2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲು ಎನ್‌ಡಿಎ ಸರಕಾರ ಶ್ರಮಿಸುತ್ತಿದೆ:ಪ್ರಧಾನಿ ಮೋದಿ
ಮಿಡ್ನಾಪುರ(ಪ.ಬಂ),ಜು.16: 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ತನ್ನ ಸರಕಾರವು ಶ್ರಮಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಇಲ್ಲಿ ಹೇಳಿದರು.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರಕಾರದ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದರು. ಅದು ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸುತ್ತಿದೆ ಮತ್ತು ‘ಸಿಂಡಿಕೇಟ್ ’ ಅಥವಾ ಪಟ್ಟಭದ್ರ ಹಿತಾಸಕ್ತಿಗಳ ಗುಂಪುಗಳನ್ನು ಉತ್ತೇಜಿಸುತ್ತಿದೆ ಎಂದು ಆರೋಪಿಸಿದರು.
‘‘ನನ್ನ ಸರಕಾರವು ನಿಮ್ಮ ಸರಕಾರವಾಗಿದೆ. ಅದು ರೈತರ ಸರಕಾರವಾಗಿದೆ. ನಮ್ಮ ಸರಕಾರವು ಉತ್ತಮ ಗುಣಮಟ್ಟದ ಬೀಜಗಳ ಪೂರೈಕೆಯಿಂದ ಹಿಡಿದು ಮಾರಾಟದ ವರೆಗೆ ರೈತರಿಗಾಗಿ ಶ್ರಮಿಸಿದೆ. ರೈತರ ಉತ್ಪನ್ನಗಳನ್ನು ರಕ್ಷಿಸಲು ಗೋದಾಮುಗಳ ಸ್ಥಾಪನೆ ಮುಖ್ಯವಾಗಿದೆ ’’ಎಂದರು.
ರಾಜ್ಯ ಸರಕಾರದ ವಿರುದ್ಧ ದಾಳಿಯನ್ನು ಹರಿತಗೊಳಿಸಿದ ಮೋದಿ,ಪಶ್ಚಿಮ ಬಂಗಾಳದಲ್ಲಿ ‘ಸಿಂಡಿಕೇಟ್’ನ ಒಪ್ಪಿಗೆಯಿಲ್ಲದೆ ಏನನ್ನೂ ಮಾಡುವಂತಿಲ್ಲ. ರಾಜ್ಯದಲ್ಲಿ ಪ್ರಜಾಪ್ರಭುತ್ವದ ಉಸಿರುಗಟ್ಟಿಸಲಾಗುತ್ತಿದೆ ಎಂದರು.
ರೈತರಿಗಾಗಿ ಶ್ರಮಿಸುವಂತೆ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಆಗ್ರಹಿಸಿದ ಅವರು,‘‘ರೈತರಿಗಾಗಿ ಮೂಲಸೌಕರ್ಯಗಳನ್ನು ಸೃಷ್ಟಿಸಲು ಪ.ಬಂಗಾಳ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ. ನಮ್ಮ ರೈತರು ಆಧುನಿಕ ತಂತ್ರಜ್ಞಾನಗಳನ್ನು ಬಳಸಬೇಕು ಎಂದು ನಾವು ಬಯಸಿದ್ದೇವೆ ’’ ಎಂದರು.