ಊಟದ ಬಳಿಕ ನೀರು ಕುಡಿಯಲು ನೀವು ಎಷ್ಟು ಹೊತ್ತು ಕಾಯಬೇಕು...?

Update: 2018-07-13 11:09 GMT

ಊಟವಾದ ತಕ್ಷಣ ನಾವು ಮೊದಲು ಮಾಡುವ ಕೆಲಸವೆಂದರೆ ನೀರು ಕುಡಿಯುವುದು. ಹೆಚ್ಚಿನವರಿಗೆ ಇದು ಎಷ್ಟೊಂದು ಕಡ್ಡಾಯದ ಅಭ್ಯಾಸವಾಗಿದೆಯೆಂದರೆ ನೀರು ಕುಡಿಯದಿದ್ದರೆ ಅವರಿಗೆ ತಿಂದ ಆಹಾರ ಹೊಟ್ಟೆಗಿಳಿಯುವುದೇ ಇಲ್ಲ.

ನೀರು ಜೀವದ್ರವ ಮತ್ತು ಆಗಾಗ್ಗೆ ನೀರು ಕುಡಿಯುತ್ತಿರುವುದು ಆರೋಗ್ಯಕ್ಕೆ ಒಳ್ಳೆಯದೇನೋ ನಿಜ. ಆದರೆ ನಾವು ನೀರಿನ ಸೇವನೆಯನ್ನು ನಿವಾರಿಸಬೇಕಾದ ಕೆಲವು ಸಮಯಗಳೂ ಇವೆ. ಊಟವಾದ ಬಳಿಕದ ಸಮಯ ಅದರಲ್ಲೊಂದಾಗಿದೆ.

ಆರಂಭದಲ್ಲಿ ಈ ನಿಯಮವನ್ನು ಪಾಲಿಸುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ದಿನಗಳೆದಂತೆ ಈ ನಿಯಮ ಪಾಲನೆ ಸುಲಭವಾಗುತ್ತದೆ. ಊಟವಾದ ತಕ್ಷಣ ನೀರು ಏಕೆ ಕುಡಿಯಬಾರದು ಎನ್ನ್ನುವುದಕ್ಕೆ ಕಾರಣಗಳಿಲ್ಲಿವೆ. ಊಟವಾದ ಬಳಿಕ ಮಾತ್ರವಲ್ಲ,ಊಟದ ಮೊದಲು ಮತ್ತು ಊಟದ ಮಧ್ಯೆಯೂ ನೀರನ್ನು ಸೇವಿಸಬಾರದು ಎನ್ನುವುದು ನಿಮಗೆ ಗೊತ್ತೇ? ನಾವು ಸೇವಿಸಿದ ಆಹಾರ ಜೀರ್ಣಗೊಳ್ಳಲು ಸುಮಾರು ಎರಡು ಗಂಟೆಗಳು ಬೇಕಾಗುವುದರಿಂದ ಊಟವಾದ ಬಳಿಕ ನೀರು ಕುಡಿಯಲು ಕನಿಷ್ಠ ಅರ್ಧಗಂಟೆಯಾದರೂ ಕಾಯಬೇಕು.

ನಾವು ಸೇವಿಸಿದ ಆಹಾರವು ಅನ್ನನಾಳದ ಮೂಲಕ ಜಠರವನ್ನು ಸೇರುತ್ತದೆ ಮತ್ತು ಬಳಿಕ ಕರುಳಿಗೆ ಸಾಗುತ್ತದೆ. ಅಂತಿಮವಾಗಿ ನಮ್ಮ ಶರೀರದಿಂದ ವಿಸರ್ಜನೆಗೊಳ್ಳುತ್ತದೆ. ನಮ್ಮ ಶರೀರವು ಆಹಾರವನ್ನು ಜೀರ್ಣಿಸಿಕೊಳ್ಳುವಾಗ ನಿರ್ದಿಷ್ಟವಾದ ದ್ರವ-ಘನ ಅನುಪಾತವನ್ನು ಕಾಯ್ದಕೊಳ್ಳಬೇಕಾಗುತ್ತದೆ. ಊಟವಾದ ತಕ್ಷಣ ಆಹಾರವನ್ನು ಸೇವಿಸಿದರೆ ಈ ಸಮತೋಲನವು ವ್ಯತ್ಯಯಗೊಳ್ಳುತ್ತದೆ ಮತ್ತು ಆಹಾರ ಜೀರ್ಣವಾಗಲು ಅಗತ್ಯವಿರುವ ನೈಸರ್ಗಿಕ ಅವಧಿಯಲ್ಲಿ ಏರುಪೇರುಗಳಿಗೆ ಕಾರಣವಾಗುತ್ತದೆ. ಇದರಿಂದ ಮಾಮೂಲಿಗಿಂತ ಬೇಗನೇ ಹಸಿವೆಯಾಗುತ್ತದೆ ಮತ್ತು ಇದು ಸಾಮಾನ್ಯಕ್ಕಿಂತ ಹೆಚ್ಚಿನ ಕ್ಯಾಲರಿಗಳನ್ನು ಸೇವಿಸುವಂತೆ ಮಾಡುವುದರಿಂದ ಹೊಟ್ಟೆ ಉಬ್ಬರಿಸುತ್ತದೆ.

