ಕೊಡಗು ಸ್ವತಂತ್ರವಾಗಬೇಕಾದದ್ದು ಅಲ್ಲಿನ ಭೂಮಾಲಕರಿಂದ!

Update: 2018-07-16 05:52 GMT

ಕೊಡಗಿನ ಸ್ಥಿತಿಗತಿಯನ್ನು ಮುಖ್ಯಮಂತ್ರಿಯವರಿಗೆ ಬಾಲಕನೊಬ್ಬ ಮನವರಿಕೆ ಮಾಡುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಇಂದು ರಾಜ್ಯ ಕೊಡಗಿನಿಂದ ಸರ್ವ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದೆಯಾದರೂ, ಕೊಡಗಿನ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ, ಮುಖ್ಯಮಂತ್ರಿಗಳು ಕೊಗನ್ನು ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ’ ಎಂದು ಬಾಲಕ ಆ ವೀಡಿಯೊದಲ್ಲಿ ಸುಮಾರು ಅರ್ಧ ಗಂಟೆ ಭಾಷಣ ಮಾಡಿದ್ದಾನೆ. ಈ ವೀಡಿಯೊ ಮುಖ್ಯಮಂತ್ರಿಯ ಗಮನವನ್ನೂ ಸೆಳೆದಿದ್ದು ಅದಕ್ಕೆ ಸ್ಪಂದಿಸಿ ದ್ದಾರೆ. ಒಬ್ಬ ಬಾಲಕನ ವಯಸ್ಸಿಗೆ ತಕ್ಕುದಲ್ಲದ ಮಾತುಗಳು ಅವು. ಅಂದರೆ ಯಾರಿಂದಲೋ ಕೇಳಿ, ಓದಿ, ಉರು ಹೊಡೆದು ಆಡಿದ ಅನುಕರಣೆಯ ಮಾತುಗಳು. ಆದರೆ ಆ ಮಾತುಗಳು ಕಳೆದ ನಾಲ್ಕು ದಶಕಗಳಿಂದ ಕೊಡಗಿನ ಬೇರೆ ಬೇರೆ ಮಾಧ್ಯಮಗಳ ಮೂಲಕ ಕೇಳಿ ಬರುತ್ತಲೇ ಇವೆ ಎನ್ನುವುದನ್ನು ನಾವು ಮರೆಯಬಾರದು.

ನಾಚಪ್ಪನೆಂಬ ವ್ಯಕ್ತಿ ಇಂತಹದೇ ಹೇಳಿಕೆಗಳನ್ನು ಸಾರ್ವಜನಿಕವಾಗಿ ಆಡಿ, ಕರ್ನಾಟಕದ ವಿರುದ್ಧ ಕೊಡಗಿನ ಜನರನ್ನು ಎತ್ತಿ ಕಟ್ಟುತ್ತಿದ್ದ. ‘ಕೊಡಗು ಪ್ರತ್ಯೇಕ ರಾಜ್ಯವಾಗಬೇಕು’ ಎಂದು ಹೋರಾಟ ಆರಂಭಿಸಿದ್ದ. ಕೊಡಗಿನ ಅರಣ್ಯ ನಾಶ, ಭತ್ತ ಬೆಳೆಯಲ್ಲಿ ಕುಸಿತ, ಮಲಯಾಳಿಗಳ ನುಸುಳುವಿಕೆ, ಕಾಫಿ ಬೆಳೆಗಾರರಿಗೆ ಅನ್ಯಾಯ, ಕಾವೇರಿ ನೀರಿನ ದುರುಪಯೋಗ ಈ ಎಲ್ಲ ಆರೋಪಗಳು ಇಂದು ನಿನ್ನೆಯದಲ್ಲ. ತನ್ನ ನೆಲದಲ್ಲಿ ಹುಟ್ಟುವ ಕಾವೇರಿ ನೀರಿನ ಸಕಲ ಪ್ರಯೋಜನಗಳನ್ನು ಪಡೆಯುವ ಮಂಡ್ಯ, ಬೆಂಗಳೂರಿನ ಜನರು ಕೊಡಗಿನ ಜನರ ಹಿತಾಸಕ್ತಿಗಳನ್ನು ಮರೆಯುತ್ತಿದ್ದಾರೆ ಎನ್ನುವುದು ಕೊಡಗಿನ ನಾಯಕರ ಸಿಟ್ಟಿಗೆ ಮುಖ್ಯ ಕಾರಣ. ಕೊಡಗಿನ ಇಂದಿನ ಸ್ಥಿತಿಗತಿಗೆ ಎಲ್ಲ ನಾಯಕರೂ ಪರೋಕ್ಷವಾಗಿ ಹೊಣೆಗಾರರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೊಡಗಿನಲ್ಲಿ ಸಂಘಪರಿವಾರ ಪ್ರಬಲವಾಗಿ ಬೆಳೆಯುತ್ತಿದೆ. ಬಿಜೆಪಿ ಈ ಜಿಲ್ಲೆಯಲ್ಲಿ ತನ್ನ ಬೇರನ್ನು ಆಳವಾಗಿ ಊರಿದೆ. ಪ್ರಬಲ ಕೊಡವ ಸಮಾಜವನ್ನು ಬಳಸಿಕೊಂಡು ಸಂಘಪರಿವಾರ ಸಂಘಟನೆಗಳು ಹಿಂದುತ್ವವಾದವನ್ನು ಹರಡುತ್ತಿದೆ. ಕೊಡಗಿಗೆ ಅನ್ಯಾಯವಾಗುತ್ತಿದೆ ಎನ್ನುವ ಕೂಗು ಕೇಳಿ ಬರುತ್ತಿರುವುದು ಇದೇ ಮೇಲ್ಜಾತಿಯ ಕೊಡವರಿಂದ. ಸರಕಾರದ ಸವಲತ್ತುಗಳು ಕಾಫಿ, ಏಲಕ್ಕಿ ಬೆಳೆಗಾರರಿಗೆ ತಲುಪಿದಷ್ಟು ಪರಿಣಾಮವಾಗಿ ಭತ್ತ ಬೆಳೆಗಾರರಿಗೆ ತಲುಪಿಲ್ಲ. ಕಾರಣ ಕಾಫಿ ಎಸ್ಟೇಟ್ ಮಾಲಕರಿಗಿರುವಷ್ಟು ರಾಜಕೀಯ ಇಚ್ಛಾ ಶಕ್ತಿ ಭತ್ತದ ಬೆಳೆಗಾರರಿಗಿಲ್ಲ. ಕೊಡಗಿನಲ್ಲಿ ಮಳೆಯಾದರೆ ಅದರ ಲಾಭ ಕೊಡವರಿಗಲ್ಲ. ಕಾವೇರಿ ನದಿ ತುಂಬಿ ಹರಿದರೆ ಕೊಡವರಿಗೆ ಅಧಿಕ ನಷ್ಟ. ಮಂಡ್ಯ, ಬೆಂಗಳೂರಿನಂತಹ ಪ್ರದೇಶಗಳಲ್ಲಿ ನೀರಾಗುತ್ತದೆ.

ಅವರು ಅದರ ಲಾಭವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಕೊಡವರ ಭತ್ತದ ಕೃಷಿ ಸರ್ವನಾಶವಾಗುತ್ತದೆ. ಕೊಳೆರೋಗ ಪ್ರತಿಮಳೆಗಾಲದಲ್ಲಿ ಕೊಡಗಿನ ರೈತರನ್ನು ಕಾಡುತ್ತದೆ. ಅಷ್ಟೇ ಅಲ್ಲ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಕೃಷಿಕರು, ಶ್ರೀಸಾಮಾನ್ಯರು ನೆರೆಭೀತಿಯನ್ನು ಎದುರಿಸಬೇಕಾಗುತ್ತದೆ. ಪರಸ್ಪರ ಊರುಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆಗಳೇ ಮುಳುಗಡೆಯಾಗುತ್ತವೆ. ಪ್ರತಿವರ್ಷ ಸರಕಾರದಿಂದ ಪರಿಹಾರವೇನೋ ಬಿಡುಗಡೆಯಾಗುತ್ತದೆ. ಆದರೆ ಅದು ಅರ್ಹ ಸಂತ್ರಸ್ತರನ್ನು ತಲುಪುವುದು ತೀರಾ ಕಡಿಮೆ. ಮಧ್ಯವರ್ತಿಗಳೇ ಅದರ ಲಾಭಗಳನ್ನು ತಮ್ಮದಾಗಿಸಿಕೊಳ್ಳುತ್ತಾ ಬಂದಿದ್ದಾರೆ ಮತ್ತು ಇದೇ ಮಧ್ಯವರ್ತಿಗಳು, ಕೊಡಗಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗನ್ನು ಎಬ್ಬಿಸುತ್ತಾ ಬರುತ್ತಿರುವವರು. ಇಂದು ನಾವು ಕೊಡಗಿನ ಮೇಲ್ಪದರದ ಜನರ ಕೂಗನ್ನೇ ನಿಜವಾದ ಕೊಡಗಿನ ಅಳಲು ಎಂದು ಭಾವಿಸಿದ್ದೇವೆ. ಆದರೆ ಈ ಕೂಗಿನ ಸತ್ಯದ ಆಚೆಗೆ ಇನ್ನೊಂದು ಸತ್ಯವಿರುವುದನ್ನು ನಾವು ಮರೆತಿದ್ದೇವೆ.

