ದಕ್ಷಿಣ ಕನ್ನಡದ ಕ್ಯಾಂಟೀನ್ ರಾಜ್ಯಕ್ಕೇ ಮಾದರಿ

Update: 2018-07-13 06:39 GMT

ಮಂಗಳೂರು, ಜು.12: ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟೀನ್ ಯೋಜನೆ ಪ್ರಾರಂಭವಾಗಿ ವರ್ಷ ಕಳೆಯುತ್ತಾ ಬಂದಿದೆ. ಇತ್ತ ದಕ್ಷಿಣ ಕನ್ನಡದ ಕ್ಯಾಂಟೀನ್‌ಗಳಲ್ಲಿ ಕಡಿಮೆ ಬೆಲೆಗೆ ಉತ್ಕೃಷ್ಟ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದ್ದು, ಈ ಮೂಲಕ ಜಿಲ್ಲೆಯ ಕ್ಯಾಂಟೀನ್‌ಗಳು ರಾಜ್ಯಕ್ಕೆ ಮಾದರಿಯಾಗಿವೆ.

ರಾಜ್ಯದ ವಿವಿಧೆಡೆ ಯೋಜನೆಯ ಅನುಷ್ಠಾನದಲ್ಲಿ ವಿಳಂಬ, ಕಳಪೆ ಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದರೆ, ದ.ಕ.ಜಿಲ್ಲೆಯ ಐದು ಇಂದಿರಾ ಕ್ಯಾಂಟೀನ್‌ಗಳಾದ ಸ್ಟೇಟ್ ಬ್ಯಾಂಕ್ ಸಮೀಪದ ಲೇಡಿಗೋಶನ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಪಕ್ಕದ ಉರ್ವಸ್ಟೋರ್, ಕಾವೂರು, ತೊಕ್ಕೊಟ್ಟು, ಸುರತ್ಕಲ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಇಂದಿರಾ ಕ್ಯಾಂಟೀನ್ ಯೋಜನೆ ಯಶಸ್ವಿ 

ಈ ಐದು ಕ್ಯಾಂಟೀನ್‌ಗಳಲ್ಲಿನ ಉತ್ಕೃಷ್ಟ ಮಟ್ಟದ ಆಹಾರ, ಸ್ವಚ್ಛತೆ, ಸಿಬ್ಬಂದಿಯ ಕಾರ್ಯ ನಿರ್ವಹಣೆ ಅವಲೋಕಿಸಿದರೆ ರಾಜ್ಯದಲ್ಲೇ ಅದ್ವಿತೀಯ ಸ್ಥಾನವನ್ನು ಪಡೆಯುವುದರಲ್ಲಿ ಸಂಶಯವಿಲ್ಲ.

ರಾಜ್ಯದಲ್ಲಿ ಪ್ರಾದೇಶಿಕ ಅನುಗುಣವಾಗಿ ಆಯಾ ಸ್ಥಳದಲ್ಲಿ ಬಳಕೆಯಿರುವ ಆಹಾರವನ್ನು ಕ್ಯಾಂಟೀನ್‌ಗಳಲ್ಲಿ ವಿತರಿಸಲಾಗುತ್ತಿದೆ. ಹಾಗೆಯೇ ಕರಾವಳಿಯಲ್ಲಿ ಕುಚಲಕ್ಕಿ ಅನ್ನವನ್ನು ವಿಶೇಷವಾಗಿ ನೀಡಲಾಗುತ್ತಿದೆ. ಜೊತೆಗೆ ವೈಟ್‌ರೈಸ್(ಅಕ್ಕಿಅನ್ನ)ನ್ನೂ ನೀಡಲಾಗುತ್ತಿದೆ.

ಜಿಲ್ಲೆಯ ಐದು ಕ್ಯಾಂಟೀನ್‌ಗಳಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಆಹಾರ ಸೇವನೆಗೆ ಪ್ರತಿದಿನ ಸುಮಾರು 7,000ಕ್ಕೂ ಹೆಚ್ಚು ಮಂದಿ ಆಗಮಿಸುವರು. ಲೇಡಿಗೋಶನ್‌ನಲ್ಲಿ ಸರಕಾರಿ ಕಚೇರಿಗಳು, ಆಸ್ಪತ್ರೆ, ಸಂತೆ ಮಾರುಕಟ್ಟೆಗಳೇ ಹೆಚ್ಚು ಇರುವುದರಿಂದ ಇಲ್ಲಿಗೆ ಬರುವ ಜನರ ಸಂಖ್ಯೆಯೂ ಹೆಚ್ಚಿದೆ. ಆದರೆ, ತೊಕ್ಕೊಟ್ಟಿನಲ್ಲಿರುವ ಇಂದಿರಾ ಕ್ಯಾಂಟೀನ್ ಇದಕ್ಕೆ ತದ್ವಿರುದ್ಧವಾಗಿದ್ದು, ಇಲ್ಲಿ ಇದರ ಪ್ರಯೋಜನ ಪಡೆಯುವವರ ಸಂಖ್ಯೆ ತೀರಾ ಕಡಿಮೆ.

