ಅತ್ಯಾಚಾರ ಆರೋಪದಲ್ಲಿ ಪಾದ್ರಿಯ ಸೆರೆ
ಚಂಡಿಗಡ, ಜು.19: ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದ ಆರೋಪದಲ್ಲಿ ಕ್ರೈಸ್ತ ಧರ್ಮಗುರು ಹಾಗೂ ಸ್ವಘೋಷಿತ ರೋಗನಿವಾರಕ ಪವಾಡ ಪುರುಷ ಬಜಿಂದರ್ ಸಿಂಗ್ ಎಂಬಾತನನ್ನು ದಿಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ತನ್ನ ವಿರುದ್ಧ ದೂರು ದಾಖಲಾದ ಬಳಿಕ ಈತ ತಲೆಮರೆಸಿಕೊಂಡಿದ್ದ.
ಲಂಡನ್‌ನಲ್ಲಿ ಜು.21ರಂದು ನಿಗದಿಯಾಗಿರುವ ರೋಗ ನಿವಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ವಿಮಾನವನ್ನು ಹತ್ತಲು ಸನ್ನದ್ಧನಾಗಿದ್ದಾಗ ಸಿಂಗ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈತನಿಗಾಗಿ ಲುಕ್ ಔಟ್ ನೋಟಿಸ್‌ನ್ನೂ ಹೊರಡಿಸಲಾಗಿತ್ತು ಎಂದು ಜಿರಕಪುರದ ಪೊಲೀಸ್ ಠಾಣಾಧಿಕಾರಿ ಪವನ್ ಕುಮಾರ್ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.
ಜಲಂಧರ್ ಜಿಲ್ಲೆಯ ಚರ್ಚ್‌ವೊಂದರಲ್ಲಿ ಪ್ಯಾಸ್ಟರ್ ಆಗಿರುವ ಸಿಂಗ್ ರೋಗ ನಿವಾರಕನಾಗಿ ಜನಪ್ರಿಯನಾಗಿದ್ದಾನೆ.
ಸಿಂಗ್ ತನ್ನ ಮೇಲೆ ಅತ್ಯಾಚಾರ ನಡೆಸಿ ಅದನ್ನು ವೀಡಿಯೊ ಚಿತ್ರೀಕರಿಸಿಕೊಂಡಿದ್ದ. ತನ್ನ ವಿರುದ್ಧ ದೂರು ನೀಡಿದರೆ ಅಥವಾ ತನ್ನ ಬೇಡಿಕೆಗಳಿಗೆ ಒಪ್ಪದಿದ್ದರೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವುದಾಗಿ ಆತ ತನಗೆ ಬೆದರಿಕೆಯನ್ನೂ ಒಡ್ಡಿದ್ದಾನೆ ಎಂದು ಜಿರಕಪುರ ನಿವಾಸಿಯಾಗಿರುವ ಮಹಿಳೆ ದೂರಿನಲ್ಲಿ ಆರೋಪಿಸಿದ್ದಳು.
ಮಹಿಳೆ ತನ್ನ ದೂರಿನಲ್ಲಿ ಇನ್ನೂ 3-4 ಜನರನ್ನು ಹೆಸರಿಸಿದ್ದಾಳೆ ಎಂದು ಕುಮಾರ್ ತಿಳಿಸಿದರು.