ಮಿದುಳಿನ ಟ್ಯೂಮರ್ ಅಪಾಯದಿಂದ ದೂರವಿರಬೇಕೇ?: ಹಾಗಿದ್ದರೆ ಇದರ ಬಳಕೆಯನ್ನು ತಗ್ಗಿಸಿ

Update: 2018-07-18 10:51 GMT

ಮೊಬೈಲ್ ಫೋನ್ ಇಂದು ನಮ್ಮ ಬದುಕಿನ ಅವಿಭಾಜ್ಯ ಭಾಗವಾಗಿಬಿಟ್ಟಿದೆ. ನಾವು ಮನೆಯಲ್ಲಿರಲಿ ಅಥವಾ ಕಚೇರಿಯಲ್ಲಿರಲಿ,ಮೊಬೈಲ್ ಫೋನ್ ಬಳಸದೆ ಯಾವುದೇ ಕಾರ್ಯವೂ ಪೂರ್ಣಗೊಳ್ಳುವುದಿಲ್ಲ.

ಪ್ರತಿದಿನವೂ ವಿಶ್ವಾದ್ಯಂತ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಮೊಬೈಲ್ ಫೋನ್‌ಗಳು ನಮ್ಮ ಬದುಕನ್ನು ಹೆಚ್ಚು ಸುಲಭಗೊಳಿಸಿವೆಯಾದರೂ ಅವು ಹಾನಿಕಾರಕ ವಿಕಿರಣವನ್ನು ಹೊರಸೂಸುತ್ತವೆ ಎನ್ನುವುದು ಕಟುಸತ್ಯ.

ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಗೂ ಮಿದುಳಿನ ಟ್ಯೂಮರ್ ಪ್ರಕರಣಗಳಿಗೂ ಸಂಬಂಧವಿದೆ ಎನ್ನುವುದನ್ನು ನೀವು ಓದಿರಬಹುದು,ಕೇಳಿರಬಹುದು. ಕಳೆದೆರಡು ದಶಕಗಳಲ್ಲಿ ಮಿದುಳಿನ ಟ್ಯೂಮರ್ ಪ್ರಕರಣಗಳು ಹೆಚ್ಚುತ್ತಿವೆ ಮತ್ತು ಇವುಗಳಲ್ಲಿ ಹೆಚ್ಚಿನವುಗಳಿಗೆ ಮೊಬೈಲ್ ಫೋನ್‌ಗಳಿಂದ ಹೊರಸೂಸುವ ವಿದ್ಯುತ್‌ಕಾಂತೀಯ ಕ್ಷೇತ್ರ ವಿಕಿರಣ ಕಾರಣವೆನ್ನಲಾಗಿದೆ.

ನಾವು ಮೊಬೈಲ್ ಫೋನ್‌ನ್ನು ಕಿವಿಯ ಬಳಿ ಹಿಡಿದುಕೊಂಡಾಗ ಶೇ.10ರಿಂದ ಶೇ.80ರಷ್ಟು ವಿಕಿರಣ ನಮ್ಮ ಮಿದುಳಿನಲ್ಲಿ ಎರಡು ಇಂಚುಗಳಷ್ಟು ಒಳಪ್ರವೇಶಿಸುತ್ತದೆ ಮತ್ತು ಮಕ್ಕಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು ಎನ್ನುವುದನ್ನು ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದಂತೆ ನಡೆಸಲಾದ ಹಲವಾರು ಅಧ್ಯಯನಗಳು ತೋರಿಸಿವೆ.

ದೀರ್ಘ ಸಮಯ ಮೊಬೈಲ್ ಫೋನ್ ಬಳಕೆಯು ಮಿದುಳಿನ ನರಕೋಶಗಳನ್ನು ಛಿದ್ರಗೊಳಿಸುತ್ತದೆ ಎನ್ನಲಾಗಿದೆ. ಮೊಬೈಲ್‌ನಲ್ಲಿ ಸುದೀರ್ಘ ಸಮಯ ಸಂಭಾಷಣೆಯು ಹೆಚ್ಚುತ್ತಿರುವ ಮಿದುಳಿನ ಟ್ಯೂಮರ್ ಅಪಾಯದೊಂದಿಗೆ ಗುರುತಿಸಿಕೊಂಡಿದೆ. 25ವರ್ಷಗಳಿಗೂ ಹೆಚ್ಚಿನ ಅವಧಿಯಿಂದ ಮೊಬೈಲ್ ಫೋನ್ ಬಳಸುತ್ತಿರುವವರಲ್ಲಿ ಮಿದುಳಿನ ಟ್ಯೂಮರ್ ಅಪಾಯವು ದುಪ್ಪಟ್ಟಾಗಿದೆ ಮತ್ತು ತಮ್ಮ 20 ವರ್ಷ ಪ್ರಾಯಕ್ಕಿಂತ ಮೊದಲೇ ಮೊಬೈಲ್ ಬಳಕೆ ಆರಂಭಿಸಿರುವವರಲ್ಲಿ ಮೂರು ಪಟ್ಟಿನಷ್ಟು ಹೆಚ್ಚಾಗಿದೆ ಎನ್ನುವುದನು ್ನಕೆಲವು ಅಧ್ಯಯನಗಳು ಬೆಳಕಿಗೆ ತಂದಿವೆ.

