ಜ್ವರ ಬಂದಾಗ ಏನು ಮಾಡಬೇಕು, ಏನು ಮಾಡಬಾರದು.......

Update: 2018-07-16 10:30 GMT

ಸೋಂಕು ಅಥವಾ ಉರಿಯೂತಕ್ಕೆ ನಮ್ಮ ಶರೀರದ ಸಹಜ ಪ್ರತಿಕ್ರಿಯೆಯಿಂದಾಗಿ ಜ್ವರ ಕಾಣಿಸಿಕೊಳ್ಳುತ್ತದೆ. ಜ್ವರವೇ ಒಂದು ಕಾಯಿಲೆಯಲ್ಲ,ವಾಸ್ತವದಲ್ಲಿ ಅದು ರೋಗ ನಿರೋಧಕ ವ್ಯವಸ್ಥೆಯು ರೋಗಕಾರಕಗಳ ವಿರುದ್ಧ ಹೋರಾಡುತ್ತಿದೆ ಮತ್ತು ಸೋಂಕುಗಳಿಗೆ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಸೂಚಿಸುತ್ತದೆ.

ನಮ್ಮ ಶರೀರದ ಸಾಮಾನ್ಯ ಉಷ್ಣತೆಯು 37 ಡಿಗ್ರಿ ಸೆಲ್ಸಿಯಸ್ ಅಥವಾ 98.6 ಡಿಗ್ರಿ ಫ್ಯಾರನ್‌ಹೀಟ್ ಆಗಿರುತ್ತದೆ ಮತ್ತು ಇದಕ್ಕಿಂತ ಹೆಚ್ಚಾದರೆ ಜ್ವರ ಬಂದಿದೆ ಎಂದು ಪರಿಗಣಿಸಲಾಗುತ್ತದೆ.

ನೀವು ಜ್ಚರದಿಂದ ಪೀಡಿತರಾಗಿದ್ದರೆ ಮತ್ತು ಶರೀರದ ಉಷ್ಣತೆಯನ್ನು ತಗ್ಗಿಸುವುದು ಹೇಗೆ ಎನ್ನುವುದು ಗೊತ್ತಾಗದೆ ಗೊಂದಲದಲ್ಲಿದ್ದರೆ ನೀವು ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎನ್ನುವ ಮಾಹಿತಿ ಇಲ್ಲಿದೆ......

ಏನು ಮಾಡಬೇಕು..?

► ಬಟ್ಟೆ ಅಥವಾ ಸ್ಪಂಜ್‌ನ್ನು ತಂಪು ನೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಅದ್ದಿ ಅದನ್ನು ಹಿಂಡಿ ಹೆಚ್ಚಿನ ನೀರನ್ನು ತೆಗೆಯಿರಿ. ಬಳಿಕ ಅದನ್ನು ಹಣೆಯ ಮೇಲಿಡಿ. ನೀರು ಉಷ್ಣತೆಯನ್ನು ತಗ್ಗಿಸಲು ನೆರವಾಗುವುದರಿಂದ ಈ ಕೆಲಸವನ್ನು ನಿಯಮಿತ ಮಧ್ಯಂತರಗಳಲ್ಲಿ ಮಾಡುತ್ತಿರಿ.

► ಸಾದಾ ಅಥವಾ ತಣ್ಣೀರಿನ ಸ್ನಾನ ಮಾಡುವುದರಿಂದ ಶರೀರದ ಉಷ್ಣತೆ ಕಡಿಮೆಯಾಗುತ್ತದೆ ಮತ್ತು ಜ್ವರದಿಂದ ಉಪಶಮನ ದೊರೆಯುತ್ತದೆ.

► ಶರೀರದ ಉಷ್ಣತೆಯನ್ನು ತಿಳಿಯಲು ಕೇವಲ ಕೈಯನ್ನು ಹಣೆ ಮತ್ತು ಕುತ್ತಿಗೆಯ ಮೇಲಿಡುವ ಬದಲು ಉಷ್ಣತಾಮಾಪಕವನ್ನು ಬಳಸಿ.

► ಸಾಕಷ್ಟು ನೀರು ಮತ್ತು ರಸಗಳನ್ನು ಸೇವಿಸುತ್ತಿರಿ. ಇದರಿಂದ ಸೂಕ್ಷ್ಮಜೀವಿಗಳು ಶರೀರದಿಂದ ಹೊರತಳ್ಳಲ್ಪಡುತ್ತವೆ ಮತ್ತು ಶರೀರವು ತಂಪಾಗುತ್ತದೆ. ಜ್ವರ ಬಂದ ಹೊತ್ತಿನಲ್ಲಿ ಯಾವುದೇ ಚಟುವಟಿಕೆಗಳು ಬೇಡ. ಮನೆಯಲ್ಲಿಯೇ ಇದ್ದುಕೊಂಡು ವಿಶ್ರಾಂತಿ ಪಡೆಯಿರಿ.

► ಅತಿಯಾದ ಉಡುಪುಗಳನ್ನು ಧರಿಸಿದ್ದರೆ ಶರೀರದ ಉಷ್ಣತೆ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಹಗುರ,ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ.

ಏನು ಮಾಡಬಾರದು...?

