ಫಾರ್ಮಾಲಿನ್ ಆತಂಕ: ಜುಲೈ ಅಂತ್ಯದ ವರೆಗೆ ಗೋವಾಕ್ಕೆ ಮೀನು ಆಮದು ನಿಷೇಧ

Update: 2018-07-18 16:20 GMT

ಹೊಸದಿಲ್ಲಿ, ಜು. 18: ಫಾರ್ಮಾಲಿನ್ ಬೆರೆಸಿದ ಮೀನನ್ನು ಯಶಸ್ವಿಯಾಗಿ ವಶಪಡಿಸಿಕೊಂಡ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ಗೋವಾ ಸರಕಾರ ಜುಲೈ ಅಂತ್ಯದ ವರೆಗೆ ಇತರ ರಾಜ್ಯಗಳಿಂದ ಮೀನು ಆಮದು ನಿಷೇಧಿಸಿ ಬುಧವಾರ ಆದೇಶ ಹೊರಡಿಸಿದೆ.

ಗೋವಾದ ಜನರ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳ ಕಾಲ ಗೋವಾಕ್ಕೆ ಮೀನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿ ನಿರ್ದೇಶನ ನೀಡಲಾಗಿದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೀನುಗಾರಿಕೆ ಚಟುವಟಿಕೆಗಳ ಮೇಲೆ ವಿಧಿಸಿದ್ದ ನಿಷೇಧವನ್ನು ಮುಂದಿನ ತಿಂಗಳು ಹಿಂದೆಗೆದ ಬಳಿಕ ರಾಜ್ಯದಲ್ಲಿ ಮೀನಿಗೆ ಕೊರತೆ ಉಂಟಾಗದು ಎಂದು ಅವರು ಹೇಳಿದ್ದಾರೆ.

ಮೀನುಗಳಲ್ಲಿ ಫಾರ್ಮಾಲಿನ್ ಬೆರೆಸುತ್ತಿರುವ ಬಗ್ಗೆ ತಾನು ವೈಯುಕ್ತಿಕವಾಗಿ ನಿಗಾ ವಹಿಸಿದ್ದೇನೆ ಎಂದು ಪಾರಿಕ್ಕರ್ ಶನಿವಾರ ಟ್ವೀಟ್ ಮಾಡಿದ್ದರು. ಕಳೆದ ವಾರ ಉತ್ತರ ಗೋವಾದ ಪಣಿಜಿ ಹಾಗೂ ದಕ್ಷಿಣ ಗೋವಾದ ಮಾರ್ಗೋವದಲ್ಲಿ ಸಗಟು ಮೀನು ಮಾರುಕಟ್ಟೆ ಮೇಲೆ ಆಹಾರ ಹಾಗೂ ಔಷಧಿ ಆಡಳಿತ ದಾಳಿ ನಡೆಸಿತ್ತು ಹಾಗೂ ಫಾರ್ಮಾಲಿನ್ ಬೆರೆತ ಮೀನನ್ನು ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News