ಊಟದ ಬಳಿಕ ನೀರು ಸೇವಿಸಲು 30 ನಿಮಿಷಗಳ ಕಾಲ ಕಾಯುವುದರಿಂದ ಈ ಅವಧಿಯಲ್ಲಿ ನಮ್ಮ ಶರೀರವು ಜೀರ್ಣಕ್ರಿಯೆಯ ಮುಂದಿನ ಹಂತವನ್ನು ತಲುಪುತ್ತದೆ ಮತ್ತು ಆ ಬಳಿಕ ನೀರು ಕುಡಿದರೆ ಜೀರ್ಣಕ್ರಿಯೆಗೆ ಯಾವುದೇ ತೊಂದರೆಯಾಗುವುದಿಲ್ಲ.

ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವ ಜೀರ್ಣ ರಸಗಳು ಮತ್ತು ಕಿಣ್ವಗಳು ದುರ್ಬಲಗೊಳ್ಳುತ್ತವೆ ಮತ್ತು ಈ ಕಿಣ್ವಗಳ ಕಡಿಮೆ ಸ್ರವಿಸುವಿಕೆಯು ಶರೀರದಲ್ಲಿ ಆಮ್ಲದ ಮಟ್ಟಗಳನ್ನು ಹೆಚ್ಚಿಸಿ ಎದೆಯುರಿ ಮತ್ತು ಆಮ್ಲೀಯತೆಗೆ ಕಾರಣವಾಗುತ್ತದೆ.

ಆಹಾರವು ಜೀರ್ಣಗೊಳ್ಳುವಾಗ ಅದರಲ್ಲಿಯ ಕೆಲವು ಪೌಷ್ಟಿಕಾಂಶಗಳನ್ನು ಶರೀರವು ಹೀರಿಕೊಳ್ಳುತ್ತದೆ. ಆದರೆ ಪ್ರತಿ ಬಾರಿಯೂ ಊಟವಾದ ಬಳಿಕ ನೀರು ಸೇವಿಸುವುದರಿಂದ ಅದು ಜೀರ್ಣಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮನ್ನು ಬೀರುತ್ತದೆ. ಹೀಗಾಗಿ ಶರೀರವು ಹೀರಿಕೊಳ್ಳುವ ಪೌಷ್ಟಿಕಾಂಶಗಳ ಪ್ರಮಾಣ ಕನಿಷ್ಠಕ್ಕಿಳಿಯುತ್ತದೆ.

ಅಲ್ಲದೆ ನೀರು ತಂಪುಕಾರಕವಾಗಿರುವುದರಿಂದ ನಾವು ಸೇವಿಸುವ ಎಲ್ಲ ಆಹಾರಗಳ ಮೇಲೆ ತಂಪು ಪರಿಣಾಮವನ್ನು ಬೀರುತ್ತದೆ. ಇದು ನಮ್ಮ ಶರೀರದಲ್ಲಿ ಬೊಜ್ಜು ಸೇರಿಕೊಳ್ಳಲು ಕಾರಣವಾಗುತ್ತದೆ. ನಾವು ಹೀಗೆ ಸೇವಿಸಿದ ನೀರು ಜೀರ್ಣಕ್ರಿಯೆಯನ್ನು ಏರುಪೇರುಗೊಳಿಸುವುದರಿಂದ ಬಹಳಷ್ಟು ಆಹಾರವು ಜೀರ್ಣಗೊಳ್ಳದೆ ಶರೀರದಲ್ಲಿ ಉಳಿದುಕೊಂಡು ಬೊಜ್ಜನ್ನು ಉಂಟು ಮಾಡುತ್ತದೆ. ಹೀಗೆ ಜೀರ್ಣಗೊಳ್ಳದ ಆಹಾರದಲ್ಲಿರುವ ಗ್ಲುಕೋಸ್ ಕೊಬ್ಬು ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಈ ಕೊಬ್ಬು ನಮ್ಮ ಶರೀರದಲ್ಲಿ ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಶರೀರದಲ್ಲಿ ಇನ್ಸುಲಿನ್ ಮಟ್ಟವು ಹೆಚ್ಚಾಗುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಲು ಕಾರಣವಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಿದರೆ ಅದು ಮಧುಮೇಹ ಮತ್ತು ಬೊಜ್ಜು ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರೊಂದಿಗೆ ಊಟವಾದ ತಕ್ಷಣ ನೀರು ಕುಡಿಯುವುದರಿಂದ ಯೂರಿಕ್ ಆ್ಯಸಿಡ್ ಮಟ್ಟ,ಎಲ್‌ಡಿಎಲ್ ಕೊಲೆಸ್ಟ್ರಾಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್,ವಿಎಲ್‌ಡಿಎಲ್(ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್) ಮತ್ತು ಟ್ರೈಗ್ಲಿಸರೈಡ್‌ಗಳು ಹೆಚ್ಚುತ್ತವೆ.

