ಮಿಗ್ ಫೈಟರ್ ಜೆಟ್ ಪತನ; ಪೈಲಟ್ ಸಾವು
Update: 2018-07-18 21:52 IST
ಶಿಮ್ಲ, ಜು.18: ಭಾರತೀಯ ವಾಯುಪಡೆಯ ಮಿಗ್ 21 ಫೈಟರ್‌ಜೆಟ್ ವಿಮಾನವೊಂದು ಹಿಮಾಚಲ ಪ್ರದೇಶದ ಕಾಂಗ್ರ ಜಿಲ್ಲೆಯಲ್ಲಿ ಬುಧವಾರ ಪತನಗೊಂಡಿದ್ದು, ಪೈಲಟ್ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಂಜಾಬ್‌ನ ಪಠಾಣ್‌ಕೋಟ್‌ನಿಂದ ಆಗಮಿಸುತ್ತಿದ್ದ ಜೆಟ್ ವಿಮಾನ ಮಧ್ಯಾಹ್ನ 1:30ರ ವೇಳೆಗೆ ಧರ್ಮಶಾಲಾ ಬಳಿಯ ಪಟ್ಟಾ ಜಟಿಯನ್ ಎಂಬ ಗ್ರಾಮದ ಕೃಷಿ ಭೂಮಿಯಲ್ಲಿ ನೆಲಕ್ಕಪ್ಪಳಿಸಿದೆ. ವಿಮಾನದ ಪೈಲಟ್ ಮೃತಪಟ್ಟಿದ್ದು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿದೆ ಎಂದು ಕಾಂಗ್ರಾ ಜಿಲ್ಲೆಯ ಪೊಲೀಸ್ ಅಧೀಕ್ಷಕ ಸಂತೋಷ್ ಪಾಟೀಲ್ ತಿಳಿಸಿದ್ದಾರೆ. ಆಕಾಶದಲ್ಲಿ ಬೆಂಕಿಹತ್ತಿಕೊಂಡಿದ್ದ ವಿಮಾನ ಜಮೀನಿಗೆ ಅಪ್ಪಳಿಸಿ ಚೂರು ಚೂರಾಗಿದ್ದು ನೆಲದಲ್ಲಿ ಬೃಹತ್ ಹೊಂಡವಾಗಿದೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳಾಗಿರುವ ಸ್ಥಳೀಯರು ತಿಳಿಸಿದ್ದಾರೆ. ದುರಂತದ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ವಾಯುಪಡೆಯ ಮೂಲಗಳು ತಿಳಿಸಿವೆ.