ಸರಕಾರದ ಕಾರ್ಯನಿರ್ವಹಣೆಗೆ ಕೇಂದ್ರದ ಅಡ್ಡಿ: ಪುದುಚೇರಿ ಸಿಎಂ ಆರೋಪ

Update: 2018-07-15 16:54 GMT

ಪುದುಚೇರಿ, ಜು.15: ಕೇಂದ್ರ ಸರಕಾರ ಹಾಗು ಲೆಫ್ಟಿನೆಂಟ್ ಗವರ್ನರ್ ಅವರಿಂದ ಎದುರಾಗಿರುವ ಅಡ್ಡಿಯ ಕಾರಣ ಪುದುಚೇರಿ ಸರಕಾರದ ದೈನಂದಿನ ಕಾರ್ಯನಿರ್ವಹಣೆಗೆ ತೊಡಕಾಗಿದೆ ಎಂದು ಪುದುಚೇರಿಯ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಪ್ರಾದೇಶಿಕ ಬಜೆಟ್ ಸಿದ್ಧಪಡಿಸಿ ಅದನ್ನು ಸೂಕ್ತ ಸಮಯದಲ್ಲಿ ಮಂಡಿಸಲೂ ಹಲವು ಅಡ್ಡಿ ಆತಂಕಗಳನ್ನು ಎದುರಿಸಬೇಕಾಗಿದೆ. ಜುಲೈ 2ರಂದು ವಿಧಾನಸಭೆಯಲ್ಲಿ ಮಂಡಿಸಿದ ಬಜೆಟನ್ನು ಮೇ ತಿಂಗಳಲ್ಲೇ ಮಂಡಿಸಬೇಕಿತ್ತು. ಆದರೆ ಸಚಿವ ಸಂಪುಟದ ಫೈಲ್‌ಗಳನ್ನು ಅನಗತ್ಯವಾಗಿ ಲೆಫ್ಟಿನೆಂಟ್ ಜನರಲ್‌ಗೆ ಕಳುಹಿಸುವ ಪ್ರಕ್ರಿಯೆಯಿಂದ ನಿಗದಿತ ಸಮಯಕ್ಕೆ ಬಜೆಟ್ ಮಂಡನೆಯಾಗಿಲ್ಲ. ಇದರಿಂದ ಹಲವು ಯೋಜನೆಗಳ ಜಾರಿಯಲ್ಲಿ ವಿಳಂಬವಾಗಿದೆ ಎಂದು ನಾರಾಯಣ ಸ್ವಾಮಿ ಆರೋಪಿಸಿದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಮುಖಂಡರಾಗಿದ್ದ ಕೆ.ಕಾಮರಾಜ್ ಜನ್ಮ ದಿನಾಚರಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದರೆ ಮಾತ್ರ ಪುದುಚೇರಿಯಲ್ಲಿ ಸುಗಮವಾಗಿ ಆಡಳಿತ ನಡೆಸಲು ಸಾಧ್ಯ ಎಂದ ಅವರು, ಕೇಂದ್ರ ಸರಕಾರ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಳಂಬ ಧೋರಣೆ ತಳೆದರೆ, ಲೆ ಗವರ್ನರ್ ಸಚಿವ ಸಂಪುಟದ ಫೈಲ್‌ಗಳನ್ನು ಮರಳಿಸುವ ಮೂಲಕ ವಿಳಂಬಿಸುತ್ತಿದ್ದಾರೆ. ಆದರೆ ನಾವು ಜನತೆಗೆ ಉತ್ತರ ಹೇಳಬೇಕಿದೆ. ಅದೇನಿದ್ದರೂ ಉಚಿತ ಅಕ್ಕಿ ವಿತರಿಸುವ , ಪರಿಶಿಷ್ಟ ಜಾತಿಯವರಿಗೆ ಬಜೆಟ್ ಅನುದಾನದ ಶೇ.16ರಷ್ಟು ಹಂಚಿಕೆ ಮಾಡುವ, ವೃದ್ಧರಿಗೆ ಹಾಗೂ ವಿಧವೆಯರಿಗೆ ಮಾಸಿಕ ಸಹಾಯಧನ ನೀಡುವ ಯೋಜನೆಯಿಂದ ಸರಕಾರ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು. 2016ರಲ್ಲಿ ಕಿರಣ್ ಬೇಡಿ ಪುದುಚೇರಿಯ ಲೆಗವರ್ನರ್ ಆಗಿ ನೇಮಕವಾದಂದಿನಿಂದಲೂ ಸರಕಾರ ಮತ್ತು ಅವರ ಮಧ್ಯೆ ಒಂದಿಲ್ಲೊಂದು ವಿಷಯದಲ್ಲಿ ಘರ್ಷಣೆ ನಡೆಯುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News