ಡೆಂಗ್ಯು ಮತ್ತು ಚಿಕುನ್‌ಗುನ್ಯಾ ನಡುವಿನ ಪ್ರಮುಖ ವ್ಯತ್ಯಾಸಗಳು ನಿಮಗೆ ಗೊತ್ತೇ?

Update: 2018-07-17 10:10 GMT

ಡೆಂಗ್ಯು ಜ್ವರ ಮತ್ತು ಚಿಕುನ್‌ಗುನ್ಯಾ ಸೊಳ್ಳೆಗಳಿಂದ ಹರಡುವ ರೋಗಗಳಾಗಿವೆ. ಏಡಿಸ್ ಈಜಿಪ್ಟಿ ಸೊಳ್ಳೆಗಳು ಈ ರೋಗಗಳಿಗೆ ಕಾರಣವಾಗಿದ್ದರೂ ಕೆಲವು ಚಿಕುನ್‌ಗುನ್ಯಾ ಪ್ರಕರಣಗಳಲ್ಲಿ ಏಡಿಸ್ ಅಲ್ಬೊಪಿಕ್ಟಸ್ ಸೊಳ್ಳೆಗಳು ಕಾರಣವಾಗಿರುವುದು ಕಂಡುಬಂದಿದೆ. ಈ ಸೊಳ್ಳೆಗಳಿಂದಾಗಿ ರೋಗಕಾರಕ ವೈರಸ್‌ಗಳು ನೇರವಾಗಿ ಮಾನವನ ರಕ್ತದಲ್ಲಿ ಸೇರಿಕೊಳ್ಳುತ್ತವೆ.

ಈ ರೋಗಗಳು ಸಾಮಾನ್ಯವಾಗಿ ಉಷ್ಣವಲಯ ಪ್ರದೇಶಗಳಲ್ಲಿಯ ಜನರನ್ನು ಕಾಡುತ್ತವೆ.

ಈ ಹಿಂದೆ ಡೆಂಗ್ಯು ಮತ್ತು ಚಿಕುನ್‌ಗುನ್ಯಾ ಕಾಯಿಲೆಗಳನ್ನು ಒಂದೇ ಎಂದು ಭಾವಿಸಲಾಗುತ್ತಿತ್ತು. ಇವೆರಡೂ ಒಂದೇ ಬಗೆಯ ಲಕ್ಷಣಗಳನ್ನು ಹೊಂದಿರುವುದು ಇದಕ್ಕೆ ಕಾರಣವಾಗಿತ್ತು. ಇಂದಿಗೂ ಪ್ರಯೋಗಾಲಯದಲ್ಲಿ ರಕ್ತದ ಪರೀಕ್ಷೆ ನಡೆಸಿದ ಹೊರತು ಈ ರೋಗಗಳನ್ನು ನಿರ್ಧರಿಸುವುದು ಕಠಿಣವಾಗಿದೆ.

ಅಪರೂಪದ ಪ್ರಕರಣಗಳಲ್ಲಿ ವ್ಯಕ್ತಿ ಈ ಎರಡೂ ರೋಗಗಳಿಂದ ಪೀಡಿತನಾಗಬಹುದು. ಈ ರೋಗಗಳಿಗೆ ಜಾಗತಿಕವಾಗಿ ಮನ್ನಣೆ ಪಡೆದ ಯಾವುದೇ ಲಸಿಕೆ ಇಲ್ಲದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಅಲ್ಲದೆ ಇವೆರಡೂ ರೋಗಗಳಿಗೆ ನಿರ್ದಿಷ್ಟವಾಗಿ ನೀಡಬಹುದಾದ ಯಾವುದೇ ಚಿಕಿತ್ಸೆಯೂ ಇಲ್ಲ. ರೋಗವು ನಿರ್ಧಾರಗೊಂಡ ಬಳಿಕ ಸಂದುನೋವು,ಜ್ವರ ಇತ್ಯಾದಿ ಲಕ್ಷಣಗಳಿಗೆ ಚಿಕಿತ್ಸೆ ನೀಡುವುದೇ ಏಕಮೇವ ಮಾರ್ಗವಾಗಿದೆಯೇ ಹೊರತು ವೈರಸ್‌ನ್ನು ಸಂಪೂರ್ಣವಾಗಿ ನಿರ್ಮೂಲಿಸಲು ಸಾಧ್ಯವಿಲ್ಲ.