    ಕೊಡಗಿನಲ್ಲಿರುವವರೆಲ್ಲ ಕೊಡವರು ಎಂದು ಭಾವಿಸುವುದೇ ದೊಡ್ಡ ತಪ್ಪು. ಕೊಡವರಲ್ಲೇ ಸುಮಾರು 14ಕ್ಕೂ ಅಧಿಕ ಮೂಲನಿವಾಸಿಗಳಿದ್ದಾರೆ. ಇವರಲ್ಲಿ ಬಹುತೇಕರು ತೀರಾ ತಳಸ್ತರದಲ್ಲಿ ಬದುಕನ್ನು ಸವೆಸುತ್ತಿರುವವರು. ಕೊಡಗಿನ ಕಾಫಿ ಜಮೀನ್ದಾರರ ತೋಟಗಳಲ್ಲಿ ತಮ್ಮ ಬದುಕನ್ನು ಸವೆಸುತ್ತಿರುವವರು. ಕೊಡವರ ಹೆಸರಿನಲ್ಲಿ ಸರಕಾರ ನೀಡುವ ಸವಲತ್ತುಗಳು ಇವರನ್ನು ತಲುಪಿರುವುದು ತೀರಾ ಕಡಿಮೆ. ಕೊಡಗಿನಲ್ಲಿ ಇಂದಿಗೂ ಜೀತ ಪದ್ಧತಿ ಜೀವಂತವಿದೆ. ಒಂದು ತೋಟದಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕರು, ಅಲ್ಲಿಯ ಒಡೆಯನ ಸಾಲ ಮುಗಿಯದೆ ಮತ್ತೊಂದು ತೋಟದಲ್ಲಿ ದುಡಿಯುವಂತಿಲ್ಲ. ಹಾಗೆಯೇ ಕಾಫಿ ಫ್ಲಾಂಟರ್‌ಗಳ ವಿರುದ್ಧ ಧ್ವನಿಯೆತ್ತುವ ಶಕ್ತಿಯೂ ಇವರಿಗಿಲ್ಲ. ಭೂರಹಿತರಾಗಿರುವ ಸಾವಿರಾರು ಆದಿವಾಸಿಗಳು ಕೂಡ ಕೊಡವರೇ ಆಗಿದ್ದಾರೆ. ಆದರೆ ಅವರು ರಾಜಕೀಯ ಶಕ್ತಿಯಾಗಿ ಪ್ರಭಾವ ಬೀರುತ್ತಿರುವ ಮೇಲ್ವರ್ಗದ ಕೊಡವರಲ್ಲ. ಸರಕಾರ ಒಂದು ವೇಳೆ ತಳಸ್ತರದಲ್ಲಿರುವ ಈ ಕೆಳವರ್ಗದ ಕೊಡವರ ಬದುಕನ್ನು ಮೇಲೆತ್ತಲು ಯೋಜನೆ ರೂಪಿಸಿದ್ದೇ ಆದಲ್ಲಿ, ಅದಕ್ಕೆ ಅಡ್ಡಿಯಾಗುವವರೂ ಮೇಲ್ಜಾತಿಯ ಕೊಡವರೇ ಆಗಿದ್ದಾರೆ. ಕಾಫಿತೋಟಗಳಲ್ಲಿ ದುಡಿಯುತ್ತಿರುವ ಕೂಲಿಕಾರ್ಮಿಕರ ಬದುಕು ಕತ್ತಲಲ್ಲಿದ್ದಷ್ಟೂ ಈ ಮೇಲ್ಜಾತಿ ಕೊಡವರಿಗೆ ಲಾಭ. ಕೊಡಗು ತಳಸ್ತರದಿಂದ ಅಭಿವೃದ್ಧಿಯಾಗದೇ ಇರುವಲ್ಲಿ ಈ ಮೇಲ್ಜಾತಿಯ ಕೊಡವರ ಪಾತ್ರ ಅತಿ ದೊಡ್ಡದಿದೆ ಮತ್ತು ಅದನ್ನು ಮೀರಿ ಕೊಡಗಿನ ಮೂಲನಿವಾಸಿಗಳನ್ನು ತಲುಪುವ ಧೈರ್ಯವನ್ನು ಯಾವ ರಾಜಕಾರಣಿಗಳೂ ತೋರಿಸುತ್ತಿಲ್ಲ. ಕೊಡಗಿನ ಮೇಲ್ಜಾತಿಯ ಕೊಡವರನ್ನು ಎದುರು ಹಾಕಿಕೊಳ್ಳಲು ಯಾರೂ ಸಿದ್ಧರಿಲ್ಲ. ಇಂದು ಕೊಡಗು ಪ್ರತ್ಯೇಕ ರಾಜ್ಯವಾಗಬೇಕಾದ ಅಗತ್ಯವಿರುವುದು ಮೇಲ್ಜಾತಿಯ ಕೊಡವರಿಗೆ. ಅವರ ಪಾಲಿಗೆ ಅದೊಂದು ಬೆದರಿಕೆಯ ತಂತ್ರವೂ ಹೌದು. ಮಾತು ಮಾತಿಗೆ ಪಕ್ಕದ ಕೇರಳದ ಜನರಿಂದ ಕೊಡಗು ನಾಶವಾಗುತ್ತಿದೆ ಎಂದೂ ಹೇಳುತ್ತಾರೆ.

ಇದೇ ಸಂದರ್ಭದಲ್ಲಿ ಕೊಡಗಿನ ತರುಣರು ಒಬ್ಬೊಬ್ಬರಾಗಿ ನಗರ ಸೇರುತ್ತಿರುವುದನ್ನು ಮುಚ್ಚಿ ಹಾಕುತ್ತಾರೆ. ಹುತ್ತರಿ ಹಬ್ಬ ಕೊಡಗಿನ ಸಂಸ್ಕೃತಿ, ಸಂಭ್ರಮಗಳಲ್ಲಿ ಒಂದು. ಭತ್ತದ ಕೃಷಿಯನ್ನು ಇದು ಅವಲಂಬಿಸಿದೆ. ಇಂದು ಬಹುತೇಕ ಭತ್ತದ ಗದ್ದೆಗಳು ಶುಂಠಿ ಕೃಷಿಗೆ ಬಳಕೆಯಾಗುತ್ತಿವೆೆ. ಕೇರಳದ ಮಲಯಾಳಿ ಜನರಿಗೆ ಶುಂಠಿ ಬೆಳೆಯಲು ಗದ್ದೆಯನ್ನು ಗುತ್ತಿಗೆಯಾಧಾರದಲ್ಲಿ ಕೊಡುತ್ತಿರುವವರು ಕೊಡವರೇ ಆಗಿದ್ದಾರೆ. ಬಳಿಕ ‘ಮಲಯಾಳಿಗರಿಂದ ಭತ್ತದ ಕೃಷಿ ನಾಶವಾಗಿ ಶುಂಠಿ ಬೆಳೆ ಹೆಚ್ಚಿದೆ’ ಎಂದು ಆರೋಪಿಸುತ್ತಾರೆ. ಶುಂಠಿ ಬೆಳೆದು ಅವರು ಕೈ ತುಂಬಾ ಬಾಚುವಾಗ, ಮಲಯಾಳಿಗರ ಮೇಲೆ ಅಕಾರಣ ಸಿಟ್ಟು ಅವರಲ್ಲಿ ಉಕ್ಕುತ್ತದೆ. ಕಾಫಿ ತೋಟಗಳ ಮರಗಳನ್ನು ಒಂದೆಡೆ ಮಲಯಾಳಿಗರಿಗೆ ಮಾರುತ್ತಲೇ, ಮಲಯಾಳಿಗರು ಕೊಡಗಿನ ಮರಗಳನ್ನು ಕಡಿದು ದುಡ್ಡು ಮಾಡುತ್ತಿದ್ದಾರೆ ಎನ್ನುವುದು ಎಷ್ಟು ಸರಿ? ಕೊಡಗು ಅಭಿವೃದ್ಧಿಯಾಗಬೇಕು ನಿಜ. ಆದರೆ ಆ ಅಭಿವೃದ್ಧಿ ತಳಸ್ತರದಿಂದಲೇ ಆರಂಭವಾಗಬೇಕು.