ಉರ್ವಸ್ಟೋರ್‌ನಲ್ಲಿ ಬೃಹತ್ ‘ಮದರ್ ಕಿಚನ್’

ಮುಡಾ ಬಳಿಯ ಉರ್ವಸ್ಟೋರ್ ಇಂದಿರಾ ಕ್ಯಾಂಟೀನ್ ಸಮೀಪದಲ್ಲೇ ಬೃಹತ್ ‘ಮದರ್ ಕಿಚನ್’ನ್ನು ಸ್ಥಾಪಿಸಲಾಗಿದೆ. ಇಲ್ಲಿಂದಲೇ ಉಳಿದ ಐದು ಕ್ಯಾಂಟೀನ್‌ಗಳಿಗೆ ದಿನದ ಮೂರು ಅವಧಿಯ ಆಹಾರವನ್ನು ವಾಹನಗಳ ಮೂಲಕ ಸಾಗಣೆ ಮಾಡಲಾಗುತ್ತಿದೆ. ಬೃಹತ್ ಮದರ್ ಕಿಚನ್‌ನಲ್ಲಿ ಸುಮಾರು 29 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಇಲ್ಲಿನ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯನ್ನು ಸಾಯಿ ಹಾಸ್ಪಿಟಾಲಿಟಿ ಸರ್ವಿಸಸ್‌ಗೆ ಗುತ್ತಿಗೆ ನೀಡಲಾಗಿದೆ.

ಕ್ಯಾಂಟೀನ್‌ಗಳಲ್ಲಿ ಆಹಾರ ಸುಭದ್ರತೆಗಾಗಿ ಆರೋಗ್ಯಾಧಿ ಕಾರಿಗಳನ್ನು ನೇಮಿಸಿಲ್ಲ. ಆದರೆ, ಮನಪಾದಿಂದಲೇ ಒಬ್ಬ ಆರೋಗ್ಯಾಧಿಕಾರಿ ಕಾಂಟೀನ್‌ಗಳಿಗೆ ಭೇಟಿ, ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸುತ್ತಾರೆ.

ಪಂಪ್‌ವೆಲ್‌ನಲ್ಲಿ ಶೀಘ್ರವೇ ಆರಂಭ

ಕಡಿಮೆ ದರದಲ್ಲಿ ಆಹಾರ ನೀಡುವ ಇಂದಿರಾ ಕ್ಯಾಂಟೀನ್ ಯೋಜನೆ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ಸನ್ನು ಕಂಡಿದೆ. ಈಗಾಗಲೇ ಐದು ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಶೀಘ್ರದಲ್ಲಿಯೇ ಪಂಪ್‌ವೆಲ್‌ನಲ್ಲಿ ಸ್ಥಾಪಿಸಿರುವ ಕ್ಯಾಂಟೀನ್ ಕೂಡಲೇ ಲೋಕಾರ್ಪಣೆಗೊಳ್ಳಲಿದೆ. ಚುನಾವಣೆಗಳ ನೀತಿ ಸಂಹಿತೆಯಿಂದಾಗಿ ಕ್ಯಾಂಟೀನ್ ಉದ್ಘಾಟನೆಯಾಗಲು ತಡವಾಗಿತ್ತು. ಮುಂದಿನ ವಾರದಲ್ಲಿ ಜನರಿಗೆ ಸೇವೆ ನೀಡಲು ಕ್ಯಾಂಟೀನ್ ಆರಂಭವಾಗಲಿದೆ ಎಂದು ಮನಪಾ ಅಧಿಕಾರಿಗಳು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

ಪಂಪ್‌ವೆಲ್‌ನಲ್ಲಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್‌ಗೆ ಅತಿ ಶೀಘ್ರದಲ್ಲಿ ಚಾಲನೆ ದೊರೆಯಲಿದೆ.

- ಮುಹಮ್ಮದ್ ನಝೀರ್, ಆಯುಕ್ತ, ಮನಪಾ

ನಾನು ಉರ್ವಸ್ಟೋರ್ ಆಸುಪಾಸಿನಿಂದ ಪ್ರತಿದಿನ ಉರ್ವಸ್ಟೋರ್‌ನ ಇಂದಿರಾ ಕ್ಯಾಂಟೀನ್‌ಗೆ ಊಟಕ್ಕೆ ಬರುತ್ತೇನೆ. ಇಲ್ಲಿನ ಆಹಾರ ಗುಣಮಟ್ಟದಿಂದ ಕೂಡಿದೆ.

ಸುರೇಶ್, ಫಲಾನುಭವಿ

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ನೀಡುತ್ತಿರುವುದರಿಂದ ಫಾಸ್ಟ್‌ಫುಡ್ ಅಂಗಡಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಅನೇಕರಿಗೆ ಸಹಕಾರಿಯಾಗಿದೆ. ನಮಗೆ ನಮ್ಮದೇ ಆದ ಗ್ರಾಹಕರಿದ್ದಾರೆ.

-ನಾಗರಾಜ್, ಸ್ಟೇಟ್‌ಬ್ಯಾಂಕ್‌ನ ಫಾಸ್ಟ್‌ಫುಡ್ ಅಂಗಡಿಯೊಂದರ ಮಾಲಕ

ದಿನದಿಂದ ದಿನಕ್ಕೆ ಹೆಚ್ಚು ಮಂದಿ ಕ್ಯಾಂಟೀನ್‌ಗೆ ಊಟಕ್ಕೆ ಬರುತ್ತಾರೆ. ಈಗಾಗಲೇ ನಗರದ ಲೇಡಿಗೋಶನ್, ಉರ್ವಸ್ಟೋರ್, ಸುರತ್ಕಲ್, ಕಾವೂರು, ತೊಕ್ಕೊಟ್ಟಿನಲ್ಲಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಶೀಘ್ರದಲ್ಲಿಯೇ ಪಂಪ್‌ವೆಲ್‌ನಲ್ಲಿ ಇಂದಿರಾ ಕ್ಯಾಂಟೀನ್ ತಲೆಎತ್ತಲಿದೆ.

- ಪ್ರಭಾಕರ್ ಶೆಟ್ಟಿ, ಸಾಯಿ ಹಾಸ್ಪಿಟಾಲಿಟಿ ಸರ್ವಿಸಸ್‌ನ ವ್ಯವಸ್ಥಾಪಕ

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News