►ಯೂರಿಕ್ ಆ್ಯಸಿಡ್

ಯೂರಿಕ್ ಆ್ಯಸಿಡ್ ಮಟ್ಟವು ಹೆಚ್ಚಾದರೆ ಮಂಡಿ ನೋವು,ಭುಜಗಳಲ್ಲಿ ನೋವು ಮತ್ತು ಮಣಿಗಂಟುಗಳಲ್ಲಿಯೂ ನೋವು ಕಾಣಿಸಿಕೊಳ್ಳುತ್ತದೆ. ಕಣಕಾಲುಗಳು,ಮೊಣಕೈ,ಮಣಿಗಂಟು ಇತ್ಯಾದಿಗಳಲ್ಲಿಯೂ ಊತಕ್ಕೆ ಕಾರಣವಾಗುತ್ತದೆ.

► ಎಲ್‌ಡಿಎಲ್

ಇದು ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ಆಗಿದ್ದು, ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯಲಾಗುತ್ತದೆ. ನಮ್ಮ ಶರೀರದಲ್ಲಿಯ ಜೀರ್ಣಗೊಳ್ಳದ ಆಹಾರವು ಕೊಬ್ಬು ಆಗಿ ಪರಿವರ್ತನೆಗೊಳ್ಳುತ್ತದೆ ಮತ್ತು ಇದು ಶರೀರದಲ್ಲಿ ಕೆಟ್ಟ ಕೊಲೆಸ್ಟ್ರಾಲ್‌ನ್ನು ಹೆಚ್ಚಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್‌ನ ಮಟ್ಟವು ಹೆಚ್ಚಿದಾಗ ರಕ್ತವು ಅಭಿಧಮನಿಗಳ ಮೂಲಕ ಹೃದಯಕ್ಕೆ ಸಾಗುವುದು ಕಷ್ಟವಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದು ನಿಯಮಿತವಾಗಿ ಆಗುತ್ತಿದ್ದರೆ ಹೃದಯಾಘಾತಕ್ಕೆ ಕಾರಣವಾಗಬಹುದು.

► ವಿಎಲ್‌ಡಿಎಲ್

ಇದು ಎಲ್‌ಡಿಎಲ್‌ಗಿಂತ ಕೆಟ್ಟದ್ದು. ಜೀರ್ಣಕ್ರಿಯೆಯು ಸರಿಯಾಗಿ ನಡೆಯದಿದ್ದರೆ ಮತ್ತು ಸುದೀರ್ಘ ಅವಧಿಯನ್ನು ತೆಗೆದುಕೊಂಡರೆ ವಿಎಲ್‌ಡಿಎಲ್ ಮಟ್ಟವು ಹೆಚ್ಚುತ್ತದೆ ಮತ್ತು ಇದು ಮಾರಣಾಂತಿಕವೂ ಆಗಬಹುದು.

►ಟ್ರೈಗ್ಲಿಸರೈಡ್‌ಗಳು

ಊಟವಾದ ತಕ್ಷಣ ನೀರು ಸೇವಿಸುವುದರಿಂದ ಜೀರ್ಣಗೊಳ್ಳದೆ ಉಳಿದಿರುವ ಆಹಾರವು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ. ಟ್ರೈಗ್ಲಿಸರೈಡ್‌ಗಳು ಮೂಲತಃ ನೈಸರ್ಗಿಕ ಕೊಬ್ಬು ಮತ್ತು ತೈಲಗಳ ಮುಖ್ಯಭಾಗಗಳಾಗಿವೆ. ಆದ್ದರಿಂದ ಹೆಚ್ಚಿನ ಟ್ರೈಗ್ಲಿಸರೈಡ್ ಮಟ್ಟವು ಹೃದಯಕ್ಕೆ ಅಪಾಯಗಳನ್ನು ಹೆಚ್ಚಿಸುತ್ತದೆ ಮತ್ತು ಅತ್ಯಂತ ಹೆಚ್ಚಿನ ಮಟ್ಟವು ಮಿದುಳು ಮತ್ತು ಹೃದಯಕ್ಕೆ ರಕ್ತ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬಹುದು.

ಕೆಲವರು ಊಟವಾದ ಬಳಿಕ ಫ್ರಿಝ್‌ನಲ್ಲಿರಿಸಿದ ನೀರನ್ನು ಸೇವಿಸುತ್ತಾರೆ. ಇದರಿಂದ ಜೀರ್ಣ ವ್ಯವಸ್ಥೆಯು ಸಂಪೂರ್ಣವಾಗಿ ವ್ಯತ್ಯಗೊಂಡು ಜೀರ್ಣಗೊಳ್ಳದ ಆಹಾರ ಶರೀರದಲ್ಲಿ ಉಳಿದುಕೊಳ್ಳುತ್ತದೆ ಮತ್ತು ಹೃದಯ ವೈಫಲ್ಯ,ಮಧುಮೇಹ ಮತ್ತು ಬೊಜ್ಜಿನ ಅಪಾಯಗಳನ್ನು ಹೆಚ್ಚಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News