ನೀವು ದಿನವೊಂದರಲ್ಲಿ ಸ್ವೀಕರಿಸುವ ಕರೆಗಳ ಸಂಖ್ಯೆ,ಮಾತನಾಡುವ ಅವಧಿ ಮತ್ತು ಪ್ರತಿದಿನದ ಬಳಕೆಯನ್ನು ಅವಲಂಬಿಸಿ ಅತಿಯಾದ ಫೋನ್ ಬಳಕೆಯು ಮಾನಸಿಕ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಮೊಬೈಲ್ ಫೋನ್‌ನೊಂದಿಗೆ ನಿಮ್ಮ ಸಾಮೀಪ್ಯವು.....ವಿಶೇಷವಾಗಿ ನಿದ್ರಿಸುತ್ತಿದ್ದಾಗ, ಮೈಗ್ರೇನ್,ಖಿನ್ನತೆ,ಉದ್ವೇಗ ಮತ್ತು ನಿದ್ರೆಗೆ ವ್ಯತ್ಯಯದಂತಹ ಮಿದುಳಿನ ಅನಾರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ಉಂಟುಮಾಡಬಹುದು.

ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಗೆ ದಿನವೊಂದಕ್ಕೆ 45 ನಿಮಿಷಗಳಿಗೂ ಅಧಿಕ ತಮ್ಮ ಮೊಬೈಲ್ ಪೋನ್‌ಗಳನ್ನು ಬಳಸಿದವರಲ್ಲಿ ಮಿದುಳಿನ ಟ್ಯೂಮರ್‌ನ ಅಪಾಯವು ಶೇ.33ರಷ್ಟು ಹೆಚ್ಚಿದೆ ಎಂದು ಏಮ್ಸ್-ದಿಲ್ಲಿ ಕಳೆದ ವರ್ಷ ತನ್ನ ವರದಿಯಲ್ಲಿ ತಿಳಿಸಿದೆ.

ನಿದ್ರಿಸುವಾಗ ಮೊಬೈಲ್ ಪೋನ್‌ಗಳನ್ನು ತಲೆದಿಂಬಿನಡಿ ಇಟ್ಟುಕೊಳ್ಳುವವರಲ್ಲಿಯೂ ಮಿದುಳಿನ ಟ್ಯೂಮರ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಪೋನ್ ವಿಕಿರಣವು ವಯಸ್ಕರ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಲ್ಲ,ಅದು ಮಕ್ಕಳಲ್ಲಿ ಮಿದುಳಿನ ಚಟುವಟಿಕೆಗಳ ಮೇಲೂ ನಕಾರಾತ್ಮಕ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅವರ ಮಿದುಳಿನ ಕೋಶಗಳಿಗೆ ಹಾನಿಗೆ ಕಾರಣವಾಗುತ್ತದೆ.

 ಮೊಬೈಲ್ ಫೋನ್ ಬಳಕೆಯು ಮಾನವರಲ್ಲಿ ಕ್ಯಾನ್ಸರ್‌ಕಾರಕವಾಗುವ ಸಾಧ್ಯತೆಯಿದೆ ಎಂದು ಅಂತರರಾಷ್ಟ್ರೀಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಬಹಿರಂಗಗೊಳಿಸಿದೆ.

