‘ಮಹಿಳೆಯರಿಂದ 41 ದಿನಗಳ ಕಠಿಣ ವ್ರತಾಚರಣೆ ಸಾಧ್ಯವಿಲ್ಲ’: ಸುಪ್ರೀಂ ಕೋರ್ಟ್‌ನಲ್ಲಿ ಶಬರಿಮಲೆ ಮಂಡಳಿಯ ನಿವೇದನೆ

Update: 2018-07-19 15:37 GMT

ಹೊಸದಿಲ್ಲಿ,ಜು.19: ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಪ್ರವೇಶಿಸಲು ಯಾವುದೇ ಜಾತಿ ಅಥವಾ ಧರ್ಮದವರಿಗೆ ನಿರ್ಬಂಧವಿಲ್ಲ. 41 ದಿನಗಳ ಕಠಿಣ ವ್ರತವನ್ನು ಆಚರಿಸಲು ಮಹಿಳೆಯರಿಗೆ ಸಾಧ್ಯವಿಲ್ಲ ಎನ್ನುವ ಕಾರಣದಿಂದ ಅವರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಶಬರಿಮಲೆ ದೇವಸ್ಥಾನ ಮಂಡಳಿಯು ಗುರುವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.

ಬುಧವಾರ ಶಬರಿಮಲೆಗೆ ಮಹಿಳೆಯರ ಪ್ರವೇಶ ಕುರಿತು ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದ್ದ ವೇಳೆ ಮು.ನ್ಯಾ.ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠವು,ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಷೇಧವು ಅಸಾಂವಿಧಾನಿಕವಾಗಿದೆ ಎಂದು ಹೇಳಿತ್ತು.

10ರಿಂದ 50 ವರ್ಷ ವಯೋಮಾನದ ಋತುಮತಿಯಾಗುವ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರವೇಶವನ್ನು ನಿಷೇಧಿಸಲಾಗಿದೆ. ಮಹಿಳೆಯರು ದೇವಸ್ಥಾನವನ್ನು ಪ್ರವೇಶಿಸುವ ಮುನ್ನ ತಮ್ಮ ವಯಸ್ಸಿನ ಪುರಾವೆಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ದೇವಸ್ಥಾನ ಮಂಡಳಿ ಪರ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಅವರು,ಉಳಿದ ದೇವಸ್ಥಾನಗಳಂತಲ್ಲದೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಪ್ರವೇಶಾವಕಾಶವಿದೆ. ಮಹಿಳೆಯನ್ನು ಹೊರತುಪಡಿಸುವುದು ನಿಷೇಧದ ಉದ್ದೇಶವಲ್ಲ,ಅದೊಂದು ಪರಿಕಲ್ಪನೆ,ಅದೊಂದು ವ್ಯಾಪಕ ನಂಬಿಕೆ ಎಂದು ವಾದಿಸಿದರು.

ದೇಶಾದ್ಯಂತ ಸಾವಿರಾರು ಅಯ್ಯಪ್ಪ ಸ್ವಾಮಿ ದೇವಸ್ಥಾನಗಳಿವೆ,ಆದರೆ ಶಬರಿಮಲೆಯಲ್ಲಿ ಮಾತ್ರ ಈ ನಿರ್ಬಂಧವಿದೆ. ಇದೊಂದು ಐತಿಹಾಸಿಕ ನಂಬಿಕೆಯಾಗಿದೆ. ಅಯ್ಯಪ್ಪ ಭಕ್ತರಲ್ಲಿಯ ಸಾಮೂಹಿಕ ನಂಬಿಕೆಯಾಗಿದೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.

41ದಿನಗಳ ಕಠಿಣ ವ್ರತಾಚರಣೆಯ ಅಸಾಧ್ಯ ಷರತ್ತನ್ನು ಮಹಿಳೆಯರ ಮೇಲೆ ಹೇರುವ ಮೂಲಕ ನೀವು(ಮಂಡಳಿ) ನೇರವಾಗಿ ಮಾಡಲು ಸಾಧ್ಯವಿಲ್ಲದ ಏನನ್ನೋ ಪರೋಕ್ಷವಾಗಿ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂದು ಪೀಠವು ಕುಟುಕಿತು.

 ಮಹಿಳೆಯೋರ್ವಳ ಋತುಚಕ್ರ 46 ವರ್ಷ ವಯಸ್ಸಿಗೆ ಸ್ಥಗಿತಗೊಂಡರೆ ಆಕೆಯ ಪ್ರವೇಶವನ್ನೇಕೆ ನಿಷೇಧಿಸಬೇಕು? ಮಹಿಳೆಯರ ಪ್ರವೇಶವನ್ನು ನಿಷೇಧಿಸುವ ಆದೇಶ ವಯಸ್ಸನ್ನು ನಮೂದಿಸುವ ಬದಲು ಗರ್ಭಿಣಿಯರಿಗೆ ಪ್ರವೇಶವಿಲ್ಲ ಎಂದಾಗಬೇಕಿತ್ತು ಎಂದು ನ್ಯಾ.ರೋಹಿಂಗ್ಟನ್ ನಾರಿಮನ್ ಹೇಳಿದರು.

ಪ್ರತಿ ಮಹಿಳೆಯೂ ದೇವರ ಸೃಷ್ಟಿಯಾಗಿದ್ದಾಳೆ. ಹೀಗಿರುವಾಗ ಉದ್ಯೋಗ ಮತ್ತು ಆರಾಧನೆಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯವೇಕಿರಬೇಕು ಎಂದು ನ್ಯಾ.ಡಿ.ವೈ.ಚಂದ್ರಚೂಡ ಅವರು ಪ್ರಶ್ನಿಸಿದರು.

ದೇವರ ಆರಾಧನೆಯು ಪ್ರತಿಯೊಬ್ಬರ ಹಕ್ಕು ಆಗಿದೆ ಎಂದು ಪ್ರಕರಣದಲ್ಲಿ ಅರ್ಜಿದಾರರ ಪೈಕಿ ಓರ್ವರಾಗಿರುವ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು ವಾದಿಸಿದರು.

ಜು.24ರಂದು ಪ್ರಕರಣದಲ್ಲಿ ವಾದವಿವಾದಗಳು ಪುನರಾರಂಭಗೊಳ್ಳಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News