ಮಹಿಳಾ ಮೀಸಲಾತಿ ಮಸೂದೆಗೆ ಬೇಷರತ್ ಬೆಂಬಲ ನೀಡಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಹೊಸ ಸವಾಲು

Update: 2018-07-16 10:38 GMT

ಹೊಸದಿಲ್ಲಿ, ಜು.16: ಮಹಿಳಾ ಮೀಸಲಾತಿ ಮಸೂದೆಯನ್ನು ಸಂಸತ್ತು ಅಂಗೀಕರಿಸುವಂತಾಗಲು ಪ್ರಧಾನಿ ನರೇಂದ್ರ ಮೋದಿಯ ಬೇಷರತ್ ಬೆಂಬಲ ಕೋರಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟ್ವೀಟ್ ಮಾಡಿದ್ದಾರೆ.

"ಪಕ್ಷ ರಾಜಕೀಯದಿಂದ ಹೊರ ಬರುವ ಸಮಯ, ಮಾತಿನಂತೆ ಅವರು ನಡೆದು ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು. ಕಾಂಗ್ರೆಸ್  ಅವರಿಗೆ ಬೇಷರತ್ ಬೆಂಬಲ ಘೋಷಿಸುತ್ತದೆ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. ಸಂಸತ್ತಿನಲ್ಲಿ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲು ಅನುವು ಮಾಡಿಕೊಡುವ ಈ ಮಸೂದೆಯನ್ನು ರಾಜ್ಯಸಭೆ 2010ರಲ್ಲಿಯೇ ಅಂಗೀಕರಿಸಿದ್ದರೂ ಲೋಕಸಭೆ ಇನ್ನಷ್ಟೇ ಅದಕ್ಕೆ ಅನುಮೋದನೆ ನೀಡಬೇಕಿದೆ.

"ಮಹಿಳಾ ಸಬಲೀಕರಣಕ್ಕೆ ನಿಮಗಿರುವ ಆಸಕ್ತಿ ಹಾಗೂ ಮಹಿಳೆಯರನ್ನು ಸಾರ್ವಜನಿಕ ಜೀವನದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಬಗ್ಗೆ ನೀವು ನಿಮ್ಮ ಹಲವಾರು ರ್ಯಾಲಿಗಳಲ್ಲಿ ಮಾತನಾಡಿದ್ದೀರಿ. ಈ ವಿಚಾರದಲ್ಲಿ ನಿಮಗಿರುವ ಬದ್ಧತೆಯನ್ನು ತೋರಿಸಲು ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ನಿಮ್ಮ ಬೇಷರತ್ ಬೆಂಬಲ ನೀಡುವುದಕ್ಕಿಂತ ಬೇರೊಂದು ಉತ್ತಮ ಮಾರ್ಗ ವಿದೆಯೇ?, ಮುಂದಿನ ಸಂಸತ್ ಅಧಿವೇಶನಕ್ಕಿಂತ ಉತ್ತಮ ಸಮಯವಿದೆಯೇ?'' ಎಂದು ರಾಹುಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಇನ್ನೂ ವಿಳಂಬಿಸಿದರೆ ಈ ಮಸೂದೆಯನ್ನು ಮುಂದಿನ ಸಾರ್ವತ್ರಿಕ ಚುನಾವಣೆಗಿಂತ ಮುಂಚೆ ಜಾರಿಗೊಳಿಸುವುದು ಅಸಾಧ್ಯ ಎಂದೂ ಅವರು ಹೇಳಿದ್ದಾರೆ.

ತಮ್ಮ ಪಕ್ಷ ಈ ಮಸೂದೆಗೆ ಬೆಂಬಲಾರ್ಥವಾಗಿ ಈಗಾಗಲೇ 32 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸಿರುವುದಾಗಿಯೂ ಅವರು ತಿಳಿಸಿದ್ದಾರೆ. ವಿವಿಧ ಪಕ್ಷಗಳ ನಾಯಕರು ಈ ಮಸೂದೆಯನ್ನು ವಿರೋಧಿಸಿದ್ದರೆ, ಆರ್‍ಜೆಡಿಯ ಲಾಲು ಯಾದವ್ ಹಾಗೂ ಸಮಾಜವಾದಿ ಪಕ್ಷ ಕೂಡ ಬಹಿರಂಗವಾಗಿ ವಿರೋಧಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News