ಇದಿಲ್ಲದಿದ್ದರೆ ನಿಮ್ಮ ವಾಹನ ಕಳ್ಳತನವಾದಾಗ ವಿಮಾ ಹಣ ನೀಡಲು ಕಂಪನಿ ನಿರಾಕರಿಸಬಹುದು !

Update: 2018-07-19 11:03 GMT

ವಾಹನವೊಂದು ಕಳ್ಳತನವಾದಾಗ ವಿಮಾ ಪರಿಹಾರವನ್ನು ಪಡೆಯಲು ಅದರ ಎರಡೂ ಮೂಲ ಚಾವಿಗಳನ್ನು ವಿಮಾ ಕಂಪನಿಗೆ ಸಲ್ಲಿಸುವುದು ಅಗತ್ಯವೇ? ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಐಆರ್‌ಡಿಎ)ವು ಇದನ್ನು ನಿರ್ದಿಷ್ಟವಾಗಿ ಹೇಳಿಲ್ಲ ಮತ್ತು ಈ ಬಗ್ಗೆ ವಿಮಾ ಕಂಪನಿಗಳಿಗೇ ಬಿಟ್ಟಿದೆ. ಹೆಚ್ಚಿನ ವಿಮಾ ಕಂಪನಿಗಳು ವಾಹನದ ಕಳ್ಳತನವಾದಾಗ ಮತ್ತು ಮಾಲಿಕರು ವಿಮಾ ಹಣಕ್ಕೆ ಕೋರಿಕೆಯನ್ನು ಮಂಡಿಸಿದಾಗ ವಾಹನದ ಎರಡೂ ಮೂಲ ಚಾವಿಗಳನ್ನು ಕೇಳುತ್ತವೆ. ವಂಚನೆ ಪ್ರಕರಣಗಳನ್ನು ತಡೆಯಲು ಈ ಕ್ರಮ ಎನ್ನುವುದು ಅವುಗಳ ಸಮಜಾಯಿಷಿ.

ಹೆಚ್ಚಿನವರಿಗೆ ಈ ವಿಷಯ ಅಚ್ಚರಿಯನ್ನುಂಟು ಮಾಡಬಹುದು. ವಾಹನದ ವಿಮೆ ಮಾಡಿಸುವಾಗ ವಿಮಾ ಏಜೆಂಟ್ ಈ ವಿಷಯವನ್ನು ಹೇಳಿರುವುದಿಲ್ಲ.

ದಿಲ್ಲಿ ನಿವಾಸಿ ಸುರೇಶ್ ಕುಮಾರ(ಹೆಸರು ಬದಲಿಸಲಾಗಿದೆ) ಅವರು ಕಳೆದ ಫೆಬ್ರವರಿಯಲ್ಲಿ ತನ್ನ ಮನೆಯ ಹೊರಗೆ ನಿಲ್ಲಿಸಿದ್ದ ಹೊಂಡಾ ಸಿಟಿ ಕಾರು ಕಳ್ಳತನವಾಗಿತ್ತು. ಕಾರಿಗೆ ಸರಕಾರಿ ಸ್ವಾಮ್ಯದ ಸಾಮಾನ್ಯ ವಿಮಾ ಕಂಪನಿಯೊಂದರ ವಿಮಾ ಪಾಲಿಸಿಯನ್ನು ಹೊಂದಿದ್ದ ಅವರು ವಿಮಾ ಹಣಕ್ಕಾಗಿ ಕೋರಿಕೆ ಮಂಡಿಸಿದಾಗ ಅಚ್ಚರಿ ಪಡುವಂತಾಗಿತ್ತು. ಕಾರಿನ ಎರಡೂ ಮೂಲ ಚಾವಿಗಳನ್ನು ನೀಡುವಂತೆ ಕಂಪನಿಯ ಅಧಿಕಾರಿಗಳು ತಿಳಿಸಿದ್ದರು. ಕಾರಿನ ವಿಮೆ ದಾಖಲೆಗಳಿಗೆ ಸಹಿ ಮಾಡುವ ಮುನ್ನ ಅವರು ಎಲ್ಲ ನಿಯಮಾವಳಿಗಳನ್ನು ಓದಿದ್ದರಾದರೂ ಇಂತಹುದೊಂದು ನಿಬಂಧನೆಯನ್ನು ಕಂಡಿರಲಿಲ್ಲ. ಎರಡೂ ಮೂಲ ಚಾವಿಗಳನ್ನು ಒಪ್ಪಿಸದಿದ್ದರೆ ಕಂಪನಿಯು ವಿಮಾ ಕೋರಿಕೆಯನ್ನು ತಿರಸ್ಕರಿಸಬಹುದು ಎಂದು ಅವರ ಏಜೆಂಟ್ ಹೇಳಿದಾಗ ಅವರಿಗೆ ವಿಚಿತ್ರವೆನ್ನಿಸಿತ್ತು. ಅದೃಷ್ಟವಶಾತ್ ಅವರ ಬಳಿ ಕಾರಿನ ಎರಡೂ ಮೂಲ ಚಾವಿಗಳಿದ್ದವು. ಆದರೆ ಹೆಚ್ಚಿನವರು ಒಂದು ಚಾವಿಯನ್ನು ಮೊದಲೇ ಎಲ್ಲಿಯೋ ಕಳೆದುಕೊಂಡಿರುತ್ತಾರೆ. ವಿಮಾ ಕಂಪನಿಗಳ ಈ ವಿಲಕ್ಷಣ ಷರತ್ತಿನಿಂದಾಗಿ ಅಂತಹವರ ಕಾರು ಕಳ್ಳತನವಾದರೆ ಅದು ಅವರ ಪಾಲಿಗೆ ತುಂಬ ದುಬಾರಿಯಾಗಬಹುದು.

