ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ರಾಮಮಂದಿರ ನಿರ್ಮಾಣ: ಅಮಿತ್ ಶಾ

Update: 2018-07-14 05:03 GMT

ಹೈದರಾಬಾದ್, ಜು. 14: ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಕಾರ್ಯ 2019ರ ಲೋಕಸಭಾ ಚುನಾವಣೆಗೆ ಮುನ್ನವೇ ಆರಂಭವಾಗಲಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.

ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ದೇವಾಲಯ ನಿರ್ಮಾಣಕ್ಕೆ ಇರುವ ಅಡೆತಡೆಗಳನ್ನು ನಿವಾರಿಸುವ ಅಗತ್ಯ ಕ್ರಮಗಳನ್ನು ಚುನಾವಣೆಗೆ ಮುನ್ನವೇ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಪಕ್ಷದ ತೆಲಂಗಾಣ ರಾಜ್ಯ ಘಟಕದ ಕಚೇರಿಯಲ್ಲಿ ನಡೆದ ಸಭೆಯ ವಿವರಗಳನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಪೆರಾಲಾ ಶೇಖರ್‌ಜೀ ಮಾಧ್ಯಮದೊಂದಿಗೆ ಹಂಚಿಕೊಂಡರು.

ಒಂದು ದಿನದ ಭೇಟಿಗೆ ಹೈದರಾಬಾದ್‌ಗೆ ಆಗಮಿಸಿರುವ ಶಾ, ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಯನ್ನು ಅವಧಿಪೂರ್ವವಾಗಿ ಘೋಷಿಸುವ ಸಾಧ್ಯತೆ ಇಲ್ಲ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಅಗತ್ಯವಾದ ಕಾರ್ಯತಂತ್ರ ರೂಪಿಸುವಂತೆ ರಾಜ್ಯದ ಬಿಜೆಪಿ ಮುಖಂಡರಿಗೆ ಶಾ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News