ನರಿ-ನಾಯಿ ಪಾಲಾಗಿರುವ ವಕ್ಫ್ ಆಸ್ತಿಯ ರಕ್ಷಣೆ ಎಂದು?

Update: 2018-07-14 06:12 GMT

ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಸಂಘಪರಿವಾರ ಚೀರಾಡುವಾಗ ಅದು ಮಾಡುವ ಒಂದು ಪ್ರಮುಖ ಆರೋಪ ‘‘ದೇವಸ್ಥಾನದ ಹಣವನ್ನು ಕಿತ್ತು ಅಲ್ಪಸಂಖ್ಯಾತರಿಗೆ ನೀಡಲಾಗುತ್ತಿದೆ’’ ಎನ್ನುವುದು. ಆದರೆ ಇದೇ ಸಂದರ್ಭದಲ್ಲಿ, ಈ ರಾಜ್ಯದಲ್ಲಿ ಮುಸ್ಲಿಮರ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗಾಗಿ ‘ವಕ್ಫ್ ಇಲಾಖೆ’ಯೊಂದಿದೆ ಮತ್ತು ಅದನ್ನು ನಿಭಾಯಿಸಲು ಒಬ್ಬ ವಕ್ಫ್ ಸಚಿವರೂ ಇದ್ದಾರೆ ಎನ್ನುವುದನ್ನು ಅವರು ಮುಚ್ಚಿಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಈ ದೇಶದಲ್ಲಿ ಅತಿ ಹೆಚ್ಚು ಭೂಮಿಯನ್ನು ಹೊಂದಿರುವ ಅಂದರೆ ಸುಮಾರು ನಾಲ್ಕು ಲಕ್ಷ ಎಕರೆ ಭೂಮಿಯನ್ನು ಈ ವಕ್ಫ್ ಇಲಾಖೆ ಹೊಂದಿದೆ ಎನ್ನುವುದು ಹೆಚ್ಚಿನವರಿಗೆ ತಿಳಿದೇ ಇಲ್ಲ. ರೈಲ್ವೆ ಮತ್ತು ರಕ್ಷಣಾ ಇಲಾಖೆಯ ಬಳಿಕ ಅತ್ಯಧಿಕ ಜಮೀನಿರುವುದು ಈ ವಕ್ಫ್ ಇಲಾಖೆ ಬಳಿ. ರಾಜ್ಯದಲ್ಲಿ ಸುಮಾರು 54 ಸಾವಿರ ಎಕರೆ ಭೂಮಿ ವಕ್ಫ್ ಇಲಾಖೆಯ ವಶದಲ್ಲಿದೆ. ಈ ಭೂಮಿಯೇನೂ ಮುಸ್ಲಿಮರನ್ನು ಓಲೈಸುವುದಕ್ಕಾಗಿ ಸರಕಾರ ನೀಡಿರುವುದಲ್ಲ. ವಕ್ಫ್ ಭೂಮಿಗೆ ಸುಮಾರು 800ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಈ ದೇಶದಲ್ಲಿ ಆಗಿ ಹೋದ ರಾಜರು, ಜಮೀನ್ದಾರರು, ವಾರಸುದಾರರಿಲ್ಲದವರು ದೇವರ ಹೆಸರಲ್ಲಿ ವಕ್ಫ್ ಮಾಡಿದ ಭೂಮಿಗಳು ಇವು. ಮುಸ್ಲಿಮ್ ಸಮುದಾಯದ ಏಳಿಗೆಗಾಗಿ ಅವರಿದನ್ನು ದಾನ ಮಾಡಿ ಹೋಗಿದ್ದಾರೆ.