ಇವೆರಡೂ ರೋಗಗಳಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಿಕೊಳ್ಳದಿದ್ದರೆ ಮಾರಣಾಂತಿಕವಾಗಬಹುದು ಅಥವಾ ಕನಿಷ್ಠ ನಮ್ಮ ಶರೀರದಲ್ಲಿನ ವಿವಿಧ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡಬಹುದು. ಇವೆರಡು ರೋಗಗಳ ನಡುವಿನ ಪ್ರಮುಖ ವ್ಯತ್ಯಾಸಗಳ ಕುರಿತು ಮಾಹಿತಿಗಳಿಲ್ಲಿವೆ.....

►ಕಾರಣ

ಡೆಂಗ್ಯು ಫ್ಲಾವಿವೈರಿಡೇ ಕುಟುಂಬಕ್ಕೆ ಸೇರಿದ ಫ್ಲಾವಿವೈರಸ್‌ಗಳಿಂದ ಉಂಟಾಗುತ್ತದೆ. ಹೆಣ್ಣು ಏಡಿಸ್ ಈಜಿಪ್ಟಿ ಸೊಳ್ಳೆಗಳು ಮಾತ್ರ ಈ ವೈರಸ್‌ಗಳ ವಾಹಕವಾಗಿದ್ದು, ಅವುಗಳ ಹರಡುವಿಕೆ ಮತ್ತು ರೋಗಕ್ಕೆ ಕಾರಣವಾಗುತ್ತವೆ.

ಚಿಕುನ್‌ಗುನ್ಯಾ ಟೋಗಾವೈರಿಡೇ ಕುಟುಂಬಕ್ಕೆ ಸೇರಿದ ಆಲ್ಫಾವೈರಸ್‌ಗಳಿಂದ ಉಂಟಾಗುತ್ತದೆ. ಸಾಮಾನ್ಯವಾಗಿ ಏಡಿಸ್ ಈಜಿಪ್ಟಿ ಸೊಳ್ಳೆಗಳ ಕಡಿತದಿಂದ ವೈರಸ್ ರಕ್ತದಲ್ಲಿ ಸೇರಿಕೊಳ್ಳುತ್ತದೆ. ಅಪರೂಪದ ಪ್ರಕರಣಗಳಲ್ಲಿ ಏಡಿಸ್ ಅಲ್ಬೊಪಿಕ್ಟಸ್ ಸೊಳ್ಳೆಗಳ ಕಡಿತ ಚಿಕುನ್‌ಗುನ್ಯಾಕ್ಕೆ ಕಾರಣವಾಗುತ್ತದೆ. ಏಡಿಸ್ ಈಜಿಪ್ಟಿಯು ಝೈಕಾ ಮತ್ತು ಹಳದಿ ಜ್ವರಗಳಂತಹ ಇತರ ರೋಗಗಳಿಗೂ ಪ್ರಮುಖ ವೈರಸ್ ವಾಹಕವಾಗಿದೆ.