ಮಾಲಿಕ ಒಂದು ಚಾವಿಯನ್ನು ಕಳೆದುಕೊಂಡ ಮತ್ತು ಡುಪ್ಲಿಕೇಟ್ ಚಾವಿಯನ್ನು ಮಾಡಿಸಿಕೊಂಡ ಪ್ರಕರಣಗಳಿರಬಹುದು. ವಿಮಾ ಕೋರಿಕೆಗಳನ್ನು ಪರಿಶೀಲಿಸುವಾಗ ಇಂತಹ ಪರಿಸ್ಥಿತಿಯನ್ನು ಪರಿಗಣಿಸುವುದು ಅಗತ್ಯವಾಗುತ್ತದೆ ಎನ್ನುತ್ತಾರೆ ಸಾರಿಗೆ ಸಚಿವಾಲಯದ ಅಧಿಕಾರಿಗಳು.

ವಾಹನ ಕಳ್ಳತನವಾದರೆ ವಿಮಾ ಹಣವನ್ನು ಪಡೆಯಲು ಮಾಲಿಕರು ಪರದಾಡುವಂತಾಗುತ್ತದೆ. ಸುರೇಶ ಕುಮಾರ ಅವರು ಅಧಿಕೃತ ಆರ್‌ಸಿಯನ್ನು ಹೊಂದಿದ್ದರೂ ಕಳ್ಳತನವಾಗಿದ್ದ ಕಾರಿನ ಮಾಲಕ ತಾನೇ ಎನ್ನುವುದಕ್ಕೆ ಆರ್‌ಟಿಎ ಕಚೇರಿಯಿಂದ ದೃಢೀಕರಣ ಪತ್ರವನ್ನು ತರುವಂತೆ ವಿಮಾ ಕಂಪನಿಯು ಅವರಿಗೆ ಸೂಚಿಸಿತ್ತು. ಇದನ್ನು ‘ತುಘಲಕ್ ದರ್ಬಾರ್’ ಎಂದಲ್ಲದೆ ಬೇರ ಯಾವ ಹೆಸರಿನಿಂದ ಕರೆಯಲು ಸಾಧ್ಯ?

ವಿಮಾ ಕಂಪನಿ ಕೇಳಿದ್ದ ಪ್ರತಿಯೊಂದನ್ನೂ ಸಲ್ಲಿಸಿದ್ದರೂ ಐದು ತಿಂಗಳ ಪರದಾಟದ ನಂತರವೂ ವಿಮಾ ಹಣ ಇನ್ನೂ ಸುರೇಶ ಕುಮಾರ ಕೈ ಸೇರಿಲ್ಲ. ಪರಿಹಾರವನ್ನು ಪಡೆಯಲು ಅವರು ವಿಮಾ ಕಂಪನಿ ಮತ್ತು ಆರ್‌ಟಿಎ ಕಚೇರಿಗೆ ದಾಖಲೆಗಳ ಮೇಲೆ ದಾಖಲೆಗಳನ್ನು ಸಲ್ಲಿಸುತ್ತಲೇ ಇದ್ದಾರೆ.