ದೇಶಾದ್ಯಂತ 3 ಲಕ್ಷಕ್ಕೂ ಅಧಿಕ ವಕ್ಫ್ ಆಸ್ತಿಗಳು ನೋಂದಣಿಯಾಗಿವೆ. ಇಷ್ಟು ದೊಡ್ಡ ಮೊತ್ತದ ಅಂದರೆ ಕೋಟ್ಯಂತರ ಬೆಲೆಯ ಆಸ್ತಿಗಳಿದ್ದೂ ಅವು ಮುಸ್ಲಿಮ್ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗುವಲ್ಲಿ ಯಾಕೆ ವಿಫಲವಾಗಿದೆ? ಈ ಪ್ರಶ್ನೆ, ಕಳೆದ ಐವತ್ತು ವರ್ಷಗಳಿಂದ ಉತ್ತರವಿಲ್ಲದೆ ಬಿದ್ದುಕೊಂಡಿದೆ ಅಥವಾ ಇದಕ್ಕೆ ಉತ್ತರ ಕಂಡುಕೊಳ್ಳುವುದು ಈ ನಾಡಿನಲ್ಲಿರುವ ಯಾವ ನಾಯಕರಿಗೂ ಬೇಡವಾಗಿದೆ. ವಕ್ಫ್‌ನಲ್ಲಿ ನಾಲ್ಕು ಲಕ್ಷ ಎಕರೆ ಭೂಮಿಯೇನೋ ಇದೆ. ಆದರೆ ಅದು ನರಿ ನಾಯಿಗಳ ಪಾಲಾಗಿವೆ. ವಕ್ಫ್ ಆಸ್ತಿ ಅಕ್ರಮ ಈ ದೇಶದ ಅತಿ ದೊಡ್ಡ ಭೂ ಅಕ್ರಮ ಎಂದು ‘ಔಟ್‌ಲುಕ್’ ಪತ್ರಿಕೆ ಬಣ್ಣಿಸಿದೆ. ಬಾಬರಿ ಮಸೀದಿಯ ಎರಡೂವರೆ ಎಕರೆ ಜಾಗಕ್ಕೆ ತೋರಿಸುವ ಉತ್ಸಾಹವನ್ನು ಮುಸ್ಲಿಮ್ ರಾಜಕಾರಣಿಗಳಾಗಲಿ, ಧಾರ್ಮಿಕ ಮುಖಂಡರಾಗಲಿ ಅಕ್ರಮವಾಗಿ ಒತ್ತುವರಿಯಾಗಿರುವ ವಕ್ಫ್ ಆಸ್ತಿಯ ಬಗ್ಗೆ ತೋರಿಸುತ್ತಿಲ್ಲ. ಈ ಅಕ್ರಮಗಳ ಕುರಿತಂತೆ ಮುಸ್ಲಿಮ್ ಸಮುದಾಯದ ಜನರನ್ನೂ ಕತ್ತಲಲ್ಲಿ ಇಡಲಾಗಿದೆ.

ಒಂದು ಮೂಲದ ಪ್ರಕಾರ ಈ ಅಕ್ರಮ ಒತ್ತುವರಿಯಲ್ಲಿ ಹಲವು ಪ್ರಮುಖ ಮುಸ್ಲಿಮ್ ಮುಖಂಡರೇ ಶಾಮೀಲಾಗಿದ್ದಾರೆ. ಇದರ ವಿರುದ್ಧ ಗಂಭೀರ ತನಿಖೆಯೇನಾದರೂ ನಡೆದರೆ ಹಲವು ಮುಸ್ಲಿಮ್ ಮುಖಂಡರ ಬಣ್ಣ ಬಯಲಾಗುತ್ತದೆ. ಆದುದರಿಂದಲೇ, ಈ ಹಗರಣ ಯಾವುದೇ ಗಂಭೀರ ತನಿಖೆಗೊಳಗಾಗದೆ ಉಳಿದುಕೊಂಡಿದೆ. ಕರ್ನಾಟಕದಲ್ಲಿ 27 ಸಾವಿರ ಎಕರೆ ಭೂಮಿ ಅತಿಕ್ರಮಣ ನಡೆದಿದೆ ಎಂದು ಮೂಲಗಳು ತಿಳಿಸುತ್ತವೆ. ಒಂದೆಡೆ ಒತ್ತುವರಿ, ಮಗದೊಂದೆಡೆ ಲೀಸ್ ಹೆಸರಿನಲ್ಲಿ ಮೋಸ. ಈ ಮೋಸ ಹೇಗಿರುತ್ತದೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ, ವಿನ್ಸರ್ ಮ್ಯಾನರ್ ಹೊಟೇಲ್ ಪ್ರಕರಣ. 1.65 ಲಕ್ಷ ಚದರ ಅಡಿ ವಿಸ್ತೀರ್ಣದ ಭೂಮಿಗೆ ಈ ಹೊಟೇಲ್ ನೀಡುತ್ತಾ ಬಂದ ಹಣ ಎಷ್ಟು ಗೊತ್ತೆ? ತಿಂಗಳಿಗೆ ಬರೇ ಒಂದೂವರೆ ಸಾವಿರ ರೂಪಾಯಿ. 1973ರಂದು ವಕ್ಫ್ ನಿಂದ ಅವರು ಈ ಭೂಮಿಯನ್ನು ಲೀಸ್‌ಗೆ ಪಡೆದರು. ಆರಂಭದಲ್ಲಿ 30 ವರ್ಷಕ್ಕೆ ಲೀಸ್‌ಗೆ ಪಡೆದವರು ಬಳಿಕ ಅದನ್ನು 90 ವರ್ಷಕ್ಕೆ ವಿಸ್ತರಿಸಿಕೊಂಡರು. 