಡ್ ಬೊವಾರ್ ಫುಟ್‍ಬಾಲ್ ತಂಡದ ಕೋಚ್ ಮತ್ತು 12 ಬಾಲಕರನ್ನು ಇದೀಗ ರಕ್ಷಿಸಲಾಗಿದೆ.  ಜು.10ರಂದು ಕೋಚ್ ನಾಲ್ವರು ಬಾಲಕರನ್ನು ಗುಹೆಯಿಂದ ಹೊರತರುವುದೊಂದಿಗೆ  ಗುಹೆಯಲ್ಲಿ ಸಿಲುಕಿದ್ದ ಫುಟ್ಬಾಲ್ ತಂಡದ ಸದಸ್ಯರನ್ನು ಹೊರತರಲು ಜೂನ್ 23ರಿಂದ ನಡೆಯುತ್ತಿದ್ದ ಕಾರ್ಯಾಚರಣೆ ಪೂರ್ಣಗೊಂಡಿತ್ತು.

ಮಯನ್ಮಾರ್ ದೇಶದ ಗಡಿ ಭಾಗದಲ್ಲಿರುವ ಈ ಗುಹೆಯಲ್ಲಿ ಬುದ್ಧನ ದೇವಾಲಯವಿದೆ. ಇಲ್ಲಿಗೆ ವೈಲ್ಡ್ ಬೊವಾರ್ ಫುಟ್ಬಾಲ್  ತಂಡದ 12 ಬಾಲಕರು ಹಾಗೂ ಕೋಚ್ ಜೂನ್ 23ರಂದು ಹೋಗಿದ್ದರು.  ಆಗ ಮಳೆ ಆರಂಭಗೊಂಡು ಗುಹೆಗೆ ನೀರು ನುಗ್ಗಿದ ಹಿನ್ನೆಲೆಯಲ್ಲಿ ಫುಟ್ಬಾಲ್ ಕೋಚ್ , ಬಾಲಕರು ಸೇರಿದಂತೆ 13 ಮಂದಿ ಹೊರಬರಲಾರದೆ ಅತಂತ್ರ ಸ್ಥಿತಿ ಎದುರಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News