►ಲಕ್ಷಣಗಳು

 ವ್ಯಕ್ತಿಯು ಡೆಂಗ್ಯು ಪೀಡಿತನಾದಾಗ ತೀವ್ರ ತಲೆನೋವು,ವಾಕರಿಕೆ ಮತ್ತು/ಅಥವಾ ವಾಂತಿ,2-4 ದಿನಗಳಲ್ಲಿ ಕಡಿಮೆಯಾಗುವ ಆದರೆ ಅತಿಯಾದ ಬೆವರುವಿಕೆಯಿಂದ ಕೂಡಿದ 103 ಡಿಗ್ರಿ ಫ್ಯಾರೆನ್‌ಹೀಟ್ ಅಥವಾ ಅದಕ್ಕೂ ಹೆಚ್ಚಿನ ತೀವ್ರತೆಯ ದಿಢೀರ್ ಜ್ವರ(ಈಗಾಗಲೇ ಇರುವ ಸೋಂಕು ಕಾರಣವಾಗಿರದ),ಹಣೆಯ ಭಾಗದಲ್ಲಿ ಮತ್ತು ಕಣ್ಣುಗಳ ಹಿಂದೆ ನೋವು(ವಿಶೇಷವಾಗಿ ಕಣ್ಣುಗಳನ್ನು ಚಲಿಸಿದಾಗ), ಬಳಲಿಕೆ ಮತ್ತು ಅತಿಯಾದ ನಿಶ್ಶಕ್ತಿ,ಶರೀರದಲ್ಲಿ ಮತ್ತು ಸಂದುಗಳಲ್ಲಿ ನೋವು, ಕಡಿಮೆ ಹೃದಯ ಬಡಿತದೊಡನೆ ಉಸಿರಾಟದಲ್ಲಿ ತೊಂದರೆ,ಕಡಿಮೆ ರಕ್ತದೊತ್ತಡ,ಕುತ್ತಿಗೆ ಮತ್ತು ತೊಡೆಸಂದುಗಳಲ್ಲಿ ದುಗ್ಧರಸ ಗ್ರಂಥಿಗಳು ದೊಡ್ಡದಾಗುವಿಕೆ ಇವು ಡೆಂಗ್ಯು ಲಕ್ಷಣಗಳಾಗಿವೆ.

ರೋಗವು ತೀವ್ರವಾಗಿದ್ದರೆ ವಸಡುಗಳು ಮತ್ತು ಮೂಗಿನಿಂದ ರಕ್ತಸ್ರಾವ,ಮುಖ ಮತ್ತು/ಅಥವಾ ತೋಳುಗಳಲ್ಲಿ ಮತ್ತು ಕಾಲುಗಳಲ್ಲಿ ದದ್ದುಗಳು,ಪೇಲವ ಚರ್ಮ,ಪ್ರಕ್ಷುಬ್ಧತೆ ಅಥವಾ ಮಂಪರು, ಸದಾ ಬಾಯಾರಿಕೆ,ಹೊಟ್ಟೆನೋವು ಮತ್ತು ಕಪ್ಪುಬಣ್ಣದ ಮಲವಿಸರ್ಜನೆಯಂತಹ ಇತರ ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ. ಇದರ ಜೊತೆಗೆ ಪ್ಲೇಟ್‌ಲೆಟ್‌ಗಳ ಸಂಖ್ಯೆ ಕ್ಷೀಣಿಸುತ್ತದೆ.

ತಲೆನೋವು,ಗಂಟಲು ಕೆರೆತ, ವಾಕರಿಕೆ ಮತ್ತು/ಅಥವಾ ವಾಂತಿ,103 ಡಿ.ಫ್ಯಾ. ಅಥವಾ ಹೆಚ್ಚಿನ ತೀವ್ರತೆಯ ಜ್ವರ,ಚರ್ಮದ ಮೇಲೆ ವಿಶೇಷವಾಗಿ ಅಂಗೈ,ಮುಖ,ಕುತ್ತಿಗೆಯ ಕೆಳಗಿನ ಶರೀರದ ಭಾಗದಲ್ಲಿ,ಕೈಕಾಲುಗಳಲ್ಲಿ ದದ್ದುಗಳು ಮತ್ತು ಬೊಕ್ಕೆಗಳು,ಕಣ್ಣುಗಳಲ್ಲಿ ನೋವು,ಕೆಲವೊಮ್ಮೆ ಕೆಂಗಣ್ಣು ಬೇನೆ,ತೀವ್ರ ಬೆನ್ನು ನೋವು ವಿಶೇಷವಾಗಿ ಬೆನ್ನಿನ ಕೆಳಭಾಗದಲ್ಲಿ,ಸ್ನಾಯುಗಳು ಮತ್ತು ಸಂದುಗಳಲ್ಲಿ ತೀವ್ರ ನೋವಿನೊಂದಿಗೆ ಕೆಲವೊಮ್ಮೆ ಊತ,ಬಳಲಿಕೆ ಇವು ಚಿಕುನ್‌ಗುನ್ಯಾದ ಲಕ್ಷಣಗಳಾಗಿವೆ.