70ರ ದಶಕದಲ್ಲಿ ನಿಗದಿಯಾಗಿದ್ದ ದರವನ್ನೇ ಅವರು ಇಲಾಖೆಗೆ ಇತ್ತೀಚಿನವರೆಗೂ ಪಾವತಿಸುತ್ತಾ ಬಂದಿದ್ದಾರೆ. ನ್ಯಾಯಾಲಯದಲ್ಲಿ ಇದರ ವಿರುದ್ಧ ಹೋರಾಟ ನಡೆಯುತ್ತಿದೆ. ಇಂತಹ ಹಲವು ಪ್ರಕರಣಗಳು, ಒತ್ತುವರಿಗಳು ನ್ಯಾಯಾಲಯದ ಫೈಲಿನೊಳಗೆ ಧೂಳು ತಿನ್ನುತ್ತಾ ಬಿದ್ದುಕೊಂಡಿವೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ತನ್ನ ಮೇಲಿನ ಭ್ರಷ್ಟಾಚಾರದ ಆರೋಪಗಳಿಂದ ರಕ್ಷಿಸಿಕೊಳ್ಳಲು ವಕ್ಫ್ ಹಗರಣವನ್ನು ಗುರಾಣಿಯನ್ನಾಗಿ ಬಳಸಿಕೊಂಡಿತು. ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯ ಅಕ್ರಮಗಳ ಬಗ್ಗೆ ವರದಿ ತಯಾರಿಸಲು ಅನ್ವರ್ ಮಾಣಿಪ್ಪಾಡಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ಸಿದ್ಧಪಡಿಸಿತು. ಬಿಜೆಪಿ ಕೇವಲ ರಾಜಕೀಯ ಕಾರಣಗಳಿಗಾಗಿ, ಮುಖ್ಯವಾಗಿ ಕಾಂಗ್ರೆಸ್‌ನ ನಾಯಕರನ್ನೇ ಗುರಿಯಾಗಿಟ್ಟುಕೊಂಡು ಈ ಸಮಿತಿ ರಚಿಸಿತು ಮತ್ತು ಬಿಜೆಪಿಗೆ ಅಗತ್ಯವಿದ್ದಷ್ಟು ವರದಿಯನ್ನು ಮಾಣಿಪ್ಪಾಡಿಯವರು ಸಂಗ್ರಹಿಸಿ, ಒಪ್ಪಿಸಿದರು. ಯಾವ ಕಾರಣಕ್ಕೇ ಇರಲಿ, ವಕ್ಫ್ ಅಕ್ರಮಗಳ ಬಗ್ಗೆ ಕನಿಷ್ಠ ಒಂದು ವರದಿ ತಯಾರಿಸುವುದಕ್ಕಾದರೂ ಬಿಜೆಪಿ ಸರಕಾರ ಮುಂದಾಯಿತಲ್ಲ ಎನ್ನುವುದೇ ಮುಸ್ಲಿಮರ ಪಾಲಿಗೆ ಸಮಾಧಾನ ತರುವ ಅಂಶ. ಈ ವರದಿಯನ್ನು ಬಿಜೆಪಿ ಕೇವಲ ತನ್ನ ರಾಜಕೀಯ ದುರುದ್ದೇಶಗಳಿಗೆ ಸೀಮಿತಗೊಳಿಸಿದ ಹಿನ್ನೆಲೆಯಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು. ಬಿಜೆಪಿ ವಕ್ಫ್ ವಿಷಯದಲ್ಲಿ ಪ್ರಾಮಾಣಿಕತೆ ಹೊಂದಿದ್ದಿದ್ದರೆ, ಅಕ್ರಮಗಳನ್ನು ಅಂದೇ ಸಿಬಿಐ ಕೈಗೆ ಒಪ್ಪಿಸುತ್ತಿತ್ತು. ಇದಾದ ಬಳಿಕ ಸಿದ್ದರಾಮಯ್ಯ ನೇತೃತ್ವದ ಸರಕಾರ ಆ ವರದಿಯ ಶಿಫಾರಸುಗಳನ್ನು ತಿರಸ್ಕರಿಸಿತು. ಬಳಿಕ ಕಾಂಗ್ರೆಸ್ ಸರಕಾರವಾದರೂ ವಕ್ಫ್ ಆಸ್ತಿಯ ಬಗ್ಗೆ ತನಿಖೆ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಬಹುದಿತ್ತು. ಆದರೆ ಅದನ್ನು ಮಾಡಲೇ ಇಲ್ಲ.