ಜ್ವರವಿದ್ದಾಗ ಚಾದರ್ ಹೊದ್ದುಕೊಂಡು ಮಲಗಬೇಡಿ. ಇದರಿಂದ ಜ್ವರ ಕಡಿಮೆಯಾಗುವುದಿಲ್ಲ,ಬದಲಿಗೆ ಶರೀರದ ಉಷ್ಣತೆಯು ಇನ್ನಷ್ಟು ಹೆಚ್ಚಬಹುದು. ಆದರೆ ಚಳಿ ಅಥವಾ ನಡುಕವಿದ್ದರೆ ಚಾದರ್ ಹೊದ್ದುಕೊಳ್ಳಬಹುದು.

► ಊಟವನ್ನು ಬಿಡಬೇಡಿ. ಹಾಗೆ ಮಾಡಿದರೆ ಸೋಂಕುಗಳ ವಿರುದ್ಧ ಹೋರಾಡಲು ಶರೀರಕ್ಕೆ ಅಗತ್ಯ ಶಕ್ತಿ ದೊರೆಯುವುದಿಲ್ಲ ಮತ್ತು ನಿಶ್ಶಕ್ತಿ ಕಾಣಿಸಿಕೊಳ್ಳುತ್ತದೆ.

► ಜ್ವರ ಬಂದಾಗಲೆಲ್ಲ ಆ್ಯಂಟಿ ಬಯಾಟಿಕ್ ಮಾತ್ರೆಗಳನ್ನು ನುಂಗಬೇಡಿ. ಬ್ಯಾಕ್ಟೀರಿಯಾಗಳಿಂದ ಸೋಂಕು ಉಂಟಾಗಿದ್ದರೆ ಮಾತ್ರ ಆ್ಯಂಟಿ ಬಯಾಟಿಕ್ ಕೆಲಸ ಮಾಡುತ್ತದೆಯೇ ಹೊರತು ವೈರಸ್‌ನಿಂದ ಉಂಟಾದ ಸೋಂಕಿನ ವಿರುದ್ಧವಲ್ಲ.

► ಸ್ವಯಂ ಔಷಧಿಯ ಗೋಜಿಗೆ ಹೋಗಬೇಡಿ. ಏಕೆಂದರೆ ಜ್ವರವನ್ನು ತಗ್ಗಿಸಲು ಔಷಧಿಯ ಅಗತ್ಯವಿಲ್ಲದಿರಬಹುದು. ಆದರೆ 102 ಡಿ.ಫ್ಯಾ.ಗಿಂತ ಹೆಚ್ಚಿನ ಜ್ವರವಿದ್ದರೆ ಅಥವಾ ತೀರ ನಿಶ್ಶಕ್ತಿಯ ಅನುಭವವಾಗುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ.

► ಜ್ವರವಿದ್ದಾಗ ಕಠಿಣ ಶ್ರಮದ ಕೆಲಸಗಳು ಬೇಡವೇ ಬೇಡ. ಅದರಿಂದ ಶರೀರದ ಮೇಲೆ ಅತಿಯಾದ ಒತ್ತಡ ಬೀಳುತ್ತದೆ ಮತ್ತು ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಯಾತನೆಯನ್ನುಂಟು ಮಾಡುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು...?

2-3 ದಿನಗಳಾದರೂ ಜ್ವರವು ಕಡಿಮೆಯಾಗದಿದ್ದರೆ,ಬಿಟ್ಟು ಕೆಲವು ದಿನಗಳ ಕಾಲ ಮತ್ತೆ ಮತ್ತೆ ಬರುತ್ತಿದ್ದರೆ,ಶರೀರದ ಉಷ್ಣತೆ 102 ಡಿ.ಫ್ಯಾ.ಗಿಂತ ಹೆಚ್ಚಾದರೆ,ಜ್ವರದೊಂದಿಗೆ ವಾಂತಿ,ತಲೆನೋವು,ದದ್ದುಗಳು,ಹೊಟ್ಟೆನೋವು, ಉಸಿರಾಟದ ತೊಂದರೆ ಮತ್ತು ಸೆಳೆತದ ಲಕ್ಷಣಗಳು ಕಾಣಿಸಿಕೊಂಡರೆ ನೀವು ಅಗತ್ಯವಾಗಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

ಸ್ವಲ್ಪ ಜ್ವರ ಬಂದರೂ ಮಾತ್ರೆಯನ್ನು ನುಂಗುವ ಅಭ್ಯಾಸವಿದ್ದರೆ ಅದನ್ನು ಮೊದಲು ಬಿಡಿ. ಬದಲಿಗೆ ವಿಶ್ರಾಂತಿಯನ್ನು ಪಡೆಯಿರಿ ಮತ್ತು ನಿಮ್ಮ ಶರೀರವು ಸೋಂಕಿನ ವಿರುದ್ಧ ಹೋರಾಡಲು ಅವಕಾಶ ನೀಡಿ.

ಆದರೆ ಜ್ವರದ ತೀವ್ರತೆ 102 ಡಿ.ಫ್ಯಾ.ಗಿಂತ ಹೆಚ್ಚಿದ್ದರೆ ಅಥವಾ ಆಗಾಗ್ಗೆ ಜ್ವರ ಬರುತ್ತಿದ್ದರೆ ತಪ್ಪದೇ ವೈದ್ಯರನ್ನು ಭೇಟಿಯಾಗಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News