ರಿಲಯನ್ಸ್ ಬಳಿಕ ವೇದಾಂತದ ಇನ್ನೂ ಸ್ಥಾಪನೆಯಾಗದ ವಿವಿಗೆ 'ಶ್ರೇಷ್ಠ ಸಂಸ್ಥೆ' ಮಾನ್ಯತೆ?
ಹೊಸದಿಲ್ಲಿ, ಜು.12: ಅಸ್ಥಿತ್ವದಲ್ಲಿಲ್ಲದ ರಿಲಯನ್ಸ್ ಜಿಯೋ ಇನ್ ಸ್ಟಿಟ್ಯೂಟ್ ಗೆ ಶ್ರೇಷ್ಠ ಸಂಸ್ಥೆ ಮಾನ್ಯತೆ ನೀಡಿದ ವಿಚಾರ ವಿವಾದ ಸೃಷ್ಟಿಸಿರುವ ನಡುವೆಯೇ ಸರಕಾರವು ಇಂತಹ ಇನ್ನೊಂದು ಅಸ್ತಿತ್ವದಲ್ಲಿಲ್ಲದ ಸಂಸ್ಥೆಗೆ ಮಾನ್ಯತೆ ನೀಡುವ ಸಾಧ್ಯತೆ ಇದೆ ಎಂದು newindianexpress.com ವರದಿ ಮಾಡಿದೆ.
ಸಂಪೂರ್ಣ ಶೈಕ್ಷಣಿಕ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ನೀಡುವ ಮಾನ್ಯತೆಗಾಗಿ ಅರ್ಜಿ ಸಲ್ಲಿಸಲು ವೇದಾಂತ ಗ್ರೂಪ್ ನ ಅಸ್ತಿತ್ವದಲ್ಲಿಲ್ಲದ, ಪ್ರಸ್ತಾಪಿತ ವಿವಿಗೆ ಸರಕಾರವು ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ ಎನ್ನುವುದು ವರದಿಯಲ್ಲಿದೆ.
"ಪ್ರಸ್ತಾಪಿತ ವೇದಾಂತ ವಿವಿಯ ಮನವಿಯ ಹಿನ್ನೆಲೆಯಲ್ಲಿ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ. ಜಿಯೋ ಇನ್ ಸ್ಟಿಟ್ಯೂಟ್ ನ ಅರ್ಜಿ ಪಟ್ಟಿಯಲ್ಲಿದೆ. ಅರ್ಜಿ ತಯಾರಿಕೆ ಸ್ವಲ್ಪ ತಡವಾದುದರಿಂದ ವೇದಾಂತ ವಿವಿ ಸ್ವಲ್ಪ ಸಮಯಾವಕಾಶ ಕೇಳಿದೆ" ಎಂದು ಮಾನವ ಸಂಪನ್ಮೂಲ ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯಂ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
'ಗ್ರೀನ್ ಫೀಲ್ಡ್' ವಿಭಾಗದಲ್ಲಿ ಜಿಯೋ ಇನ್ ಸ್ಟಿಟ್ಯೂಟ್ ದಿಲ್ಲಿಯ ಭಾರ್ತಿ ವಿವಿಗಾಗಿ ಅರ್ಜಿ ಸಲ್ಲಿಸಿದ್ದ ಏರ್ ಟೆಲ್ ಹಾಗು ಒಡಿಶಾದ ವೇದಾಂತ ಯುನಿವರ್ಸಿಟಿ ಜೊತೆ ಸ್ಪರ್ಧೆಯಲ್ಲಿತ್ತು. ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಸಲಹೆಗಾರರಾಗಿರುವ ಕೆಆರ್ ಇಎ ವಿವಿ, ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್, ದಿಲ್ಲಿಯ ಇಂಡಸ್ ಟೆಕ್ ಯುನಿವರ್ಸಿಟಿ, ಬೆಂಗಳೂರಿನ ಆಚಾರ್ಯ ಇನ್ ಸ್ಟಿಟ್ಯೂಟ್ ಗಳು ಇತರ ಅರ್ಜಿದಾರರಾಗಿದ್ದವು.
ಸೋಮವಾರ ಖಾಸಗಿ ಹಾಗು ಸಾರ್ವಜನಿಕ ಕ್ಷೇತ್ರಗಳ ತಲಾ ಮೂರು ಸಂಸ್ಥೆಗಳಿಗೆ ಸಚಿವಾಲಯವು 'ಶ್ರೇಷ್ಟ ಸಂಸ್ಥೆ' ಮಾನ್ಯತೆ ನೀಡಿತ್ತು. ಆದರೆ ಸದ್ಯಕ್ಕೆ ಅಸ್ತಿತ್ವದಲ್ಲಿಲ್ಲದ ಜಿಯೋ ಇನ್ ಸ್ಟಿಟ್ಯೂಟ್ ಗೆ ಮಾನ್ಯತೆ ನೀಡಿರುವ ಸರಕಾರದ ಕ್ರಮವನ್ನು ಹಲವರು ಪ್ರಶ್ನಿಸಿದ್ದರು.