ಇಮ್ರಾನ್‌ಗೆ 5 ಅಕ್ರಮ ಮಕ್ಕಳು; ಕೆಲವು ಭಾರತೀಯರು!

Update: 2018-07-13 18:09 GMT

ಇಸ್ಲಾಮಾಬಾದ್, ಜು. 13: ಕೆಲವು ಭಾರತೀಯರು ಸೇರಿದಂತೆ, ಕನಿಷ್ಠ ಐದು ಮಕ್ಕಳಿಗೆ ತಾನು ತಂದೆಯಾಗಿದ್ದೇನೆ ಎಂದು ಪಾಕಿಸ್ತಾನದ ರಾಜಕಾರಣಿ ಇಮ್ರಾನ್ ಖಾನ್ ತನ್ನೊಂದಿಗೆ ಹೇಳಿದ್ದಾರೆ ಎಂದು ಅವರ ಮಾಜಿ ಪತ್ನಿ ಹಾಗೂ ಪತ್ರಕರ್ತೆ ರೆಹಮ್ ಖಾನ್ ತನ್ನ ಆತ್ಮಚರಿತ್ರೆಯಲ್ಲಿ ಹೇಳಿದ್ದಾರೆ.

ಬ್ರಿಟಿಷ್-ಪಾಕಿಸ್ತಾನಿ ಪತ್ರಕರ್ತೆ ತನ್ನ ಆತ್ಮಚರಿತ್ರೆ ‘ರೆಹಮ್ ಖಾನ್’ನಲ್ಲಿ ಇಮ್ರಾನ್ ಖಾನ್‌ರ ಸಂಬಂಧಗಳ ಬಗ್ಗೆ ಹಲವಾರು ವಿಷಯಗಳನ್ನು ಬರೆದಿದ್ದಾರೆ.

1970ರ ದಶಕದ ಬಾಲಿವುಡ್ ಸೂಪರ್‌ಸ್ಟಾರ್ ಜೊತೆಗೆ ಇತ್ತು ಎನ್ನಲಾದ ಸಂಬಂಧದ ಬಗ್ಗೆಯೂ ಪುಸ್ತಕದಲ್ಲಿ ವಿವರಗಳಿವೆ. ‘‘ಸಾರ್ವಕಾಲಿಕ ಆಕರ್ಷಣೀಯ ತಾರೆಯರ ಪೈಕಿ ಒಬ್ಬರು’’ ಎಂಬುದಾಗಿ ಪರಿಗಣಿಸಲಾಗಿರುವ ಆ ನಟಿಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳಲು ಇಮ್ರಾನ್ ನಡೆಸಿದ್ದಾರೆನ್ನಲಾದ ಪ್ರಯತ್ನಗಳ ಬಗ್ಗೆ ಪುಸ್ತಕದಲ್ಲಿ ವಿವರಗಳಿವೆ.

ಬಹುಶಃ ಪುಸ್ತಕದ ಅತ್ಯಂತ ವಿವಾದಾತ್ಮಕ ಅಂಶವೆಂದರೆ, ಇಮ್ರಾನ್ ಖಾನ್‌ರ ಅಕ್ರಮ ಸಂಬಂಧದಿಂದ ಹುಟ್ಟಿದ ಮಕ್ಕಳ ಬಗ್ಗೆ ರೆಹಮ್ ಖಾನ್ ನೀಡಿರುವ ವಿವರಗಳು. ಇದು ಈಗಾಗಲೇ ಪಾಕಿಸ್ತಾನದ ಸಾಮಾಜಿಕ ತಾಣದಲ್ಲಿ ಬಿರುಗಾಳಿಯನ್ನು ಎಬ್ಬಿಸಿವೆ.

‘ರೆಹಮ್ ಖಾನ್’ ಆತ್ಮಚರಿತ್ರೆ ಗುರುವಾರ ಅಮೆರಿಕದ ಆನ್‌ಲೈನ್ ಮಾರಾಟ ತಾಣ ‘ಅಮೆಝಾನ್’ನಲ್ಲಿ ಬಿಡುಗಡೆಯಾಗಿದೆ. ಪಾಕಿಸ್ತಾನದಲ್ಲಿ ಪುಸ್ತಕ ಬಿಡುಗಡೆಯಾಗದಂತೆ ನ್ಯಾಯಾಲಯದ ತಡೆಯಾಜ್ಞೆ ಇರುವುದರಿಂದ ಆ ದೇಶದಲ್ಲಿ ಬಿಡುಗಡೆಯಾಗಿಲ್ಲ.

ಆದಾಗ್ಯೂ, ಆತ್ಮಚರಿತ್ರೆಯ ಪಿಡಿಎಫ್ ಪ್ರತಿಗಳು ಮತ್ತು ಇ-ಪ್ರತಿಗಳು ಭಾರೀ ಪ್ರಮಾಣದಲ್ಲಿ ಪಾಕಿಸ್ತಾನದಲ್ಲಿ ಹಂಚಿಕೆಯಾಗುತ್ತಿವೆ.

2015ರಲ್ಲಿ ಇಮ್ರಾನ್ ಮತ್ತು ರೆಹಮ್ ಖಾನ್ ಮದುವೆಯಾಯಿತು. ಆದರೆ, ಈ ಮದುವೆ 10 ತಿಂಗಳು ಮಾತ್ರ ಬಾಳಿತು.

