ನವಾಝ್ ಶರೀಫ್ ಮೊಮ್ಮಕ್ಕಳಿಬ್ಬರ ಬಂಧನ

Update: 2018-07-13 04:52 GMT

ಹೊಸದಿಲ್ಲಿ, ಜು.13: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್ ಅವರನ್ನು ಲಾಹೋರ್‌ನಲ್ಲಿ ಇಂದು ಸಂಜೆ ಬಂಧಿಸಲು ಸಿದ್ಧತೆ ನಡೆದಿದ್ದರೆ, ಅವರ ಮೊಮ್ಮಕ್ಕಳನ್ನು ನಿನ್ನೆ ಸಂಜೆಯೇ ಲಂಡನ್ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ತಮ್ಮ ಅಪಾರ್ಟ್‌ಮೆಂಟ್‌ನ ಹೊರಗೆ ತಮ್ಮನ್ನು ನಿಂದಿಸಿದ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಮೊಮ್ಮಕ್ಕಳನ್ನು ಬಂಧಿಸಲಾಗಿದೆ.

ಶರೀಫ್ ಅವರ ಪುತ್ರ ಲಂಡನ್‌ನ ಪಾರ್ಕ್‌ ಲೇನ್‌ನ ಅವೆನ್‌ಫೀಲ್ಡ್‌ನಲ್ಲಿ ಫ್ಲ್ಯಾಟ್ ಹೊಂದಿದ್ದು, ಶರೀಫ್ ಅವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ಕಳೆದ ವಾರ ಘೋಷಣೆಯಾದ ಬಳಿಕ ಶರೀಫ್ ಬೆಂಬಲಿಗರು ಹಾಗೂ ವಿರೋಧಿಗಳು ಇಲ್ಲಿ ಜಮಾಯಿಸಿದ್ದಾರೆ. ಅವೆನ್‌ ಫೀಲ್ಡ್ ಅಪಾರ್ಟ್‌ಮೆಂಟ್ ಸೇರಿದಂತೆ ಲಂಡನ್‌ನಲ್ಲಿ ವಿಲಾಸಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿಸಿದ ಆರೋಪದಲ್ಲಿ ಶರೀಫ್ ಶಿಕ್ಷೆಗೆ ಗುರಿಯಾಗಿದ್ದಾರೆ. ಅಕ್ರಮ ಹಣದಿಂದ ಇದನ್ನು ಖರೀದಿಸಲಾಗಿದೆ ಎನ್ನುವುದು ಅವರ ಮೇಲೆ ಇರುವ ಆರೋಪ.

ನಿನ್ನೆ ಮಧ್ಯಾಹ್ನ ಅವೆನ್‌ ಫೀಲ್ಡ್ ನಿವಾಸದ ಮುಂದೆ ಪ್ರತಿಭಟನಾಕಾರರು ಸೇರಿ ಶರೀಫ್ ಅವರ ಮೊಮ್ಮಗ ಜುನೈದ್ ಸಫ್ದರ್ ಹಾಗೂ ಝಕಾರಿಯಾ ಶರೀಫ್ ಅವರನು ನಿಂದಿಸಿದರು ಎನ್ನಲಾಗಿದೆ. ತಕ್ಷಣ ಇಬ್ಬರೂ ಪ್ರತಿಭಟನಾಕಾರರನ್ನು ಕಾಲರ್‌ನಲ್ಲಿ ಹಿಡಿದು ಗುದ್ದಿದರು ಎಂದು ಆಪಾದಿಸಲಾಗಿದೆ. ಜುನೈದ್, ಶರೀಫ್ ಅವರ ಮಗಳು ಮರ್ಯಮ್ ಅವರ ಮಗ. ಝಕರಿಯಾ ಶರೀಫ್ ಅವರ ಮಗ ಹುಸೇನ್ ಅವರ ಪುತ್ರ.

ಇದನ್ನು ನೋಡುತ್ತಿದ್ದ ಪೊಲೀಸರು, ಇಬ್ಬರನ್ನೂ ಬೇಡಿ ಹಾಕಿ ಕರೆದೊಯ್ದರು. ಹತ್ತಿರದ ಪೊಲೀಸ್ ಠಾಣೆಗೆ ಇವರಿಬ್ಬರನ್ನೂ ಕರೆದೊಯ್ಯಲಾಗಿದೆ ಎಂದು ದುನ್ಯಾ ನ್ಯೂಸ್ ವರದಿ ಮಾಡಿದೆ.

ಪ್ರತಿಭಟನಾಕಾರರು ಅವೆನ್‌ ಫೀಲ್ಡ್ ಮನೆಮುಂದೆ ನನ್ನತ್ತ ಉಗಿದು ಹಲ್ಲೆಗೆ ಮುಂದಾಗಿದ್ದಾರೆ ಎಂದು ಜುನೈದ್ ಆಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News