 ಮೊಬೈಲ್ ಫೋನ್‌ಗಳು ಹೊರಸೂಸುವ ರೇಡಿಯೊ ತರಂಗಗಳು ಅವುಗಳ ಎಂಟೆನ್ನಾಗಳಿಂದ ಹೊರಹೊಮ್ಮುವ ಅಯಾನುಗಳಾಗಿ ಮಾರ್ಪಡದ ವಿಕಿರಣವಾಗಿದ್ದು,ಫೋನ್‌ಗೆ ನಿಕಟವಾಗಿರುವ ನಮ್ಮ ಅಂಗಾಂಶಗಳು ಅವುಗಳನ್ನು ಹೀರಿಕೊಳ್ಳುತ್ತವೆ. ಬಿಸಿಯಾಗಿಸುವುದು ಈ ರೇಡಿಯೋ ತರಂಗ ಶಕ್ತಿಯ ಜೈವಿಕ ಪರಿಣಾಮವಾಗಿದ್ದು, ಇದನ್ನು ಆಹಾರವನ್ನು ಬಿಸಿಯಾಗಿಸಲು ಬಳಸುವ ಮೈಕ್ರೋವೇವ್ ಓವನ್‌ಗಳಿಗೆ ಹೋಲಿಸಬಹುದು. ಮೊಬೈಲ್ ಫೋನ್‌ಗಳು ಹೊರಹೊಮ್ಮಿಸುವ ರೇಡಿಯೊ ತರಂಗಗಳು ನಾವು ಫೋನ್‌ನ್ನು ಕಿವಿ ಅಥವಾ ತಲೆಯ ಬಳಿ ...ಹೀಗೆ ಎಲ್ಲೇ ಹಿಡಿದುಕೊಂಡಿರಲಿ,ಆ ಜಾಗವನ್ನು ಬಿಸಿಯಾಗಿಸುತ್ತವೆ. ಈ ಬಿಸಿಯು ಶರೀರದ ಉಷ್ಣತೆಯನ್ನು ಹೆಚ್ಚಿಸುವುದಿಲ್ಲವಾದರೂ ಸುದೀರ್ಘಾವಧಿಯಲ್ಲಿ ಆ ಜಾಗಕ್ಕೆ ಸಮೀಪವಿರುವ ಅಂಗಕ್ಕೆ ಹಾನಿಯನ್ನುಂಟು ಮಾಡುತ್ತದೆ.

ವಿಕಿರಣದ ಅಪಾಯವು ಎಲ್ಲರಿಗೂ ಒಂದೇ ಆಗಿದ್ದರೂ,ಕೆಲವು ಜನರು ಹಾನಿಕಾರಕ ವಿಕಿರಣದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಗರ್ಭಿಯರು,ವಿಶೇಷವಾಗಿ ಅವರ ಗರ್ಭದಲ್ಲಿರುವ ಶಿಶು,ಎಳೆಯ ಮಕ್ಕಳು,ಹರೆಯದವರು ಈ ವರ್ಗದಲ್ಲಿ ಸೇರುತ್ತಾರೆ. ಈ ವಿಕಿರಣವು ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನೂ ಕುಗ್ಗಿಸುತ್ತದೆ ಮತ್ತು ಸಂತಾನಶಕ್ತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಮಕ್ಕಳು ಎಳವೆಯಲ್ಲೇ ಮೊಬೈಲ್ ಫೋನ್‌ಗಳನ್ನು ಬಳಸಲು ಆರಂಭಿಸಿದರೆ ಅವರು ತಮ್ಮ ಜೀವನದಲ್ಲಿ ಅದನ್ನು ಬಳಸುವ ಅವಧಿಯೂ ಹೆಚ್ಚಾಗಿರುತ್ತದೆ ಮತು ್ತಇದು ಅಪಾಯಗಳಿಗೆ ಆಹ್ವಾನ ನೀಡುತ್ತದೆ.ಅಲ್ಲದೆ ಅವರ ಶರೀರವೂ ಸಂಪೂರ್ಣವಾಗಿ ಬೆಳವಣಿಗೆಯಾಗಿರುವುದಿಲ್ಲ,ಹೀಗಾಗಿ ಮೊಬೈಲ್ ಫೋನ್‌ಗಳ ವಿಕಿರಣವು ಅವರ ಶರೀರವನ್ನು ಸುಲಭವಾಗಿ ಪ್ರವೇಶಿಸುತ್ತದೆ.