 ಮಾಣಿಪ್ಪಾಡಿ ವರದಿ ಹೇಳುವಂತೆ ರಾಜ್ಯದಲ್ಲಿ 54 ಸಾವಿರ ಎಕರೆ ಭೂಮಿಯಲ್ಲಿ ಅರ್ಧದಷ್ಟು ಅಂದರೆ, ಸುಮಾರು, ಎರಡೂವರೆ ಲಕ್ಷ ಕೋಟಿ ರೂಪಾಯಿ ಬೆಲೆಬಾಳುವ ಭೂಮಿ ಒತ್ತುವರಿಯಾಗಿದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ವರದಿ ಶಿಫಾರಸು ಮಾಡಿತ್ತು. 1998ರಲ್ಲಿ ಸುಪ್ರೀಂಕೋರ್ಟ್ ನೀಡಿದ ಆದೇಶದ ಅನ್ವಯ ಅಕ್ರಮ ಆಸ್ತಿಗಳನ್ನು ವಶಪಡಿಸಿಕೊಳ್ಳಲು ‘ವಕ್ಫ್ ಆಸ್ತಿ ಕಾರ್ಯಪಡೆ’ ರಚಿಸಲು ಸೂಚಿಸಿತ್ತು. ಇದು ಪಾರದರ್ಶಕವಾಗಿರಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ಹೇಳಿತ್ತು. ಸಮಿತಿಯ ಕೆಲವು ಸಲಹೆಗಳನ್ನಾದರೂ ಗಂಭೀರವಾಗಿ ತೆಗೆದುಕೊಂಡು, ಕಾಂಗ್ರೆಸ್ ಸರಕಾರಕ್ಕೆ ಹೊಸದಾಗಿ ತನಿಖೆಯನ್ನು ಕೈಗೆತ್ತಿಕೊಳ್ಳುವ ಅವಕಾಶವಿತ್ತು. ಆದರೆ ಅಕ್ರಮ ಆಸ್ತಿ ಒತ್ತುವರಿಯಲ್ಲಿ ಕಾಂಗ್ರೆಸ್‌ನೊಳಗಿರುವ ಹಲವು ರಾಜಕೀಯ ನಾಯಕರ ಹೆಸರುಗಳು ಇದ್ದವು. ಈ ಕಾರಣದಿಂದಲೇ ವರದಿ ಸಂಪೂರ್ಣವಾಗಿ ತಿರಸ್ಕರಿಸಲ್ಪಟ್ಟಿತು. ಹೊಸ ತನಿಖೆ ನಡೆಯದೇ ಇರುವುದರ ಹಿಂದೆಯೂ ಈ ರಾಜಕೀಯ ನಾಯಕರ ಕೈವಾಡವಿದೆ ಎನ್ನುವುದು ಗುಟ್ಟಾಗಿರುವ ವಿಷಯವಲ್ಲ. ಇದೀಗ ಮತ್ತೆ ಅಧಿವೇಶನದಲ್ಲಿ ವಕ್ಫ್ ಆಸ್ತಿ ಅಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಸಚಿವ ಝಮೀರ್ ಅವರು ಬಾಯಿ ತಪ್ಪಿಯಾದರೂ, ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಹೇಳಿದ್ದಾರೆ. ಬಳಿಕ ಮಾತನ್ನು ಹಿಂದೆಗೆದುಕೊಂಡಿದ್ದಾರೆ. ನೂತನ ಮೈತ್ರಿ ಸರಕಾರದಿಂದ ನಾಡಿನ ಮುಸ್ಲಿಮರು ಹೆಚ್ಚಿನದೇನೂ ನಿರೀಕ್ಷಿಸುವುದಿಲ್ಲ. ಕನಿಷ್ಠ ಅತಿಕ್ರಮವಾಗಿರುವ ಎಲ್ಲ ಆಸ್ತಿಯನ್ನು ವಕ್ಫ್ ಇಲಾಖೆಗೆ ಸೇರುವಂತೆ ಮಾಡಿ, ಆ ಹಣವನ್ನು ಮುಸ್ಲಿಮರೊಳಗಿರುವ ದುರ್ಬಲರ ಅಭಿವೃದ್ಧಿಗೆ ಬಳಸಿದರೂ ಸಾಕು, ಅವರು ಮೈತ್ರಿ ಸರಕಾರಕ್ಕೆ ಕೃತಜ್ಞರಾಗಿರುತ್ತಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News