ಬೇಸತ್ತ ಸುರೇಶ್ ಕುಮಾರ್ ಈ ಬಗ್ಗೆ ಕಂಪನಿಯ ಅತ್ಯುನ್ನತ ಅಧಿಕಾರಿಗಳಿಗೆ ದೂರಿಕೊಂಡ ಬಳಿಕ ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸುವುದಾಗಿ ಕಂಪನಿಯ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ. ಪರಿಹಾರ ಅವರಿಗೆ ಸಿಗಬೇಕಾದರೆ ಪೊಲೀಸರು ‘ವಾಹನ ಪತ್ತೆಯಾಗಿಲ್ಲ’ಎಂಬ ವರದಿಯನ್ನು ವಿಮಾ ಕಂಪನಿಗೆ ಸಲ್ಲಿಸಬೇಕಿದೆ. ಸುರೇಶ ಕುಮಾರ ಪೋಲಿಸರ ಬೆನ್ನು ಬಿದ್ದರೆ ಶೀಘ್ರವೇ ವರದಿಯನ್ನು ಸಲ್ಲಿಸುತ್ತೇವೆ ಎಂದು ತಲೆಯ ಮೇಲೆ ಕೈಯಾಡಿಸಿ ಕಳುಹಿಸಿದ್ದಾರೆ. ಕಾರಿಗೆ ವಿಮೆ ಇದೆ ಎಂಬ ಕಾರಣಕ್ಕೆ ಪೊಲೀಸರು ತನಿಖೆಯ ಬಗ್ಗೆ ಆಸಕ್ತಿಯನ್ನೇ ವಹಿಸುತ್ತಿಲ್ಲ ಎನ್ನುವುದು ಸುರೇಶ ಕುಮಾರ ಕಂಡುಕೊಂಡಿರುವ ಕಟುಸತ್ಯ.

ಕೆಲವು ವಿಮಾ ಕಂಪನಿಗಳು ಹಾನಿಯ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ತಮ್ಮದೇ ಆದ ನಿಯಮಗಳನ್ನು ರೂಪಿಸಿಕೊಂಡಿರಬಹುದು. ಆದರೆ ಕಂಪನಿಗಳು ಅಗತ್ಯ ದಾಖಲೆಗಳನ್ನು ಕೇಳಿದಾಗ ವಾಹನಗಳ ಮಾಲಿಕರು ಸಂಕಷ್ಟದಲ್ಲಿ ಸಿಲುಕುವುದನ್ನು ತಪ್ಪಿಸಲು ಅವು ತಮ್ಮ ಎಲ್ಲ ಷರತ್ತುಗಳನ್ನು ವಿಮೆ ಮಾಡಿಸುವಾಗಲೇ ತಿಳಿಸಬೇಕು. ಗ್ರಾಹಕರಲ್ಲಿ ಜಾಗ್ರತಿಯನ್ನು ಮೂಡಿಸುವ ಪ್ರಯತ್ನಗಳು ಅಷ್ಟಾಗಿ ನಡೆಯುತ್ತಿಲ್ಲ ಎನ್ನುವುದು ಐಆರ್‌ಡಿಎ ಅಧಿಕಾರಿಯೋರ್ವರ ಅಭಿಪ್ರಾಯ.

ಎರಡೂ ಮೂಲ ಚಾವಿಗಳನ್ನು ಕೇಳುವಂತಹ ವಿಲಕ್ಷಣ ನಿಯಮಗಳ ಬಗ್ಗೆ ವಾಹನಗಳ ಮಾಲಕರಲ್ಲಿ ಅರಿವು ಮೂಡಿಸುವಲ್ಲಿ ವಿಮಾ ಕಂಪನಿಗಳು ವಿಫಲಗೊಂಡಿವೆ ಎನ್ನುದನ್ನು ಸರಕಾರಿ ಸಾಮ್ಯದ ವಿಮಾ ಕಂಪನಿಯ ಹಿರಿಯ ಅಧಿಕಾರಿಯೋರ್ವರು ಸಹ ಒಪ್ಪಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News