ತ್ವರಿತವಾಗಿ ಅಭಿವೃದ್ಧಿಗೊಳ್ಳುತ್ತಿರುವ ಇಂದಿನ ತಂತ್ರಜ್ಞಾನ ಜಗತ್ತಿನಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿವಾರಿಸಲು ನಮಗೆ ಸಾಧ್ಯವಿಲ್ಲ. ಆದರೆ ಅದರ ವಿಕಿರಣ ಪರಿಣಾಮವನ್ನು ತಗ್ಗಿಸಲು ಸಾಕಷ್ಟು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ.

ಮೊಬೈಲ್ ಫೋನ್ ಬಳಕೆಯಲ್ಲಿಲ್ಲದಾಗ ಅದನ್ನು ಸಾಕಷ್ಟು ದೂರವಿಡಿ. ಮಾತುಕತೆಯ ಅವಧಿ ಮತ್ತು ಪ್ರತಿದಿನದ ಬಳಕೆಯನ್ನು ಸೀಮಿತಗೊಳಿಸಿ. ಹೆಚ್ಚು ಹೊತ್ತು ಮಾತನಾಡಬೇಕೆಂದಿದ್ದರೆ ಲ್ಯಾಂಡ್ ಫೋನ್ ಬಳಸಿ. ಕರೆಗಳನ್ನು ಸ್ವೀಕರಿಸುವಾಗ ಹ್ಯಾಂಡ್ಸ್ ಫ್ರೀ ಮೋಡ್‌ಗೆ ಬದಲಿಸಿಕೊಳ್ಳಿ,ಇದರಿಂದ ಅಂಗಾಂಶಕ್ಕೆ ಹಾನಿಯ ಅಪಾಯವು ಕಡಿಮೆಯಾಗುತ್ತದೆ. ಗರ್ಭಿಯರು ಮೊಬೈಲ್ ಫೋನ್ ಬಳಕೆಗೆ ಕಡ್ಡಾಯವಾಗಿ ಮಿತಿಯನ್ನು ಹಾಕಿಕೊಳ್ಳಬೇಕು. ಸಣ್ಣಮಕ್ಕಳ ಕಿವಿಗಳ ಬಳಿ ಎಂದೂ ಮೊಬೈಲ್ ಫೋನ್ ಇಡಬೇಡಿ. ಮಾತನಾಡುವ ಅವಧಿಯನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ. ಸಿಗ್ನಲ್ ಉತ್ತಮವಾಗಿದ್ದರೆ ವಿಕಿರಣದ ಪ್ರಮಾಣವು ಕಡಿಮೆಯಾಗಿರುತ್ತದೆ,ಹೀಗಾಗಿ ಕರೆ ಮಾಡುವ ಮುನ್ನ ನಿಮ್ಮ ಮೊಬೈಲ್ ಫೋನ್‌ನ ಸಿಗ್ನಲ್‌ನ್ನು ಪರೀಕ್ಷಿಸಿ. ಫೋನ್ ಚಾರ್ಜ್ ಆಗುತ್ತಿದ್ದಾಗ ಅತ್ಯಂತ ಹೆಚ್ಚು ವಿಕರಣ ಹೊರಸೂಸುತ್ತಿರುತ್ತದೆ,ಹೀಗಾಗಿ ಅದನ್ನು ಬೇರೆ ಕೋಣೆಯಲ್ಲಿ ಚಾರ್ಜಿಗಿಡುವುದು ಅತ್ಯುತ್ತಮ ಉಪಾಯವಾಗಿದೆ. ಮಾತನಾಡುತ್ತಿರುವಾಗ ಆಗಾಗ್ಗೆ ಕಿವಿಗಳನ್ನು ಬದಲಿಸುತ್ತಿರಿ,ಇದರಿಂದ ವಿಕಿರಣವು ಸಮಾನವಾಗಿ ಹಂಚಿಕೆಯಾಗುತ್ತದೆ. ಸಾಧ್ಯವಿದ್ದಲ್ಲಿ ಮೊಬೈಲ್‌ನಲ್ಲಿ ಮಾತನಾಡುವ ಬದಲು ಎಸ್‌ಎಂಎಸ್ ಮಾಡುವುದನ್ನು ರೂಢಿಸಿಕೊಳ್ಳಿ.

ಮೊಬೈಲ್ ಫೋನ್ ಅಗತ್ಯದ ಸಂದರ್ಭಗಳಲ್ಲಿ ನಮ್ಮ ಬಳಕೆಗಾಗಿರುವ ಸಾಧನವಾಗಿದೆಯೇ ಹೊರತು ಅದು ಅನಿವಾರ್ಯವಲ್ಲ ಎನ್ನುವುದನ್ನು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News