►ಲಕ್ಷಣಗಳು ಕಾಣಿಸಿಕೊಳ್ಳಲು ತಗಲುವ ಸಮಯ

ಡೆಂಗ್ಯು ಜ್ವರದ ಲಕ್ಷಣಗಳು 3ರಿಂದ 7 ದಿನಗಳಲ್ಲಿ ಅಭಿವೃದ್ಧಿಗೊಂಡು ಪ್ರಕಟಗೊಳ್ಳುತ್ತವೆ. ಚಿಕುನ್‌ಗುನ್ಯಾದ ಲಕ್ಷಣಗಳು 1ರಿಂದ 12 ದಿನಗಳಲ್ಲಿ ಕಾಣಿಸಿಕೊಳ್ಳುತ್ತವೆ.

►ರೋಗದ ಕಾಲಾವಧಿ

ಡೆಂಗ್ಯು ಜ್ವರವು ಸುಮಾರು 4ರಿಂದ 7 ವಾರಗಳ ಕಾಲ ಇರಬಹುದು. ಚಿಕುನ್‌ಗುನ್ಯಾ ಸುಮಾರು 1ರಿಂದ 2 ವಾರಗಳ ಕಾಲ ಕಾಡಬಹುದು,ಆದರೆ ಸಂದುನೋವುಗಳಂತಹ ಲಕ್ಷಣಗಳು ನಿವಾರಣೆಯಾಗಲು ವರ್ಷಗಟ್ಟಲೆ ಹಿಡಿಯಬಹುದು.

►ಅಪಾಯಗಳು

ಚಿಕುನ್‌ಗುನ್ಯಾಕ್ಕೆ ಹೋಲಿಸಿದರೆ ಡೆಂಗ್ಯು ಹೆಚ್ಚು ಅಪಾಯಕಾರಿಯಾಗಿದೆ ಮತ್ತು ಚಿಕಿತ್ಸೆ ಪಡೆಯದಿದ್ದರೆ ಅದು ಸಾವಿಗೂ ಕಾರಣವಾಗಬಹುದು. ಅಲ್ಲದೆ ರೋಗದ ಅವಧಿಯಲ್ಲಿ ಲಕ್ಷಣಗಳು ಅತ್ಯಂತ ತೀವ್ರಗೊಳ್ಳಬಹುದು. ಉದಾಹರಣೆಗೆ ಅತಿಯಾದ ರಕ್ತಸ್ರಾವವಾಗಬಹುದು,ಉಸಿರಾಟಕ್ಕೆ ಹೆಚ್ಚು ತೊಂದರೆಯಾಗಬಹುದು ಮತ್ತು ಪ್ಲೇಟ್‌ಲೆಟ್ ಕೌಂಟ್ ಕೂಡ ತೀವ್ರವಾಗಿ ಕುಸಿಯಬಹುದು. ರೋಗವನ್ನು ನಿಯಂತ್ರಣದಲ್ಲಿಡಲು ಈ ಲಕ್ಷಣಗಳ ಮೇಲೆ ನಿರಂತರ ನಿಗಾಯಿರಿಸಬೇಕಾಗುತ್ತದೆ.

ಚಿಕುನ್‌ಗುನ್ಯಾ ಡೆಂಗ್ಯುವಿನಷ್ಟು ಅಪಾಯಕಾರಿಯಲ್ಲ. ಆದರೆ ರೋಗದ ಅವಧಿಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಕೆಲವೊಮ್ಮೆ ಹಲವಾರು ವರ್ಷಗಳವರೆಗೆ ಕಾಡುತ್ತಿರುತ್ತವೆ. ವಿಶೇಷವಾಗಿ ಶರೀರದಲ್ಲಿನ ನೋವು ಶಮನಗೊಳ್ಳಲು ತಿಂಗಳುಗಳು ಅಥವಾ ವರ್ಷಗಳೇ ಬೇಕಾಗಬಹುದು. ಅಪರೂಪದ ಪ್ರಕರಣಗಳಲ್ಲಿ ನರಮಂಡಲಕ್ಕೂ ಹಾನಿಯುಂಟಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News