ಸೀತಾ ವೈಟ್ ಮಗಳು ತಿರಿಯನ್

ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ 65 ವರ್ಷದ ಇಮ್ರಾನ್ ಖಾನ್‌ರ ಅಕ್ರಮ ಮಕ್ಕಳ ವಿಷಯ 2015ರಲ್ಲಿ ಬೆಳಕಿಗೆ ಬಂತು ಎಂಬುದಾಗಿ ರೆಹಮ್ ಬರೆಯುತ್ತಾರೆ. ದಿವಂಗತ ಸೀತಾ ವೈಟ್ ಮತ್ತು ಇಮ್ರಾನ್‌ರ ಮಗಳು ತಿರಿಯನ್ ಬಗ್ಗೆ ಚರ್ಚಿಸುತ್ತಿದ್ದಾಗ ಈ ವಿಷಯ ಗೊತ್ತಾಯಿತು ಎಂದಿದ್ದಾರೆ.

1997ರಲ್ಲಿ ಲಾಸ್ ಏಂಜಲಿಸ್‌ನ ನ್ಯಾಯಾಲಯವೊಂದು ತಿರಿಯನ್‌ರ ತಂದೆ ಇಮ್ರಾನ್ ಖಾನ್ ಎಂಬುದಾಗಿ ತೀರ್ಪು ನೀಡಿತು. 2004ರಲ್ಲಿ ಸಾಯುವ ಮುನ್ನ ಸೀತಾ ವೈಟ್ ಇಮ್ರಾನ್‌ರ ಪ್ರಥಮ ಪತ್ನಿ ಜೆಮೀಮಾ ಗೋಲ್ಡ್‌ಸ್ಮಿತ್‌ರನ್ನು ತಿರಿಯನ್‌ರ ರಕ್ಷಕರಾಗಿ ಮಾಡಿದ್ದಾರೆ.

ಜೆಮೀಮಾ 1995ರಿಂದ 2004ರವರೆಗೆ ಇಮ್ರಾನ್‌ರ ಪತ್ನಿಯಾಗಿದ್ದರು.

ಭಾರತೀಯ ಮಕ್ಕಳು?

 ರೆಹಮ್ ಬರೆಯುತ್ತಾರೆ: 2015ರಲ್ಲಿ ನಮ್ಮ ಮದುವೆಯಾದ ಕೆಲವು ವಾರಗಳ ಬಳಿಕ, ನಾವು ತಿರಿಯನ್ ಬಗ್ಗೆ ಚರ್ಚಿಸುತ್ತಿದ್ದೆವು. ಆಗ ಇಮ್ರಾನ್, ‘‘ನಿನಗೆ ಗೊತ್ತಾ, ಅವಳು ನನ್ನ ಏಕೈಕ ಮಗಳಲ್ಲ.. ನನಗೆ ಗೊತ್ತಿರುವ ಮಟ್ಟಿಗೆ ಐದು ಮಕ್ಕಳಿದ್ದಾರೆ’’ ಎಂದರು.

‘‘ಏನು? ನಿಮಗೆ ಐವರು ಅಕ್ರಮ ಮಕ್ಕಳಿದ್ದಾರೆಯೇ! ನಿಮಗೆ ಹೇಗೆ ಗೊತ್ತು?’’, ರೆಹಮ್ ಪ್ರಶ್ನಿಸಿದರು.

‘‘ಅವರ ತಾಯಂದಿರು ಹೇಳಿದರು’’, ಇಮ್ರಾನ್ ಉತ್ತರಿಸಿದರು.

‘‘ಎಲ್ಲಾ ಸೀತಾ ವೈಟ್‌ರದ್ದಾ?’’

‘‘ಅಲ್ಲ, ಕೆಲವು ಭಾರತೀಯರದ್ದು. ಹಿರಿಯದಕ್ಕೆ ಈಗ 34 ವರ್ಷ.’’

‘‘ಇದು ಹೇಗೆ ಸಾಧ್ಯ ಇಮ್ರಾನ್? ಆ ಮಗುವಿನ ತಾಯಿ ಯಾಕೆ ಈ ಬಗ್ಗೆ ಬಾಯಿಬಿಟ್ಟಿಲ್ಲ?’’

‘‘ಯಾಕೆಂದರೆ ಇದರಿಂದ ಅವರಿಗೆ ಅತೀವ ಸಂತೋಷವಾಗಿತ್ತು! ಅವರಿಗೆ ಮದುವೆಯಾಗಿ ವರ್ಷಗಳೇ ಕಳೆದಿದ್ದವು. ಆದರೆ ಮಕ್ಕಳಾಗಿರಲಿಲ್ಲ. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದನ್ನು ರಹಸ್ಯವಾಗಿ ಇಡುವ ಭರವಸೆಯನ್ನು ಕೊಟ್ಟರು ಹಾಗೂ ನಾನು ಕೂಡ ರಹಸ್ಯವಾಗಿ ಇಡಬೇಕೆಂದು ವಿನಂತಿಸಿದರು. ಹಾಗಾಗಿ, ನಾನು ಸರಿ ಎಂದೆ.’’

‘‘ಉಳಿದವರು ಯಾಕೆ ಈ ಬಗ್ಗೆ ಬಾಯಿ ಬಿಡಲಿಲ್ಲ?’’

‘‘ಯಾಕೆಂದರೆ, ಅವರೆಲ್ಲರಿಗೂ ಮದುವೆಯಾಗಿತ್ತು. ತಮ್ಮ ಮದುವೆಗಳನ್ನು ಮುರಿಯುವುದು ಅವರಿಗೆ ಇಷ್ಟವಿರಲಿಲ್ಲ’’ ಎಂದು ಇಮ್ರಾನ್ ಹೇಳಿದರು.

‘‘ಈ ವಿಷಯ ಬೇರೆ ಯಾರಿಗಾದರೂ ಗೊತ್ತಿದೆಯಾ?’’

‘‘ಜೆಮೀಮಾಗೆ ಮಾತ್ರ ಗೊತ್ತು. ನಾನೇ ಅವರಿಗೆ ಹೇಳಿದೆ’’.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News