ಕಾಫಿತೋಟದ ಮಾಲಕರ ಬಗ್ಗೆ ಆಸಕ್ತಿ ವಹಿಸಿದಂತೆಯೇ ಕೊಡಗಿನ ಯಾವುದೋ ಮೂಲೆಯಲ್ಲಿ ಭತ್ತ ಬೆಳೆಯುವ ಕೃಷಿಕರ ಕುರಿತಂತೆಯೂ ಸರಕಾರ ಗಂಭೀರವಾಗಿ ಚಿಂತಿಸಬೇಕು. ಹಾಗೆಯೇ ಮನೆ ಕಟ್ಟಲು ಜಮೀನಿಲ್ಲದೆ, ಕೃಷಿ ಮಾಡಲು ಭೂಮಿಯಿಲ್ಲದೆ ಮೇಲ್ಜಾತಿಯ ಕೊಡವರ ತೋಟಗಳಲ್ಲಿ ಊಳಿಗ ಮಾಡುತ್ತಿರುವ ಬುಡಕಟ್ಟು ಸಮುದಾಯದ ಜನರನ್ನು ಮೇಲೆತ್ತುವ ಕೆಲಸ ಆರಂಭವಾಗಬೇಕು. ರಾಜಕೀಯ ಕ್ಷೇತ್ರದಲ್ಲೂ ಈ ಕೆಳಜಾತಿಯ ಸಮುದಾಯದ ಪ್ರತಿನಿಧಿಗಳನ್ನು ಗುರುತಿಸಿ ಸರಕಾರ ಅವರಿಗೆ ಅವಕಾಶಗಳನ್ನು ನೀಡಬೇಕು. ಅವರ ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಸರಕಾರ ಆಸಕ್ತಿ ವಹಿಸಬೇಕು. ಪ್ರತಿ ವರ್ಷ ಕೊಡಗಿಗೆ ನೆರೆಪರಿಹಾರ ಬಿಡುಗಡೆಯಾಗುತ್ತದೆ. ಆದರೆ ಅದು ನಿಜವಾದ ಸಂತ್ರಸ್ತರಿಗೆ ತಲುಪುವುದು ಅಪರೂಪ. ಆನೆ ಕಳುಹಿಸಿದರೆ ಇವರಿಗೆ ತಲುಪುವುದು ಅದರ ಬಾಲದ ತುದಿ ಮಾತ್ರ. ಈ ಎಲ್ಲ ಹಿನ್ನೆಲೆಯಲ್ಲಿ, ಕೊಡಗು ಸ್ವತಂತ್ರವಾಗಬೇಕು. ಆದರೆ ಯಾರಿಂದ? ಕರ್ನಾಟಕದಿಂದಲ್ಲ? ಕೊಡಗಿನಲ್ಲಿರುವ ಭೂಮಾಲಕರಿಂದ. ಅಲ್ಲಿನ ಜಮೀನ್ದಾರರ ದರ್ಪ, ದೌಲತ್ತುಗಳಿಂದ. ಆಗ ಮಾತ್ರ ಕೊಡಗು ನಿಜವಾದ ಅರ್ಥದಲ್ಲಿ ಅಭಿವೃದ್ಧಿಯತ್ತ ಮುನ್ನಡೆದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News